More

    ಗುರುವಾರ ತಡರಾತ್ರಿ ಬೋನಿಗೆ ಬಿದ್ದ ಗಂಡು ಚಿರತೆ; ಶುಕ್ರವಾರ ಮತ್ತೊಂದು ಪ್ರತ್ಯಕ್ಷ

    ಹೊಳೆಹೊನ್ನೂರು: ಸಮೀಪದ ಹರಮಘಟ್ಟದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಗುರುವಾರ ತಡರಾತ್ರಿ ಸುಮಾರು ನಾಲ್ಕು ವರ್ಷದ ಗಂಡು ಚಿರತೆ ಬಿದ್ದಿದ್ದು, ಹೊಳಲೂರು ಭಾಗದಲ್ಲಿ ಕಳೆದ ಎರಡು ತಿಂಗಳಲ್ಲಿ ಎರಡು ಚಿರತೆಗಳು ಸೆರೆಯಾಗಿವೆ.
    ಹೊಳಲೂರು ಸಮೀಪದ ಕ್ಯಾತಿನಕೊಪ್ಪ, ಆಲದಹಳ್ಳಿ, ಸುತ್ತಕೋಟೆ, ಸೋಮಿನಕೊಪ್ಪ ಭಾಗದಲ್ಲಿ ಚಿರತೆಗಳ ಹಾವಳಿಯಿಂದ ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ. ಇದೇ ಗ್ರಾಮ ವ್ಯಾಪ್ತಿಯಲ್ಲಿ ಶುಕ್ರವಾರ ಬೆಳಗ್ಗೆ ಮತ್ತೊಂದು ಚಿರತೆ ಕಾಣಿಸಿಕೊಂಡಿದ್ದು, ಗ್ರಾಮಸ್ಥರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆಗೆ ಹರಮಘಟ್ಟದಲ್ಲಿ 7-8 ದಿನಗಳಿಂದ ಬೋನು ಇಟ್ಟು ಕಾಯುತ್ತಿದ್ದರು. ಹರಮಘಟ್ಟದ ಹನುಮಂತಪ್ಪ ಎಂಬುವರ ಅಡಕೆ ತೋಟದಲ್ಲಿ ಇಟ್ಟಿದ್ದ ಬೋನಿಗೆ ಚಿರತೆ ಬಿದ್ದಿದೆ. ಮೂರ‌್ನಾಲ್ಕು ದಿನಗಳ ಹಿಂದೆ ಇದೇ ಅಡಕೆ ತೋಟದಲ್ಲಿ ಚಿರತೆ ಹಸುವನ್ನು ಕೊಂದು ಹಾಕಿತ್ತು. ಅದೇ ಜಾಗದಲ್ಲಿ ಇರಿಸಿದ್ದ ಬೋನಿಗೆ ಚಿರತೆ ಬಿದ್ದಿದೆ.
    ಚಿರತೆ ಸೆರೆ ಸಿಕ್ಕ ವಿಷಯ ತಿಳಿಯುತ್ತಿದ್ದಂತೆ ವೀಕ್ಷಣೆ ಮಾಡಲು ಅಕ್ಕಪಕ್ಕದ ಊರುಗಳಿಂದ ಗ್ರಾಮಸ್ಥರು ಆಗಮಿಸಿದ್ದರು. ಹೀಗಾಗಿ ಹರಮಘಟ್ಟ ರಸ್ತೆಯಲ್ಲಿ ಜನಜಂಗುಳಿ, ವಾಹನ ದಟ್ಟಣೆ ಹೆಚ್ಚಾಗಿತ್ತು. ಜನರನ್ನು ನಿಭಾಯಿಸುವಲ್ಲಿ ಪೊಲೀಸರು ಹೈರಾಣಾದರು. ಚಿರತೆ ನೋಡಲು ಜನಜಂಗುಳಿ ಹೆಚ್ಚಾಗಿದ್ದರಿಂದ ಗ್ರಾಮದ ಮುಖ್ಯದ್ವಾರದ ಬಳಿ ಚಿರತೆಯನ್ನು ವೀಕ್ಷಿಸಲು ಒಂದೆರಡು ತಾಸು ಇಡಲಾಗಿತ್ತು.
    ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ: ಕಳೆದೆರಡು ವರ್ಷಗಳಲ್ಲಿ ಕ್ಯಾತಿನಕೊಪ್ಪದಲ್ಲಿ 2, ಹಾಲದಹಳ್ಳಿಯಲ್ಲಿ 2, ಹರಮಘಟ್ಟದಲ್ಲಿ 1 ಚಿರತೆಯನ್ನು ಸೆರೆಹಿಡಿಯಲಾಗಿದೆ. ಹರಮಘಟ್ಟ, ಸೋಮಿನಕೊಪ್ಪ, ಸಿದ್ದರಮಟ್ಟಿ ಗುಡ್ಡದಲ್ಲಿ ಚಿರತೆಗಳ ಓಡಾಟವಿದೆ. ಈ ಭಾಗದಲ್ಲಿ ಚಿರತೆ ಸಂತತಿ ಹೆಚ್ಚಾಗಲು ಅರಣ್ಯ ಇಲಾಖೆಯೇ ನೇರ ಕಾರಣ ಎಂದು ಆರೋಪಿಸಿದ ಗ್ರಾಮಸ್ಥರು, ಸ್ಥಳಕ್ಕೆ ಆಗಮಿಸಿದ್ದ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು. ಬೇರೆಡೆ ಸೆರೆಸಿಕ್ಕ ಚಿರತೆಗಳನ್ನು ಅಭಯಾರಣ್ಯಗಳಿಗೆ ಬಿಡುವ ಬದಲು ಗ್ರಾಮಾಂತರದ ಗುಡ್ಡಗಳಿಗೆ ಬಿಟ್ಟು ಹೋಗುತ್ತಾರೆ. ಇಂದು ಸೆರೆಯಾದ ಚಿರತೆಯನ್ನು ಮತ್ತೆ ತಡ ರಾತ್ರಿ ಬಂದು ಇಲ್ಲಿಯೇ ಬಿಟ್ಟು ಹೋಗುತ್ತಾರೆ. ಎರಡು ವರ್ಷಗಳಿಂದ 5 ಚಿರತೆಗಳು ಸೆರೆಯಾದರೂ ನಮ್ಮ ಭಾಗದಲ್ಲಿ ಹಾವಳಿ ನಿಲ್ಲುತ್ತಿಲ್ಲ. ಇದು ಅರಣ್ಯ ಇಲಾಖೆ ಮಾಡುತ್ತಿರುವ ಸಂಚು ಎಂದು ಗ್ರಾಮಸ್ಥರು ಕಿಡಿಕಾರಿದರು. ಕೊನೆಗೆ ಅಧಿಕಾರಿಗಳು ಚಿರತೆಯನ್ನು ಅಭಯಾರಣ್ಯಕ್ಕೆ ಬಿಡುವುದಾಗಿ ಭರವಸೆ ನೀಡಿ ತೆಗೆದುಕೊಂಡು ಹೋದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts