More

    ಗಡಿರೇಖೆ ಗುರುತಿಸಲು ಜಂಟಿ ಸರ್ವೇ

    ನಂಜನಗೂಡು: ಕಾಡಂಚಿನ ಭಾಗದಲ್ಲಿ ಸಾಗುವಳಿ ಕೃಷಿ ಮಾಡುವ ರೈತರಿಗೆ ಆಗುತ್ತಿರುವ ಸಮಸ್ಯೆ ತಪ್ಪಿಸುವ ನಿಟ್ಟಿನಲ್ಲಿ ಕಂದಾಯ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಸರ್ವೇ ನಡೆಸಿ ಗಡಿರೇಖೆ ಗುರುತಿಸುವಂತೆ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಭರವಸೆ ನೀಡಿದರು.

    ತಾಲೂಕಿನ ಬಂಕಹಳ್ಳಿ ಗ್ರಾಮದ ಸಮೀಪವಿರುವ ವೆಂಕಟಗಿರಿ ಕಾಲನಿಯ ಆಶ್ರಯ ಶಾಲೆ ಆವರಣದಲ್ಲಿ ಜಿಲ್ಲಾಧಿಕಾರಿಗಳ ನಡೆ, ಹಳ್ಳಿಯ ಕಡೆಗೆ ಅಭಿಯಾನ ಅಂಗವಾಗಿ ಶನಿವಾರ ಗ್ರಾಮ ವಾಸ್ತವ್ಯದಲ್ಲಿ ಮಾತನಾಡಿದರು.

    ಅನೇಕ ವರ್ಷಗಳಿಂದ ಕಾಡಂಚಿನ ಭಾಗದಲ್ಲಿ ಕೃಷಿ ಮಾಡಿಕೊಂಡು ಬಂದಿರುವ ರೈತರಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಅಡ್ಡಿಪಡಿಸುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಕಂದಾಯ ಹಾಗೂ ಅರಣ್ಯ ಇಲಾಖೆಯ ಗಡಿ ರೇಖೆ ಪ್ರದೇಶವನ್ನು ಗುರುತಿಸುವಂತೆ ಜಂಟಿ ಸಮೀಕ್ಷೆ ನಡೆಸಲು ಸೂಚನೆ ನೀಡಲಾಗಿದೆ. ಇದರಿಂದ ರೈತರ ಸಮಸ್ಯೆಗೆ ಪರಿಹಾರ ಸಿಗಲಿದೆ. ಹೀಗಾಗಿ ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದರು.

    ಇನ್ನು ಕಾಡುಪ್ರಾಣಿಗಳಿಂದ ಬೆಳೆ ಹಾನಿಯಾದರೆ ನಾನಾ ಸಬೂಬು ಹೇಳಿ ಪರಿಹಾರ ನೀಡಲು ಮೀನಮೇಷ ಎಣಿಸಲಾಗುತ್ತಿದೆ ಎಂದು ರೈತರು ದೂರಿದ್ದಾರೆ. ಪಹಣಿಯಲ್ಲಿ ಸಂತ್ರಸ್ತ ರೈತನ ಹೆಸರು ಹಾಗೂ ವಿಸ್ತೀರ್ಣ ನಮೂದಾಗಿದ್ದರೆ ಬೆಳೆಹಾನಿ ಪರಿಹಾರಕ್ಕೆ ರೈತರು ಅರ್ಹರಿರುತ್ತಾರೆ. ಸೂಕ್ತ ದಾಖಲೆ ಒದಗಿಸಿದರೆ ವಿಳಂಬ ಮಾಡದೇ ತಕ್ಷಣವೇ ಪರಿಹಾರ ನೀಡಲು ಅಧಿಕಾರಿಗಳು ಮುಂದಾಗುವಂತೆ ಆದೇಶಿಸಿದರು.

    ಸಾರ್ವಜನಿಕ ಅಹವಾಲಿನಲ್ಲಿ ಆರ್‌ಟಿಸಿಯಲ್ಲಿ ಪೋಡಿ ಹಾಗೂ ದುರಸ್ತಿ ಮಾಡಿಕೊಡುವಂತೆ ಹೆಚ್ಚು ಅರ್ಜಿಗಳು ಸ್ವೀಕೃತಗೊಂಡಿವೆ. ಕಾಡಂಚಿನ ಭಾಗವನ್ನು ಆದ್ಯತಾನುಸಾರ ಪೋಡಿ ಮುಕ್ತ ಗ್ರಾಮವನ್ನಾಗಿ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದರು.
    ಹಾಡಿಜನರಿಗೆ ಕಾರ್ಯಾಗಾರಕಾಡಂಚಿನ ಹಾಡಿ ಜನರಿಗೆ ಸರ್ಕಾರದಿಂದ ಸಿಗುವ ಸವಲತ್ತು, ಸಹಾಯಧನ ಹಾಗೂ ಪರಿಹಾರ ಕುರಿತಾಗಿ ಮಾಹಿತಿ ಕೊರತೆ ಇರುವುದು ಗ್ರಾಮ ವಾಸ್ತವ್ಯದಲ್ಲಿ ನನಗೆ ಮನವರಿಕೆಯಾಗಿದೆ. ಈ ಬಗ್ಗೆ ಹಾಡಿ ಜನರಿಗೆ ಜಾಗೃತಿ ಮೂಡಿಸುವ ಸಲುವಾಗಿ ಮುಂದಿನ ಒಂದು ವಾರದೊಳಗೆ ತಹಸೀಲ್ದಾರ್ ನೇತೃತ್ವದಲ್ಲಿ ವಿವಿಧ ಅಭಿವೃದ್ಧಿ ನಿಗಮಗಳ ವ್ಯವಸ್ಥಾಪಕರು ಕಾರ್ಯಾಗಾರ ನಡೆಸಿ ಮಾಹಿತಿ ನೀಡುವಂತೆ ಸೂಚಿಸಲಾಗಿದೆ. ಸರ್ಕಾರಿ ಕಾರ್ಯಕ್ರಮ ಹಾಗೂ ಯೋಜನೆಗಳ ಬಗ್ಗೆ ಅರಿವು ಮೂಡಿಸಿದರೆ ಸವಲತ್ತು ದೊರಕಿಸಲು ಸಾಧ್ಯವಿದೆ. ಅರ್ಹ ಫಲಾನುಭವಿಗಳಿಗೆ ಅರ್ಜಿಗಳನ್ನು ವಿತರಿಸಿ ಸವಲತ್ತು ದೊರಕಿಸಿಕೊಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.

    ಇನ್ನು ಹಾಡಿ ನಿವಾಸಿಗಳು ಆಶ್ರಯ ಮನೆ ನೀಡುವಂತೆ ಮನವಿ ಸಲ್ಲಿಸಿದ್ದು ಗ್ರಾಮ ಪಂಚಾಯಿತಿ ವತಿಯಿಂದ ಆದ್ಯತಾನುಸಾರ ಅರ್ಹರನ್ನು ಆಶ್ರಯ ಮನೆ ಫಲಾನುಭವಿಗಳ ಆಯ್ಕೆ ಮಾಡುವಂತೆ ಹೇಳಿದ್ದೇನೆ. ವಿವಿಧ ಮಾಸಾಶನ ಫಲಾನುಭವಿಗಳ ಅರ್ಜಿಯನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಿ ಮಂಜೂರು ಮಾಡುವಂತೆ ಗ್ರಾಮ ಲೆಕ್ಕಿಗರಿಗೆ ಸೂಚನೆ ನೀಡಿರುವುದಾಗಿ ಹೇಳಿದರು.

    ಒಂದು ತಿಂಗಳಲ್ಲಿ ಇತ್ಯರ್ಥ: ಗ್ರಾಮ ವಾಸ್ತವ್ಯದಲ್ಲಿ ಸ್ವೀಕೃತಗೊಂಡಿರುವ ಅರ್ಜಿಗಳನ್ನು ಒಂದು ತಿಂಗಳ ಒಳಗಾಗಿ ಇತ್ಯರ್ಥಗೊಳಿಸುವಂತೆ ಡಾ.ಬಗಾದಿ ಗೌತಮ್ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕಾನೂನು ತೊಡಕುಗೊಳಿದ್ದಲ್ಲಿ ಹಿಂಬರಹ ಮೂಲಕ ಅರ್ಜಿದಾರರಿಗೆ ಮನವರಿಕೆ ಮಾಡಿಕೊಡಬೇಕು. ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾ ಹಂತದಲ್ಲಿ ಸಮಸ್ಯೆ ಇದ್ದರೆ ಎರಡು ತಿಂಗಳಲ್ಲಿ ಬಗೆಹರಿಸಿಕೊಡುವುದಾಗಿ ಸಾರ್ವಜನಿಕರಿಗೆ ಜಿಲ್ಲಾಧಿಕಾರಿ ಭರವಸೆ ನೀಡಿದರು.

    ಪೊಲೀಸ್ ದೂರು ನೀಡಿ: ಗಡಿಯಂಚಿನ ಗ್ರಾಮಗಳಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳ ಹಾವಳಿ ಹೆಚ್ಚಾಗಿದೆ. ಬಡಜನರಿಗೆ ಬೆದರಿಕೆ ಹಾಕಿ ಹಣ ವಸೂಲಿ ಮಾಡುವ ದಂಧೆ ನಡೆಯುತ್ತಿದೆ ಎಂದು ಸ್ಥಳೀಯರು ದೂರಿದರು. ಸಾಲ ನೀಡಿದ ಹಣವನ್ನು ಕೇಳುವ ರೀತಿ ಮಾನವ ಹಕ್ಕು ಉಲ್ಲಂಘನೆ ಆಗಬಾರದು. ಹದ್ದುಮೀರಿ ವರ್ತಿಸಿದರೆ, ಬೆದರಿಕೆ ಹಾಕಿದರೆ ಅಂತವರ ವಿರುದ್ಧ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಿ ಎಂದು ಡಾ.ಬಗಾದಿ ಗೌತಮ್ ಹೇಳಿದರು.

    3 ವರ್ಷದಿಂದ ಸೇತುವೆ ಆಗಿಲ್ಲ: ರಾಜನಗರ ಬಳಿ ಕಳೆದ ಮೂರು ವರ್ಷದಿಂದ ಸೇತುವೆ ನಿರ್ಮಾಣ ಕಾಮಗಾರಿ ನನೆಗುದಿಗೆ ಬಿದ್ದಿದೆ. ಈ ಭಾಗದಲ್ಲಿ ರಸ್ತೆಗಳು ಹಾಳಾಗಿವೆ. ಇನ್ನು ಕೆಎಸ್‌ಆರ್‌ಟಿಸಿ ಬಸ್‌ಗಳು ಸರಿಯಾದ ಸಮಯಕ್ಕೆ ಬರುತ್ತಿಲ್ಲ. ಕಾಡಂಚಿನ ಭಾಗದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯನ್ನು ವಿಸ್ತರಿಸುವಂತೆ ಮಾಜಿ ಶಾಸಕ ಕಳಲೆ ಎನ್.ಕೇಶವಮೂರ್ತಿ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಾ.ಗೌತಮ್ ಬಗಾದಿ ಸ್ಥಳದಲ್ಲೇ ಲೋಕೋಪಯೋಗಿ ಎಇಇ ಮುತ್ತುರಾಜ್ ಕರೆಸಿ ಸೂಚನೆ ನೀಡಿದರು. ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ವಿದ್ಯುತ್ ಮಾರ್ಗ ಸ್ಥಳಾಂತರಗೊಳಿಸಿದ ಬಳಿಕ ಮೂರು ತಿಂಗಳಲ್ಲಿ ಸೇತುವೆ ಕಾಮಗಾರಿ ಪೂರ್ಣಗೊಳಿಸುವುದಾಗಿ ತಿಳಿಸಿದರು.

    ರಿಹಾರಕ್ಕೆ ಮೀನಮೇಷ: ಒಡೆಯನಪುರ ಗ್ರಾಮದಲ್ಲಿ ಕೆಲ ತಿಂಗಳ ಹಿಂದೆ ಹುಲಿ ದಾಳಿಗೆ ಬಲಿಯಾದ ಪುಟ್ಟಸ್ವಾಮಿ ಕುಟುಂಬಕ್ಕೆ 7.5 ಲಕ್ಷ ರೂ. ಪರಿಹಾರ ಘೋಷಿಸಿದ ಅರಣ್ಯ ಇಲಾಖೆ ಇನ್ನು 5 ಲಕ್ಷ ರೂ. ಬಾಕಿ ಪರಿಹಾರ ನೀಡದೇ ಮೀನಮೇಷ ಎಣಿಸುತ್ತಿದೆ ಎಂದು ಡಿಸಿ ಗಮನ ಸೆಳೆಯುತ್ತಿದ್ದಂತೆ ಎಸಿಎಫ್ ಪರಮೇಶ್ ಮರಣೋತ್ತರ ಪರೀಕ್ಷೆ ವರದಿ ನೀಡಿಲ್ಲ, ಅದರಿಂದ ಇನ್ನು ನೀಡಿಲ್ಲ ಎಂದು ಹಾರಿಕೆ ಉತ್ತರ ನೀಡಿದರು. ಇದರಿಂದ ಕೋಪಗೊಂಡ ಡಾ.ಬಗಾದಿ ಗೌತಮ್ ಅದೆಲ್ಲವನ್ನೂ ನೀವೇ ಸಂಗ್ರಹಿಸಿ ಸಂತ್ರಸ್ತ ಕುಟುಂಬಕ್ಕೆ ಪರಿಹಾರ ನೀಡಲು ಕ್ರಮವಹಿಸಿ ಎಂದು ತರಾಟೆಗೆ ತೆಗೆದುಕೊಂಡರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts