More

    ಗಡಿ ಅಪರಾಧ ತಡೆಗಟ್ಟಲು ಪರಸ್ಪರ ಸಹಕಾರ ಅಗತ್ಯ

    ಹನೂರು : ಗಡಿ ಅಪರಾಧ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಾಗೂ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದು ಕೊಳ್ಳೇಗಾಲ ಉಪ ವಿಭಾಗದ ಡಿವೈಎಸ್ಪಿ ಧರ್ಮೇಂದ್ರ ತಿಳಿಸಿದರು.

    ತಾಲೂಕಿನ ಮಲೆಮಹದೇಶ್ವರ ಬೆಟ್ಟದ ನಾಗಮಲೆ ಭವನದಲ್ಲಿ ಗಡಿ ಅಪರಾಧ ತಡೆಗಟ್ಟುವ ಸಂಬಂಧ ಶುಕ್ರವಾರ ಆಯೋಜಿಸಿದ್ದ ತಮಿಳುನಾಡು ಹಾಗೂ ಕರ್ನಾಟಕ ಉಪ ವಿಭಾಗದ ಪೊಲೀಸ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
    ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಗಡಿ ಚೆಕ್‌ಪೋಸ್ಟ್‌ಗಳಲ್ಲಿ ಪ್ರತಿಯೊಂದು ವಾಹನವನ್ನು ತಪಾಸಣೆ ನಡೆಸುವುದರ ಮೂಲಕ ಅಗತ್ಯ ಕಟ್ಟೆಚ್ಚರ ವಹಿಸಬೇಕು. ಅಕ್ರಮ ಮದ್ಯ ಸಾಗಣೆಯ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ಈ ಮೂಲಕ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು. ಚುನಾವಣಾ ನೀತಿ ಸಂಹಿತೆ ಪಾಲನೆಯಾಗಬೇಕು. ಜತೆಗೆ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಬೇಕು. ಇನ್ನು 2 ರಾಜ್ಯದ ಗಡಿ ಭಾಗದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಅರಣ್ಯ ಹಾಗೂ ಪೊಲೀಸ್ ಅಧಿಕಾರಿಗಳು ಪರಸ್ಪರ ಸಹಕಾರ ನೀಡಬೇಕು. ಅಕ್ರಮ ಚಟುವಟಿಗಳ ಬಗ್ಗೆ ಪರಸ್ಪರ ಮಾಹಿತಿ ತಿಳಿಸಬೇಕು. ಜತೆಗೆ ಬಾಕಿ ಇರುವ ಪ್ರಕರಣವನ್ನು ಇತ್ಯರ್ಥ ಪಡಿಸಿಕೊಳ್ಳಲು ಕೈ ಜೋಡಿಸಬೇಕು. ಈ ಮೂಲಕ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಗಡಿ ಭಾಗದಲ್ಲಿ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಪ್ರತಿಯೊಬ್ಬರೂ ಅಗತ್ಯ ಕ್ರಮವಹಿಸಬೇಕು ಎಂದು ತಿಳಿಸಿದರು.
    ಇದೇ ವೇಳೆ ಅಪರಾಧ ಪ್ರಕರಣ, ಅಕ್ರಮ ಚಟುವಟಿಕೆ, ಇತ್ಯರ್ಥವಾಗದ ಬಾಕಿ ಪ್ರಕರಣ ಹಾಗೂ ಇನ್ನಿತರ ಕಾನೂನು ಸುವ್ಯವಸ್ಥೆಗೆ ಸಂಬಂಧಪಟ್ಟ ವಿಷಯಗಳ ಬಗ್ಗೆ ಚರ್ಚಿಸಲಾಯಿತು.

    ಸಭೆಯಲ್ಲಿ ತಮಿಳುನಾಡು ಭವಾನಿ ಉಪ ವಿಭಾಗದ ಡಿವೈಎಸ್ಪಿ ಅಮೃತವರ್ಷಿಣಿ, ಇನ್‌ಸ್ಪೆಕ್ಟರ್‌ಗಳಾದ ಹಂದಿಯೂರು ಸಿಪಿಐ ಸೆಂದಿಲ್‌ಕುಮಾರ್, ತಾಳವಾಡಿಯ ಸೆಲ್ವಂ, ಯಳಂದೂರಿನ ಶ್ರೀಕಾಂತ್, ಕೊಳ್ಳೇಗಾಲದ ಶಿವಮಾದಯ್ಯ, ಹನೂರಿನ ಶಶಿಕುಮಾರ್, ರಾಮಾಪುರದ ಮನೋಜ್‌ಕುಮಾರ್, ಮ.ಬೆಟ್ಟದ ಜಗದೀಶ್, ಸಬ್‌ಇನ್‌ಸ್ಪೆಕ್ಟರ್‌ಗಳಾದ ಹಂದಿಯೂರಿನ ಧನಪಾಲ್, ಕೊಳತ್ತೂರಿನ ಮಣಿಮಾರನ್, ಆರ್‌ಎಫ್‌ಒ ಭಾರತಿ ನಂದಿಹಳ್ಳಿ ಹಾಗೂ ಇನ್ನಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts