More

    ಕೊನೆಗೂ ಕರೊನಾ ಕಳ್ಳ ಪತ್ತೆ

    ಹುಬ್ಬಳ್ಳಿ: ಕಿಮ್ಸ್​ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕೋವಿಡ್ ವಾರ್ಡ್​ನಿಂದ ಶುಕ್ರವಾರ ಬೆಳಗ್ಗೆ ತಪ್ಪಿಸಿಕೊಂಡಿದ್ದ 55 ವರ್ಷದ ಕರೊನಾ ಸೋಂಕಿತ ಆರೋಪಿ ಗದಗನ ತನ್ನ ನಿವಾಸದಲ್ಲಿ ಸಂಜೆ ಪತ್ತೆಯಾಗಿದ್ದಾನೆ.

    ಕಳ್ಳತನ ಪ್ರಕರಣದಲ್ಲಿ ಆರೋಪಿಯಾಗಿದ್ದ ಈತನ ಪರೀಕ್ಷೆ ಮಾಡಿದಾಗ ಕರೊನಾ ಪಾಸಿಟಿವ್ ಬಂದಿತ್ತು.

    ಶುಕ್ರವಾರ ಬೆಳಗ್ಗೆ 5.30ಕ್ಕೆ ಕಿಮ್ಸ್​ನಿಂದ ತಪ್ಪಿಸಿಕೊಂಡು ಯಾವುದೋ ವಾಹನದ ಮೂಲಕ ಗದಗ ತಲುಪಿದ್ದ. 7.50ಕ್ಕೆ ಗದಗ ಮಿಷನ್ ಕಾಂಪೌಂಡ್ ಚರ್ಚ್ ಬಳಿ ಇರುವ ತನ್ನ ಮನೆ ಸೇರಿದ್ದ. ಬಳಿಕ 8.10ಕ್ಕೆ ಬ್ಯಾಗ್ ತೆಗೆದುಕೊಂಡು ಮತ್ತೆ ಎಲ್ಲಿಗೋ ಹೋಗಿದ್ದ. ಮತ್ತೆ ಸಂಜೆ 5ರ ಸುಮಾರಿಗೆ ಮನೆಗೆ ವಾಪಸಾಗಿದ್ದ. ಆ ವೇಳೆ ಬೆಟಗೇರಿ ಪೊಲೀಸರ ಸಹಾಯದಿಂದ ಹುಬ್ಬಳ್ಳಿ ಉಪನಗರ ಠಾಣೆ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಸೋಂಕು ಅಂಟಿಸಿಕೊಂಡಿದ್ದರೂ ಆತ ಹುಬ್ಬಳ್ಳಿಯಿಂದ ಗದಗಕ್ಕೆ ಹೋಗಿ ಎಲ್ಲೆಂದರಲ್ಲಿ ಸುತ್ತಾಡಿ ಬಂದಿದ್ದು ಈತನ ಟ್ರಾವೆಲ್ ಹಿಸ್ಟರಿ ಭಯಾನಕವಾಗಿದೆ.

    ಪಿಪಿಇ ಕಿಟ್ ಧರಿಸಿ ಕಾರ್ಯಾಚರಣೆ: ಸೋಂಕಿತನ ಬಂಧನಕ್ಕೆ ಬಲೆ ಬೀಸಿದ ಪೊಲೀಸರ ತಂಡ ಪಿಪಿಇ ಕಿಟ್ ಧರಿಸಿ ಕಾರ್ಯಾಚರಣೆಗೆ ಇಳಿದಿತ್ತು. ಆರೋಪಿಯ ಮನೆಯ ಸುತ್ತ ಹಾಗೂ ಗದಗ ನಗರದಾದ್ಯಂತ ಹುಡುಕಾಟ ಆರಂಭಿಸಿತ್ತು. ಆತ ಸಂಜೆ ಮನೆಗೆ ಬರುತ್ತಿದ್ದಂತೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿತ್ತು. ಆಗ ಪೊಲೀಸರು ಆತನಿಗೆ ಪಿಪಿಇ ಕಿಟ್ ಧರಿಸುವಂತೆ ಸೂಚಿಸಿದರು.

    ‘ಸರಿಯಾಗಿ ಊಟ ಕೊಟ್ಟಿಲ್ಲ. ನಾನು ಬರಲ್ಲ’ ಎಂದು ಆರೋಪಿ ಹಠ ಹಿಡಿದಿದ್ದ. ನಾವು ಕಿಮ್್ಸ ಸಿಬ್ಬಂದಿ ಇದ್ದು, ನಿನಗೆ ಎಲ್ಲ ವ್ಯವಸ್ಥೆ ಮಾಡುತ್ತೇವೆ ಎಂದು ಪೊಲೀಸರು ಸಮಾಧಾನಪಡಿಸಿ ಆಂಬುಲೆನ್ಸ್​ನಲ್ಲಿ ಕರೆದುಕೊಂಡು ಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ವಿಚಿತ್ರ ವರ್ತನೆಯ ವ್ಯಕ್ತಿ: ಮೂಲತಃ ಬಾಗಲಕೋಟೆ ಬಾದಾಮಿ ತಾಲೂಕಿನವನಾದ 55 ವರ್ಷದ ಸೋಂಕಿತ ಗದಗನಲ್ಲಿ ಏಕಾಂಗಿಯಾಗಿ ವಾಸವಾಗಿದ್ದ. ಅವಿವಾಹಿತನಾದ ಈತ ವಿಚಿತ್ರ ವರ್ತನೆ ಮೂಲಕ ಅಕ್ಕಪಕ್ಕದವರೊಂದಿಗೆ ಜಗಳವಾಡಿಕೊಂಡಿದ್ದ. ಕಳ್ಳತನವನ್ನೇ ಪ್ರವೃತ್ತಿ ಮಾಡಿಕೊಂಡಿದ್ದ ಈತನ ವಿರುದ್ಧ ಬೆಟಗೇರಿ, ಹುಬ್ಬಳ್ಳಿ ಸೇರಿ ವಿವಿಧೆಡೆ ಕಳ್ಳತನ ಪ್ರಕಣಗಳು ದಾಖಲಾಗಿವೆ. ಸೋಂಕು ದೃಢವಾಗಿದ್ದರೂ ತಪ್ಪಿಸಿಕೊಂಡು ಎಲ್ಲೆಂದರಲ್ಲಿ ಓಡಾಡುವ ಮೂಲಕ ಆತಂಕ ಸೃಷ್ಟಿಸಿದ್ದಾನೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts