More

    ಕೈಗಾರಿಕೆ ಸ್ಥಾಪನೆ ಕಲ್ಯಾಣ ನಾಡು ಸೈಡ್ಲೈನ್

    ಜಯತೀರ್ಥ ಪಾಟೀಲ ಕಲಬುರಗಿ
    ರಾಜ್ಯದ ನೂತನ ಕೈಗಾರಿಕಾ ನೀತಿಯಲ್ಲಿ ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶವನ್ನು ಸಂಪೂರ್ಣ ಕಡೆಗಣಿಸಿರುವುದು, ನೂತನ ನೀತಿ ಅಡಿ ವಿಶೇಷ ಹೂಡಿಕೆ ಪ್ರದೇಶ ಸ್ಥಾಪಿಸುವ ನಿಟ್ಟಿನಲ್ಲಿ ಈ ಪ್ರದೇಶವನ್ನು ಪರಿಗಣಿಸದಿರುವುದು ಕೈಗಾರಿಕೋದ್ಯಮಿಗಳ ಕೆಂಗಣ್ಣಿಗೆ ಗುರಿಯಾಗಿದೆ.
    ಮುಂಬಯಿ ಕರ್ನಾಟಕ ಪ್ರದೇಶದ ಧಾರವಾಡ, ಗದಗ ಮತ್ತು ಹಾವೇರಿಯಲ್ಲಿ ವಿಶೇಷ ಹೂಡಿಕೆಗೆ ಪರಿಗಣಿಸಿರುವ ಸರ್ಕಾರ ಕಲ್ಯಾಣ ಕರ್ನಾಟಕದ ಯಾವೊಂದು ಜಿಲ್ಲೆಯನ್ನೂ ಆಯ್ಕೆ ಮಾಡಿಲ್ಲ. ಕಲ್ಯಾಣ ಕರ್ನಾಟಕ ಪ್ರದೇಶವನ್ನು ಮುಂಬಯಿ ಕರ್ನಾಟಕ ವ್ಯಾಪ್ತಿಯಲ್ಲಿ ಸಮಾವೇಶಗೊಳಿಸುವುದಕ್ಕೆ ಮೊದಲಿನಿಂದಲೂ ಈ ಭಾಗದಲ್ಲಿ ಆಕ್ಷೇಪವಿದೆ. ಆದರೂ ಸರ್ಕಾರ ಸಮಾವೇಶಗೊಳಿಸಿ ವಲಯ-1ರಲ್ಲಿ ವರ್ಗಿಕರಿಸುವ ಮೂಲಕ ತಾರತಮ್ಯಕ್ಕೆ ಎಡೆಮಾಡಿಕೊಟ್ಟಿದೆ.
    ನೂತನ ಕೈಗಾರಿಕಾ ಟೌನ್ಶಿಪ್, ಕೈಗಾರಿಕಾ ಕಾರಿಡಾರ್, ಕೈಗಾರಿಕಾ ಕ್ಲಸ್ಟರ್ ಸ್ಥಾಪಿಸುವಾಗ ಕಲ್ಯಾಣ ಕರ್ನಾಟಕಕ್ಕೆ ಪ್ರಥಮ ಆದ್ಯತೆ ನೀಡಬೇಕೆಂಬ ಮನವಿಯನ್ನು ಸರ್ಕಾರ ಪುರಸ್ಕರಿಸಿಲ್ಲ. ನೆರೆಯ ತೆಲಂಗಾಣದಲ್ಲಿ 63 ಎಸ್ಇಝಡ್ಗಳನ್ನು ಹೊಂದಿದೆ. ವಿಶೇಷ ಹೂಡಿಕೆ ಪ್ರದೇಶಗಳನ್ನು ವಿಶೇಷ ಆರ್ಥಿಕ ವಲಯಗಳಿಗೆ ಸರಿ ಸಮಾನವಾಗುವಂತೆ ಸ್ಥಾಪಿಸಿದ್ದು, ಈ ಮಾದರಿ ಕರ್ನಾಟಕದಲ್ಲೂ ಅಳವಡಿಸಬೇಕಾಗಿದೆ.
    ನಿಮ್ಜ್ ನನೆಗುದಿಗೆ : ಕೇಂದ್ರ ಸರ್ಕಾರ ರಾಷ್ಟ್ರೀಯ ಕೈಗಾರಿಕಾ ಉತ್ಪಾದನಾ ವಲಯ (ನಿಮ್ಜ್) ಕರ್ನಾಟಕದ ತುಮಕೂರು ಮತ್ತು ಕಲಬುರಗಿಗೆ ಮಂಜೂರು ಮಾಡಿತ್ತು. ತುಮಕೂರಿನಲ್ಲಿ ಈ ವಲಯ ಸ್ಥಾಪನೆಯಾದರೆ ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನ ಕಲಬುರಗಿಯಲ್ಲಿ ಮಾತ್ರ ನನೆಗುದಿಗೆ ಬಿದ್ದಿದೆ. ಈ ಯೋಜನೆ ಸರಿದೂಗಿಸಲು ಈ ಭಾಗದಲ್ಲಿ ಕೈಗಾರಿಕಾ ಟೌನ್ಶಿಪ್, ಕೈಗಾರಿಕಾ ಕಾರಿಡಾರ್, ಕೈಗಾರಿಕಾ ಕ್ಲಸ್ಟರ್ಗಳನ್ನು ಕಲಬುರಗಿಯಲ್ಲಿ ಸ್ಥಾಪಿಸುವ ಮೂಲಕ ಈಗಾಗಲೇ ಆಗಿರುವ ಅನ್ಯಾಯ ಸರಿಪಡಿಸುವ ಪ್ರಯತ್ನ ಆಗಬೇಕಿದೆ.
    ಕಲ್ಯಾಣ ಕರ್ನಾಟಕದ ಕಲಬುರಗಿ ಜಿಲ್ಲೆಯಲ್ಲಿ ಸಿಮೆಂಟ್ ಮತ್ತು ಇತರೆ ಪರಿಸರ ಸ್ನೇಹಿ ಇಲ್ಲದ ಕೈಗಾರಿಕೆ ಹೊಂದಿದೆ. ಡಾ.ನಂಜುಂಡಪ್ಪ ಸಮಿತಿ ವರದಿ ಅನ್ವಯ ಪ್ರದೇಶದ ಅಸಮಾನತೆ ಹೋಗಲಾಡಿಸಲು ತಲಾ ಆದಾಯ 141 ರೂ. ಮತ್ತು ಆರ್ಥಿಕ ಮತ್ತು ಸಾಮಾಜಿಕ ಸ್ಥಾನಮಾನವು ಕೆಳಮಟ್ಟದಲ್ಲಿರುವುದರಿಂದ ಈ ಪ್ರದೇಶ ಆರ್ಥಿಕ ಅಭಿವೃದ್ಧಿ ಹೊಂದಲು ಪರಿಸರ ಸ್ನೇಹಿ ಕೈಗಾರಿಕೆ ಸ್ಥಾಪಿಸುವುದು ಅತ್ಯಂತ ಜರೂರಿ.
    ರಾಜಕೀಯ ಇಚ್ಛಾಸಕ್ತಿ ಕೊರತೆ: ರಾಜಕೀಯ ಇಚ್ಛಾಸಕ್ತಿ ಕೊರತೆಯಿಂದಾಗಿ ಈ ಪ್ರದೇಶಕ್ಕೆ ಪ್ರಮುಖ ಯೋಜನೆಗಳು ಬರುತ್ತಿಲ್ಲ. ಮುಂಬಯಿ ಕರ್ನಾಟಕದ ಜನಪ್ರತಿನಿಧಿಗಳ ಒತ್ತಡದ ಕಾರಣದಿಂದ ಮುಖ್ಯಮಂತ್ರಿ ಆ ಭಾಗಕ್ಕೆ ಭಾರಿ ಪ್ರಮಾಣದಲ್ಲಿ ಆದ್ಯತೆ ನೀಡುತ್ತಿರುವುದು ಸ್ಪಷ್ಟವಾಗಿದೆ. ಆದರೆ ಈ ಭಾಗದ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ಹೇರಿ ಕಲ್ಯಾಣ ಕರ್ನಾಟಕದ ಪ್ರಗತಿಗೆ ಪೂರಕವಾದ ಪ್ರಮುಖ ಯೋಜನೆಗಳನ್ನು ತರಲು ಹಿಂದೇಟು ಹಾಕುತ್ತಿರುವುದು ಇತ್ತೀಚಿನ ಬೆಳವಣಿಗೆಯಿಂದ ಸಾಬೀತಾಗಿದೆ.
    ಅಸಮಾಧಾನದ ಹೊಗೆ: ಈ ಮೊದಲಿನ ಕೈಗಾರಿಕಾ ನೀತಿಯಲ್ಲಿ ಕೈಗಾರಿಕೆ ವಲಯ-1 ಕಲ್ಯಾಣ ಕರ್ನಾಟಕದಲ್ಲಿದ್ದರೆ, ಇತರೆ ವಲಯ-2 ಮತ್ತು 3ರಲ್ಲಿ ಸೇರ್ಪಡೆಯಾಗಿದ್ದವು. ಆದರೆ ಇದನ್ನು ಡೈಲೂಟ್ ಮಾಡಿ ಮುಂಬಯಿ ಕರ್ನಾಟಕಕ್ಕೆ ಮೊದಲ ಆದ್ಯತೆ ನೀಡುವ ಮೂಲಕ ಈ ಭಾಗ ಪಕ್ಕಕ್ಕೆ ಸರಿಸಲಾಗಿದೆ. ಕಲ್ಯಾಣ ಕರ್ನಾಟಕದ ಬಗ್ಗೆ ಅಪಾರ ಕಾಳಜಿ ವ್ಯಕ್ತಪಡಿಸುತ್ತಿದ್ದ ಮುಖ್ಯಮಂತ್ರಿ ಯಡಿಯೂರಪ್ಪನವರು ಇದೀಗ ಯಾವುದೋ ಬಲವಾದ ಒತ್ತಡದಿಂದಾಗಿ ಈ ಭಾಗದ ಬಗ್ಗೆ ನಕಾರಾತ್ಮಕ ಧೋರಣೆ ತಳೆದಿರುವುದು ಈ ಭಾಗದ ಜನರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

    ಚೈನಾದಿಂದ ಹೊರನಡೆಯುತ್ತಿರುವ ಕೈಗಾರಿಕೆಗಳೊಂದಿಗೆ ಸಂಪರ್ಕ ಹೊಂದಿ ಹೂಡಿಕೆಗೆ ಮುಂದಾಗುವಂತೆ ಆಕರ್ಷಿಸಬೇಕು. ಕಲ್ಯಾಣ ಕರ್ನಾಟಕದ ಜನಪ್ರತಿನಿಧಿಗಳು ಈ ಭಾಗದ ಸರ್ವತೋಮುಖ ಬೆಳವಣಿಗೆ ಹಿನ್ನೆಲೆಯಲ್ಲಿ ವಿಶೇಷ ಯೋಜನೆ ತರುವಲ್ಲಿ ಮುತುವರ್ಜಿ ವಹಿಸಬೇಕು. ಹೊಸ ಕೈಗಾರಿಕಾ ನೀತಿ ಅಡಿ ಈ ಭಾಗದ ಸಂಪೂರ್ಣ ಕಡೆಗಣಿಸಲಾಗಿದ್ದು, ಈಗಲಾದರೂ ಆದ್ಯತೆ ನೀಡಲು ಸರ್ಕಾರ ಮುಂದಾಗಬೇಕು.
    ಅಮರನಾಥ ಪಾಟೀಲ್,
    ಅಧ್ಯಕ್ಷ, ಎಚ್ಕೆಸಿಸಿಐ ಕಲಬುರಗಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts