More

    ಗಿಡ ನೆಟ್ಟ ಲೆಕ್ಕ ಯಾರಿಗೆ ಕೊಡಲಿ?: ಸಾಲುಮರದ ತಿಮ್ಮಕ್ಕ

    ಮೈಸೂರು: ಗಿಡ ನೆಡಿ, ಮರವಾಗಿ ಬೆಳೆಸಿ. ಇದರಿಂದ ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂದು ಪದ್ಮಶ್ರೀ ಪುರಸ್ಕೃತ ಸಾಲುಮರದ ತಿಮ್ಮಕ್ಕ ಸಲಹೆ ನೀಡಿದರು.


    ನಗರದ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ ಸೋಮವಾರ ಪರಿಸರ ಸಂರಕ್ಷಣೆ ಕುರಿತು ಹಮ್ಮಿಕೊಂಡಿದ್ದ ಸಂವಾದದಲ್ಲಿ ಅವರು ಮಾತನಾಡಿದರು. ಮರ-ಗಿಡ ಬೆಳೆಸುವುದರಿಂದ ಅನೇಕ ಪ್ರಯೋಜನವಿದೆ. ಇದು ನೆರಳು, ಶುದ್ಧಗಾಳಿ ನೀಡುತ್ತದೆ. ಮನುಷ್ಯ ಜೀವನಕ್ಕೆ ಇದುವೇ ತಾನೇ ಬೇಕು? ಇಲ್ಲದಿದ್ದರೆ ಬದುಕುವುದು ಕಷ್ಟಕರವಾಗಲಿದೆ ಎಂದರು.


    ಈವರೆಗೆ ಎಷ್ಟು ಗಿಡ ನೆಟ್ಟಿದ್ದೀರಿ ಎಂಬ ಪುಟ್ಟ ಮಗುವಿನ ಪ್ರಶ್ನೆಗೆ ಉತ್ತರಿಸಿದ ಅವರು, ಲೆಕ್ಕ ಇಟ್ಟುಕೊಂಡು ಅದನ್ನು ನಾನು ಯಾರಿಗೆ ಕೊಡಬೇಕು? ಆ ಲೆಕ್ಕ ಕಟ್ಟಿಕೊಂಡು ನನಗೇನು? ಗಿಡಗಳು ಮರವಾಗಿ ಬೆಳೆಯಬೇಕು. ಅದರಿಂದ ಎಲ್ಲರಿಗೂ ಅನುಕೂಲವಾಗಬೇಕಷ್ಟೇ ಎಂದರು.


    ನಿಮಗೆ ಯಾವ ಊರು ಇಷ್ಟ ಎಂಬ ಮತ್ತೊಂದು ಮಗುವಿನ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ತಿಮ್ಮಕ್ಕ, ಒಂದೇ ಊರು ಅಲ್ಲ. ಎಲ್ಲ ಊರೂ ಇಷ್ಟ ಎಂದು ಚುಟುಕಾಗಿ ಹೇಳಿದರು.


    ಅಷ್ಟೂ ಗಿಡಗಳಿಗೂ ನೀರು ಹೇಗೆ ಹಾಕಿದ್ರೀ ಎಂಬ ಮತ್ತೊಂದು ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸೊಂಟದ ಮೇಲೊಂದು, ತಲೆಯ ಮೇಲೊಂದು ಮಡಕೆ ಇಟ್ಟುಕೊಂಡು ದೂರದ ಕೆರೆಗೆ ಹೋಗಿ ನೀರು ಹೊತ್ತು ತಂದು ನಾನು, ನನ್ನ ಪತಿ ಗಿಡಗಳಿಗೆ ನೀರು ಹಾಕುತ್ತಿದ್ದೆವು. ಹೀಗೆ ಗಿಡಗಳನ್ನು ಪೋಷಣೆ ಮಾಡಿಕೊಂಡು ಬಂದೆವು ಎಂದರು.
    ನಿಮ್ಮ ಆರೋಗ್ಯದ ಗುಟ್ಟೇನು ಎಂಬ ಸಭಿಕರ ಪ್ರಶ್ನೆಗೆ ಉತ್ತರಿಸಿದ ಅವರು, ಈ ಹಿಂದೆ ಬಹಳ ಕಷ್ಟಪಟ್ಟೆ, ಕೂಲಿ ಕೆಲಸ ಕೂಡ ಮಾಡಿದೆ. ನನ್ನದು ಸುಖಪಟ್ಟ ಜನ್ಮವಲ್ಲ ಎಂದು ಹೇಳಿದರು.


    ಆಯಿಷ್ ನಿರ್ದೇಶಕಿ ಡಾ.ಎಂ.ಪುಷ್ಪಾವತಿ ಮಾತನಾಡಿ, ವಾಹನ ನಿಲ್ಲಿಸಬೇಕಾದರೆ ನೆರಳಿಗಾಗಿ ಮರಗಳನ್ನು ಹುಡುಕುತ್ತೇವೆ. ಅಂತಹ ನೂರಾರು ಮರಗಳನ್ನು ಬೆಳೆಸುವ ಮೂಲಕ ಸಾಲುಮರದ ತಿಮ್ಮಕ್ಕ ಸಮಾಜಕ್ಕೆ ದಾರಿ ತೋರಿಸಿದ್ದಾರೆ. ಅವರಿಗೆ ಪದ್ಮಶ್ರೀ, ನಾಡೋಜ ಪ್ರಶಸ್ತಿ ಎಂದರೇನು ಗೊತ್ತಿಲ್ಲ. ಆದರೆ, ಆ ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


    ನಾವೆಲ್ಲರೂ ಬೀಜದ ಉಂಡೆಗಳನ್ನು ಮಾಡಿ, ಖಾಲಿ ಪ್ರದೇಶಗಳಲ್ಲಿ ಹರಡಿ, ಎಲ್ಲೆಡೆ ಮರಗಳು ಬೆಳೆದು ಪ್ರಕೃತಿ ಉಳಿಸಲು ಅಳಿಲು ಸೇವೆ ಮಾಡಬೇಕು ಎಂದರು.
    ಸಾಲುಮರದ ತಿಮ್ಮಕ್ಕ ಇಂಟರ್ ನ್ಯಾಷನಲ್ ಫೌಂಡೇಷನ್ ಸಂಚಾಲಕ ಡಾ.ಉಮೇಶ್, ಗೌರವ ಟ್ರಸ್ಟಿ ಎಂ.ಯೋಗೇಶ್ವರ್, ಡಾ.ಮಹೇಶ್, ಬಾಲು ಇನ್ನಿತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts