More

    ಕೆಪಿಸಿ ಕಾರ್ಯಕ್ಕೆ ತೀವ್ರ ವಿರೋಧ

    ಕಾರವಾರ: ಪೂರ್ವ ಮಾಹಿತಿ ನೀಡದೆ ಭಾರಿ ಪ್ರಮಾಣದಲ್ಲಿ ಅಣೆಕಟ್ಟೆಯಿಂದ ನೀರು ಹರಿಸಿದ ಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿ) ಹಾಗೂ ಪ್ರವಾಹ ಎದುರಿಸಲು ಸಿದ್ಧತೆ ಮಾಡಿಕೊಳ್ಳದ ಜಿಲ್ಲಾಡಳಿತದ ವಿರುದ್ಧ ಕದ್ರಾ, ಮಲ್ಲಾಪುರ ಹಾಗೂ ಕಾಳಿ ನದಿ ಪಾತ್ರಗಳ ಗ್ರಾಮಗಳಲ್ಲಿ ವ್ಯಾಪಕ ಆಕ್ರೋಶ ಕೇಳಿ ಬಂದಿದೆ.

    2019ರಲ್ಲಿ ಭಾರಿ ಪ್ರವಾಹ ಸಂಭವಿಸಿತ್ತು. ರಾತ್ರೋರಾತ್ರಿ ಅಣೆಕಟ್ಟೆಯ ಎಲ್ಲ ಗೇಟ್​ಗಳನ್ನು ತೆರೆದು ಇದ್ದಕ್ಕಿದ್ದಂತೆ 2.30 ಲಕ್ಷ ಕ್ಯೂಸೆಕ್ ನೀರು ಹೊರಬಿಡಲಾಗಿತ್ತು. ಹಾಗಾಗಿ ಜನ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದರು. ಇನ್ನು ಮುಂದೆ ಮತ್ತದೇ ಪರಿಸ್ಥಿತಿ ಮರುಕಳಿಸಬಾರದು. ಜನರಿಗೆ ಮೊದಲೇ ಮುನ್ಸೂಚನೆ ನೀಡಬೇಕು. ಅಣೆಕಟ್ಟೆಗಳಿಂದ ಹಂತ ಹಂತವಾಗಿ ನೀರು ಬಿಡಬೇಕು ಎಂದು ಕೆಪಿಸಿಗೆ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ತಿಳಿಸಿದ್ದರು. ಆದರೂ ಈ ಸಲವೂ ಕೆಪಿಸಿ ಜನರ ಬಗ್ಗೆ ಕಾಳಜಿ ವಹಿಸದೇ ಒಮ್ಮೆಲೇ ಗೇಟ್ ತೆರೆದು ನೀರು ಬಿಟ್ಟು ತಮ್ಮ ಬದುಕನ್ನು ಮೂರಾಬಟ್ಟೆಯಾಗಿಸಿದೆ ಎಂಬುದು ಕದ್ರಾ, ಮಲ್ಲಾಪುರ ಜನರ ಆರೋಪ.

    ಮುನ್ಸೂಚನೆಯಂತೆ ಕದ್ರಾ ಅಣೆಕಟ್ಟೆಯಲ್ಲಿ ಗರಿಷ್ಠ 29 ರಿಂದ 30 ಮೀಟರ್​ವರೆಗೆ ನೀರಿನ ಮಟ್ಟವನ್ನು ಕಾಯ್ದುಕೊಳ್ಳಲಾಗಿತ್ತಾದರೂ ಕೊಡಸಳ್ಳಿಯಲ್ಲಿ ಹೆಚ್ಚು ನೀರು ಸಂಗ್ರಹಿಸಿಟ್ಟುಕೊಳ್ಳಲಾಗಿತ್ತು. ಜು. 22 ಹಾಗೂ 23 ರಂದು ಮಳೆ ಜಾಸ್ತಿಯಾದಾಗ ಅಲ್ಲಿಂದ ಒಮ್ಮೆಲೇ ನೀರು ಬಿಟ್ಟಿದ್ದರಿಂದ ಕದ್ರಾ ಅಣೆಕಟ್ಟೆ ಭರ್ತಿಯಾಯಿತು. ಹೀಗಾಗಿ ಕದ್ರಾ ಅಣೆಕಟ್ಟೆಯ ಎಲ್ಲ ಗೇಟ್​ಗಳನ್ನು ತೆರೆದು ಏಕಾಏಕಿ ನೀರು ಹರಿಬಿಟ್ಟಿದ್ದಾರೆ ಇದರಿಂದ ಇಡೀ ಊರೇ ಜಲಾಶಯವಾಗಿಬಿಟ್ಟಿತು ಎಂಬುದು ಕದ್ರಾ, ಮಲ್ಲಾಪುರ ಲೇಬರ್ ಕಾಲನಿ, ಕುರ್ನಿಪೇಟೆ, ಹಿಂದುವಾಡ ಜನರ ಆಕ್ಷೇಪ.

    ‘ನಾವು ಕೆಲಸಕ್ಕೆ ಹೋಗಿದ್ದೆವು. ಗುರುವಾರ 3 ಗಂಟೆಗೆ ಇದ್ದಕ್ಕಿದ್ದಂತೆ ನೀರು ಬರುತ್ತಿರುವುದಾಗಿ ಮನೆಯಲ್ಲಿದ್ದ ಮಗ ತಿಳಿಸಿದ. ಆದರೆ, ಬಂದು ನೋಡುವ ಹೊತ್ತಿಗೆ ಮನೆಯೊಳಗೆ ಅರ್ಧ ನೀರು ತುಂಬಿತ್ತು. ಒಳಗಿದ್ದ ಟಿವಿ, ಹೊಲಿಗೆ ಯಂತ್ರ ಸೇರಿ ಯಾವುದೇ ವಸ್ತುವೂ ಬಳಕೆಗೆ ಬರುವಂತಿಲ್ಲ. ಹಾಸಿಗೆ ಬಟ್ಟೆಗಳೂ ಇಲ್ಲ’ ಎಂದು ಪದ್ಮಾವತಿ ರಮೇಶ ಮಡಿವಾಳ ಕಣ್ಣೀರು ಹಾಕಿದರು. ‘ಅಣೆಕಟ್ಟೆಯಿಂದ ನೀರು ಬಿಡುವ ಬಗ್ಗೆ ಕನಿಷ್ಠ ಒಂದು ದಿನ ಮುಂಚೆಯೇ ಮಾಹಿತಿ ನೀಡಿದ್ದರೆ ನಮ್ಮ ಮನೆಯ ಅಗತ್ಯ ವಸ್ತುಗಳನ್ನಾದರೂ ಸುರಕ್ಷಿತ ಸ್ಥಳಕ್ಕೆ ಸಾಗಿಸುತ್ತಿದ್ದೆವು’ ಎಂದು ವೃದ್ಧೆ ರಂಗಾ ವಿಜಯನ್ ಗೋಳು ತೋಡಿಕೊಂಡರು.

    ದೋಣಿ ಕೊಡದ ಜಿಲ್ಲಾಡಳಿತ

    ಮಲ್ಲಾಪುರದ 100ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ. 20ಕ್ಕೂ ಅಧಿಕ ಮನೆಗಳು ಬಿದ್ದು ಹೋಗಿವೆ. ಉಟ್ಟ ಬಟ್ಟೆಯಲ್ಲಿ ಪರಿಹಾರ ಕೇಂದ್ರಗಳಿಗೆ ಓಡಿ ಬಂದವರ ಗೋಳು ಕೇಳುವವರಿಲ್ಲ. ಎರಡು ದಿನ ರಾತ್ರಿ ಪರಿಹಾರ ಕೇಂದ್ರಗಳಲ್ಲಿ ಚಳಿಯಲ್ಲಿ ನಿದ್ರೆಯಿಲ್ಲದೇ ಕಾಲ ಕಳೆದಿದ್ದಾರೆ. ಆದರೆ, ಒಬ್ಬ ನೋಡಲ್ ಅಧಿಕಾರಿ ಬಿಟ್ಟರೆ ಬೇರ್ಯಾವ ಹಿರಿಯ ಅಧಿಕಾರಿಗಳೂ ಇತ್ತ ಸುಳಿದಿಲ್ಲ. ಜನರ ಕಷ್ಟ ಆಲಿಸಿಲ್ಲ. ನಿಮಗೆ ಏನು ಬೇಕು ಕೇಳಿಲ್ಲ ಎಂಬುದು ಮಲ್ಲಾಪುರ ಗ್ರಾಮ ಪಂಚಾಯಿತಿಯ ಎಲ್ಲ ಸದಸ್ಯರ ದೂರು.

    ನೆರೆ ಪೂರ್ವ ತಯಾರಿ ಸಂಬಂಧ ಎರಡು ತಿಂಗಳ ಹಿಂದೆ ಸಭೆ ನಡೆಸಲಾಗಿತ್ತು. ಆಗ ನಾವು ಈ ಭಾಗದಲ್ಲಿ ಜನರ ರಕ್ಷಣೆಗೆ ಕೆಲ ಬೋಟ್ ಬೇಕು ಎಂದು ಕೇಳಿದ್ದೆವು. ಆದರೆ, ಒಂದು ದೋಣಿಯನ್ನೂ ಗ್ರಾಪಂಗೆ ನೀಡಿಲ್ಲ. ಅಂದು ಬೆಳಗ್ಗೆ 11ರಿಂದ ಮಧ್ಯಾಹ್ನ 3 ಗಂಟೆಯವರೆಗೆ ನಾವು ಬೋಟ್​ಗಾಗಿ ಕಾದಿದ್ದೇವೆ. ಜನರ ರಕ್ಷಣೆಗೆ ಪರದಾಡಿದ್ದೇವೆ. ನಂತರ ನೌಕಾನೆಲೆ ಬೋಟ್ ಬಂದರೂ ಅವರು ಆಹಾರ ಸಾಮಗ್ರಿ ಸಾಗಿಸಲು ಬಾರದ ಕಾರಣ ಪರಿಹಾರ ಕೇಂದ್ರಕ್ಕೆ ಬೇಕಾದ ಆಹಾರ ಸಾಮಗ್ರಿ ಸಂಗ್ರಹಿಸಲೂ ನಾವು ಕಷ್ಟಪಡಬೇಕಾಯಿತು ಎಂದು ಮಲ್ಲಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ತನುಜಾ ರಂಗಸ್ವಾಮಿ ತಮ್ಮ ಸಂಕಷ್ಟ ಹೇಳಿಕೊಂಡರು.

    ಕೆಪಿಸಿ ಸಮರ್ಪಕ ಮುನ್ಸೂಚನೆ ನೀಡದೇ ನೀರು ಬಿಟ್ಟಿದೆ. ಜಿಲ್ಲಾಡಳಿತದ ಅಧಿಕಾರಿಗಳು ಪ್ರವಾಹದಲ್ಲಿ ಜನರ ರಕ್ಷಣೆಗೆ ಬೇಕಾದ ಕನಿಷ್ಠ ಸೌಕರ್ಯ ನೀಡಿಲ್ಲ. ನೆರೆ ಇಳಿದ ನಂತರವೂ ಇಲ್ಲಿನ ಸಮಸ್ಯೆ ಆಲಿಸಲು ಬಂದಿಲ್ಲ. ಜನ ನಮ್ಮ ಬಳಿ ಕೇಳುತ್ತಿದ್ದಾರೆ. ಅವರಿಗೆ ಉತ್ತರ ಕೊಡಲಾಗದ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ನಾವಿದ್ದೇವೆ.

    | ತನುಜಾ ರಂಗಸ್ವಾಮಿ ಗ್ರಾಪಂ ಅಧ್ಯಕ್ಷೆ, ಮಲ್ಲಾಪುರ

    ನಾನು ಕಾಳಿ ಜಲವಿದ್ಯುತ್ ಯೋಜನೆಯ ನಿರಾಶ್ರಿತ. ಕೆಪಿಸಿ ಕೊಟ್ಟ ಜಾಗ ಎಂದು ಕದ್ರಾ ಗಾಂಧಿನಗರದಲ್ಲಿ ಬಂದು ಉಳಿದಿದ್ದೇನೆ. ಶುಕ್ರವಾರ ನೀರು ಬಿಡುವುದಾಗಿ ಎಚ್ಚರಿಕೆ ನೀಡಲಾಯಿತು. ನಾನು ಹಾಗೂ ನನ್ನ ಮನೆಯವರು ಅಗತ್ಯ ಸಾಮಗ್ರಿಗಳನ್ನು ಸುರಕ್ಷಿತ ಸ್ಥಳಕ್ಕೆ ಇಡುತ್ತಿದ್ದೆವು. ಅಷ್ಟರಲ್ಲಿ ಮನೆಯ ಸುತ್ತ ನೀರು ಆವರಿಸಿತು. ಮೇಲ್ಛಾವಣಿ ಮೇಲೆ ನಿಂತುಕೊಂಡಿದ್ದೆವು. ನೌಕಾ ಅಧಿಕಾರಿಗಳು ಬಂದು ನಮ್ಮನ್ನು ರಕ್ಷಿಸಿದ್ದಾರೆ. ಪ್ರತಿ ವರ್ಷ ಇದೇ ಪರಿಸ್ಥಿತಿ ಆಗುತ್ತಿದೆ. ಅಧಿಕಾರಿಗಳು ಪರಿಹಾರ ಕೊಡುವ ಸುಳ್ಳು ಭರವಸೆ ನೀಡುತ್ತಾರೆ.

    | ಆನಂದ್ ಗಾಂಧಿನಗರ ನಿವಾಸಿ, ಕದ್ರಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts