More

    ಕೇಂದ್ರದ ವಿರುದ್ಧ ಬೃಹತ್ ಪ್ರತಿಭಟನೆ

    ಕಲಬುರಗಿ: ಕೇಂದ್ರ ಸರ್ಕಾರ ಕಾರ್ಮಿಕ, ರೈತ ಮತ್ತು ಜನವಿರೋಧಿ ನೀತಿಗಳನ್ನು ಕೈಬಿಡಬೇಕು. ಬೆಲೆ ಏರಿಕೆ ನಿಯಂತ್ರಿಸಬೇಕು. ಜಿಡಿಪಿ ಕುಸಿತ ತಡೆಯಬೇಕು. ಆರ್ಥಿಕ ಸಂಕಷ್ಟ ಸರಿದೂಗಿಸಿ, ನಿರುದ್ಯೋಗ ಸಮಸ್ಯೆ ಹೋಗಲಾಡಿಸಬೇಕು, ಶ್ರಮಿಕರಿಗೆ ಕನಿಷ್ಠ 21000 ರೂ. ಕೂಲಿ ಕೊಡಬೇಕು, ಪೌರತ್ವ ತಿದ್ದುಪಡಿ ಕಾಯ್ದೆ ಕೈಬಿಡಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕ ಮತ್ತು ರೈತ ಸಂಘಟನೆಗಳು ಕರೆ ನೀಡಿದ್ದ ಅಖಿಲ ಭಾರತ ಮುಷ್ಕರಕ್ಕೆ ಬುಧವಾರ ನಗರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
    ಹೋರಾಟಗಾರರು, ಪೊಲೀಸರು ಮತ್ತು ಕೆಲ ವರ್ತಕರ ಜತೆಗಿನ ಸಣ್ಣ ಪುಟ್ಟ ಘರ್ಷಣೆ ಮತ್ತು ಮಾತಿನ ಚಕಿಮಕಿ ಹೊರತುಪಡಿಸಿದರೆ ಹೋರಾಟ ಶಾಂತಿಯುತವಾಗಿತ್ತು. ಬೆಳಗ್ಗೆ ಕೇಂದ್ರ ಬಸ್ ನಿಲ್ದಾಣದಿಂದ ಕೆಲ ಬಸ್ ಸಂಚಾರ ಆರಂಭಿಸಿದವು. ಈ ವೇಳೆ ಆಗಮಿಸಿದ ಹೋರಾಟಗಾರರು ಬಸ್ ಸಂಚಾರ ಬಂದ್ ಮಾಡಿಸಿದರು. ಮಧ್ಯಾಹ್ನ 12.30ರವರೆಗೆ ಸಂಚಾರ ಇರಲಿಲ್ಲ. ಇದರಿಂದ ಪ್ರಯಾಣಿಕರು, ಶಿಕ್ಷಕರು, ವಿದ್ಯಾರ್ಥಿಗಳು ಪರದಾಡಬೇಕಾಯಿತು.
    ಬಸ್ ನಿಲ್ದಾಣ, ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತ, ಜೇವರ್ಗಿ  ರಸ್ತೆ, ಆಳಂದ ರಸ್ತೆ, ಸೇಡಂ ರಸ್ತೆ ಇತರ ಕಡೆ ಅಂಗಡಿ-ಮುಂಗಟ್ಟು ತೆರೆದಿದ್ದರೆ, ರೋಜಾ, ಮುಸ್ಲಿಂ ಚೌಕ್, ಸಾಥ್ ಗುಂಬಜ್, ದರ್ಗಾ  ಪ್ರದೇಶಗಳಲ್ಲಿ ಬಂದ್ ಆಗಿದ್ದವು. ಏಷಿಯನ್ ಮಾಲ್ ಪೂರ್ಣ ಮುಚ್ಚಲಾಗಿತ್ತು. ಮೆರವಣಿಗೆ ವೇಳೆ ನೆಹರು ಗಂಜ್, ಕಿರಾಣಾ ಬಜಾರ್, ಸೂಪರ್ ಮಾರ್ಕೆಟ್​ , ಜಗತ್ ವೃತ್ತದಲ್ಲಿನ ಅಂಗಡಿಗಳು ಮುಚ್ಚಿದ್ದವು. ಆಟೋ ಓಡಾಟ ಸೇರಿ ಉಳಿದೆಲ್ಲ ಸೇವೆ ಎಂದಿನಂತೆ ಇತ್ತು. ರ್ಯಾಲಿಯಿಂದಾಗಿ ವಾಹನ ಸಂಚಾರ ಮಾರ್ಗಗಳನ್ನು ಪೊಲೀಸರು ಬದಲಿಸಿದ್ದರು.
    ಹೋರಾಟಕ್ಕೆ ಕರೆ ನೀಡಿದ್ದ ಎಲ್ಲ ಸಂಘಟನೆಗಳ ಮುಖಂಡರು ನೆಹರು ಗಂಜ್ನ ನಗರೇಶ್ವರ ಶಾಲೆ ಬಳಿ ಜಮಾಯಿಸಿದ ಬಳಿಕ ಮೆರವಣಿಗೆ ಮೂಲಕ ಜಗತ್ ವೃತ್ತಕ್ಕೆ ಆಗಮಿಸಿದರು. ಮೆರವಣಿಗೆಯುದ್ದಕ್ಕೂ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ವಿರುದ್ಧ ಘೋಷಣೆ ಮೊಳಗಿದವು. ಬಳಿಕ ಸುಮಾರು ಎರಡು ತಾಸು ಬಹಿರಂಗ ಸಭೆ ನಡೆಯಿತು. ಈ ವೇಳೆ ಮುಖಂಡರಾದ ಮಾರುತಿ ಮಾನ್ಪಡೆ, ಉಸ್ತಾದ್ ನಾಸೀರ್ ಹುಸೇನ್, ಮಹ್ಮದ್ ಅಜಗರ್ ಚುಲ್ಬುಲ್, ಮಜರ್ ಹುಸೇನ್ ಸೇರಿ ಅನೇಕರು ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ವಾಗ್ದಾಳಿ ನಡೆಸಿದರು. ಬಿಜೆಪಿ ಸರ್ಕಾರ ಪೊಲೀಸರನ್ನು ಬಳಸಿಕೊಂಡು ಹೋರಾಟ ಹತ್ತಿಕ್ಕುವ ಕುತಂತ್ರ ನಡೆಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಬೆಳಗ್ಗೆಯಿಂದಲೇ ಹೋರಾಟಗಾರರು ರಸ್ತೆಗಿಳಿದು ಪ್ರತಿಭನೆ ಶುರುವಿಟ್ಟರು. ಕೆಲವೆಡೆ ಟೈರ್ಗೆ ಬೆಂಕಿ ಹಚ್ಚಿ ಗುಂಪು-ಗುಂಪಾಗಿ ಪ್ರತಿಭಟನೆ ನಡೆಸಿದರು.
    ಮೂಕಪ್ರೇಕ್ಷಕರಾದ ಪೊಲೀಸರು
    ಮೆರವಣಿಗೆ ಕಾಲಕ್ಕೆ ಕೆಲ ಯುವಕರು ಸೂಪರ್ ಮಾರ್ಕೆಟ್ನಲ್ಲಿ ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸಿದರು. ಅಲ್ಲದೆ ಅಂಗಡಿ ಮುಂದೆ ಮಾರಾಟಕ್ಕೆ ಇಟ್ಟಿದ್ದ ಬಟ್ಟೆಗಳನ್ನು ಕಿತ್ತಿ ಬಿಸಾಡಿ ದುಂಡಾವರ್ತನೆ ಮಾಡಿದರು. ಇದೆಲ್ಲ ನೋಡುತ್ತಿದ್ದ ಪೊಲೀಸರು ಮಾತ್ರ ಮೂಕಪ್ರೇಕ್ಷಕರಾಗಿದ್ದರು. ಮೆರವಣಿಗೆಯಲ್ಲಿದ್ದ ಕೆಲ ಮುಸ್ಲಿಂ ಮುಖಂಡರು ಯುವಕರನ್ನು ಚದುರಿಸಿ ಕಳುಹಿಸಿಕೊಟ್ಟರು. ಕೇಂದ್ರ ಬಸ್ ನಿಲ್ದಾಣ ಎದುರು ಸಂಚಾರ ನಿಲ್ಲಿಸುವಂತೆ ಆಗ್ರಹಿಸಿ ಮಾರುತಿ ಮಾನ್ಪಡೆ ಇತರರು ಬಸ್ಗಳಿಗೆ ಅಡ್ಡಲಾಗಿ ಮಲಗಿದ್ದವರನ್ನು ಪೊಲೀಸರು ಎಳೆದು ಹೊರತಂದರು. ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಮೆರವಣಿಗೆ ಕಾಲಕ್ಕೆ ಶೆಟರ್ ತೆರದಿದ್ದ ಅಂಗಡಿಗಳ ಮೇಲೆ ನೀರಿನ ಪೌಚ್ಗಳನ್ನು ಎಸೆದಿದ್ದು ಕಂಡಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts