More

    ಗುರುವೀರಘಂಟೈ ಮಡಿವಾಳೇಶ್ವರ ಜೋಡು ರಥೋತ್ಸವ

    ಕಲಕೇರಿ: ಉತ್ತರ ಕರ್ನಾಟಕದ ದೊಡ್ಡ ಜಾತ್ರೆಗಳಲ್ಲಿ ಒಂದಾದ ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮದ ಗುರು ವೀರಘಂಟೈ ಮಡಿವಾಳೇಶ್ವರರ ಜಾತ್ರಾ ಮಹೋತ್ಸವ ಮಂಗಳವಾರ ವಿಜೃಂಭಣೆಯಿಂದ ಜರುಗಿತು.

    ನಸುಕಿನ ಜಾವ 4.30 ಗಂಟೆಗೆ ಅಗ್ಗಿ ಉತ್ಸವ ಹಾಗೂ ಸಂಜೆ 4.30 ಗಂಟೆಗೆ ಮೃಘಶಿರ ನಕ್ಷತ್ರದಲ್ಲಿ ಅದ್ದೂರಿಯಾಗಿ ಜೋಡು ರಥೋತ್ಸವ ನಡೆಯಿತು.
    ನಸುಕಿನ ಜಾವ ಮಲ್ಲಯ್ಯಮುತ್ಯಾ ಗದ್ದಿಗೆಮಠ ನೇತೃತ್ವದಲ್ಲಿ ದೇವಸ್ಥಾನದ ಸಂಪ್ರದಾಯದಂತೆ ಅಗ್ನಿಕುಂಡಕ್ಕೆ ವಿವಿಧ ವಾದ್ಯಮೇಳ, ಕಳಸಾರತಿಯೊಂದಿಗೆ ಐದು ಸುತ್ತು ಪೂಜಾ ಕಾರ್ಯ ನಡೆದ ನಂತರ ಅಗ್ಗಿ ಹಾಯಲಾಯಿತು. ನಂತರ ಉಚ್ಚಾಯ ಉತ್ಸವ, ವೀರಂಘಂಟೈ ಮಡಿವಾಳೇಶ್ವರರ ಗದ್ದುಗೆಗೆ ಮಹಾರುದ್ರಾಭಿಷೇಕ, ವಿಶೇಷ ಪೂಜೆ ಸಲ್ಲಿಸಲಾಯಿತು. ಬೆಳಗ್ಗೆ 9 ಗಂಟೆಯಿಂದ ಗ್ರಾಮದ ಭಕ್ತರು ಪದ್ಧತಿಯಂತೆ ರಥಕ್ಕೆ ಎಣ್ಣೆ ಹಚ್ಚಿ ನಂತರ ರಥವನ್ನು ಸಿಂಗರಿಸಿದರು.

    ಉತ್ತರ ಕರ್ನಾಟಕದ ವಿವಿಧ ಜಿಲ್ಲೆ ಹಾಗೂ ನೆರೆಯ ಆಂಧ್ರ ಪ್ರದೇಶ, ಮಹಾರಾಷ್ಟ್ರ, ಗೋವಾದಿಂದ ಆಗಮಿಸಿದ ಭಕ್ತರು ನಸುಕಿನ ಜಾವದಿಂದಲೇ ದೇವರಿಗೆ ದೀಡ ನಮಸ್ಕಾರ, ಉರುಳು ಸೇವೆ ಮಾಡಿ ಹರಕೆ ತೀರಿಸಿದರು. ನಂತರ ಸರತಿ ಸಾಲಿನಲ್ಲಿ ನಿಂತು ಗುರುವೀರಘಂಟೈ ಮಡಿವಾಳೇಶ್ವರರ ಗದ್ದುಗೆ ಹಾಗೂ ಪಂಚರಂಗ ಸಂಸ್ಥಾನ ಗದ್ದಿಗೆಮಠದ ಪೀಠಾಧ್ಯಕ್ಷ ಗುರುಮಡಿವಾಳೇಶ್ವರರ ದರ್ಶನ ಪಡೆದರು. ಸಂಪ್ರದಾಯದಂತೆ ಭಕ್ತರು ಜೋಡು ಎಡೆ ಸಲ್ಲಿಸಿ ಜೋಡುಕೊಡೆ, ಜೋಡುಗದ್ದಿಗೆ, ಜೋಡು ಕಳಸ, ಜೋಡು ರಥಗಳು, ಜೋಡು ಪಾದಗಟ್ಟಿಗೆಗೆ ಪೂಜೆ ಸಲ್ಲಿಸಿದರು. ಅಂದಾಜು 2 ಸಾವಿರಕ್ಕೂ ಹೆಚ್ಚು ಭಕ್ತರು ದೀಡ್ ನಮಸ್ಕಾರ ಹಾಕಿ ಹರಕೆ ತೀರಿಸಿದರು.

    ಸಂಜೆ 4 ಗಂಟೆಗೆ ಸಕಲ ವಾದ್ಯಮೇಳಗಳೊಂದಿಗೆ ಜೋಡು ರಥಗಳಿಗೆ ಪೂಜೆ ಸಲ್ಲಿಸಿದ ನಂತರ ಪಂಚರಂಗ ಸಂಸ್ಥಾನ ಗದ್ದಿಗೆಮಠದ ಗುರುಮಡಿವಾಳೇಶ್ವರ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಗುರುವೀರಘಂಟೈ ಮಡಿವಾಳೇಶ್ವರರ ದೇವಸ್ಥಾನದಿಂದ ಜೋಡುಗುಡಿಯ ಪಾದಗಟ್ಟೆಯವರೆಗೆ ಜೋಡು ರಥಗಳನ್ನು ಎಳೆಯಲಾಯಿತು.

    ಜಾತ್ರೆಗೆ ಬಂದ ಭಕ್ತರು ಬಜ್ಜಿ ಮತ್ತು ಬೆಲ್ಲದ ಜಿಲೇಬಿ ಸವಿದು ಸಂತಸ ಪಟ್ಟರು. ಜಾತ್ರೆಯಲ್ಲಿ 100-150 ಜಿಲೇಬಿ ಅಂಗಡಿಗಳನ್ನು ಹಾಕಲಾಗಿತ್ತು. ಕಲಕೇರಿ ಸುತ್ತಮುತ್ತಲಿನ ಅಂದಾಜು 50 ಹಳ್ಳಿಗಳ ಜನರು ಅಲಂಕೃತ ಎತ್ತಿನಗಾಡಿಯಲ್ಲಿ ಜಾತ್ರೆಗೆ ಆಗಮಿಸಿದ್ದು ಗಮನ ಸೆಳೆಯಿತು.

    ಜಾತ್ರೆ ನಿಮಿತ್ತವಾಗಿ ಯುವಕರು ಮತ್ತು ವಿವಿಧ ಸಂಘ ಸಂಸ್ಥೆಗಳಿಂದ ಪೊಲೀಸ್ ಠಾಣೆಯ ಮುಂಭಾಗ, ಆದರ್ಶ ನಗರ, ತಂಗಮ್ಮ ದೇಸಾಯಿ ಕಲ್ಯಾಣ ಮಂಟಪ ಮತ್ತು ಮಡಿವಾಳೇಶ್ವರ ದೇವಸ್ಥಾನದ ದಾಸೋಹದ ಮಹಾಮನೆಯಲ್ಲಿ ಸೇರಿದಂತೆ ವಿವಿಧೆಡೆ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿತ್ತು. ಸ್ಥಳೀಯ ಗ್ರಾಪಂ ವತಿಯಿಂದ ಅಲ್ಲಲ್ಲಿ ಜನರಿಗೆ ತೊಂದರೆಯಾಗದಂತೆ ಕುಡಿಯುವ ನೀರಿನ ವ್ಯವಸ್ತೆಯನ್ನು ಕೈಗೊಳ್ಳಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts