More

    ಗದಗ-ಬೆಟಗೇರಿಯಲ್ಲಿ ಅಂದರ್ ಬಾಹರ್ ಜೋರು

    ಗದಗ: ಗದಗ-ಬೆಟಗೇರಿ ಅವಳಿ ನಗರದಲ್ಲಿ ಎಕ್ಕಾ, ರಾಜಾ, ರಾಣಿಯರ ಕುಣಿತ ಮಿತಿಮೀರಿದೆ. ನಿತ್ಯ ಲಕ್ಷಾಂತರ ರೂಪಾಯಿ ಕೈ ಬದಲಾಗುತ್ತಿರುವ ಮಟ್ಟಿಗೆ ಅಂದರ್ ಬಾಹರ್ ಜೂಜಾಟ ನಡೆಯುತ್ತಿದೆ. ಆದರೂ ಪೊಲೀಸ್ ಇಲಾಖೆ ಮಾತ್ರ ಮಗುಮ್ಮಾಗಿ ಕುಳಿತಿದೆ!

    ಅವಳಿ ನಗರದ ಯುವಕರು ಸೇರಿ ಹಲವಾರು ಜನರಿಗೆ ಇಸ್ಪೀಟ್ ಆಟದ ಗುಂಗು ಹಿಡಿದಿದೆ. ಗೋವಾದ ಕೆಸಿನೋ ಮಾದರಿಯಲ್ಲಿ ಇಲ್ಲಿನ ಆಟ ಮಾರ್ಪಾಡಾಗುತ್ತಿದೆ. ಹಣ ಹೂಡಿ ಆಟ ಆಡಿಸುವವರ ಸಂಖ್ಯೆ ಹೆಚ್ಚಾಗಿದ್ದರಿಂದ ಅವಳಿ ನಗರದ ಅನೇಕ ಕುಟುಂಬಗಳು ಬೀದಿಪಾಲಾಗುತ್ತಿವೆ.

    ಇಸ್ಪೀಟ್ ಆಡಲು ಬಂಡವಾಳ ಹಾಕುವ ವ್ಯಕ್ತಿ ಇಲ್ಲಿ ರಿಂಗ್ ಮಾಸ್ಟರ್. ನಾಲ್ಕಾರು ಜನರನ್ನು ಕರೆತಂದು ಆಡಿಸುವ ರಿಂಗ್ ಮಾಸ್ಟರ್ ಆಟಗಾರರಿಗೆ ಹಣ ನೀಡುತ್ತಾನೆ. ಆಟಗಾರ ಹಣ ಗೆದ್ದರೆ ಬಂಡವಾಳದಾರನಿಗೆ ತಕ್ಷಣ ಪೇಮೆಂಟ್ ಮಾಡಬೇಕು. ಹಣ ಕಳೆದುಕೊಂಡರೆ ಒಂದೆರಡು ದಿನಗಳಲ್ಲಿ ಹಣಕ್ಕೆ ಬಡ್ಡಿ, ಚಕ್ರಬಡ್ಡಿ ಹಾಕಿ ಹಣ ಮರಳಿಸಬೇಕು. ಹಣ ಕೊಡುವುದು ತಡವಾದರೆ ಹಣ ಕೊಟ್ಟ ಬಂಡವಾಳದಾರ ಕಿರುಕುಳ ನೀಡಲಾರಂಭಿಸುತ್ತಾನೆ. ಹೀಗಾಗಿ, ಮಾನ, ಮಾರ್ಯಾದೆಗೆ ಹೆದರಿ ಜನರು ಸಾಲ ಮಾಡಿಯಾದರೂ ಹಣ ಮರಳಿಸುತ್ತಾರೆ. ಇಲ್ಲಿ ಆಟಕ್ಕೆ ಹಣ ಹೂಡುವ ಸಾಹುಕಾರನಿಗೆ ಆಟಗಾರರು ಗೆದ್ದರೂ ಲಾಭ, ಸೋತರೂ ಲಾಭ. ಸೋತವನಿಂದ ಬಡ್ಡಿ ಹಾಕಿ ಒಂದೆರಡು ದಿನಗಳಲ್ಲಿ ವಸೂಲಿ ಮಾಡಿಕೊಳ್ಳುತ್ತಾನೆ. ಹೀಗೆ ಆಟ ಆಡಿ ಹಣ ಕಳೆದುಕೊಂಡವರ ಸಂಖ್ಯೆ ಅವಳಿ ನಗರದಲ್ಲಿ ಹೆಚ್ಚಿದೆ.

    ಸಣ್ಣ ವ್ಯಾಪಾರಿಗಳು, ಸಣ್ಣಪುಟ್ಟ ಕೆಲಸ ಮಾಡುವವರು, ಸರ್ಕಾರಿ ನೌಕರರು, ಶ್ರೀಮಂತರು ಮೊದಲಾದವರು ಅಂದರ್ ಬಾಹರ್ ಆಟದಲ್ಲಿ ಪಾಲ್ಗೊಂಡು ಹಣ ಕಳೆದುಕೊಂಡಿದ್ದಾರೆ. ಜತೆಗೆ ಹಣ ಗೆದ್ದು ಬೀಗಿದವರೂ ಇದ್ದಾರೆ. ಹಣ ಹೂಡಿ ಆಟ ಆಡಿಸಿ ಕುಬೇರರಾಗಿ ಮೆರೆಯುತ್ತಿರುವವ ರಿಂಗ್ ಮಾಸ್ಟರ್​ಗಳ ದೊಡ್ಡ ದಂಡೇ ಇಲ್ಲಿದೆ. ಇಸ್ಪೀಟ್ ಆಟಕ್ಕೆ ಬಂಡವಾಳ ಹಾಕುವ ಹೂಡಿಕೆದಾರ ಎಲ್ಲವನ್ನೂ ನಿಭಾಯಿಸುತ್ತಾನೆ. ಒಂದರ್ಥದಲ್ಲಿ ಅಂದರ್ ಬಾಹರ್ ಆಟ ಗದಗ-ಬೆಟಗೇರಿಯಲ್ಲಿ ಮಿನಿ ಕೆಸಿನೊ ದಂಧೆಯಾಗಿ ಮಾರ್ಪಾಡಾಗಲು ಇವರ ಕೊಡುಗೆ ಗಣನೀಯ. ಎಗ್ಗಿಲ್ಲದೆ ನಡೆಯುತ್ತಿರುವ ಈ ದಂಧೆಗೆ ಕಡಿವಾಣ ಹಾಕಲು ಪೊಲೀಸರು ಹಿಂದೇಟು ಹಾಕುತ್ತಿರುವುದು ಏಕೆ ಎಂಬ ಅನುಮಾನ ಜನರಲ್ಲಿ ಮೂಡಿದೆ.

    ಊರು ಹೊರಗೆ ಆಟ:

    ಇಸ್ಪೀಟ್ ಆಟಕ್ಕೆ ಹಣ ಹೂಡುವ ಸಾಹುಕಾರ ಆಟಗಾರನಿಗೆ ಆಟ ನಡೆಯುವ ಸ್ಥಳದ ಮಾಹಿತಿಯನ್ನು ಮೊದಲೇ ನೀಡುತ್ತಾನೆ. ನಗರದ ಹೊರವಲಯದಲ್ಲಿರುವ ಕೆಲ ತೋಟಗಳು ಮಿನಿ ಕೆಸಿನೋ ದಂಧೆಯ ಅಡ್ಡೆಗಳಾಗಿವೆ. ನಿತ್ಯ ಅಲ್ಲಿ ಲಕ್ಷಾಂತರ ರೂ. ಜೂಜಾಟ ನಡೆಯುತ್ತಿದೆ. ಈ ಆಟ ಮತ್ತು ಅದರ ಸೂತ್ರಧಾರ ಯಾರು ಎಂಬ ಸಂಪೂರ್ಣ ಮಾಹಿತಿ ಪೊಲೀಸರಿಗೆ ಗೊತ್ತಿರುತ್ತದೆ. ಆದರೂ ಜೂಜಾಟ ಆಡಿಸುವವರ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲ. ಆದರೆ, ಮೇಲಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಬಾರದು ಎಂಬ ಕಾರಣಕ್ಕೆ ಇಸ್ಪೀಟ್ ಅಡ್ಡೆಗಳ ಮೇಲೆ ಪೊಲೀಸರು ದಾಳಿ ಮಾಡಿ ಆರೋಪಿಗಳನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸುತ್ತಾರೆ. ಆರೋಪಿಗಳನ್ನು ಇಸ್ಪೀಟ್ ಅಡ್ಡೆಯಿಂದ ಠಾಣೆಗೆ ಕರೆತರುವ ಸಮಯದಲ್ಲಿಯೇ ಸಂಬಂಧಿಸಿದ ಠಾಣಾಧಿಕಾರಿಗೆ ಕರೆಗಳು ಬರಲಾರಂಭಿಸುತ್ತವೆ. ಸರ್, ಅವರು ನಮ್ಮವರು, ಇಂಥವರ ಮಗ, ಇಂಥ ಪಕ್ಷಕ್ಕೆ ಸೇರಿದವರು ಹೀಗೆ ಪೊಲೀಸರ ಮೇಲೆ ಒತ್ತಡಗಳು ಶುರುವಾಗುತ್ತವೆ. ಒತ್ತಡಕ್ಕೆ ಮಣಿದ ಪೊಲೀಸರು, ಪ್ರಭಾವಿಗಳ ಹೆಸರು ಕೈಬಿಟ್ಟು ಅಮಾಯಕರನ್ನು ಕೇಸ್​ನಲ್ಲಿ ಫಿಟ್ ಮಾಡಿ ಕೈತೊಳೆದುಕೊಳ್ಳುತ್ತಾರೆ ಎಂಬ ಆರೋಪವೂ ಕೇಳಿಬರುತ್ತಿವೆ. ಅಷ್ಟೆ ಅಲ್ಲ, ಇಸ್ಪಿಟ್ ಆಡುವ ಸಂದರ್ಭದಲ್ಲಿ ದಾಳಿ ಮಾಡಿದ ಪೊಲೀಸರ ಕೈಗೆ ಸಾವಿರಾರು ರೂ., ಕೆಲವೊಮ್ಮೆ ಲಕ್ಷಾಂತರ ರೂ. ಸಿಗುತ್ತದೆ. ಈ ಹಣ ಎಲ್ಲಿಗೆ ಹೋಗುತ್ತದೆ ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ.

    ಸಿಕ್ಕ ಹಣ ಎಷ್ಟು?

    ಬೆಟಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ಇಸ್ಪೀಟ್ ಅಡ್ಡೆ ಮೇಲೆ ದಾಳಿ ನಡೆಸಿದ ಪೊಲೀಸರು 11 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆದರೆ, ಅಲ್ಲಿ ಸಿಕ್ಕ ಹಣ ಎಷ್ಟು ಎಂಬುದು ತಿಳಿದುಬಂದಿಲ್ಲ. ಮೂಲಗಳ ಪ್ರಕಾರ ಜೂಜಾಟದ ಅಡ್ಡೆಯಿಂದ 12 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ ಎಂಬ ಮಾಹಿತಿ ಇದೆ. 12 ಲಕ್ಷ ರೂ. ಅಲ್ಲ, ಕೇವಲ 1.5 ಲಕ್ಷ ರೂ. ಎಂದು ಮತ್ತೊಂದು ಮೂಲಗಳಿಂದ ತಿಳಿದುಬಂದಿದೆ. ಇದರಲ್ಲಿ ಯಾವುದು ನಿಜ ಎಂಬುದನ್ನು ಪೊಲೀಸ್ ಅಧಿಕಾರಿಗಳು ಹೇಳಬೇಕಾಗಿದೆ. ಅಲ್ಲದೆ, ಈ ಹಣ ಎಲ್ಲಿಗೆ ಹೋಗುತ್ತದೆ ಎಂಬ ಪ್ರಶ್ನೆ ಮೂಡುವುದು ಸಹಜ.

    20 ಜನರ ವಿರುದ್ಧ ಪ್ರಕರಣ

    ಗದಗ ತಾಲೂಕಿನ ಹುಲಕೋಟಿ ರೈಲು ನಿಲ್ದಾಣದ ಬಳಿ ಇತ್ತೀಚೆಗೆ ಇಸ್ಪಿಟ್ ಆಡುತ್ತಿದ್ದ 20 ಜನರನ್ನು ಪೊಲೀಸರು ಬಂಧಿಸಿ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ 20 ಮಂದಿಯಲ್ಲಿ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಸಿಕ್ಕಿಬಿದ್ದಿದ್ದಾರೆ. ಇದು ಎಲ್ಲರಿಗೂ ಗೊತ್ತಿರುವ ಸಂಗತಿ.

    ಕರೊನಾ ಸಂದರ್ಭ ಬಳಕೆ

    ಬೆಟಗೇರಿ ಠಾಣೆ ವ್ಯಾಪ್ತಿಯ ಇಸ್ಪೀಟ್ ಅಡ್ಡೆಗಳಲ್ಲಿ ಸಿಕ್ಕಿಬಿದ್ದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳನ್ನು ಜೈಲಿಗೆ ಹಾಕುವ ಅಪರಾಧ ಇದಲ್ಲ. ಅಲ್ಲದೆ, ಅವರನ್ನು ಜೈಲಿಗೆ ಹಾಕುವ ಪ್ರಸಂಗ ಎದುರಾದರೆ ಅವರಿಗೆ ಮೊದಲು ಕೋವಿಡ್-19 ಪರೀಕ್ಷೆ ಮಾಡಿಸಬೇಕು. ವರದಿ ನೆಗೆಟಿವ್ ಬಂದರೆ ಚಿಂತೆ ಇಲ್ಲ. ಪಾಸಿಟಿವ್ ಬಂದರೆ ಠಾಣೆಯನ್ನೇ ಸೀಲ್​ಡೌನ್ ಮಾಡಬೇಕಾಗುತ್ತದೆ. ಹೀಗಾಗಿ, ಈ ಸಮಯವನ್ನು ಇಸ್ಪೀಟ್ ಆಟಗಾರರು ಬಳಸಿಕೊಳ್ಳುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಹೇಳುತ್ತಾರೆ.

    ಗದಗ-ಬೆಟಗೇರಿ ಸೇರಿ ಜಿಲ್ಲೆಯಲ್ಲಿ ಇಸ್ಪಿಟ್ ಆಡುವವರ ಸಂಖ್ಯೆ ಹೆಚ್ಚಾಗಿದ್ದು, ಈ ಕುರಿತು ಜಿಲ್ಲೆಯ ವಿವಿಧ ಠಾಣೆಗಳಲ್ಲಿ ನಿತ್ಯ ಪ್ರಕರಣ ದಾಖಲಾಗುತ್ತಿವೆ. ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಜೂಜಾಟಕ್ಕೆ ಶೀಘ್ರ ಕಡಿವಾಣ ಹಾಕಲಾಗುವುದು.

    | ಯತೀಶ್ ಎನ್.,

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗದಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts