More

    ಕೇಂದ್ರ ತಂಡದಿಂದ ಕೊಣ್ಣೂರಿನಲ್ಲಿ ನೆರೆ ಹಾನಿ ಪರಿಶೀಲನೆ

    ನರಗುಂದ: ಮಲಪ್ರಭಾ ನದಿ ಪ್ರವಾಹದಿಂದ ಹಾನಿಗೀಡಾಗಿರುವ ತಾಲೂಕಿನ ವಿವಿಧ ಗ್ರಾಮಗಳಿಗೆ ಕೇಂದ್ರ ನೆರೆ ಅಧ್ಯಯನ ತಂಡದ ಅಧಿಕಾರಿಗಳು ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಧೀನ ಕಾರ್ಯದರ್ಶಿ ವಿ.ಪಿ. ರಾಜವೇದಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಕಚೇರಿ ಅಧೀಕ್ಷಕ ಇಂಜಿನಿಯರ್ ಸದಾನಂದ ಬಾಬು ಅವರು ತಾಲೂಕಿನ ಕೊಣ್ಣೂರ, ವಾಸನ, ಲಖಮಾಪೂರ ಗ್ರಾಮಗಳಿಗೆ ಭೇಟಿ ನೀಡಿ, ನೆರೆಯಿಂದ ಉಂಟಾದ ಹಾನಿಯ ಪರಿಶೀಲನೆ ನಡೆಸಿದರು.

    ಕೊಣ್ಣೂರು ಗ್ರಾಮದಲ್ಲಿ ಮಲಪ್ರಭಾ ಸೇತುವೆ ವೀಕ್ಷಿಸಿದ ನಂತರ ಗ್ರಾಮದ ಭರತೇಶ ಬೋಗಾರ ಎಂಬ ರೈತನ 4 ಎಕರೆ ಜಮೀನಿನಲ್ಲಿ ಬೆಳೆದಿದ್ದ ಹತ್ತಿ ಬೆಳೆ ಹಾನಿಗೀಡಾಗಿರುವುದನ್ನು ಪರಿಶೀಲಿಸಿದರು. ವಾಸನ ಗ್ರಾಮದ ಹಳೇ ರಸ್ತೆ ಮೂಲಕ ತಾಲೂಕಿನ ಲಖಮಾಪೂರ ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಏಕೈಕ ರಸ್ತೆ ಹಾಗೂ ಸೇತುವೆ ವೀಕ್ಷಿಸಿದರು.

    ಈ ವೇಳೆ ಸ್ಥಳದಲ್ಲಿದ್ದ ಗ್ರಾಮಸ್ಥರು, ‘ನಮಗೆ ಪ್ರವಾಹದಿಂದ ಪದೇಪದೆ ಸಮಸ್ಯೆ ಉಂಟಾಗುತ್ತಿದೆ. ಗ್ರಾಮದ ರೈತರು ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಗೋವಿನಜೋಳ, ಹೆಸರು, ಹತ್ತಿ, ಕಬ್ಬು, ಪೇರಲ ಹಾಗೂ ಎಲ್ಲ ಬಗೆಯ ತರಕಾರಿ ಬೆಳೆಗೆ ಹಾನಿಯಾಗಿದೆ. ಪ್ರವಾಹ ಭೀತಿಯಿಂದ ಗ್ರಾಮದ ಯಾರೊಬ್ಬರೂ ನೆಮ್ಮದಿಯಿಂದ ನೆಲೆಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ನಮ್ಮ ಗ್ರಾಮವನ್ನು ಸುರಕ್ಷಿತ ಸ್ಥಳಕ್ಕೆ ಸಂಪೂರ್ಣ ಸ್ಥಳಾಂತರಿಸಿ ನಮಗೆ ಶಾಶ್ವತ ಪರಿಹಾರವನ್ನು ಕಲ್ಪಿಸಿಕೊಡಬೇಕು‘ ಎಂದು ಮನವಿ ಮಾಡಿದರು.

    ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಸುಂದರೇಶ ಬಾಬು, ಲಖಮಾಪೂರ ಗ್ರಾಮವನ್ನು ಸ್ಥಳಾಂತರಿಸಲು ಈಗಾಗಲೇ ಬೆಳ್ಳೇರಿ ಗ್ರಾಮದ ಸಮೀಪ 50 ಎಕರೆ ಜಮೀನನ್ನು ತಾಲೂಕು ಮತ್ತು ಜಿಲ್ಲಾಡಳಿತದಿಂದ ಗುರುತಿಸಲಾಗಿದೆ ಎಂದು ತಿಳಿಸಿದರು. ಇದರಿಂದ ಸಿಡಿಮಿಡಿಗೊಂಡ ಲಖಮಾಪೂರ ಗ್ರಾಮಸ್ಥರು, ‘ನಮ್ಮ ಊರನ್ನು ಬೆಳ್ಳೇರಿ ಪಕ್ಕದಲ್ಲಿ ಸ್ಥಳಾಂತರಿಸಿದರೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗಲಿದೆ. ಈ ಭಾಗದ ರೈತರು ತಮ್ಮ ಜಮೀನಿಗೆ ತೆರಳಬೇಕಾದರೆ 8 ಕಿಮೀ ಕ್ರಮಸಬೇಕಾಗುತ್ತದೆ. ಆದ್ದರಿಂದ ನಮ್ಮ ಗ್ರಾಮವನ್ನು ರಾಮದುರ್ಗ ರಸ್ತೆಗೆ ಹೊಂದಿಕೊಂಡಿರುವ ಯಾವುದಾದರೂ ಜಮೀನಿಗೆ ಸ್ಥಳಾಂತರಿಸಿ ಅನುಕೂಲ ಮಾಡಿ ಕೊಡಿ’ ಎಂದು ಒತ್ತಾಯಿಸಿದರು. ಜಿಲ್ಲಾಧಿಕಾರಿ ಸುಂದರೇಶ ಬಾಬು ಪ್ರತಿಕ್ರಿಯಿಸಿ, ಈ ಕುರಿತು ಬೆಳಗಾವಿ ಜಿಲ್ಲಾಧಿಕಾರಿಗಳೊಂದಿಗೆ ರ್ಚಚಿಸಿ ಮುಂದಿನ ಕಾರ್ಯ ಕೈಗೊಳ್ಳುವುದಾಗಿ ತಿಳಿಸಿದರು.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ, ಎಸಿ ರಾಯಪ್ಪ ಹುಣಸಗಿ, ತಹಸೀಲ್ದಾರ್ ಎ.ಎಚ್. ಮಹೇಂದ್ರ, ತಾಪಂ ಇಒ ಸಿ.ಆರ್. ಕುರ್ತಕೋಟಿ, ಡಿವೈಎಸ್ಪಿ ಶಿವಾನಂದ ಕಟಗಿ, ಜಿಪಂ ಅಧ್ಯಕ್ಷ ರಾಜುಗೌಡ ಕೆಂಚನಗೌಡ್ರ, ಎಪಿಎಂಸಿ ಅಧ್ಯಕ್ಷ ಶಂಕರಗೌಡ ಯಲ್ಲಪ್ಪಗೌಡ್ರ, ಬಾಬು ಹಿರೇಹೊಳಿ, ಟಿ.ಬಿ. ಶಿರಿಯಪ್ಪಗೌಡ್ರ, ಸಿ.ಆರ್. ಸಾಳೀಗೌಡ್ರ ಹಾಗೂ ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

    ರೂ. 158 ಕೋಟಿಯಷ್ಟು ಹಾನಿ: ಜಿಲ್ಲೆಯಲ್ಲಿ 363 ಮಿಮೀ ವಾಡಿಕೆ ಮಳೆಯಾಗಬೇಕಿತ್ತು. ಆದರೆ, 462 ಮಿಮೀ ಮಳೆ ಸುರಿದಿದೆ. ನರಗುಂದ ಮತ್ತು ರೋಣ ತಾಲೂಕಿನ 14 ಗ್ರಾಮಗಳು ಮಲಪ್ರಭಾ ಪ್ರವಾಹಕ್ಕೆ ತುತ್ತಾಗಿವೆ. ಸಿಡಿಲು ಬಡಿದು 17 ಜಾನುವಾರು ಸಾವನ್ನಪ್ಪಿದ್ದು, ಪರಿಹಾರ ನೀಡಲಾಗಿದೆ. ಅತಿವೃಷ್ಟಿಯಿಂದ 283 ಮನೆಗಳು ಹಾನಿಗೊಂಡಿವೆ. 1689.82 ಹೆಕ್ಟೇರ್ ಪ್ರದೇಶದ ತೋಟಗಾರಿಕೆ, 5911 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ವಿವಿಧ ಬೆಳೆಗಳಿಗೆ ಹಾನಿಯಾಗಿದೆ. ಜಂಟಿ ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದೆ. ಪ್ರವಾಹದಿಂದಾಗಿ ಜಿಲ್ಲೆಯ 631 ಕಿಮೀ ರಸ್ತೆ, 51 ಸೇತುವೆ, 12 ವಿದ್ಯುತ್ ಕಂಬ, 7 ಕುಡಿಯುವ ನೀರಿನ ಕಾಮಗಾರಿಗೆ ಹಾನಿಯಾಗಿದ್ದು, ಒಟ್ಟಾರೆಯಾಗಿ ಜಿಲ್ಲೆಯಲ್ಲಿ 158 ಕೋಟಿ ರೂಪಾಯಿಯಷ್ಟು ಅಂದಾಜು ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ಅವರು ಕೇಂದ್ರ ತಂಡಕ್ಕೆ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts