More

    ಕೋವಿಡ್ ನಿಯಮ ಜಾಗೃತಿಗೆ ಜನಾಂದೋಲನ

    ಹುಬ್ಬಳ್ಳಿ: ಕೋವಿಡ್ ನಂತರ ಅನುಸರಿಸಬೇಕಾದ ನಿಯಮಗಳನ್ನು ಸಾರ್ವಜನಿಕ ಸಹಭಾಗಿತ್ವದೊಂದಿಗೆ ಪಾಲಿಸುವುದಕ್ಕಾಗಿ ಜನಾಂದೋಲನ ಅಭಿಯಾನವನ್ನು ರಾಷ್ಟ್ರದಾದ್ಯಂತ ಕೈಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಟ್ವಿಟ್ಟರ್ ಮೂಲಕ ನೀಡಿದ ಸೂಚನೆ ಮೇರೆಗೆ ನೈಋತ್ಯ ರೈಲ್ವೆ ವಲಯ ವ್ಯಾಪ್ತಿಯಲ್ಲಿ ಗುರುವಾರ ನೂರಾರು ಅಧಿಕಾರಿಗಳು ಹಾಗೂ ಸಿಬ್ಬಂದಿ ಪ್ರತಿಜ್ಞಾ ವಿಧಿಯಲ್ಲಿ ಪಾಲ್ಗೊಂಡರು.

    ರೈಲ್ವೆ ಸಚಿವ ಪಿಯುಷ್ ಗೋಯಲ್ ಅವರು ದೇಶದ ಎಲ್ಲ ವಲಯಗಳ ಮಹಾಪ್ರಬಂಧಕರಿಗೆ ಪ್ರತಿಜ್ಞಾ ವಿಧಿ ಬೋಧಿಸಿ, ಕೋವಿಡ್​ನಿಂದ ತಮ್ಮನ್ನು ಹಾಗೂ ಸುತ್ತಲಿನವರನ್ನು ರಕ್ಷಿಸುವುದಕ್ಕಾಗಿ ಅನುಸರಿಸಬೇಕಾದ ನಿಯಮಗಳನ್ನು ಪಾಲಿಸುವಂತೆ ಸೂಚಿಸಿದರು.

    ನಗರದ ರೈಲ್ ಸೌಧದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನೈಋತ್ಯ ರೈಲ್ವೆ ವಲಯದ ಮಹಾಪ್ರಬಂಧಕ ಅಜಯಕುಮಾರ ಸಿಂಗ್ ಅವರು ಪ್ರತಿಜ್ಞಾ ವಿಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಪಿ.ಕೆ. ಮಿಶ್ರಾ ಪ್ರತಿಜ್ಞಾ ವಿಧಿ ಬೋಧಿಸಿದರು.

    ಸದಾ ಮಾಸ್ಕ್ ಧರಿಸಬೇಕು, ಮೇಲಿಂದ ಮೇಲೆ ಕೈ ತೊಳೆದುಕೊಳ್ಳಬೇಕು, ಪರಸ್ಪರ ಅಂತರ ಕಾಪಾಡಿಕೊಳ್ಳಬೇಕು ಹಾಗೂ ಇತರ ನಿಯಮಗಳನ್ನು ಪಾಲಿಸುವ ಮೂಲಕ ಕರೊನಾ ಗೆಲ್ಲಲು ಸಾಮೂಹಿಕವಾಗಿ ಪ್ರಯತ್ನಿಸಬೇಕು ಎಂದು ಪ್ರತಿಜ್ಞಾ ವಿಧಿಯಲ್ಲಿ ಬೋಧಿಸಲಾಯಿತು.

    ಹುಬ್ಬಳ್ಳಿ, ಬೆಂಗಳೂರು ಹಾಗೂ ಮೈಸೂರು ವಿಭಾಗದ ವಿಭಾಗೀಯ ವ್ಯವಸ್ಥಾಪಕರು ಹಾಗೂ ಇತರ ಸಿಬ್ಬಂದಿ ಭಾಗವಹಿಸಿದ್ದರು.

    ಸಾರ್ವಜನಿಕರೊಂದಿಗೆ ಉತ್ತಮ ನಡವಳಿಕೆಯೊಂದಿಗೆ ವರ್ತಿಸುವುದು ಹಾಗೂ ಕರೊನಾ ಸೋಂಕು ತಡೆಯಲು ಅನುಸರಿಸಬೇಕಾದ ನಿಯಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಈ ಅಭಿಯಾನದ ಪ್ರಮುಖ ಉದ್ದೇಶ.

    ಕೋವಿಡ್​ನಿಂದ ರಕ್ಷಿಸಿಕೊಳ್ಳಲು ಅನುಸರಿಸಬೇಕಾದ ನಿಯಮಗಳ ಮಾಹಿತಿಯುಳ್ಳ ಕನ್ನಡ, ಹಿಂದಿ ಮತ್ತು ಇಂಗ್ಲೀಷ್ ಭಾಷೆಯ ಬ್ಯಾನರ್​ಗಳನ್ನು ರೈಲ್ವೆ ವಲಯದ ಮುಖ್ಯ ಕಚೇರಿ, ವಿಭಾಗೀಯ ಕಚೇರಿ, ವರ್ಕ್​ಶಾಪ್, ರೈಲ್ವೆ ನಿಲ್ದಾಣಗಳಲ್ಲಿ ಲಗತ್ತಿಸಲಾಯಿತು.

    ಕರೊನಾ ನಿಯಂತ್ರಣಕ್ಕೆ ಜಿಲ್ಲಾದ್ಯಂತ ಕ್ರಮ

    ಧಾರವಾಡ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಗುರುವಾರ ಸಂಜೆ ನಡೆಸಿದ ಕರೊನಾ ನಿಯಂತ್ರಣಕ್ಕಾಗಿ ಜಿಲ್ಲೆಯಲ್ಲಿ ಕೈಗೊಂಡ ಕ್ರಮಗಳ ಕುರಿತ ವಿಡಿಯೋ ಕಾನ್ಪರೆನ್ಸ್​ನಲ್ಲಿ ಜಿ.ಪಂ. ಸಿಇಒ ಡಾ. ಬಿ.ಸಿ. ಸತೀಶ ಸಂವಾದ ನಡೆಸಿದರು.

    ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ಕರ್ತವ್ಯದಲ್ಲಿರುವುದರಿಂದ ಸಿಇಒ ಹಾಜರಾಗಿ, ಕರೊನಾ ನಿಯಂತ್ರಣಕ್ಕಾಗಿ ಕೈಗೊಂಡ ಕ್ರಮಗಳ ಕುರಿತು ಮುಖ್ಯಮಂತ್ರಿಗೆ ವಿವರಿಸಿದರು.

    ಜಿಲ್ಲೆಯಲ್ಲಿ ಮಾಸ್ಕ್ ಅಭಿಯಾನ, ಸ್ವ್ಯಾಬ್ ಸಂಗ್ರಹ ಹಾಗೂ ಸೋಂಕಿತರ ಚಿಕಿತ್ಸೆ ಕುರಿತು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹಿರಿಯ ಅಧಿಕಾರಿಗಳ ತಂಡ ರಚಿಸಿ ಪ್ರಮುಖ ಜನಸಂದಣಿ ಪ್ರದೇಶಗಳಲ್ಲಿ ತಪಾಸಣೆ ಮಾಡಿ ಮಾಸ್ಕ್ ಧರಿಸದ ಮತ್ತು ಪರಸ್ಪರ ಅಂತರ ಪಾಲನೆ ಮಾಡದವರಿಂದ ದಂಡ ಸಂಗ್ರಹದೊಂದಿಗೆ ಸ್ವ್ಯಾಬ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಮಾಸ್ಕ್ ಧರಿಸದವರಿಗೆ ದಂಡಕ್ಕಿಂತ ಹೆಚ್ಚಾಗಿ ಜಾಗೃತಿ ಮೂಡಿಸುವ ಮತ್ತು ಅವರನ್ನು ತಪಾಸಣೆಗೆ ಒಳಪಡಿಸುವ ಕ್ರಮಕ್ಕೆ ಒತ್ತು ನೀಡಲಾಗುತ್ತಿದೆ ಎಂದು ವಿವರಿಸಿದರು.

    ಮಹಾನಗರ ಪೊಲೀಸ್ ಆಯುಕ್ತ ಆರ್. ದಿಲೀಪ್, ಎಸ್ಪಿ ವರ್ತಿಕಾ ಕಟಿಯಾರ್, ಇತರ ಅಧಿಕಾರಿಗಳು ಪಾಲ್ಗೊಂಡಿದ್ದರು.

    ಜಿಲ್ಲೆಯಲ್ಲಿ 121 ಪ್ರಕರಣ ಪತ್ತೆ

    ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಗುರುವಾರ 121 ಜನರಿಗೆ ಕರೊನಾ ಸೋಂಕು ದೃಢಪಟ್ಟಿದ್ದು, ಒಟ್ಟು ಪ್ರಕರಣ ಸಂಖ್ಯೆ 18,393ಕ್ಕೇರಿದೆ. ಒಟ್ಟು 15,251 ಜನ ಬಿಡುಗಡೆಗೊಂಡಿದ್ದಾರೆ. 2630 ಸಕ್ರಿಯ ಪ್ರಕರಣಗಳಿವೆ. ಇಬ್ಬರು ಸಾವಿಗೀಡಾಗಿದ್ದು, ಮೃತಪಟ್ಟವರ ಒಟ್ಟು ಸಂಖ್ಯೆ 512ಕ್ಕೇರಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts