More

    ಕ್ರಿಯಾಶೀಲತೆಗೆ ರಂಗಭೂಮಿಯೇ ಮೂಲ, ನಿವೃತ್ತ ಪ್ರಾಂಶುಪಾಲ ಬೋಗಣ್ಣ ಅಭಿಪ್ರಾಯ, ಸಮಾಜದಲ್ಲಿ ಪರಿವರ್ತನೆಗೆ ಕೊಡುಗೆ ಅಪಾರ

    ನೆಲಮಂಗಲ: ಸಮಾಜವನ್ನು ಕ್ರಿಯಾಶೀಲಗೊಳಿಸಿ, ಪರಿವರ್ತನೆ ತರುವುದು ರಂಗಭೂಮಿ ಮೂಲ ಆಶಯ ಎಂದು ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಬೋಗಣ್ಣ ತಿಳಿಸಿದರು.

    ನಗರದ ಮುರಳಿ ಪದವಿಪೂರ್ವ ಕಾಲೇಜಿನಲ್ಲಿ ರಂಗಶಿಕ್ಷಣ ಕೇಂದ್ರ ಶನಿವಾರ ಆಯೋಜಿಸಿದ್ದ ವಿಶ್ವರಂಗಭೂಮಿ ದಿನಾಚರಣೆಯಲ್ಲಿ ಮಾತನಾಡಿದರು.

    ಗ್ರಾಮೀಣ ಭಾಗದ ಜಾನಪದ ನೆಲೆಗಟ್ಟಿನಲ್ಲಿ ಜನಿಸಿದ ರಂಗಭೂಮಿಗೆ ಇಂದು ವಿಶ್ವಮಾನ್ಯತೆ ದೊರೆತಿದೆ. ಕಾಲಕಾಲಕ್ಕೆ ರೂಪಾಂತರಗೊಳ್ಳುತ್ತಿರುವ ರಂಗಕಲೆ ಜನಸಾಮಾನ್ಯರನ್ನು ತಿದ್ದಿತೀಡುವ ಮೂಲಕ ನವಸಮಾಜವನ್ನು ನಿರ್ಮಿಸುತ್ತಿದೆ ಎಂದರು.
    ಇಂದಿನ ಯುವಜನತೆ ರಂಗಕಲೆಗೆ ಆಕರ್ಷಿತರಾಗುತ್ತಿದ್ದರೂ, ಆಧುನಿಕತೆಯ ಸಿನಿಮಾ, ಕಿರುತೆರೆ ಕಡೆ ಹೋಗುತ್ತಿದ್ದಾರೆ. ಹಾಗಾಗಿ ರಂಗಭೂಮಿಯಲ್ಲಿ ನೆಲೆ ನಿಲ್ಲದಂತಾಗಿದೆ. ಸೌಲಭ್ಯಗಳ ಕೊರತೆಯ ನಡುವೆಯೂ ನಾಟಕೋತ್ಸವ, ರಂಗಭೂಮಿ ಕುರಿತಾಗಿ ಸಂವಾದ, ವಿಚಾರಸಂಕಿರಣ, ಕಾರ್ಯಾಗಾರ ಆಯೋಜಿಸುವ ಜತೆಗೆ ರಂಗಕಲಾ ಸಾಧಕರನ್ನು ಪ್ರೋತ್ಸಾಹಿಸುತ್ತಿರುವ ರಂಗ ಶಿಕ್ಷಣದ ಕಾರ್ಯ ಅಭಿನಂದನೀಯ ಎಂದು ಹೇಳಿದರು.

    ರಂಗಶಿಕ್ಷಣ ಕೇಂದ್ರ ಸಂಸ್ಥಾಪಕ ಅಧ್ಯಕ್ಷ ಸಿ. ಸಿದ್ದರಾಜು ಮಾತನಾಡಿ, ಕಲೆಗೆ ಜಾತಿ, ಧರ್ಮದ ಭೇದವಿಲ್ಲ. ಜಗತ್ತಿನಾದ್ಯಂತ ಕಲಾವಿದರಿಗೆ ವಿಶೇಷ ಸ್ಥಾನಮಾನವಿದೆ. ಸಂಕೀರ್ಣ ಕಲೆಯಾಗಿರುವ ರಂಗಕಲೆ, ನ್ಯತ್ಯ, ಸಾಹಿತ್ಯ, ಸಂಗೀತ, ಹಾಡುಗಾರಿಕೆಯಂಥ ಕಲಾಪ್ರಕಾರ ಒಳಗೊಂಡಿದೆ. ವಿಶೇಷವೆಂದರೆ ಆಯಾ ದೇಶ, ಕಾಲಕ್ಕೆ ತಕ್ಕಂತೆ ಕೆಲ ಆಚರಣೆಗಳು ಸೀಮಿತವಾಗಿರುವ ಸನ್ನಿವೇಶದಲ್ಲಿ ಏಕಕಾಲಕ್ಕೆ ವಿಶ್ವದ ಎಲ್ಲ ರಂಗಾಸಕ್ತರನ್ನು ಒಂದೇ ಸೂರಿನಡಿ ಸೇರಿಸಿ ಆಚರಿಸುವ ದಿನ ಎಂದರೆ ಅದು ರಂಗಭೂಮಿ ದಿನಾಚರಣೆ ಎಂದು ಅಭಿಪ್ರಾಯಪಟ್ಟರು.

    ಬ್ರಿಟನ್ ನಿರ್ದೇಶಕಿಯ ರಂಗಸಂದೇಶ: ವಿಶ್ವರಂಗಭೂಮಿ ದಿನಾಚರಣೆ ಪ್ರಯುಕ್ತ ಬ್ರಿಟನ್‌ನ ರಂಗ ನಿರ್ದೇಶಕಿ ಹೆಲೆನ್ ಮಿರ‌್ರೇನ್ ಅವರು ರವಾನಿಸಿದ್ದ ರಂಗ ದಿನದ ಸಂದೇಶವನ್ನು ಸಿದ್ಧಗಂಗಾ ಪ್ರಥಮದರ್ಜೆ ಕಾಲೇಜು ಪ್ರಾಧ್ಯಾಪಕ ಜಿ. ಗಂಗರಾಜು ಓದಿದರು.
    50 ವರ್ಷಗಳಿಂದ ನಾಟಕ ಕಲಾವಿದರಾಗಿ ಹಾಗೂ ಹರಿಕಥೆ ವಿದ್ವಾಂಸರಾಗಿ ಸೇವೆ ಸಲ್ಲಿಸಿದ್ದ ಬಿದಲೂರು ಎನ್. ನರಸಿಂಹಮೂರ್ತಿ ಅವರಿಗೆ ರಂಗಗೌರವ ಸಲ್ಲಿಸಲಾಯಿತು.

    ನಾಟಕಕಾರ ಪ್ರಕಾಶ್‌ಮೂರ್ತಿ, ಕಲಾವಿದರಾದ ಬೂದಿಹಾಳ್ ಕಿಟ್ಟಿ, ಚಿಕ್ಕಮಾರನಹಳ್ಳಿ ದಿನೇಶ್, ಮುನಿರಾಜು, ಕಿರಣ್, ದರ್ಶನ್, ಭೂಮಿಕಾ, ಉಪನ್ಯಾಸಕ ಮಾರುತಿ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts