More

    ಕೋಲಾರಮ್ಮ ಕೆರೆ ಇನ್ನು ಸೌಂದರ್ಯ ತಾಣ

    ಕೋಲಾರಮ್ಮ ಕೆರೆ ಇನ್ನು ಸೌಂದರ್ಯ ತಾಣ
    ಮಿನಿ ಉದ್ಯಾನದಲ್ಲಿ ನಿಮಾರ್ಣವಾಗುತ್ತಿರುವ ಗೆಜೆಬಾ(ವಿಶ್ರಾಂತಿ ಸ್ಥಳ).

    ಕಾರಂಗುಟ್ಟೆ ನಾರಾಯಣಸ್ವಾಮಿ ಕೋಲಾರ
    ಐತಿಹಾಸಿಕ ಕೋಲಾರಮ್ಮ ಕೆರೆ ಸ್ವಚ್ಛತೆ, ಅಭಿವೃದ್ಧಿ ಮತ್ತು ಸೌಂದರೀಕರಣದ ಪ್ರಕ್ರಿಯೆ ಭರದಿಂದ ಸಾಗಿದೆ. ಇದರೊಂದಿಗೆ ನಾಗರಿಕರು “ಆಹ್ಲಾದಕರ ಪರಿಸರದಲ್ಲಿ ವಿಹರಿಸುವ’ ಬಹುದಿನದ ಬೇಡಿಕೆ ಈಡೇರುವ ಕಾಲ ಸನ್ನಿಹಿತವಾಗಿದೆ. ವಿಪರ್ಯಾಸವೆಂದರೆ ಕೆರೆಗೆ ಒಳಚರಂಡಿ ನೀರು ಹರಿಬಿಡುವ ಮೂಲಕ ನಗರಸಭೆ “ಜಲಮಾಲಿನ್ಯ’ ಮತ್ತಷ್ಟು ಹೆಚ್ಚಾಗುವಂತೆ ಮಾಡುತ್ತಿದೆ.
    ಗಂಗರು, ಚೋಳರು, ಟಿಪ್ಪು ಸುಲ್ತಾನ್​ ಕಾಲದಲ್ಲಿ ಅಭಿವೃದ್ಧಿಯಾಗಿರುವ ಕೋಲಾರಮ್ಮ ಅಥವಾ ಅಮಾನಿಕೆರೆ ಪಾಲಾರ್​ ನದಿಕಣಿವೆ ವ್ಯಾಪ್ತಿಗೆ ಬರುತ್ತದೆ. 789 ಎಕರೆ ಅಚ್ಚುಕಟ್ಟು, 659 ಎಕರೆ ನೀರು ಶೇಖರಣೆ ಸಾಮರ್ಥ್ಯ ಮತ್ತು 12.23 ಅಡಿ ಆಳ ಹೊಂದಿದೆ. ಆದರೆ ನೀರಿಲ್ಲದಿದ್ದಾಗ ಘನತ್ಯಾಜ್ಯ ಸುರಿದಿರುವುದು ಮತ್ತು ಸರ್ಕಾರ, ಭೂಗಳ್ಳರು ಕೆರೆ ಅಂಗಳ ಕಬ್ಜಾ ಮಾಡಿರುವುದರಿಂದ ಕೆರೆ ಸ್ವರೂಪ ಸಾಕಷ್ಟು ಬದಲಾಗಿದೆ. ಅಮ್ಮೇರಹಳ್ಳಿ ಕೆರೆ, ಅಂತರಗಂಗೆ ಬೆಟ್ಟದಿಂದ ರಾಜಕಾಲುವೆಗಳ ಮೂಲಕ ಬರುವ ಕೆಸಿವ್ಯಾಲಿ ಮತ್ತು ಮಳೆ ನೀರಿಗೆ ಅವೈಜ್ಞಾನಿಕ ಮತ್ತು ಅಸಮರ್ಪಕ ನಿರ್ವಹಣೆಯಿಂದ ಮಲಮೂತ್ರ ಬಂದು ಸೇರುತ್ತಿದೆ. ಜನ ಮತ್ತು ಆಸಕ್ತ ಜನಪ್ರತಿನಿಧಿಗಳ ಒತ್ತಾಸೆ ಫಲವಾಗಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ 8.5 ಕೋಟಿ ರೂ.ವೆಚ್ಚದಲ್ಲಿ ಯೋಜನಾಬದ್ಧವಾಗಿ ಕೆರೆಗೆ ಕಾಯಕಲ್ಪ ನೀಡಲು ಮುಂದಾಗಿದೆ.

    4 ಕಿ.ಮೀ. ದೂರ ವಾಕಿಂಗ್​, ಜಾಗಿಂಗ್​: 2 ಕಿಮೀ ಉದ್ದದ ಏರಿಯನ್ನು ನಾಲ್ಕೆ$ದು ಮೀಟರ್​ ಅಗಲಕ್ಕೆ ಮಣ್ಣು ಹಾಕಿ ಭದ್ರಪಡಿಸಲಾಗಿದೆ. ಇದರಿಂದ ಸೋರಿಕೆ ನಿಂತಿದ್ದು, ಕಟ್ಟೆ ಕೆಳಭಾಗದ ಹೆದ್ದಾರಿ ಹಾಳಾಗದಂತೆ ಚರಂಡಿ ನಿರ್ಮಿಸಲಾಗುತ್ತಿದೆ. ಒತ್ತುವರಿ ಮತ್ತು ಭದ್ರತೆಗಾಗಿ ಸುತ್ತ 8 ಕಿ ಮೀ ಮೆಶ್​ ಹಾಕಲಾಗುತ್ತಿದೆ. ಕೆರೆ ಏರಿಯಿಂದ ಕೆರೆ ಅಂಚಿನಲ್ಲಿ ನಿಮಾರ್ಣವಾಗಿರುವ 2ಕಿಮೀ ಉದ್ದದ ಪೆರಿಪೆರಿಲ್​ ಬಂಡ್​ಗೆ ಸಂಪರ್ಕಿಸಲು ಮೇಲ್ಸೇತುವೆ ನಿರ್ಮಿಸಲಾಗುತ್ತಿದೆ. ಏರಿ ಮೇಲೆ ವಿಹರಿಸುವವರು ಪೆರಿಪೆರಿಲ್​ ಬಂಡ್​ ಮೂಲಕ ರಾಷ್ಟ್ರೀಯ ಹೆದ್ದಾರಿ 75ಕ್ಕೆ ಹೊಂದಿಕೊಂಡಂತೆ ಕೋಗಿಲಹಳ್ಳಿ ಸಮೀಪ ನಿಮಾರ್ಣವಾಗುತ್ತಿರುವ ಬಹೂಪಯೋಗಿ ಉದ್ಯಾನವನ ಸೇರಿಕೊಳ್ಳಬಹುದಾಗಿದೆ. ಮುಂಜಾನೆ ಮತ್ತು ಮುಸ್ಸಂಜೆ ವಾಯು ವಿಹಾರಕ್ಕೆ ತೆರಳುವವರು ಗಾಂಧಿನಗರ ಬಳಿ ಕೆರೆಏರಿ ಮೇಲೇರಿ ಹೊರಟರೆ ಪಾರ್ಕ್​ ತನಕ ಒಟ್ಟು 4 ಕಿಮೀ ದೂರ ಸಂಚರಿಸುವುದು ಹೊಸ ಅನುಭವ ನೀಡಲಿದೆ.

    ಪಾರ್ಕ್​ನಲ್ಲಿ ಏನೇನಿರುತ್ತದೆ?: ಕೋಗಿಲಹಳ್ಳಿ ಸಮೀಪ ಕೆರೆಯಲ್ಲಿ ಹೆದ್ದಾರಿ 75ಕ್ಕೆ ಹೊಂದಿಕೊಂಡಂತೆ ನಿಮಾರ್ಣವಾಗುತ್ತಿರುವ ಮಿನಿಪಾರ್ಕ್​ನಲ್ಲಿ ವಿಶ್ರಮಿಸಲು ಪಂಚವಟಿ (ಗೆಜೆಬಾ), ವಾಕಿಂಗ್​ ಪಾಥ್​, ಯೋಗಕ್ಕಾಗಿ ಫ್ಲಾಟ್​ಫಾಮ್​ರ್, ಜಿಮ್​ ಮತ್ತು ಮಕ್ಕಳ ಆಟದ ಸಲಕರಣೆಗಳು, ಕುಡಿಯುವ ನೀರು, ಶೌಚಗೃಹ ಇರಲಿದೆ. ನಾಗರಿಕರ ಜತೆಗೆ ಹೆದ್ದಾರಿ ಹೋಕರೂ ತಿಂಡಿ ಸೇವಿಸಿ ಅಥವಾ ವಿಶ್ರಮಿಸಿ ಮುಂದಕ್ಕೆ ಪ್ರಯಾಣ ಬೆಳೆಸಬಹುದಾಗಿದೆ.

    ಐಯಾಸಿಂತ್​ ಸೊಪ್ಪು ತಡೆ ಅಸಾಧ್ಯ: ಕೆರೆಗೆ ಕಂಠಕವಾಗಿರುವ ಐಯಾಸಿಂತ್​ ಸಸ್ಯಗಳು. ಈ ಸಸ್ಯಗಳನ್ನು ಹಿಟಾಚಿ ಯಂತ್ರಗಳ ಮೂಲಕ ಆರೇಳು ತಿಂಗಳಿಂದ ತೆರವುಗೊಳಿಸಿದರೂ ಕೆಲವು ದಿನ ಕಳೆಯುವಷ್ಟರಲ್ಲಿ ಮತ್ತದೇ ಜಾಗವನ್ನು ಆಕ್ರಮಿಸಿಕೊಳ್ಳುತ್ತಿವೆ. ಇದಕ್ಕೆ ಪ್ರಮುಖ ಕಾರಣ ನೀರು ಮಲಿನವಾಗಿರುವುದು. ಕೊಳಚೆ ನೀರಿನಲ್ಲಿ ಈ ಸಸ್ಯ ಸಮೃದ್ಧವಾಗಿ ಬೆಳವಣಿಗೆಯಾಗುತ್ತದೆ.

    ಯುಜಿಡಿ ನೀರು ಕೆರೆಗೆ ಬಿಟ್ಟ ನಗರಸಭೆ!: ಕಳೆದ ವರ್ಷ ಮಳೆ ಮತ್ತು ಕೆಸಿವ್ಯಾಲಿ ನೀರು ಹರಿದು ಕೆರೆ ಕೋಡಿ ಹರಿದಿತ್ತು. ಪ್ರಸ್ತುತ ಕೆರೆ ತುಂಬಾ ನೀರಿದೆ. ಆದರೆ ನಿಂತ ನೀರಿಗೆ ನಿತ್ಯ ಒಳಚರಂಡಿ ನೀರು ಸೇರುತ್ತಿದೆ. ಅಂತರಗಂಗೆ ಬೆಟ್ಟದ ಕಡೆಯಿಂದ ಎಪಿಎಂಸಿ ಬಳಿ ಬರುವ ಕಾಲುವೆಗೆ ಶಾಹೀನ್​ಷಾ ನಗರ, ಷಾಹಿದ್​ನಗರ, ಆಟೋನಗರ ಸೇರಿ ಆ ಭಾಗದ ಚರಂಡಿ ನೀರು ಕೆಇಬಿ ಒಳಭಾಗದ ಕಾಲುವೆ ಮೂಲಕ ಸೇರುತ್ತಿವೆ. ನಂತರ ಇದು ಅಮ್ಮೇರಹಳ್ಳಿ ರಾಜಕಾಲುವೆಗೆ ಸೇರುತ್ತಿದೆ. ಅದೇ ರೀತಿ ಕನಕನಪಾಳ್ಯ, ಅಂಬೇಡ್ಕರ್​ ನಗರ ಒಳಚರಂಡಿ ನೀರು ನೇರ ಕೆರೆಗೆ ಸೇರುತ್ತಿದೆ. ಇನ್ನು ಕ್ಲಾಕ್​ ಟವರ್​ನಿಂದ ಹಿಡಿದು ಪಿಸಿ ಬಡಾವಣೆ, ಕಠಾರಿಪಾಳ್ಯ, ದೊಡ್ಡಪೇಟೆ ಮತ್ತಿತರ ಕಡೆಯ ಒಳಚರಂಡಿ ನೀರು ಡೂಂಲೈಟ್​ ವೃತ್ತದ ಕಾಲುವೆಯಲ್ಲಿ ಸಾಗಿ ಎಸ್ಸೆನ್ನಾರ್​ ಜಿಲ್ಲಾಸ್ಪತ್ರೆ ಹಿಂಭಾಗದ ದೊಡ್ಡ ಕಾಲುವೆ ಮೂಲಕ ಕೆರೆ ಸೇರುತ್ತಿದೆ. ಅಂತರಗಂಗೆ ಬೆಟ್ಟದಿಂದ ರಹಮತ್​ನಗರದ ಮೂಲಕ ಬರುವ ರಾಜಕಾಲುವೆಯಲ್ಲಿ ಮಾಂಸದ ತ್ಯಾಜ್ಯ, ಪ್ಲಾಸ್ಟಿಕ್​ ಸೇರಿ ಒಳಚರಂಡಿ ನೀರು ಅಧಿಕ ಪ್ರಮಾಣದಲ್ಲಿ ಕೆರೆ ಅಂಗಳ ಸೇರುತ್ತಿದೆ.

    ಕಾಮಗಾರಿ ಅವೈಜ್ಞಾನಿಕವಾಗಿದೆ. ರಾಜಕಾಲುವೆ ಮತ್ತು ಕೆರೆಯಲ್ಲೇ ನಿರ್ಮಿಸಿರುವ ಚೇಂಬರ್​ಗಳಿಂದ ತ್ಯಾಜ್ಯ ನೀರು ಉಕ್ಕಿ ಹರಿಯುತ್ತಿದೆ. ಚಿನ್ನಪುರ ಕೆರೆ ಬಳಿಯ ಸಂಗ್ರಹಣ ಘಟಕಕ್ಕೆ ಒಳಚರಂಡಿ ನೀರು ಹೋಗುತ್ತಿಲ್ಲ. ಮಣಿಘಟ್ಟ ಮಾರ್ಗ ಮತ್ತು ಎಸ್ಸೆನ್ನಾರ್​ ಆಸ್ಪತ್ರೆ ಬಳಿ ಸ್ಥಾಪಿಸಿರುವ ತ್ಯಾಜ್ಯ ನೀರು ಪಂಪ್​ಹೌಸ್​ಗಳು ನಿರ್ವಹಣೆಯಿಲ್ಲ. | ಮುರಳಿಗೌಡ, ಸದಸ್ಯ, ನಗರಸಭೆ


    ಜನರ ಮನಸ್ಸಿಗೆ ಮುದ ನೀಡುವುದರ ಜತೆಗೆ ಆರೋಗ್ಯ ಸುಧಾರಣೆಗೆ ಸಹಕಾರಿಯಾಗುವಂತೆ ಕೆರೆ ಅಭಿವೃದ್ಧಿಪಡಿಸಲಾಗುತ್ತಿದೆ. ಒಂದೆರಡು ತಿಂಗಳಲ್ಲಿ ಪಾರ್ಕ್​ ಮತ್ತಿತರ ಕಾಮಗಾರಿ ಪೂರ್ಣಗೊಳಿಸಲಾಗುವುದು. ಕೆರೆ ಏರಿ ಸೇರಿದಂತೆ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಕೆರೆಯಲ್ಲಿ ನೀರು ಶುದ್ಧೀಕರಣಕ್ಕೆ ಏರಿಯೇಟರ್ಸ್​ ಅಳವಡಿಸಲಾಗುತ್ತದೆ. | ರವಿಸೂರನ್​, ಕಾರ್ಯಪಾಲಕ ಅಭಿಯಂತ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts