More

    ಗಡಿನಾಡು ಬೆಳಗಾವಿ ಕರ್ನಾಟಕದ ತಲೆ ಇದ್ದಂತೆ

    ಬೆಳಗಾವಿ: ಝಾನ್ಸಿರಾಣಿ ಲಕ್ಷ್ಮೀಬಾಯಿಗಿಂತಲೂ ಮುಂಚೆಯೇ ಬ್ರಿಟಿಷರ ವಿರುದ್ಧ ಹೋರಾಡಿದ ರಾಣಿ ಚನ್ನಮ್ಮಳ ಕೀರ್ತಿ ಭಾರತ ಮಾತ್ರವಲ್ಲ. ವಿದೇಶದಲ್ಲೂ ಹಬ್ಬಿದೆ. ಬೆಳಗಾವಿಯು ಕರ್ನಾಟಕದ ತಲೆ ಇದ್ದಂತೆ. ರಾಯಣ್ಣ ಸಮಾಧಿಗೆ ಮಾಲಾರ್ಪಣೆ ಮಾಡಿರುವುದು ಸೌಭಾಗ್ಯ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಹೇಳಿದರು.

    ಖಾನಾಪುರ ತಾಲೂಕಿನ ನಂದಗಡದಲ್ಲಿ ಗುರುವಾರ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ವೀರತ್ವಕ್ಕೆ ಕರ್ನಾಟಕ ಹೆಸರುವಾಸಿಯಾಗಿದೆ. ಸಿಯಾಚಿನ್‌ನಲ್ಲಿ ಮಡಿದ ಕನ್ನಡಿಗ ಯೋಧ ಹನುಮಂತಪ್ಪ ಕೊಪ್ಪದ ಹೆಸರು ಈಗಲೂ ಶತ್ರು ರಾಷ್ಟ್ರವನ್ನು ನಡುಗಿಸುತ್ತದೆ. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಸೇರಿ ಅನೇಕ ಶೂರ, ವೀರರಿಗೆ ಜನ್ಮ ನೀಡಿದ ನೆಲ ಕರ್ನಾಟಕದಲ್ಲಿ ಇಂದು ವಿಜಯ ಸಂಕಲ್ಪ ಯಾತ್ರೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದ ಅವರು, ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ತರುವ ಸಂಕಲ್ಪ ಮಾಡಬೇಕಿದೆ. ಕರ್ನಾಟಕದಲ್ಲಿ ನಮ್ಮದು ಪರಿಪೂರ್ಣ ಬಹುಮತದ ಸರ್ಕಾರ ಬರಬೇಕು ಎಂದರು.

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ನಮಗೆ ವೈರಿಗಳಾದರೆ ಸ್ವಾತಂತ್ರ್ಯ ನಂತರ ಅನಕ್ಷರತೆ ಹಾಗೂ ನಿರುದ್ಯೋಗ ವೈರಿಗಳಂತೆ ಕಾಡಿದೆ. ಕಾಂಗ್ರೆಸ್ ಎಂದಿಗೂ ಅದನ್ನು ತೊಲಗಿಸುವ ಪ್ರಯತ್ನ ಮಾಡಲಿಲ್ಲ. ಅದನ್ನು ತೊಡೆದು ಹಾಕಲು ಬಿಜೆಪಿಯ ಡಬಲ್ ಇಂಜಿನ್ ಸರ್ಕಾರವೇ ಮತ್ತೊಮ್ಮೆ ಆಡಳತಕ್ಕೆ ಬರಬೇಕಿದೆ ಎಂದು ಹೇಳಿದರು.

    ಬಿಜೆಪಿ ಸರ್ಕಾರವೇ ದಲಿತರಿಗೆ ಮೀಸಲಾತಿ ಹೆಚ್ಚಿಸಿದೆ. ಸಿದ್ದರಾಮಯ್ಯ ಅವರೇ ನಿಮ್ಮ ಆಡಳಿತದಿಂದ ಸಾಮಾಜಿಕ ನ್ಯಾಯ ಯಾರಿಗೆ ಸಿಕ್ಕಿದೆ? ಭಾಷಣದಿಂದ ಸಾಮಾಜಿಕ ನ್ಯಾಯ ಸಾಧ್ಯವಿಲ್ಲ. ತಾವು ಮೊಸರಲ್ಲಿ ಕಲ್ಲು ಹುಡುಕುತ್ತಿದ್ದೀರಿ ಎಂದು ಟೀಕಿಸಿದರು. ರಾಜ್ಯದ ತಲಾ ಆದಾಯ 2.32 ಲಕ್ಷ ರೂ.ಇತ್ತು. ಲಾಕ್‌ಡೌನ್ ಪರಿಣಾಮದ ಹೊರತಾಗಿಯೂ 3.54 ಲಕ್ಷ ರೂ.ತಲಾ ಆದಾಯ ಏರಿಕೆಯಾಗಿದೆ. ಮರಾಠ ನಿಗಮ ಮಾಡಿ ನೂರು ಕೋಟಿ ರೂ.ನೀಡಿದ್ದೇವೆ. ಬೆಳಗಾವಿ ಜಿಲ್ಲೆಯಲ್ಲೇ 12 ಸಾವಿರ ಮರಾಠ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ನೀಡಲಾಗಿದೆ. ಖಾನಾಪುರದಲ್ಲಿ ಕಳೆದ ಬಾರಿ ಗೊಂದಲದಿಂದ ಸೋತಿದ್ದೇವೆ. ಈ ಬಾರಿ ಹಾಗೆ ಆಗೋದು ಬೇಡ ಎಂದರು.

    ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ಸಂಗೊಳ್ಳಿ ರಾಯಣ್ಣ ಬಿಜೆಪಿಗೆ ಈಗ ನೆನಪು ಆಗಿದ್ದಾರೆ ಎನ್ನುವ ಸಿದ್ದರಾಮಯ್ಯ ಅವರಿಗೆ ಕನಕದಾಸನೂ ನೆನಪಿರಲಿಲ್ಲ. ಕನಕದಾಸ ಪೀಠ ಅಭಿವದ್ಧಿ ಮಾಡಿದ್ದು, ಬಿಜೆಪಿ ಸರ್ಕಾರ. ಬೆಂಗಳೂರಿನ ದೊಡ್ಡ ರೈಲ್ವೆ ನಿಲ್ದಾಣಕ್ಕೆ ರಾಯಣ್ಣ ಹೆಸರು ಇಟ್ಟಿರುವುದು ಮೋದಿ ಸರ್ಕಾರ ಎಂದರು.

    ಅಧಿಕಾರದಿಂದ ಕಾಂಗ್ರೆಸ್ ಹೊರಗೆ ಇಟ್ಟಾಗಲೆಲ್ಲ ದೇಶಕ್ಕೆ ಒಳ್ಳೆಯದಾಗಿದೆ. ಕಾಂಗ್ರೆಸ್ ಕಾಲದಲ್ಲಿ ನೀಡಿದ್ದ ಭರವಸೆ ಇಲ್ಲಿವರೆಗೂ ಈಡೇರಿಲ್ಲ. ಇರುವ ಒಂದೇ ಸಿಎಂ ಖುರ್ಚಿಗೆ ಡಿಕೆಶಿ, ಸಿದ್ದರಾಮಯ್ಯ ಪೈಪೋಟಿ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

    ಸಂಸದೆ ಮಂಗಲ ಅಂಗಡಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಸಚಿವರಾದ ಮುರುಗೇಶ ನಿರಾಣಿ, ಭೈರತಿ ಬಸವರಾಜ, ಸಿ.ಸಿ.ಪಾಟೀಲ, ಶಿವರಾಮ ಹೆಬ್ಬಾರ್, ಶಶಿಕಲಾ ಜೊಲ್ಲೆ, ಗೋವಿಂದ ಕಾರಜೋಳ, ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿ.ಕುಮಾರ್, ಲಕ್ಷ್ಮಣ ಸವದಿ, ಶಾಸಕರಾದ ಮಹೇಶ ಕುಮಠಳ್ಳಿ, ಅಭಯ ಪಾಟೀಲ, ಅನಿಲ ಬೆನಕೆ, ಮಹೇಶ ಟೆಂಗಿನಕಾಯಿ, ಅರುಣ ಶಹಾಪುರ, ಉಜ್ವಲಾ ಬಡವಣಾಚೆ, ಅರವಿಂದ ಪಾಟೀಲ, ಸಂಜಯ ಪಾಟೀಲ, ರಾಜೇಶ ನೇರ್ಲಿ, ವಿಠ್ಠಲ ಹಲಗೇಕರ್, ಡಾ.ಸೋನಾಲಿ ಸರ್ನೋಬತ್, ಪ್ರಮೋದ ಕೊಚೇರಿ, ವಿವೇಕಾನಂದ ಡಬ್ಬಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts