More

    ಕೈಗಾಗೆ ಬಂದ ಉತ್ತರಾಖಂಡದಿಂದ 7 ಜನ ತಂತ್ರಜ್ಞರು

    ಕಾರವಾರ: ಕೈಗಾ ಅಣು ವಿದ್ಯುತ್ ಸ್ಥಾವರವೊಂದರಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದು, ತುರ್ತು ರಿಪೇರಿಗೆ ಹೊರ ರಾಜ್ಯದ ತಂತ್ರಜ್ಞರನ್ನು ಕರೆಸಲಾಗಿದೆ. ಆದರೆ, ಕರೊನಾ ಲಾಕ್​ಡೌನ್ ನಿಯಮ ಮೀರಿ ಘಟಕದಲ್ಲಿ ಕಾರ್ಯನಿರ್ವಹಿಸಲು ಎನ್​ಪಿಸಿಐಎಲ್ ಹಾಗೂ ಸ್ಥಳೀಯ ಆಡಳಿತಗಳು ಅನುವು ಮಾಡಿಕೊಟ್ಟಿವೆ ಎಂದು ಆರೋಪಿಸಿ ಸ್ಥಳೀಯ ಮಲ್ಲಾಪುರ ಗ್ರಾಪಂನ ಅಧ್ಯಕ್ಷ ಹಾಗೂ ಸರ್ವ ಸದಸ್ಯರು ರಾಜೀನಾಮೆ ನೀಡಿದ್ದಾರೆ.

    ಅಧ್ಯಕ್ಷ ಚಂದ್ರಶೇಖರ ಬಾಂದೇಕರ್, ಉಪಾಧ್ಯಕ್ಷೆ ಸ್ವಾತಿ ಸಂತೋಷ ನಾಯ್ಕ ಹಾಗೂ 24 ಸದಸ್ಯರು ಶನಿವಾರ ಸಭೆ ನಡೆಸಿ ತೀರ್ಮಾನ ಕೈಗೊಂಡು ಪಿಡಿಒ ಮೂಲಕ ರಾಜೀನಾಮೆ ಪತ್ರವನ್ನು ಉಪವಿಭಾಗಾಧಿಕಾರಿಗೆ ಸಲ್ಲಿಸಿದ್ದಾರೆ. ಉಪವಿಭಾಗಾಧಿಕಾರಿಗಳು ಶೀಘ್ರದಲ್ಲೇ ರಾಜೀನಾಮೆಯನ್ನು ಅಂಗೀಕಾರ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

    ಆಗಿದ್ದೇನು..?: ಕೈಗಾ ಎರಡನೇ ಘಟಕದ ಟರ್ಬೆನ್​ನಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ಅದನ್ನು ಶೀಘ್ರ ಸರಿಪಡಿಸದೇ ಇದ್ದಲ್ಲಿ ಘಟಕದಲ್ಲಿ ವಿದ್ಯುತ್ ಉತ್ಪಾದನೆ ನಿಲ್ಲಿಸುವ ಪರಿಸ್ಥಿತಿ ಉಂಟಾಗಲಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಉತ್ತರಾಖಂಡದಿಂದ 7 ಜನ ತಂತ್ರಜ್ಞರು ಇಬ್ಬರು ಚಾಲಕರ ಜತೆ ಆಗಮಿಸಿದ್ದರು. ಏ. 30ರಂದು ಅವರು ಎನ್​ಪಿಸಿಐಎಲ್ ಅತಿಥಿಗೃಹಕ್ಕೆ ತೆರಳಿ ವಾಸ್ತವ್ಯ ಮಾಡಿದ್ದರು.

    ಹೊರ ರಾಜ್ಯದಿಂದ ಬಂದವರನ್ನು ಕರೊನಾ ಲಾಕ್​ಡೌನ್ ನಿಯಮದಂತೆ 14 ದಿನ ಕ್ವಾರಂಟೈನ್​ನಲ್ಲಿ ಇಡಬೇಕು ಎಂಬುದು ಗ್ರಾಪಂ ಆಗ್ರಹ. ಈ ಸಂಬಂಧ ಗ್ರಾಪಂ ಅಧ್ಯಕ್ಷರು, ಸದಸ್ಯರು ಸ್ಥಳೀಯ ಪೊಲೀಸರನ್ನು ಭೇಟಿಯಾಗಿ ಹೊರ ರಾಜ್ಯದಿಂದ ಆಗಮಿಸಿದ ಎಲ್ಲರನ್ನೂ ಕ್ವಾರಂಟೈನ್​ಗೆ ಒಳಪಡಿಸಬೇಕು ಎಂದು ಒತ್ತಾಯಿಸಿದ್ದರು. ಆದರೆ, ಪೊಲೀಸರು, ಜಿಪಂ ಸಿಇಒ ಸೇರಿ ಯಾರೂ ಗ್ರಾಪಂ ಆಗ್ರಹಕ್ಕೆ ಬೆಲೆ ಕೊಡುತ್ತಿಲ್ಲ. ಇದರಿಂದ ಸ್ಥಳೀಯ ಕಾರ್ವಿುಕರಿಗೆ ರೋಗ ಹರಡಿದರೆ ಏನು ಗತಿ ಎಂಬುದು ಗ್ರಾಮಸ್ಥರ ಆತಂಕ.

    ಲಾಕ್​ಡೌನ್ ಅವಧಿಯಲ್ಲಿ 5-6 ನೇ ಘಟಕ ಕಾಮಗಾರಿ ಪ್ರಾರಂಭ..?: ದೇಶವೇ ಲಾಕ್​ಡೌನ್ ಆಗಿರುವ ಸಮಯದಲ್ಲಿ ಕೈಗಾ ಅಣು ವಿದ್ಯುತ್ ಕೇಂದ್ರದ ಅಧಿಕಾರಿಗಳು ಕಾರ್ವಿುಕರ ಮೇಲೆ ಒತ್ತಡ ತಂದು 5-6ನೇ ಘಟಕದ ಕಾಮಗಾರಿಗಳನ್ನು ಮಾಡಿಸುತ್ತಿದ್ದಾರೆ ಎಂದು ಕೈಗಾ ಅಣು ವಿದ್ಯುತ್ ಸ್ಥಾವರ 5-6 ನೇ ಘಟಕ ವಿರೋಧಿ ಹೋರಾಟ ಸಮಿತಿ ಆರೋಪಿಸಿದೆ. ಹೊಸ ಘಟಕ ನಿರ್ವಣಕ್ಕೆ ಈಗಾಗಲೇ ಗುರುತು ಮಾಡಿರುವ ಸ್ಥಳದಲ್ಲಿ ಸುಮಾರು 300 ಗುತ್ತಿಗೆ ಕಾರ್ವಿುಕರನ್ನು ಸೇರಿಸಿ ನೂರಾರು ಮರಗಳ ಕಟಾವು ಕಾಮಗಾರಿ ಆರಂಭಿಸಲಾಗಿದೆ. ಕಾರ್ವಿುಕರನ್ನು ಕೆಲಸಕ್ಕೆ ಬಳಸಿಕೊಳ್ಳಲು ಮುಂಬೈ ಕೇಂದ್ರ ಕಚೇರಿಯಿಂದ ಜಿಲ್ಲಾಡಳಿತದ ಮೇಲೆ ಒತ್ತಡ ತರಲಾಗಿದೆ. ಯಾವುದೇ ಸಾಮಾಜಿಕ ಅಂತರ ಅಥವಾ ಭದ್ರತಾ ನಿಯಮಗಳನ್ನು ಪಾಲಿಸಲಾಗಿಲ್ಲ. ಇನ್ನು ಹೊಸ ಘಟಕ ನಿರ್ಮಾಣ ಸಂಬಂಧ ವಿಷಯ ರಾಷ್ಟ್ರೀಯ ಹಸಿರು ಪೀಠದಲ್ಲಿ ವಿಚಾರಣೆ ಹಂತದಲ್ಲಿದೆ. ಈ ನಿಟ್ಟಿನಲ್ಲಿ ಮರ ಕಟಾವಿಗೆ ಮುಂದಾಗಿರುವುದು ಸರಿಯಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೋರಾಟ ಸಮಿತಿ ಅಧ್ಯಕ್ಷ ಹಾಗೂ ಜಿಪಂ ಸದಸ್ಯ ಶಾಂತಾ ಬಾಂದೇಕರ್ ಒತ್ತಾಯಿಸಿದ್ದಾರೆ.

    ಕೈಗಾ ಘಟಕದ ನಿರ್ವಹಣೆಗೆ ಹೊರ ರಾಜ್ಯದಿಂದ ಬಂದವರನ್ನು ಕೇಂದ್ರ ಗೃಹ ಇಲಾಖೆಯ ನಿಯಮಾವಳಿಗಳಂತೆ ಫೀವರ್ ಕ್ಲಿನಿಕ್​ಗೆ ಕರೆದೊಯ್ದು ತಪಾಸಣೆಗೆ ಒಳಪಡಿಸಲಾಗಿದೆ. ಅವರಲ್ಲಿ ಯಾವುದೇ ರೋಗ ಲಕ್ಷಣ ಕಂಡುಬಂದಿಲ್ಲ. ಇದರಿಂದ ಕಾರ್ಯನಿರ್ವಹಣೆಗೆ ಅನುವು ಮಾಡಿಕೊಟ್ಟಿದ್ದೇವೆ. ಕರೊನಾ ಲಾಕ್​ಡೌನ್ ನಿಯಮಾವಳಿ ಮುರಿಯುವವರ ಬಗ್ಗೆ ಮಾಹಿತಿ ನೀಡಿ ಎಂದು ಗ್ರಾಪಂ ಟಾಸ್ಕ್​ಫೋರ್ಸ್ ಸಮಿತಿಗೆ ಹೇಳಲಾಗಿದೆ. ಯಾವುದೇ ಕ್ರಮ ವಹಿಸುವ ಅಧಿಕಾರ ಟಾಸ್ಕ್​ಫೋರ್ಸ್ ಸಮಿತಿಗೆ ಇಲ್ಲ. ಈ ಸಂಬಂಧ ಗ್ರಾಪಂ ಅಧ್ಯಕ್ಷರು, ಸದಸ್ಯರ ಜತೆ ಮಾತನಾಡಿ ತಿಳಿ ಹೇಳಿದ್ದೇನೆ. ಆದರೂ ರಾಜೀನಾಮೆ ನೀಡಲು ಮುಂದಾಗಿರುವುದು ಇಂಥ ಕಷ್ಟದ ಕಾಲದಲ್ಲಿ ಸರಿಯಾದ ಹೆಜ್ಜೆಯಲ್ಲ.
    | ಎಂ.ರೋಶನ್, ಜಿಪಂ ಸಿಇಒ

    ಪಂಚಾಯಿತಿ ಟಾಸ್ಕ್ ಫೋರ್ಸ್ ಸಮಿತಿಗೆ ಬೆಲೆ ಇಲ್ಲದಂತಾಗಿದೆ. ಹೊರಗಿನಿಂದ ಬಂದವರ ವಿರುದ್ಧ ಕ್ರಮ ವಹಿಸುವ ಬಗ್ಗೆ ಕೇಳಿಕೊಂಡಾಗ ಪಂಚಾಯಿತಿ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಸಮರ್ಪಕವಾಗಿ ನಡೆದುಕೊಂಡಿಲ್ಲ. ಜನ ಹಿತಕ್ಕಾಗಿ ಕೆಲಸ ಮಾಡಲು ಆಯ್ಕೆಯಾದ ನಾವು ಅದನ್ನು ಮಾಡಲು ಸಾಧ್ಯವಾಗದೇ ಇದ್ದ ಮೇಲೆ ಹುದ್ದೆಯಲ್ಲಿ ಇದ್ದು ಏನು ಪ್ರಯೋಜನ. ಅಧಿಕಾರಿಗಳ ವರ್ತನೆಯಿಂದ ಬೇಸತ್ತು ರಾಜೀನಾಮೆ ನೀಡುತ್ತಿದ್ದೇವೆ.
    | ಚಂದ್ರಶೇಖರ ಬಾಂದೇಕರ್, ಅಧ್ಯಕ್ಷ, ಮಲ್ಲಾಪುರ ಗ್ರಾಪಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts