More

    ಕ್ಷಯಮುಕ್ತ ಗ್ರಾಮಗಳ ಸಮೀಕ್ಷೆ-  ಜಿಲ್ಲಾಧಿಕಾರಿ ಡಾ.ವೆಂಕಟೇಶ್

    ದಾವಣಗೆರೆ: ಮುಂಬರುವ 2025ನೇ ಇಸವಿಯೊಳಗೆ ಭಾರತವನ್ನು ಕ್ಷಯಮುಕ್ತ ಆಗಿಸುವ ಗುರಿ ಹೊಂದಲಾಗಿದೆ. ಜಿಲ್ಲೆಯಲ್ಲೂ ಕ್ಷಯಮುಕ್ತ ಗ್ರಾಮಗಳ ಘೋಷಣೆ ಸಂಬಂಧ ಸಮೀಕ್ಷೆ ಕಾರ್ಯ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು.

    ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ಜಿಲ್ಲೆಯಲ್ಲಿ 1219 ಕ್ಷಯರೋಗಿಗಳಿದ್ದಾರೆ. ಇದರಲ್ಲಿ 54 ಜನರು ಎಚ್‌ಐವಿ ಸೋಂಕಿತರು, 205 ಮಧುಮೇಹ ಬಾಧಿತರಿದ್ದಾರೆ. 134 ಮಂದಿ ಮದ್ಯಪಾನದಿಂದ, 194 ಜನರು ತಂಬಾಕು-ಧೂಮಪಾನ ಸೇವನೆಯಿಂದ ಕ್ಷಯ ಪೀಡಿಯರಾಗಿದ್ದಾರೆ ಎಂದು ಹೇಳಿದರು.
    ದುಶ್ಚಟಗಳಿಂದ ದೂರವಿದ್ದು ಪೌಷ್ಟಿಕ ಆಹಾರ ಸೇವಿಸುವುದು, ಕ್ರಮಬದ್ಧವಾದ ಚಿಕಿತ್ಸೆ ಪಡೆದಲ್ಲಿ ಕ್ಷಯ ರೋಗದಿಂದ ಮುಕ್ತಿ ಕಾಣಬಹುದು. ಜಿಲ್ಲೆಯ ಎಲ್ಲಾ 95 ಪಿಎಚ್‌ಸಿಯ ಮೈಕ್ರೋಸ್ಕೋಪಿಕ್ ಕೇಂದ್ರ, ತಾಲ್ಲೂಕು ಆಸ್ಪತ್ರೆಗಳಲ್ಲಿ ನ್ಯಾಟ್ ಕೇಂದ್ರಗಳಲ್ಲಿ ಕ್ಷಯ ಪರೀಕ್ಷೆ ನಡೆಸಲಾಗುತ್ತದೆ ಎಂದು ತಿಳಿಸಿದರು.
    ಕೇಂದ್ರ ಸರ್ಕಾರದ ನಿಕ್ಷಯ್ ಯೋಜನೆಯಡಿ ಪ್ರತಿ ರೋಗಿಗೆ ಚಿಕಿತ್ಸಾ ಅವಧಿಯಲ್ಲಿ ತಿಂಗಳಿಗೆ 500 ರೂ. ಪ್ರೋತ್ಸಾಹಧನ ನೀಡಲಾಗುತ್ತದೆ. ಇದನ್ನು ಅವರ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡಲಾಗುತ್ತದೆ. ಕ್ಷಯ ರೋಗ ಪೀಡಿತರು ಮಾನಸಿಕ ಖಿನ್ನತೆಗೆ ಒಳಗಾಗದೆ ನಿರಂತರ ಚಿಕಿತ್ಸೆ ಪಡೆಯಬೇಕಿದೆ ಎಂದು ಹೇಳಿದರು.
    ಜಿಪಂ ಸಿಇಒ ಸುರೇಶ್ ಇಟ್ನಾಳ್ ಮಾತನಾಡಿ ಚನ್ನಗಿರಿ ತಾಲೂಕಿನಲ್ಲಿ ಅಪೌಷ್ಟಿಕತೆ ಮತ್ತು ಕ್ಷಯದಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಿದ್ದಾರೆ. ಈ ಬಗ್ಗೆ ಹೆಚ್ಚಿನ ನಿಗಾವಹಿಸಬೇಕು. ಎಲ್ಲಾ ತಾಲೂಕು ಆರೋಗ್ಯಾಧಿಕಾರಿಗಳು ಮತ್ತು ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು ಆರೋಗ್ಯ ಸುಧಾರಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಸೂಚನೆ ನೀಡಿದರು.
    ಸಭೆಯಲ್ಲಿ ಡಿಎಚ್‌ಒ ಡಾ.ನಾಗರಾಜ್, ಕ್ಷಯರೋಗ ನಿರ್ಮೂಲನಾಧಿಕಾರಿ ಡಾ. ಕೆ.ಎಚ್.ಗಂಗಾಧರ ಹಾಗೂ ವಿವಿಧ ಇಲಾಖೆ ಅಧಿಕಾರಿಗಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts