More

    ಕೊಲೆಗೆ ಯತ್ನಿಸಿದವರ ಸೆರೆ, ಶ್ವಾನದ ಆಹಾರ ಪೊಟ್ಟಣ ಕದ್ದು, ಮೊಬೈಲ್ ಕಸಿದುಕೊಂಡಿದ್ದ ಬಂಧಿತರು

    ನೆಲಮಂಗಲ: ಸರಕುಸಾಗಣೆ ವಾಹನದ ಚಾಲಕನನ್ನು ಬೆದರಿಸಿ ಶ್ವಾನದ ಆಹಾರದ ಪೊಟ್ಟಣ ಹಾಗೂ 10 ಸಾವಿರ ನಗದು ಕದ್ದು ಪರಾರಿಯಾಗಿದ್ದ 5 ಮಂದಿ ಆರೋಪಿಗಳ ಪೈಕಿ 3 ಮಂದಿಯನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

    ರಾಮನಗರ ಜಿಲ್ಲೆ ಮಾಗಡಿ ತಾಲೂಕು ಸೋಲೂರು ಹೋಬಳಿಯ ಅಲೂರು ಗ್ರಾಮದ ಜಯಂತ್(23), ತಾಲೂಕಿನ ದೊಡ್ಡೇರಿ ನಿವಾಸಿ ಗಿರೀಶ್(18), ಬೆಂಗಳೂರಿನ ನಂದಿನಿ ಲೇಔಟ್‌ನ ಸಾಕಮ್ಮ ಬಡಾವಣೆ ನಿವಾಸಿ ಗುರು(22) ಬಂಧಿತರು.

    ಏ.28ರಂದು ರಾತ್ರಿ ತಾಲೂಕಿನ ಹ್ಯಾಡಾಳ್ ಗ್ರಾಮದ ಖಾಸಗಿ ಗೋದಾಮಿನಿಂದ ಶ್ವಾನಕ್ಕೆ ಬಳಸುವ ಆಹಾರದ ಪೊಟ್ಟಣಗಳನ್ನು ತೆಗೆದುಕೊಂಡು ಶಿವಮೊಗ್ಗಕ್ಕೆ ತೆರಳುತ್ತಿದ್ದ ವೇಳೆ ರಾ.ಹೆದ್ಧಾರಿ 48ರ ಬೆಂಗಳೂರು ತುಮಕೂರು ಮಾರ್ಗದ ಮಧ್ಯದ ಟಿ.ಬೇಗೂರು ಬಳಿ ಸರಕುಸಾಗಣೆ ಮಾಡುತ್ತಿದ್ದ ವಾಹನದ ಟೈರ್ ಪಂಚರ್ ಆಗಿದೆ. ಚಾಲಕ ನಂದೀಶ್ ವಾಹನವನ್ನು ರಸ್ತೆ ಬದಿಯಲ್ಲಿ ಹಾಕಿ ವಾಹನದ ಟೈರ್ ಬದಲಿಸಲು ಮುಂದಾಗಿದ್ದ. ಈ ವೇಳೆಯಲ್ಲಿ ನೆಲಮಂಗಲ ಕಡೆಯಿಂದ 2 ದ್ವಿಚಕ್ರವಾಹನದಲ್ಲಿ ಬಂದ 5 ಮಂದಿ ದುಷ್ಕರ್ಮಿಗಳು ಚಾಲಕನಿಗೆ ಚಾಕು ತೊರಿಸಿ, ಹಲ್ಲೆ ಮಾಡಿ ಆತನ ಬಳಿ ಇದ್ದ 10 ಸಾವಿರ ನಗದು, ಶ್ವಾನದ ಆಹಾರದ ಕೆಲ ಪೊಟ್ಟಣ, ಮೊಬೈಲ್ ಕಸಿದುಕೊಂಡು ಕೊಲೆಗೆ ಯತ್ನಿಸಿದ್ದರು. ಈ ವೇಳೆ ಸ್ಥಳದಿಂದ ತಪ್ಪಿಸಿಕೊಂಡಿದ್ದ ಚಾಲಕ ನಂದೀಶ್, ರಾತ್ರಿ 10 ಗಂಟೆ ವೇಳೆಯಲ್ಲಿ ಗ್ರಾಮಾಂತರ ಠಾಣೆಯಲ್ಲಿ ಕೊಲೆ ಯತ್ನ ಹಾಗೂ ಹಣ ಕಳವು ಕುರಿತು ದೂರು ದಾಖಲಿಸಿದ್ದ. ಠಾಣೆ ಎಸ್‌ಐ ಎಚ್.ಟಿ.ವಸಂತ್ ಹಾಗೂ ವೃತ್ತ ನಿರೀಕ್ಷಕ ಎಂ.ಆರ್.ಹರೀಶ್ ನೇತೃತ್ವದ ಪೊಲೀಸರ ತಂಡ ಬುಧವಾರ ಬೆಳಗ್ಗೆ ಆರೋಪಿಗಳನ್ನು ಬಂಧಿಸಿದೆ.

    ಸುಳಿವು ನೀಡಿದ ಮೊಬೈಲ್: ಚಾಲಕ ನಂದೀಶ್‌ನ ಮೊಬೈಲ್ ಕದ್ದು ಪರಾರಿಯಾಗಿದ್ದ ಆರೋಪಿಗಳನ್ನು ಮೊಬೈಲ್ ನೆಟ್‌ವರ್ಕ್ ಸಹಾಯದಿಂದ ಬಂಧಿಸಿದ್ದು, ಇಬ್ಬರು ಆರೋಪಿಗಳು ನಗರಸಭೆ ವ್ಯಾಪ್ತಿಯ ಚಕ್ಕಸಂದ್ರ ಬಳಿ ಮಾರುಕಟ್ಟೆಯಲ್ಲಿ ಹಾಗೂ ಮತ್ತೊಬ್ಬನನ್ನು ಬೆಂಗಳೂರಿನ ನಂದಿನಿ ಬಡಾವಣೆಯಲ್ಲಿ ಗುರುವಾರ ಬಂಧಿಸಲಾಗಿದೆ.

    ಇಬ್ಬರೂ ರೌಡಿ ಶೀಟರ್: ನಂದಿನಿ ಪೊಲೀಸ್ ಠಾಣೆಯಲ್ಲಿ ಗುರು ಎಂಬಾತನ ಮೇಲೆ ಸುಮಾರು ನಾಲ್ಕೈದು ಪ್ರಕರಣಗಳು ದಾಖಲಾಗಿದ್ದು, ರೌಡಿಶೀಟರ್ ಆಗಿದ್ದಾನೆ. ಜಯಂತ್ ಎಂಬಾತನ ಮೇಲೂ ರಾಮನಗರ, ಬೆಂಗಳೂರು ನಗರ, ಗ್ರಾಮಾಂತರ ಸೇರಿ ಸುಮಾರು 17 ಠಾಣೆಯಲ್ಲಿ ಕೊಲೆ, ಕೊಲೆಯತ್ನ, ದರೋಡೆ ಪ್ರಕರಣಗಳು ದಾಖಲಾಗಿದ್ದು, ಈತನೂ ರೌಡಿಪಟ್ಟಿಯಲ್ಲಿದ್ದಾನೆ.
    ಘಟನಾ ಸ್ಥಳಕ್ಕೆ ಡಿವೈಎಸ್‌ಪಿ ಜಗದೀಶ್, ಪೊಲೀಸ್ ವೃತ್ತ ನಿರೀಕ್ಷಕ ಎಂ.ಆರ್.ಹರೀಶ್ , ಎಸ್‌ಐ ಎಚ್.ಟಿ.ವಸಂತ್ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು. ಬಂಧಿತರಿಂದ ಸುಮಾರು 20 ಸಾವಿರ ಮೌಲ್ಯದ ಶ್ವಾನದ ಆಹಾರ, 10 ಸಾವಿರ ನಗದು, 2 ಮೊಬೈಲ್, 1 ದ್ವಿಚಕ್ರವಾಹವನ್ನು ವಶಪಡಿಸಿಕೊಳ್ಳಲಾಗಿದೆ. ತಲೆ ಮರೆಸಿಕೊಂಡಿರುವ ಇಬ್ಬರನ್ನು ಬಂಧಿಸಲು ಗ್ರಾಮಾಂತರ ಪೊಲೀಸ್ ಠಾಣೆ ಎಸ್‌ಐ ಎಚ್.ಟಿ.ವಸಂತ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts