More

    ಗೋರ್ಟಾ(ಬಿ) ಗ್ರಾಮಕ್ಕೆ ನುಗ್ಗಿದ ಮಳೆ ನೀರು

    ಹುಲಸೂರು: ಗೋರ್ಟಾ(ಬಿ) ಗ್ರಾಮದಲ್ಲಿ ಗುರುವಾರ ರಾತ್ರಿ ಸುರಿದ ಭಾರಿ ಮಳೆಗೆ ಭಾಲ್ಕಿ-ಬಸವಕಲ್ಯಾಣ ರಸ್ತೆಗೆ ಹೊಂದಿಕೊಂಡಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸೇರಿ ಭೀಮನಗರ ಬಡಾವಣೆ ದಲಿತರ 50ಕ್ಕೂ ಹೆಚ್ಚು ಮನೆಗಳಿಗೆ ಹಳ್ಳದ ನೀರು ನುಗ್ಗಿದ್ದರಿಂದ ದವಸ-ಧಾನ್ಯ ಸೇರಿ ದಿನಬಳಕೆ ವಸ್ತುಗಳು ನೀರುಪಾಲಾಗಿವೆ.

    ಗುರುವಾರ ರಾತ್ರಿ ಜನರು ಆತಂಕಗೊಂಡು ನಿದ್ದೆ ಇಲ್ಲದೆ ಪರದಾಡಿದರು. ವಿಜಯಮಾಲಾ ನರಸಪ್ಪ ಮನೆಗೆ ಏಕಾಏಕಿ ನೀರು ನುಗ್ಗಿದ್ದರಿಂದ ಸ್ಥಳೀಯರು ಒಂದು ತಿಂಗಳ ಕಂದಮ್ಮ ಮತ್ತು ಬಾಣಂತಿಯನ್ನು ಸುರಕ್ಷಿತವಾಗಿ ಕರೆತಂದು ಬೇರೆಯವರ ಮನೆಯಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದರು. ಬಹುತೇಕರು ಸಮೀಪದ ಹನುಮಾನ ದೇವಸ್ಥಾನದಲ್ಲಿ ಆಶ್ರಯ ಪಡೆದು ನಿದ್ದೆ ಇಲ್ಲದೆ ಇಡೀ ರಾತ್ರಿ ಜಾಗರಣೆ ಮಾಡಿದರು.

    ಸಹಾಯಕ ಆಯುಕ್ತ ರಮೇಶ ಕೋಲಾರ, ತಹಸೀಲ್ದಾರ್ ಶಿವಾನಂದ ಮೇತ್ರೆ, ತಾಪಂ ಇಒ ಮಹಾದೇವ ಬಾಬಳಗೆ ಇತರರು ಶುಕ್ರವಾರ ಬೆಳಗ್ಗೆ ಗ್ರಾಮಕ್ಕೆ ಭೇಟಿ ನೀಡಿತು. ನೀರು ನುಗ್ಗಿದ ಮನೆಗಳ ಸಮೀಕ್ಷೆ ನಡೆಸಿ ಭೀಮನಗರ ಹೊರತುಪಡಿಸಿ 20ಕ್ಕೂ ಹೆಚ್ಚು ಮನೆಗಳವರಿಗೆ 10 ಸಾವಿರ ರೂ. ತಾತ್ಕಾಲಿಕ ಪರಿಹಾರದ ಚೆಕ್ ವಿತರಿಸಿತು.

    ಎಎಸ್ಪಿ ಶಿವಾಂಶು ರಾಜಪೂತ, ಸಿಪಿಐ ವಿಜಯಕುಮಾರ, ಪಿಎಸ್ಐ ಅಂಬರೀಶ ವಾಗ್ಮೊರೆ, ಕಂದಾಯ ನಿರೀಕ್ಷಕ ಮೊನೇಶ್ವರ ಸ್ವಾಮಿ, ಪ್ರಮುಖರಾದ ಜೈದೀಪ ತೆಲಂಗ್, ಮಹಾದೇವ ಪಟ್ನೆ, ಅರುಣ ತೆಲಂಗ್, ಮಹೇಶ ಪಟ್ನೆ, ಸಂದೀಪ ಮುಕುಂದೆ, ವಿಲಾಸ ಗುತೆ, ರಮೇಶ ಮೇತ್ರೆ, ಚೇತನ್ ಕಾಡೆ, ಶಾಲಿವಾನ ಸಿಂಧೆ, ಓಂಕಾರ, ನಿಖಿಲ್ ಜವಳಗೆ, ವಂದನಾಬಾಯಿ, ಮಾಣೆಮ್ಮ, ತೇಜಮ್ಮ ಲಾಚೆ ಇತರರಿದ್ದರು.

    ಗ್ರಾಮ ಪಂಚಾಯಿತಿಗೆ ಬೀಗ: ಮಳೆ ಹೆಚ್ಚಾದರೆ ಭೀಮನಗರ ಬಡಾವಣೆಗೆ ಚುಳಕಿನಾಲಾ ಜಲಾಶಯ ಮತ್ತು ಹಳ್ಳದ ನೀರು ನುಗ್ಗಿ ಆತಂಕ ಸೃಷ್ಟಿಸುತ್ತದೆ. ಕಳೆದ ವರ್ಷವೂ ಬಡಾವಣೆಯ ಎಲ್ಲ ಮನೆಗಳು ಅರ್ಧದಷ್ಟು ಮುಳುಗಿದ್ದವು. ಈ ವರ್ಷವೂ ಇದೇ ಕಥೆ. ನಮಗೆ ತಾತ್ಕಾಲಿಕ ಪರಿಹಾರದ 10 ಸಾವಿರ ರೂ. ಚೆಕ್ ಬೇಡ. ಶಾಶ್ವತ ಪರಿಹಾರ ರೂಪದಲ್ಲಿ ನಿವೇಶನ ಕೊಡಿ ಎಂದು ದಲಿತ ಪ್ರಮುಖರು ಶುಕ್ರವಾರ ಬೆಳಗ್ಗೆ ಗ್ರಾಪಂಗೆ ಬೀಗ ಹಾಕಿ ಒತ್ತಾಯಿಸಿದರು. ಮಧ್ಯಾಹ್ನ ಸಹಾಯಕ ಆಯುಕ್ತರ ಭರವಸೆ ಮೇರೆಗೆ ಪ್ರತಿಭಟನೆ ಕೈಬಿಟ್ಟು ಬೀಗ ತೆಗೆಯಲಾಯಿತು. ಮೇಲಧಿಕಾರಿಗಳ ಜತೆ ಮಾತನಾಡಿ ವಾರದೊಳಗೆ ಶಾಶ್ವತ ಪರಿಹಾರ ಕೊಡಿಸುತ್ತೇನೆ. ತಾತ್ಕಾಲಿಕವಾಗಿ ನೀರು ಬರದಂತೆ ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.

    ಭೀಮನಗರ ಬಡಾವಣೆ ನಿವಾಸಿಗಳಿಗೆ ಶಾಶ್ವತ ಪರಿಹಾರ ರೂಪದಲ್ಲಿ ಗ್ರಾಮ ಹೊರವಲಯದಲ್ಲಿ ಜಮೀನು ಖರೀದಿಸಿ ನಿವೇಶನ ನೀಡುವ ವ್ಯವಸ್ಥೆ ಮಾಡುತ್ತೇವೆ. ಸಕರ್ಾರ ನೀಡುತ್ತಿರುವ 10 ಸಾವಿರ ರೂ. ತಾತ್ಕಾಲಿಕ ಪರಿಹಾರ ಚೆಕ್ ಪಡೆಯಬೇಕು.
    | ರಮೇಶ ಕೋಲಾರ, ಸಹಾಯಕ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts