More

    ಕೆರೆ ಸೇರುತ್ತಿದ್ದ ಕೊಳಚೆಗೆ ತಡೆ

    ಹುಬ್ಬಳ್ಳಿ: ಇಲ್ಲಿಯ ತೋಳನಕೆರೆಗೆ ಸೇರುತ್ತಿದ್ದ ಒಳಚರಂಡಿ ಕೊಳಚೆಗೆ ಬಹುತೇಕ ತಡೆ ಒಡ್ಡಲಾಗಿದೆ, ಸಂಸ್ಕರಣೆ ಮಾಡಿದ ನೀರನ್ನು ಮಾತ್ರ ಕೆರೆಗೆ ಬಿಡಲಾಗುತ್ತಿದೆ, ಇದರಿಂದ ಮುಂಬರುವ ದಿನಗಳಲ್ಲಿ ಕೆರೆ ಉತ್ತಮ ಪ್ರವಾಸಿ ತಾಣವಾಗಿ ಹೊರಹೊಮ್ಮಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಭರವಸೆ ವ್ಯಕ್ತಪಡಿಸಿದರು.

    ಸ್ಮಾರ್ಟ್ ಸಿಟಿ ಯೋಜನೆಯಡಿ ಕೆರೆ ಪ್ರಾಂಗಣದಲ್ಲಿ ಸುಮಾರು 18 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗಿರುವ ಸೌಂದರೀಕರಣ ಕಾಮಗಾರಿಗಳನ್ನು ಸೋಮವಾರ ವೀಕ್ಷಣೆ ಮಾಡಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಸದ್ಯಕ್ಕಂತೂ ಕೊಳಚೆ ಬರುವುದು ನಿಂತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಮುಂದೆ ಮಳೆಗಾಲದಲ್ಲಿ ಸ್ಥಿತಿ ಹೇಗಿರಲಿದೆ ಎಂಬುದನ್ನು ಮತ್ತೊಮ್ಮೆ ಪರಿಶೀಲನೆ ಮಾಡಲಾಗುವುದು. ಒಟ್ಟಾರೆ ಸಂಪೂರ್ಣ ಕೆರೆಯನ್ನು ಕೊಳಚೆಮುಕ್ತ ಮಾಡುವ ಉದ್ದೇಶ ಹೊಂದಲಾಗಿದೆ ಎಂದರು.

    ಒಳಚರಂಡಿ ನೀರಿನ ಶುದ್ಧೀಕರಣಕ್ಕೆ ಘಟಕ ನಿರ್ವಿುಸಲಾಗಿದೆ. ದಿನ ಒಂದಕ್ಕೆ ದಶಲಕ್ಷ ಲೀಟರ್ ಶುದ್ಧೀಕರಿಸಿದ ನೀರನ್ನು ಕೆರೆಗೆ ಬಿಡಲಾಗುತ್ತದೆ. 4 ತಿಂಗಳಲ್ಲಿ ಕೆರೆಯ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಿ ಉದ್ಯಾನವನ್ನು ಸಾರ್ವಜನಿಕರ ಉಪಯೋಗಕ್ಕೆ ಲೋಕಾರ್ಪಣೆ ಮಾಡಲಾಗುವುದು ಎಂದರು.

    ಅಧಿಕಾರಿಗಳಿಂದ ಮಾಹಿತಿ: ಇದಕ್ಕೂ ಮೊದಲು ಉಣಕಲ್ಲ ಕೆರೆ ಹಾಗೂ ಸುತ್ತಮುತ್ತ ಕೈಗೊಂಡಿರುವ ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ಸಚಿವರು ವೀಕ್ಷಿಸಿದರು. ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

    ಉಣಕಲ್ಲ ಕೆರೆ ಕಾಮಗಾರಿ 18 ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಮೊದಲ ಹಂತದಲ್ಲಿ ಕೆರೆ ಸ್ವಚ್ಛಗೊಳಿಸುವುದರೊಂದಿಗೆ, ಬೆಳೆಯತ್ತಿದ್ದ ಕಳೆ ತೆಗೆಯಲಾಗುತ್ತಿದೆ. ಮುಂದಿನ ಹಂತದಲ್ಲಿ ಉದ್ಯಾನ, ಮಕ್ಕಳ ಆಟಿಕೆ, ಕೆರೆ ಸುತ್ತ ವಾಕಿಂಗ್ ಪಾತ್, ಬಯಲು ರಂಗ ಮಂದಿರ, ನೀರಿನ ಕಾರಂಜಿ, ಬೋಟಿಂಗ್, ಜಲಕ್ರೀಡೆಗಳ ಆಯೋಜನೆಗೂ ವ್ಯವಸ್ಥೆ ಮಾಡಲಾಗುತ್ತದೆ. ಈ ಹಿಂದೆ ತೋಳನ ಕೆರೆ ಅಭಿವೃದ್ಧಿಗೊಳಿಸಲಾಗಿತ್ತು. ಆದರೆ ನಿರ್ವಹಣೆ ಇಲ್ಲದೆ ಹಾಳಾಗಿದೆ. ಈ ಬಾರಿ ಗುತ್ತಿಗೆದಾರರಿಗೆ 5 ವರ್ಷಗಳ ನಿರ್ವಹಣೆಯ ಹೊಣೆ ನೀಡಲಾಗಿದೆ. ಏನಾದರೂ ಲೋಪ ಕಂಡು ಬಂದರೆ ಸಾರ್ವಜನಿಕರು ದೂರು ನೀಡಬೇಕು ಎಂದರು.

    ಸೊಸೈಟಿ ಸ್ಥಾಪನೆ: ಅವಳಿನಗರದಲ್ಲಿ ಸ್ಮಾರ್ಟ್ ಸಿಟಿ ಅಡಿ ಕೈಗೊಂಡಿರುವ ಕಾಮಗಾರಿಗಳು ಹಾಗೂ ಉದ್ಯಾನಗಳ ನಿರ್ವಹಣೆಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸೊಸೈಟಿ ರಚನೆ ಮಾಡಲಾಗುವುದು. ಪ್ರವೇಶ ಶುಲ್ಕ ಹಾಗೂ ಇತರೆ ಮನೋರಂಜನಾ ಚಟುವಟಿಕೆಗಳಿಗೆ ವಿಧಿಸುವ ಶುಲ್ಕದಿಂದ ಬರುವ ಹಣವನ್ನು ಬ್ಯಾಂಕ್​ನಲ್ಲಿ ಇರಿಸಿ ಉದ್ಯಾನಗಳ ನಿರ್ವಹಣೆಗೆ ಬಳಸಲಾಗುವುದು ಎಂದು ಸಚಿವ ಜೋಶಿ ತಿಳಿಸಿದರು. ಶಾಸಕ ಅರವಿಂದ ಬೆಲ್ಲದ, ಸ್ಮಾರ್ಟ್ ಸಿಟಿ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಶಕೀಲ್ ಅಹಮದ್, ವಿಶೇಷಾಧಿಕಾರಿ ಎಸ್.ಎಚ್. ನರೇಗಲ್ಲ, ಮುಖ್ಯ ಇಂಜಿನಿಯರ್ ಎಂ. ನಾರಾಯಣ ಸೇರಿದಂತೆ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts