More

    ಗೋವು ಕಳ್ಳತನ, ಲವ್ ಜಿಹಾದ್ ತಡೆಗಟ್ಟಿ

    ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ ನಡೆಯುತ್ತಿರುವ ಗೋವು ಕಳ್ಳತನ, ಅಕ್ರಮ ಕಸಾಯಿಖಾನೆ ತಡೆಗಟ್ಟಬೇಕು. ಲವ್ ಜಿಹಾದ್ ಹಾಗೂ ಮತಾಂತರ ಪ್ರಕರಣಗಳನ್ನು ನಿಯಂತ್ರಿಸಬೇಕು ಎಂದು ಒತ್ತಾಯಿಸಿ ಹಿಂದು ಪರ ಸಂಘಟನೆಗಳ ಕಾರ್ಯಕರ್ತರು ಶುಕ್ರವಾರ ಮನವಿ ಸಲ್ಲಿಸಿದರು.

    ಇಲ್ಲಿನ ಉಪವಿಭಾಗಾಧಿಕಾರಿ ಆಕೃತಿ ಬನ್ಸಾಲ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ ಕಾರ್ಯಕರ್ತರು, ಇತ್ತೀಚೆಗೆ ಜಿಲ್ಲೆಯಾದ್ಯಂತ ರಾತ್ರಿ ಹೊತ್ತು ಸುಸಜ್ಜಿತ ಕಾರನ್ನು ಬಳಸಿ ಜಾನುವಾರು ಕಳ್ಳತನ ಮಾಡಲಾಗುತ್ತಿದೆ. ಗೋವು ಕಳ್ಳತನಕ್ಕೆ ಇವರು ಸುಸಜ್ಜಿತ ವಾಹನ ಬಳಸುತ್ತಿದ್ದು, ವೃತ್ತಿನಿರತ ಗೋವು ಕಳ್ಳರಾಗಿದ್ದಾರೆ. ಕಳ್ಳತನವು ಬಹುತೇಕ ನಗರ ಪ್ರದೇಶದಲ್ಲೇ ನಡೆದಿದ್ದು, ಸಾಮಾನ್ಯವಾಗಿ ಹೆಚ್ಚಿನ ಸಿ.ಸಿ. ಕ್ಯಾಮರಾಗಳಲ್ಲಿ ಕೃತ್ಯಕ್ಕೆ ಬಳಸಿರುವ ವಾಹನದ ಸಂಖ್ಯೆ ಜತೆಗೆ ಕಳ್ಳರ ಮುಖಚಹರೆ ಕೂಡ ದಾಖಲಾಗಿರುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

    ಇಷ್ಟೊಂದು ವ್ಯಾಪಕವಾಗಿ ಕಳ್ಳತನ ನಡೆದಿದ್ದು, ಕಳ್ಳರನ್ನು ಪತ್ತೆ ಹಚ್ಚಲು ಸಾಕಷ್ಟು ಅವಕಾಶಗಳಿದ್ದರೂ ಅವರ ವಿರುದ್ಧ ಕಾನೂನು ಕ್ರಮ ಜರುಗಿಸದೆ ಇರುವುದನ್ನು ನೋಡಿದರೆ ಗೋವು ಕಳ್ಳರ ಹಿಂದೆ ಪ್ರಭಾವಿ ಶಕ್ತಿ ಕೆಲಸ ಮಾಡುತ್ತಿರುವ ಸಂದೇಹ ಕಾಣುತ್ತಿದೆ. ಅಲ್ಲದೆ, ಜಿಲ್ಲೆಯ ಹಲವೆಡೆ ಅಕ್ರಮವಾಗಿ ಕಸಾಯಿಖಾನೆ ಕಾರ್ಯನಿರ್ವಹಿಸುತ್ತಿರುವ ಸಂದೇಹವಿದ್ದು, ಇದರ ಹಿಂದೆ ವ್ಯವಸ್ಥಿತವಾಗಿ ಕೆಲ ಗುಂಪುಗಳು ಕೆಲಸ ಮಾಡುತ್ತಿರುವ ಸಂಶಯವಿದೆ. ಗೋವುಗಳನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವವರಿಗೆ ಗೋವು ಕಳ್ಳತನದಿಂದ ನಷ್ಟ ಒಂದೆಡೆಯಾದರೆ ಇನ್ನೊಂದೆಡೆ ಧಾರ್ವಿುಕವಾಗಿ ಗೋವುಗಳನ್ನು ಆರಾಧಿಸುತ್ತ ಬಂದಿರುವ ಹಿಂದು ಸಮುದಾಯದವರ ಭಾವನೆಗಳಿಗೆ ಘಾಸಿಯಾಗುತ್ತಿದೆ. ಹೈನುಗಾರರು ಹಾಗೂ ರೈತರ ಜೀವನಕ್ಕೆ ಪೊಲೀಸ್ ಇಲಾಖೆ ಭದ್ರತೆ ಒದಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

    ಜತೆಗೆ ಇತ್ತೀಚಿನ ದಿನಗಳಲ್ಲಿ ಲವ್ ಜಿಹಾದ್ ಪ್ರಕರಣಗಳು ಕೂಡ ವ್ಯಾಪಕವಾಗಿ ಹೆಚ್ಚಿವೆ. ಅಮಾಯಕ ಹಿಂದು ಹೆಣ್ಣುಮಕ್ಕಳಿಗೆ ವಿವಿಧ ಆಸೆ ಆಮಿಷ ತೋರಿಸಿ ಪ್ರೀತಿಯ ನಾಟಕವಾಡಿ ಮದುವೆಯ ಹೆಸರಿನಲ್ಲಿ ಮತಾಂತರಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಅಲ್ಲದೆ, ಮತಾಂತರ ಪ್ರಕರಣಗಳು ಕೂಡ ಹೆಚ್ಚುತ್ತಿವೆ. ಈ ಎಲ್ಲ ಸಮಸ್ಯೆಗಳಿಗೆ ಸರ್ಕಾರ ಕೂಡಲೆ ಸ್ಪಂದಿಸಿ ಕಠಿಣ ಕ್ರಮಕ್ಕೆ ಮುಂದಾಗಬೇಕು. ಇಲ್ಲವಾದಲ್ಲಿ ಹಿಂದುಪರ ಸಂಘಟನೆಗಳು ಮುಂದಿನ ದಿನದಲ್ಲಿ ಜಿಲ್ಲೆಯಾದ್ಯಂತ ಬೃಹತ್ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

    ಈ ವೇಳೆ ಹಿಂದು ಜಾಗರಣಾ ವೇದಿಕೆಯ ಗೋಪಾಲ ದೇವಾಡಿಗ, ಬಜರಂಗ ದಳದ ವಿಠ್ಠಲ ಪೈ, ಪ್ರಮುಖರಾದ ನಂದನ ಸಾಗರ, ರವೀಶ ಪೂಜಾರಿ, ಪ್ರಕಾಶ ಸಾಲೇರ, ಗುರುಪ್ರಸಾದ ಶಾಸ್ತ್ರಿ, ಉದಯ ಕಳೂರು ಹಾಗೂ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts