More

    ಗುಂಪುಗಾರಿಕೆ, ನೂಕುನುಗ್ಗಲಾಟಕ್ಕೆ ಹೈರಾಣ

    ಕೆಜಿಎಫ್: ಬ್ರಿಟಿಷರ ಕಾಲದಲ್ಲಿ ಗಣಿ ಕಾರ್ಮಿಕರ ಅನುಕೂಲಕ್ಕಾಗಿ ನಿರ್ಮಿಸಿದ್ದ ಎಂ.ಜಿ.ಮಾರುಕಟ್ಟೆ ವಿಲೇವಾರಿ ವಿಚಾರದಲ್ಲಿ ಉಂಟಾಗಿರುವ ವಿವಾದ ಶಮನಕ್ಕೆ ಆಗಮಿಸಿದ್ದ ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ಬಿಜೆಪಿ, ಕಾಂಗ್ರೆಸ್ ಬಣಗಳ ತಿಕ್ಕಾಟದಿಂದ ಹೈರಾಣಗೊಂಡ ಘಟನೆ ನಡೆಯಿತು.

    ಎಂಜಿ ಮಾರುಕಟ್ಟೆಯ ಮಳಿಗೆ ಹರಾಜು ಪ್ರಕ್ರಿಯೆಯಲ್ಲಿ ನಗರಸಭೆ ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿದು ವ್ಯಾಪಾರಿಗಳಿಗೆ ತೊಂದರೆ ನೀಡುತ್ತಿರುವ ದೂರಿನ ಹಿನ್ನೆಲೆಯಲ್ಲಿ ಸಚಿವರು ಸೋಮವಾರ ಖುದ್ದು ವೀಕ್ಷಣೆಗೆ ಬಂದಾಗ ಎರಡೂ ಪಕ್ಷಗಳ ಕಾರ್ಯಕರ್ತರು ವಿಷಯ ಮನದಟ್ಟು ಮಾಡಿಕೊಡಲು ಪೈಪೋಟಿ ನಡೆಸಿದ್ದರಿಂದ ನೂಕು ನುಗ್ಗಲು ಉಂಟಾಯಿತು.

    ಗುಂಪಿನ ನಡುವೆ ಸಿಲುಕಿ ಹೈರಾಣಾದ ಸಚಿವರು ಶಾಂತಿಯಿಂದ ವರ್ತಿಸುವಂತೆ ಮನವಿ ಮಾಡಿದರೂ ಕಿವಿಗೊಡದ ಕಾರ್ಯಕರ್ತರು ಘೋಷಣೆ ಕೂಗುತ್ತಾ ಬಣಗಳ ಶಕ್ತಿ ಪ್ರದರ್ಶನಕ್ಕೆ ಮುಂದಾದಾಗ ಸಚಿವರು ಪರಿಸ್ಥಿತಿ ತಿಳಿಗೊಳಿಸಲು ಹರಸಾಹಸಪಟ್ಟರು. ಶಾಸಕಿ ರೂಪಕಲಾ ಮತ್ತು ಎಮ್ಮೆಲ್ಸಿ ನಜೀರ್ ಅಹಮದ್ ಎಂಜಿ ಮಾರುಕಟ್ಟೆ ವಿಚಾರವಾಗಿ ನಾವಿಬ್ಬರೂ ಸದನದಲ್ಲಿ ಪ್ರಸ್ತಾಪಿಸಿ ಅನೇಕ ವರ್ಷಗಳಿಂದ ವ್ಯಾಪಾರ ನಡೆಸುತ್ತಿರುವವರಿಗೆ ಆಗುತ್ತಿಗೆ ತೊಂದರೆ ತಪ್ಪಿಸುವಂತೆ ಕೋರಿದ್ದ ಹಿನ್ನೆಲೆಯಲ್ಲಿ ಸಚಿವರು ಭೇಟಿ ನೀಡಿದ್ದಾರೆ, ನಿಮ್ಮ ಅಹವಾಲು ತಿಳಿಸುವಂತೆ ವ್ಯಾಪಾರಸ್ಥರಿಗೆ ಸೂಚಿಸಿದರು.

    ಇದಕ್ಕೆ ಪ್ರತಿಯಾಗಿ ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ನೆಲಬಾಡಿಗೆಗೆ ಅಂಗಡಿ ಕಟ್ಟಿಕೊಂಡು ವ್ಯಾಪಾರ ಮಾಡುತ್ತಿರುವ ಮಾಲೀಕರು ನಗರಸಭೆ ನಿಗದಿಪಡಿಸಿರುವ ಠೇವಣಿ ಮತ್ತು ಬಾಡಿಗೆ ಪಾವತಿಸಲು ಸಿದ್ಧರಿದ್ದಾರೆ, ಅಧಿಕಾರಿಗಳು ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡಲು ಇಚ್ಛಿಸಿದ್ದಾರಾದರೂ ಕಮಿಷನ್ ಆಸೆಗಾಗಿ ಕೆಲವರು ವಿವಾದ ಸೃಷ್ಟಿಸುತ್ತಿದ್ದಾರೆಂದು ದೂರಿದಲ್ಲದೆ ವಿಶೇಷ ಪ್ರಕರಣವೆಂದು ಪರಿಗಣಿಸಿ ಮಳಿಗೆ ವಿಲೇವಾರಿ ಮಾಡುವಂತೆ ಕೋರಿದರು.

    ಬಣ ರಾಜಕೀಯದಿಂದ ಸುಸ್ತಾದ ಸಚಿವರು ಸುಮಾರು ಎರಡೂವರೆ ಗಂಟೆ ಎಂಜಿ ಮಾರುಕಟ್ಟೆಯನ್ನು ಪ್ರದಕ್ಷಿಣೆ ಹಾಕಿ ರಾಜಕೀಯ ಜಂಜಾಟದಿಂದ ಯಾರಿಗೂ ಅನ್ಯಾಯವಾಗಬಾರದು, ಕಾನೂನು ಚೌಕಟ್ಟಿನಲ್ಲಿ ಸಮಸ್ಯೆ ಬಗೆಹರಿಸುತ್ತೇನೆ. ಈ ಬಗ್ಗೆ ಶಾಸಕಿ, ಸಂಸದ, ರಾಜಕೀಯ ಮುಖಂಡರು ಅಧಿಕಾರಿಗಳೊಂದಿಗೆ ಶೀಘ್ರ ಸಭೆ ನಡೆಸಿ ವಿವಾದಕ್ಕೆ ತೆರೆ ಎಳೆಯುವುದಾಗಿ ಭರವಸೆ ನೀಡಿದರು.
    ಅಮೃತ ಸಿಟಿ ಯೋಜನೆಯ ಮೂಲಗುತ್ತಿಗೆದಾರರು ಕರ್ತವ್ಯ ನಿರ್ವಹಿಸದೆ ಉಪಗುತ್ತಿಗೆದಾರರಿಗೆ ಶೇ.5 ಲಾಭದ ಆಧಾರದ ಮೇಲೆ ಕಾಮಗಾರಿ ವಹಿಸಿರುವುದು ಕಾನೂನು ಬಾಹಿರವೆಂದು ಅಧಿಕಾರಿಗಳನ್ನು ಗದರಿದರು.

    ಪೌರಾಯುಕ್ತೆ ಸರ್ವರ್ ಮರ್ಚೆಂಟ್ ಆಸ್ತಿ ತೆರಿಗೆ ಮಾಹಿತಿ ನೀಡಿ, ಪ್ರಸಕ್ತ ಸಾಲಿನಲ್ಲಿ 2.50 ಕೋಟಿ ರೂ. ವಸೂಲಿಯಾಗಿ ಶೇ.84 ಪ್ರಗತಿ ಸಾಧಿಸಲಾಗಿದೆ. ಬಿಜಿಎಂಎಲ್‌ನಿಂದ 19 ಕೋಟಿ ರೂ., ಬೆಮೆಲ್‌ನಿಂದ 9 ಕೋಟಿ ರೂ. ತೆರಿಗೆ ಬಾಕಿ ಉಳಿದಿರುವ ಸಂಬಂಧ ನೋಟಿಸ್ ನೀಡಲಾಗಿದೆ. ಕುಡಿಯುವ ನೀರಿನ ಕರ 100 ಕೋಟಿ ರೂ. ಬಾಕಿ ಇದ್ದು, 4 ಕೋಟಿ ರೂ. ವಸೂಲಿಯಾಗಿದೆ ಎಂದರು.

    ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕಿ ಬಿ.ವಿ.ಕಾವೇರಿ, ನಗರಸಭೆ ಅಧ್ಯಕ್ಷ ವಳ್ಳಲ್ ಮುನಿಸ್ವಾಮಿ, ಮಾಜಿ ಶಾಸಕ ವೈ. ಸಂಪಂಗಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಅಶ್ವಿನಿ, ಉಪ ವಿಭಾಗಾಧಿಕಾರಿ ಸೋಮಶೇಖರ್ ಹಾಗೂ ನಗರಸಭೆ ಸದಸ್ಯರು ಹಾಜರಿದ್ದರು.

    ಅಧಿಕಾರಿಗಳ ಮೇಲೆ ಸಿಡಿಮಿಡಿ: ನಗರಸಭೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಎಂಟಿಬಿ ನಾಗರಾಜ್ ಅಮೃತ ಸಿಟಿ ಯೋಜನೆ ಕಾಮಗಾರಿ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿ 2016ರಲ್ಲಿ 145 ಕೋಟಿ ರೂ. ವೆಚ್ಚದ ಕಾಮಗಾರಿ ಮುಗಿಯದಿರಲು ಕಾರಣವೇನೆಂದು ತರಾಟೆ ತೆಗೆದುಕೊಂಡರಲ್ಲದೆ ವಿಳಂಬಕ್ಕೆ ಅಧಿಕಾರಿಗಳ ನಿರ್ಲಕ್ಷ್ಯ, ಬೇಜವಾಬ್ದಾರಿ ಕಾರಣವೆಂಬುದು ಕಂಡುಬಂದಿದೆ. ಗುತ್ತಿಗೆದಾರರನ್ನು ಪ್ರಶ್ನಿಸಲು ನೈತಿಕತೆ ಕಳೆದುಕೊಂಡಿದ್ದೀರಿ, ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡದ ನಿಮಗೆ ಯಾವ ಶಿಕ್ಷೆ ನೀಡಬೇಕು ಎಂದು ಬೆವರಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts