More

    ಕೊಪ್ಪ ಸರ್ಕಾರಿ ಶಾಲೆ ಕಟ್ಟಡ ಶಿಥಿಲ!

    ಶಶಿಧರ ಕುಲಕರ್ಣಿ ಮುಂಡಗೋಡ

    ತಾಲೂಕಿನ ಕೊಪ್ಪ ಇಂದಿರಾನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಅತಿವೃಷ್ಟಿಯಿಂದಾಗಿ ಶಿಥಿಲಗೊಂಡಿದೆ. ಹೀಗಾಗಿ, ಶಿಕ್ಷಕರು ಬಾಡಿಗೆ ಕೊಠಡಿಯಲ್ಲಿ ಮಕ್ಕಳಿಗೆ ಪಾಠ ಹೇಳುತ್ತಿ ದ್ದಾರೆ. ಆದರೆ, ಅಧಿಕಾರಿಗಳು ತಮಗೆ ಸಂಬಂಧವಿಲ್ಲದವ ರಂತೆ ಮೌನ ವಹಿಸಿರುವುದು ಗ್ರಾಮಸ್ಥರಲ್ಲಿ ಆಶ್ಚರ್ಯ ಮೂಡಿಸಿದೆ.

    ಶಾಲೆಯಲ್ಲಿ 1ರಿಂದ 5ನೇ ತರಗತಿವರೆಗೆ ಒಟ್ಟು 29 ವಿದ್ಯಾರ್ಥಿಗಳಿದ್ದಾರೆ. ಮುಖ್ಯ ಶಿಕ್ಷಕಿ ಶಕುಂತಲಾ ಭಜಂತ್ರಿ ಮತ್ತು ಸಹಶಿಕ್ಷಕ ಸಿ.ಸಿ. ಮುದಿಗೌಡರ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೊದಲಿದ್ದ ಸರ್ಕಾರಿ ಶಾಲೆಯಲ್ಲಿ ಸುಸಜ್ಜಿತ ಆಟದ ಮೈದಾನ, ಅಡುಗೆ ಕೋಣೆ, ಕುಡಿಯಲು ನೀರಿನ ವ್ಯವಸ್ಥೆ ಮತ್ತು ತರಗತಿ ಕೊಠಡಿಗಳು ಇದ್ದವು. ಆದರೆ, 2019ರ ಆಗಸ್ಟ್​ನಲ್ಲಿ

    ಸುರಿದ ಭಾರಿ ಮಳೆಯಿಂದ ಶಾಲೆಯ ಕಟ್ಟಡ ಶಿಥಿಲಗೊಂಡಿತು. ಶಾಲೆಯ ಕೆಲ ಕೊಠಡಿಗಳ ಗೋಡೆಗಳು ಬಿರುಕುಬಿಟ್ಟಿವೆ. ಕಟ್ಟಡದ ದುಸ್ಥಿತಿ ಕಂಡ ಸಿಬ್ಬಂದಿಯು ಶಾಲೆಯನ್ನು ಒಂದು ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಿಸಿದ್ದಾರೆ. ಕಟ್ಟಡದ ಪ್ರತಿ ತಿಂಗಳ ಬಾಡಿಗೆ 1500 ರೂ.ಗಳನ್ನು ಗ್ರಾಮ ಪಂಚಾಯಿತಿಯಿಂದ ನೀಡಲಾಗುತ್ತಿದೆ. ಆದರೆ, ಈ ಬಾಡಿಗೆ ಕಟ್ಟಡಕ್ಕೆ ಇರುವುದು ಎರಡೇ ಕೋಣೆಗಳು. ಎರಡೇ ಕೋಣೆಗಳಲ್ಲಿ ಶಿಕ್ಷಕರು ಮಕ್ಕಳಿಗೆ ಪಾಠ ಹೇಳಬೇಕು. ಬಿಸಿಯೂಟ ತಯಾರಿಸಿ ಮಕ್ಕಳಿಗೆ ಉಣಬಡಿಸಬೇಕು. ಅಲ್ಲದೆ, ಮಕ್ಕಳಿಗೆ ಆಟವಾಡಲು ಮೈದಾನವಿಲ್ಲ. ನೀರಿನ ವ್ಯವಸ್ಥೆ ಇಲ್ಲ. ಶೌಚಗೃಹವಿಲ್ಲ. ಇದರಿಂದ ಮಕ್ಕಳು ತೊಂದರೆ ಅನುಭವಿಸುವಂತಾಗಿದೆ. ಈ ಕುರಿತು ಈಗಾಗಲೇ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಸ್ಥಳೀಯರಾದ ನಾಗಯ್ಯ ಹಿರೇಮಠ, ಚನ್ನಪ್ಪ ಕಳ್ಳಿಮನಿ, ದುರಗಪ್ಪ ಭೋವಿ ಅವರ ದೂರು.

    ಮೊದಲಿದ್ದ ಶಾಲೆಯ ಹಾಗೆ ಯಾವ ವ್ಯವಸ್ಥೆ ಈ ಬಾಡಿಗೆ ಕಟ್ಟಡದಲ್ಲಿ ಇರುವುದಿಲ್ಲ. ಮಕ್ಕಳಿಗೆ ತುಂಬಾ ತೊಂದರೆಯಾಗಿದೆ. ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಫೋಟೋ ಸಮೇತ ವರದಿ ನೀಡಲಾಗಿದೆ. ಭೇಟಿ ನೀಡಿದ ಅವರು ಇಲಾಖೆಯಿಂದ ಅನುದಾನವಿರುವುದಿಲ್ಲ ಬೇರೆ ಅನುದಾನಕ್ಕಾಗಿ ಪ್ರಯತ್ನ ಮಾಡಲಾಗುವುದು ಎಂದಿದ್ದಾರೆ.
    | ಶಕುಂತಲಾ ಭಜಂತ್ರಿ ಮುಖ್ಯ ಶಿಕ್ಷಕಿ

    ಮಳೆಯಿಂದ ಹಾನಿಗೊಂಡ ತಾಲೂಕಿನ 5 ಶಾಲೆಗಳ ದುರಸ್ತಿಗೆ ನೆರೆ ಪರಿಹಾರದಡಿ ಆಯ್ಕೆ ಮಾಡಲಾಗಿದ್ದು, ಅದರಲ್ಲಿ ಕೊಪ್ಪ ಇಂದಿರಾನಗರ ಶಾಲೆಯೂ ಸೇರಿದೆ. ಅವುಗಳ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಕಳುಹಿಸಲಾಗಿದೆ. ಇನ್ನೆರಡು ತಿಂಗಳಲ್ಲಿ ಹೊಸ ಕಟ್ಟಡ ನಿರ್ಮಾಣ ಕಾರ್ಯ ಆರಂಭಿಸಲಾಗುವುದು.
    | ಡಿ.ಎಂ. ಬಸವರಾಜಪ್ಪ ಬಿಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts