More

    ಗ್ರಾಪಂ ಅಧ್ಯಕ್ಷರ ಅಧಿಕಾರ ಮೊಟಕಿಗೆ ತೀವ್ರ ವಿರೋಧ: ಸಾಗರದಲ್ಲಿ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ

    ಸಾಗರ: ಚೆಕ್‌ಗೆ ಸಹಿ ಹಾಕುವುದು ಸೇರಿದಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಪಂಚಾಯತ್ ರಾಜ್ ನೀಡಿರುವ ಹಕ್ಕುಗಳನ್ನು ಕಿತ್ತುಕೊಳ್ಳಲು ಬಿಜೆಪಿ ಸರ್ಕಾರ ಮುಂದಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಟೀಕೆ ಮಾಡಿದ್ದು, ತಕ್ಷಣ ತಿದ್ದುಪಡಿಯನ್ನು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿದೆ.
    ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಶುಕ್ರವಾರ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಕಾರ್ಯಕರ್ತರು, ಗ್ರಾಪಂ ಅಧ್ಯಕ್ಷರ ಅಧಿಕಾರ ಮೊಟಕುಗೊಳಿಸಲು ಅವಕಾಶ ನೀಡುವುದಿಲ್ಲ ಎಂದು ಹೇಳಿದರು.
    ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ. ರಾಜನಂದಿನಿ ಕಾಗೋಡು ಮಾತನಾಡಿ, ರಾಜ್ಯ ಸರ್ಕಾರಕ್ಕೆ ಪಂಚಾಯತ್‌ರಾಜ್ ವ್ಯವಸ್ಥೆ ಮೇಲೆ ಗೌರವ ಇಲ್ಲ. ಕಾಂಗ್ರೆಸ್ ಸರ್ಕಾರ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಗ್ರಾಮರಾಜ್ಯದ ಪರಿಕಲ್ಪನೆಯನ್ನು ಮೂಡಿಸಿ ಈ ಸಂಬಂಧ ಮಹತ್ತರವಾದ ಕಾನೂನುಗಳನ್ನು ಜಾರಿಗೆ ತಂದಿತ್ತು. ಆದರೆ ಆಡಳಿತ ನಡೆಸುತ್ತಿದರುವ ಬಿಜೆಪಿ ಸರ್ಕಾರ ಎಲ್ಲ ವಿಚಾರಗಳನ್ನು ಗಾಳಿಗೆ ತೂರುವ ಕೆಲಸ ಮಾಡುತ್ತಿದೆ ಎಂದು ದೂರಿದರು.
    ಮಹಾತ್ಮ ಗಾಂಧೀಜಿ ಅವರ ಗ್ರಾಮಸ್ವರಾಜ್ ಸಾಕಾರಕ್ಕೆ ಸರ್ಕಾರ ಕೊಳ್ಳಿ ಇಡುವ ಪ್ರಯತ್ನ ನಡೆಸುತ್ತಿದೆ. ಗ್ರಾಮ ಪಂಚಾಯಿತಿ ಆಡಳಿತದಲ್ಲಿ ಮೂಗು ತೂರಿಸುವ ಸರ್ಕಾರದ ಪ್ರಯತ್ನ ಖಂಡನೀಯ. ಸ್ಥಳೀಯ ಸರ್ಕಾರಗಳ ಹಕ್ಕು ಕಿತ್ತುಕೊಳ್ಳುವ ರಾಜ್ಯ ಸರ್ಕಾರದ ವಿರುದ್ದ ಸಂಘಟಿತ ಹೋರಾಟ ನಡೆಸಲಾಗುತ್ತದೆ. ಬರುವ ದಿನಗಳಲ್ಲಿ ಬಿಜೆಪಿಯು ಬಡವರು, ದೀನದಲಿತರು, ಹಿಂದುಳಿದ ಸಮುದಾಯಗಳಿಗೆ ಮಾಡುತ್ತಿರುವ ಅನ್ಯಾಯವನ್ನು ಜನರ ಎದರು ತೆರೆದಿರುತ್ತೇವೆ. ಯಾರನ್ನು ಭ್ರಮೆಯಲ್ಲಿ ಇಡಲು ಸಾಧ್ಯವಿಲ್ಲ. ಸತ್ಯ ಎಲ್ಲರಿಗೂ ತಿಳಿಯುತ್ತದೆ ಎಂದು ಹೇಳಿದರು.
    ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಆರ್.ಜಯಂತ್,ಮಾತನಾಡಿ, ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಗ್ರಾಮ ಪಂಚಾಯಿತಿಗಳಿಗೆ ಇರುವ ಎಲ್ಲ ಹಕ್ಕುಗಳನ್ನು ಒಂದೊಂದಾಗಿ ಕಿತ್ತುಕೊಳ್ಳುವ ದುಸ್ಸಾಹಸಕ್ಕೆ ಕೈಹಾಕಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷರು ಚೆಕ್‌ಗೆ ಸಹಿ ಹಾಕುವುದನ್ನು ಕಿತ್ತುಕೊಂಡು ಅದನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ವರ್ಗಾಯಿಸಲು ಮುಂದಾಗಿದೆ. ಇದರಿಂದ ಗ್ರಾಮ ಪಂಚಾಯಿತಿ ಅಧ್ಯಕ್ಷರು ಪಿಡಿಒ ಎದುರು ಕೈಕಟ್ಟಿ ನಿಲ್ಲುವ ಕೆಟ್ಟ ಪರಿಸ್ಥಿತಿ ರಾಜ್ಯ ಸರ್ಕಾರ ನಿರ್ಮಿಸಿದೆ. ತಕ್ಷಣ ಈ ತಿದ್ದುಪಡಿಯನ್ನು ಹಿಂದಕ್ಕೆ ಪಡೆಯದೆ ಹೋದಲ್ಲಿ ಶಿವಮೊಗ್ಗದಲ್ಲಿ ಜಿಲ್ಲೆಯ ಎಲ್ಲ ಪಂಚಾಯ್ತಿ ಸದಸ್ಯರನ್ನು ಒಳಗೊಂಡು ಕಾಗೋಡು ತಿಮ್ಮಪ್ಪ ಅವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ. ಗ್ರಾಮ ರಾಜ್ಯದ ಅರ್ಥವಂತಿಕೆ ಬಿಜೆಪಿಯವರಿಗೆ ತಿಳಿದೇ ಇಲ್ಲ. ಸ್ಥಳೀಯ ಸರ್ಕಾರಗಳ ಅಧಿಕಾರವನ್ನು ಮೊಟಕುಗೊಳಿಸಿದರೆ ಮುಂದೆ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts