More

    ಗೌರಿ, ಗಣೇಶ ಮೂರ್ತಿಗಳ ವಿಸರ್ಜನೆ : ವಿವಿಧ ಗಣೇಶ ಸೇವಾ ಸಮಿತಿಗಳಿಂದ ಅದ್ದೂರಿ ಮೆರವಣಿಗೆ



    ನಾಪೋಕ್ಲು : ಪಟ್ಟಣದ ವಿವಿಧ ಗಣೇಶ ಸೇವಾ ಸಮಿತಿಗಳ ವತಿಯಿಂದ ವಿವಿಧೆಡೆ ಪ್ರತಿಷ್ಠಾಪಿಸಲಾಗಿದ್ದ ಗೌರಿ ಗಣೇಶ ಮೂರ್ತಿಗಳನ್ನು ಭಾನುವಾರ ಅದ್ದೂರಿ ಮೆರವಣಿಗೆ ಮೂಲಕ ವಿಸರ್ಜಿಸಲಾಯಿತು.


    ಐದು ಸೇವಾ ಸಮಿತಿಗಳ ವತಿಯಿಂದ ತಯಾರಿ ನಡೆಸಿದ್ದು, ಗಣೇಶ ಚತುರ್ಥಿಯಂದು ಸಂತೆ ಮೈದಾನದಿಂದ ಅಲಂಕೃತ ವಾಹನಗಳಲ್ಲಿ ಗೌರಿ ಗಣೇಶಮೂರ್ತಿಗಳನ್ನು ಮೆರವಣಿಗೆಯಲ್ಲಿ ತಂದು ವಿವಿಧ ದೇವಾಲಯಗಳಲ್ಲಿ ಪ್ರತಿಷ್ಠಾಪಿಸಲಾಗಿತ್ತು.


    ಇಂದಿರಾನಗರದ ವಿವೇಕಾನಂದ ಸೇವಾ ಸಮಿತಿ, ರಾಮಟ್ರಸ್ಟ್ ಗಣೇಶೋತ್ಸವ ಸಮಿತಿ, ಪೊನ್ನುಮುತ್ತಪ್ಪ ದೇವಾಲಯದ ವಿನಾಯಕ ಸೇವಾ ಸಮಿತಿ, ನಾಪೋಕ್ಲು ನಾಡು ಗೌರಿಗಣೇಶ ಸಮಿತಿ ಹಾಗೂ ಕಕ್ಕುಂದ ಕಾಡಿನ ಗಣೇಶೋತ್ಸವ ಸೇವಾ ಸಮಿತಿ ವತಿಯಿಂದ ಒಟ್ಟಿಗೆ ಅದ್ದೂರಿ ಮೆರವಣಿಗೆ ಮೂಲಕ ಉತ್ಸವಮೂರ್ತಿಗಳನ್ನು ಅಲಂಕೃತವಾಹನಗಳಲ್ಲಿ ಕೊಂಡ್ಯೊಯ್ದು ಸಂಜೆ ವಿಸರ್ಜಿಸಲಾಯಿತು.


    ಮನರಂಜನೆ ಕಾರ್ಯಕ್ರಮದಲ್ಲಿ ಸುಳ್ಯದ ನಾಸಿಕ್ ಬ್ಯಾಂಡ್, ಬೊಂಬೆಯಾಟ ಮತ್ತು ಹುಲಿ ವೇಷಗಳೊಂದಿಗೆ ಸಿಡಿಮದ್ದು, ವಿಶೇಷ ಅಲಂಕೃತ ಮಂಟಪಗಳೊಂದಿಗೆ ಮಹಿಳೆಯರು ಮಕ್ಕಳಾದಿಯಾಗಿ ಸಾರ್ವಜನಿಕರು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಗಣೇಶನಿಗೆ ಈಡುಕಾಯಿ ಒಡೆಯಲಾಯಿತು. ಭಕ್ತರು ಹಣ್ಣುಕಾಯಿ ಸೇವೆ ಸಮರ್ಪಿಸಿದರು. ವಿವಿಧ ಉತ್ಸವ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಸಾರ್ವಜನಿಕರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.


    ಡಿವೈಎಸ್‌ಪಿ ಗಜೇಂದ್ರ ಪ್ರಸಾದ್, ವೃತ್ತ ನಿರೀಕ್ಷಕ ಅನುಪ್‌ಮಾದಪ್ಪ, ನಾಪೋಕ್ಲು ಎಸ್‌ಐ ಸದಾಶಿವ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts