More

    ಗದಗ ಜಿಲ್ಲೆ 850 ಸ್ಥಾನಗಳಿಗೆ ಮತದಾನ ಇಂದು

    ಗದಗ: ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯ ಎರಡನೇ ಹಂತದ ಮತದಾನ ಡಿ. 27ರಂದು ಬೆಳಗ್ಗೆ 7ರಿಂದ ಸಂಜೆ 5ರವರೆಗೆ ನಡೆಯಲಿದ್ದು, ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದೆ.

    ಎರಡನೇ ಹಂತದಲ್ಲಿ ಮುಂಡರಗಿ, ನರಗುಂದ, ರೋಣ ಹಾಗೂ ಗಜೇಂದ್ರಗಡ ತಾಲೂಕುಗಳ ಒಟ್ಟು 64 ಗ್ರಾಪಂಗಳ 895 ಸ್ಥಾನಗಳ ಪೈಕಿ 36 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಾಮಪತ್ರ ಸಲ್ಲಿಸದೆ ಖಾಲಿ ಉಳಿದ 9 ಸ್ಥಾನಗಳನ್ನು ಹೊರತುಪಡಿಸಿ ಒಟ್ಟು 850 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

    ಮುಂಡರಗಿ ತಾಲೂಕಿನ 18 ಗ್ರಾಪಂಗಳ 264 ಸ್ಥಾನಗಳ ಪೈಕಿ 8 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದು, ನಾಮಪತ್ರ ಸಲ್ಲಿಸದೆ ಖಾಲಿ ಉಳಿದಿರುವ 3 ಸ್ಥಾನ ಹೊರತುಪಡಿಸಿ 253 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ನರಗುಂದ ತಾಲೂಕಿನ 13 ಗ್ರಾಪಂಗಳ 166 ಸ್ಥಾನಗಳ ಪೈಕಿ 6 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದು, 160 ಸ್ಥಾನಗಳಿಗೆ ಮತದಾನ ನಡೆಯಲಿದೆ. ರೋಣ ತಾಲೂಕಿನ 24 ಗ್ರಾಪಂಗಳ 331 ಸ್ಥಾನಗಳ ಪೈಕಿ 14 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದು, ನಾಮಪತ್ರ ಸಲ್ಲಿಸದೆ ಖಾಲಿ ಉಳಿದಿರುವ 5 ಸ್ಥಾನಗಳ ಹೊರತುಪಡಿಸಿ 312 ಸ್ಥಾನಗಳಿಗೆ ನಡೆಯಲಿದೆ. ಗಜೇಂದ್ರಗಡ ತಾಲೂಕಿನ 9 ಗ್ರಾಪಂಗಳ 134 ಸ್ಥಾನಗಳ ಪೈಕಿ 8 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದು, ನಾಮಪತ್ರ ಸಲ್ಲಿಸದೆ ಖಾಲಿ ಉಳಿದಿರುವ 1 ಸ್ಥಾನ ಹೊರತುಪಡಿಸಿ 125 ಸ್ಥಾನಗಳಿಗೆ ಮತದಾನ ನಡೆಯಲಿದೆ.

    2,82,934 ಮತದಾರರು: ಮುಂಡರಗಿ ತಾಲೂಕಿನಲ್ಲಿ 42,000 ಪುರುಷರು, 40,274 ಮಹಿಳೆಯರು ಸೇರಿ 82,274 ಮತದಾರರಿದ್ದಾರೆ. ನರಗುಂದ ತಾಲೂಕಿನಲ್ಲಿ 26,417 ಪುರುಷರು ಹಾಗೂ 25,188 ಮಹಿಳೆಯರು ಸೇರಿ 51,605 ಮತದಾರರಿದ್ದಾರೆ. ರೋಣ ತಾಲೂಕಿನಲ್ಲಿ 53,571 ಪುರುಷರು ಹಾಗೂ 53,225 ಮಹಿಳೆಯರು ಸೇರಿ 1,06,796 ಜನರಿದ್ದಾರೆ. ಗಜೇಂದ್ರಗಡ ತಾಲೂಕಿನಲ್ಲಿ 21,284 ಪುರುಷರು ಹಾಗೂ 20,975 ಮಹಿಳೆಯರು ಸೇರಿ 42,259 ಮಂದಿ ಇದ್ದಾರೆ. ಒಟ್ಟು ನಾಲ್ಕು ತಾಲೂಕುಗಳಲ್ಲಿ 1,43,272 ಪುರುಷರು, 1,39,662 ಮಹಿಳೆಯರು ಸೇರಿ 2,82,934 ಮತದಾರರಾಗಿದ್ದಾರೆ.

    2437 ಸಿಬ್ಬಂದಿ ನಿಯೋಜನೆ: ಒಟ್ಟು 64 ಚುನಾವಣಾಧಿಕಾರಿಗಳು, 65 ಸಹಾಯಕ ಚುನಾವಣಾಧಿಕಾರಿಗಳು, 466 ಪಿಆರ್​ಒಗಳು, 1399 ಮತಗಟ್ಟೆ ಅಧಿಕಾರಿಗಳು, 424 ಗ್ರುಪ್ ಡಿ ಸಿಬ್ಬಂದಿ, ಇತರ 19 ಅಧಿಕಾರಿಗಳು ಸೇರಿ 2437 ಸಿಬ್ಬಂದಿ ನಿಯೋಜಿಸಲಾಗಿದೆ.

    ಸೂಕ್ಷ್ಮ ಅತೀ ಸೂಕ್ಷ್ಮ ಮತಗಟ್ಟೆಗಳೆಷ್ಟು?: 64 ಗ್ರಾಪಂಗಳ 424 ಮತಗಟ್ಟೆಗಳಲ್ಲಿ 272 ಸಾಮಾನ್ಯ, 67 ಸೂಕ್ಷ್ಮ 85 ಅತೀ ಸೂಕ್ಷ್ಮ ಮತಗಟ್ಟೆಗಳು ಎಂದು ಗುರುತಿಸಲಾಗಿದೆ. ಈ ಮತಗಟ್ಟೆಗಳಿಗೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.

    ಕೋವಿಡ್ ತಡೆಗೆ ಸುರಕ್ಷತಾ ಕಿಟ್: ಕೋವಿಡ್ ನಿಯಂತ್ರಣಕ್ಕಾಗಿ ಪ್ರತಿ ಮತಗಟ್ಟೆಯಲ್ಲಿ ಅಧಿಕಾರಿ, ಸಿಬ್ಬಂದಿಗೆ ಮಾಸ್ಕ್, ಸ್ಯಾನಿಟೈಸರ್, ಥರ್ಮಲ್ ಸ್ಕ್ಯಾನರ್ ಮತ್ತು ಸುರಕ್ಷತಾ ಕಿಟ್​ಗಳನ್ನು ಜಿಲ್ಲಾಡಳಿತ ನೀಡಿದೆ. ಮತದಾನ ಸಂದರ್ಭದಲ್ಲಿ ನೂಕು-ನುಗ್ಗಲು ತಪ್ಪಿಸುವ ಉದ್ದೇಶದಿಂದ ದೈಹಿಕ ಅಂತರ ಕಾಯ್ದುಕೊಳ್ಳಲು ಮಾರ್ಕಿಂಗ್ ಮಾಡಲಾಗಿದೆ. ಕರೊನಾ ಸೋಂಕಿತರು ಹಾಗೂ ಶಂಕಿತರು ಮತದಾನ ಮಾಡಲು ಇಚ್ಛಿಸಿದಲ್ಲಿ ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಮತದಾನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಆಸೆ-ಆಮಿಷಗಳಿಗೆ ಬಲಿಯಾಗದೆ ನಿರ್ಭೀತಿಯಿಂದ ಹಕ್ಕು ಚಲಾಯಿಸಬೇಕು ಎಂದು ಜಿಲ್ಲಾಧಿಕಾರಿ ಎಂ. ಸುಂದರೇಶಬಾಬು ತಿಳಿಸಿದ್ದಾರೆ.

    ಮತದಾನಕ್ಕೆ ಬೇಕಾದ ದಾಖಲೆ: ಗ್ರಾಪಂ ಚುನಾವಣೆಯಲ್ಲಿ ಮತದಾರರ ಭಾವಚಿತ್ರದ ಗುರುತಿನ ಚೀಟಿ ಅಥವಾ ಚುನಾವಣೆ ಆಯೋಗ ಸೂಚಿಸಿದ ವಿವಿಧ 22 ದಾಖಲೆಗಳ ಪೈಕಿ ಒಂದನ್ನು ಹಾಜರುಪಡಿಸಿ ಮತದಾನ ಮಾಡಬಹುದು. ಪಾಸ್​ಪೋರ್ಟ್, ಡ್ರೖೆವಿಂಗ್ ಲೈಸೆನ್ಸ್, ಆದಾಯ ತೆರಿಗೆ ಗುರುತಿನ ಚೀಟಿ, ರಾಜ್ಯ ಹಾಗೂ ಕೇಂದ್ರ ಸರ್ಕಾರ, ಸಾರ್ವಜನಿಕ ಉದ್ದಿಮೆಗಳು ಅಥವಾ ಇತರ ಖಾಸಗಿ ಔದ್ಯಮಿಕ ಸಂಸ್ಥೆಗಳು ಕೆಲಸಗಾರರಿಗೆ ನೀಡಿರುವ ಭಾವಚಿತ್ರವುಳ್ಳ ಸೇವಾ ಗುರುತಿನ ಚೀಟಿಗಳು, ಸಾರ್ವಜನಿಕ ವಲಯದ ಬ್ಯಾಂಕ್, ಕಿಸಾನ್, ಅಂಚೆ ಕಚೇರಿ ನೀಡಿರುವ ಭಾವಚಿತ್ರವಿರುವ ಪಾಸ್​ಬುಕ್, ಮಾನ್ಯತೆ ಪಡೆದ ನೋಂದಾಯಿತ ವಿದ್ಯಾ ಸಂಸ್ಥೆಗಳು ಕೊಟ್ಟಿರುವ ಗುರುತಿನ ಚೀಟಿ, ಭಾವಚಿತ್ರವಿರುವ ಪಡಿತರ ಚೀಟಿ ಸೇರಿ 22 ದಾಖಲೆಗಳಲ್ಲಿ ಒಂದನ್ನು ಹಾಜರುಪಡಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts