More

    ಗ್ರಾಮ ಸೇವಾಶ್ರಮಕ್ಕಿಲ್ಲ ಉದ್ಘಾಟನೆ ಭಾಗ್ಯ

    ಹಾವೇರಿ: ಮಹಾತ್ಮ ಗಾಂಧೀಜಿಯವರ ಸಬರಮತಿ ಆಶ್ರಮದಿಂದ ಪ್ರಭಾವಿತರಾಗಿ 1935- 36ರಲ್ಲಿ ಸ್ವಾತಂತ್ರ್ಯ ಹೋರಾಟಗಾರ ಮೈಲಾರ ಮಹದೇವಪ್ಪ ಅವರು ತಾಲೂಕಿನ ಕೊರಡೂರ ಗ್ರಾಮದಲ್ಲಿ ಸ್ಥಾಪಿಸಿದ ಗ್ರಾಮ ಸೇವಾಶ್ರಮವು ಐತಿಹಾಸಿಕ ಪ್ರವಾಸಿ ತಾಣವಾಗುವ ಬದಲು ರೈತರಿಗೆ ರಾಶಿ ಮಾಡುವ ಕಣವಾಗಿ ಪರಿವರ್ತನೆಯಾಗಿದೆ.

    ರಾಜ್ಯದಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಹೆಚ್ಚಿಸಿ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಮೈಲಾರ ಮಹದೇವಪ್ಪ ಹಾಗೂ ಅವರ ಪತ್ನಿ ಸಿದ್ದಮ್ಮ ಅವರು ಗಾಂಧೀಜಿಯವರ ಪ್ರೀತಿಗೆ ಪಾತ್ರರಾಗಿ ಸಬರಮತಿ ಆಶ್ರಮದಲ್ಲಿ ಸೇವೆ ಸಲ್ಲಿಸಿದ್ದರು. ಇದರಿಂದ ಪ್ರೇರಿತರಾದ ಮಹದೇವಪ್ಪ ಅವರು 1936ರಲ್ಲಿ ಹಾವೇರಿ ತಾಲೂಕಿನ ಕೊರಡೂರ ಗ್ರಾಮದ ಬಳಿ ವರದಾ ನದಿಯ ದಂಡೆಯ ಪಕ್ಕದಲ್ಲಿ ಗ್ರಾಮ ಸೇವಾಶ್ರಮ ಸ್ಥಾಪಿಸಿದರು. ಈ ಸೇವಾಶ್ರಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತೊಡಗಿದ್ದ ಹೋರಾಟಗಾರರಿಗೆ ತರಬೇತಿ ನೀಡುವ ಜತೆಗೆ ಗಾಂಧೀಜಿಯವರು ಅಳವಡಿಸಿಕೊಂಡಿದ್ದ ತತ್ವಾದರ್ಶಗಳನ್ನು ಪಾಲಿಸುವ ಕೇಂದ್ರವಾಗಿತ್ತು.

    ಇಲ್ಲಿ ಜಾತ್ಯತೀತವಾಗಿ ಎಲ್ಲರೂ ಸೇರಿ ಅಡುಗೆ ಮಾಡಿ, ಸಾಮೂಹಿಕವಾಗಿ ಭೋಜನ ಮಾಡುತ್ತಿದ್ದರು. ವಿಧವಾ, ಅಂತರ್ಜಾತಿ ವಿವಾಹಕ್ಕೂ ಇಲ್ಲಿ ಮುನ್ನುಡಿ ಬರೆಯಲಾಗಿತ್ತು. ರಾಜ್ಯದಲ್ಲಿಯೇ ಗಾಂಧೀಜಿಯವರ ಸಬರಮತಿ ಆಶ್ರಮದ ಎಲ್ಲ ರೀತಿ, ರಿವಾಜುಗಳನ್ನು ಪಾಲಿಸಿದ ಏಕೈಕ ಸೇವಾಶ್ರಮ ಇದಾಗಿತ್ತು. ಇಲ್ಲಿ ಮೈಲಾರ ಮಹದೇವನರು ಸ್ನೇಹಿತರೊಡಗೂಡಿ ಶ್ರಮದಾನದಿಂದ ಒಂದು ಬಾವಿಯನ್ನು ತೋಡಿದ್ದರು. ಈಗ ಅದು ಸಹ ಕುಸಿದು ಬಿದ್ದಿದೆ.

    ಸ್ವಾತಂತ್ರ್ಯ ಹೋರಾಟಗಾರರಿಗೆ ಈ ಭಾಗದಲ್ಲಿ ತರಬೇತಿ ನೀಡುವ ಜತೆಗೆ ಸ್ಪೂರ್ತಿಯ ಚಿಲುಮೆಯೂ ಆಗಿದ್ದ ಈ ಸೇವಾಶ್ರಮ, ಕಳೆದ ಮೂರು ವರ್ಷಗಳ ಹಿಂದೆ ಸಂಪೂರ್ಣವಾಗಿ ಪಾಳುಬೀಳುವ ಸ್ಥಿತಿ ತಲುಪಿತ್ತು. ಆಗ ಅಂದಿನ ಜಿಲ್ಲಾಧಿಕಾರಿಗೆ ಹುತಾತ್ಮ ಶ್ರೀಮೈಲಾರ ಮಹದೇವಪ್ಪನವರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಸದಸ್ಯ ವಿ.ಎನ್. ತಿಪ್ಪನಗೌಡ್ರ ಈ ಐತಿಹಾಸಿಕ ಸ್ಥಳದ ಮಹತ್ವವನ್ನು ತಿಳಿಸಿದರು. ಕೂಡಲೆ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅನುದಾನದಲ್ಲಿ ಸೇವಾಶ್ರಮದ ಮೂಲ ಸ್ವರೂಪದ ಮಾದರಿಯಲ್ಲಿಯೇ ನವೀಕರಣಗೊಳಿಸಲು ನಿರ್ವಿುತಿ ಕೇಂದ್ರಕ್ಕೆ ಸೂಚಿಸಿದರು. ಅದರಂತೆ 13 ಲಕ್ಷ ರೂ.ಗಳ ಅನುದಾನದಲ್ಲಿ 2018 ರಲ್ಲಿ ಕಾಮಗಾರಿ ಆರಂಭಗೊಂಡಿತು. ಈ ವರ್ಷದ ಗಾಂಧಿ ಜಯಂತಿಯ ವೇಳೆಗೆ ಕಟ್ಟಡ ಕಾಮಗಾರಿ ಪೂರ್ಣಗೊಂಡು ಲೋಕಾರ್ಪಣೆಯೂ ಆಗಬೇಕಿತ್ತು. ಆದರೆ, ಕಾಮಗಾರಿ ಆಮೆಗತಿಯಲ್ಲಿ ಸಾಗಿದ ಪರಿಣಾಮ ಕಟ್ಟಡ ನವೀಕರಣಗೊಂಡು ಸಣ್ಣಪುಟ್ಟ ಕೆಲಸಗಳು ಬಾಕಿ ಇರುವ ಕಾರಣ ಲೋಕಾರ್ಪಣೆ ಭಾಗ್ಯ ದೊರೆತಿಲ್ಲ. ಇದರಿಂದ ಗ್ರಾಮ ಸೇವಾಶ್ರಮವೀಗ ರೈತರಿಗೆ ಬೆಳೆಗಳನ್ನು ಒಣಗಿಸುವ ಕಣವಾಗಿ ಪರಿವರ್ತನೆಯಾಗಿರುವುದು ದುರಂತವಾಗಿದೆ.

    ಸೇವಾಶ್ರಮ ಸ್ಥಾಪನೆಯ ಉದ್ದೇಶ: 1930ರಲ್ಲಿ ಮಹಾತ್ಮ ಗಾಂಧೀಜಿ ನೇತೃತ್ವದಲ್ಲಿ ನಡೆದ ದಂಡಿಯಾತ್ರೆಯಲ್ಲಿ ಪಾಲ್ಗೊಳ್ಳಲು ಕರ್ನಾಟಕದ ಏಕೈಕ ಪ್ರತಿನಿಧಿಯಾಗಿ ಮೈಲಾರ ಮಹದೇವಪ್ಪನವರು ಸಬರಮತಿ ಆಶ್ರಮಕ್ಕೆ ತೆರಳಿದ್ದರು. 79 ಜನರೊಟ್ಟಿಗೆ ಉಪ್ಪಿನ ಸತ್ಯಾಗ್ರಹದಲ್ಲಿ ಮೈಲಾರ ಮಹದೇವಪ್ಪ ಪಾಲ್ಗೊಂಡರು. ಆಗ ಮಹದೇವಪ್ಪನಿಗೆ 6 ತಿಂಗಳ ಶಿಕ್ಷೆಯಾಯಿತು. ಬಂಧನದಿಂದ ಬಿಡುಗಡೆಯಾದ ನಂತರ ಊರಿಗೆ ಮರಳಿದ ಮಹದೇವಪ್ಪನವರು ಹಳ್ಳಿಯ ಉದ್ಧಾರದ ಸಲುವಾಗಿ ಪಣತೊಟ್ಟರು. ಹೊಸರಿತ್ತಿಯನ್ನು ತಮ್ಮ ಕಾರ್ಯ ಕ್ಷೇತ್ರವನ್ನಾಗಿ ಮಾಡಿಕೊಂಡು, ಪತ್ನಿ ಸಿದ್ದಮ್ಮರೊಂದಿಗೆ ಕೊರಡೂರಿನಲ್ಲಿ ಸೇವಾಶ್ರಮ ಆರಂಭಿಸಿದರು. ಬ್ರಿಟಿಷರ ವಿರುದ್ಧ ಹೋರಾಟಕ್ಕೂ ಇಲ್ಲಿಯೇ ಯೋಜನೆಗಳನ್ನು ಸಿದ್ಧಪಡಿಸುತ್ತಿದ್ದರು. 1943ರಲ್ಲಿ ಬ್ರಿಟಿಷರನ್ನು ದೇಶದಿಂದ ಹೊರಹಾಕಲು ಚಳವಳಿ ತೀವ್ರಗೊಂಡಿತು. ಈ ಸಮಯದಲ್ಲಿ ಮಹದೇವಪ್ಪ ಅವರು ತನ್ನ ಸಂಗಡಿಗರೊಂದಿಗೆ ಹೊಸರಿತ್ತಿಯಲ್ಲಿ ಬ್ರಿಟಿಷರು ರೈತರಿಂದ ವಸೂಲಿ ಮಾಡಿಟ್ಟಿದ್ದ ಕಂದಾಯದ ಹಣ ಲೂಟಿಗೆ ಯೋಜನೆ ರೂಪಿಸಿದರು. ಅದರಂತೆ 1943ರ ಏಪ್ರಿಲ್ 1ರಂದು ಬೆಳಗ್ಗೆ ಹೊಸರಿತ್ತಿಯ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಖಜಾನೆ ಲೂಟಿ ಮಾಡಲು ಹೋಗಿ ಬ್ರಿಟಿಷರ ಗುಂಡೇಟಿಗೆ ಬಲಿಯಾದರು. ಅವರೊಂದಿಗೆ ತಿರುಕಪ್ಪ ಮಡಿವಾಳರ, ವೀರಯ್ಯ ಹಿರೇಮಠ ಅವರು ಪೊಲೀಸರ ಗುಂಡಿಗೆ ಬಲಿಯಾದರು. ಇಂತಹ ವೀರ ಸೇನಾನಿಯ ಹೋರಾಟದ ನೆನಪುಗಳನ್ನು ಇಂದಿನ ಪೀಳಿಗೆಗೆ ತಿಳಿಸುವ ತಾಣವಾಗಿ ಈ ಸೇವಾಶ್ರಮ ಪರಿವರ್ತನೆಯಾಗಬೇಕಿದೆ. ಅಲ್ಲದೆ, ಹುತಾತ್ಮರ ಸ್ಮಾರಕವನ್ನು ಈ ಸೇವಾಶ್ರಮದಲ್ಲಿ ಸ್ಥಾಪಿಸಬೇಕು ಎಂಬುದು ಗ್ರಾಮಸ್ಥರ ಬೇಡಿಕೆಯಾಗಿದೆ.

    ರಾಜ್ಯದಲ್ಲಿಯೇ ಸಬರಮತಿ ಆಶ್ರಮದ ಧ್ಯೇಯೋದ್ದೇಶಗಳನ್ನು ಅಳವಡಿಸಿದ ಏಕೈಕ ಆಶ್ರಮ ಇದಾಗಿತ್ತು. ಈಗಾಗಲೇ ಇದರ ಲೋಕಾರ್ಪಣೆಯಾಗಬೇಕಿತ್ತು. ಆದರೂ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿರುವುದು ಬೇಸರ ಮೂಡಿಸಿದೆ. ಸ್ವಾತಂತ್ರ್ಯ ಹೋರಾಟಗಾರರು ಬಳಸಿದ ಬಾವಿ ಕುಸಿದಿದ್ದು, ಅದರ ಪುನಶ್ಚೇತನವೂ ಆಗಬೇಕು. ಅಲ್ಲಿ ಮ್ಯೂಜಿಯಂ ಆಗಬೇಕು. ಅಡುಗೆ ಮನೆ ದುರಸ್ತಿ ಪೂರ್ಣಗೊಳ್ಳಬೇಕು. ಮಹದೇವಪ್ಪನವರ ಆಶಯದಂತೆ ಖಾದಿ ಗ್ರಾಮೋದ್ಯೋಗ ಕೇಂದ್ರ ಸ್ಥಾಪನೆಯಾಗಬೇಕು.
    | ವಿ.ಎನ್. ತಿಪ್ಪನಗೌಡ್ರ ಮೈಲಾರ ಮಹದೇವ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಸದಸ್ಯರು

    13 ಲಕ್ಷ ರೂ. ಅನುದಾನದಲ್ಲಿ ಸೇವಾಶ್ರಮದ ನವೀಕರಣ ಕಾಮಗಾರಿ ಕೈಗೊಳ್ಳಲಾಗಿತ್ತು. ಅದರಂತೆ ಕಾಮಗಾರಿ ಮುಕ್ತಾಯವಾಗಿದೆ. ಕಾಂಪೌಂಡ್ ಸೇರಿ ಇತರ ಕೆಲಸಗಳಿಗೆ ಹೆಚ್ಚುವರಿ 10 ಲಕ್ಷ ರೂ.ಗಳ ಅನುದಾನ ಕೇಳಿದ್ದೇವು. ಅದು ಬಂದ ನಂತರ ಕಾಮಗಾರಿ ಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸಲಾಗುವುದು.
    | ತಿಮ್ಮೇಶಕುಮಾರ ಯೋಜನಾ ನಿರ್ದೇಶಕ ನಿರ್ವಿುತಿ ಕೇಂದ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts