More

    ಕೃಷಿ ವಿದ್ಯೆ ಕಲಿಯದಿದ್ದರೆ ಮುಂದಿದೆ ಕಷ್ಟ, ರೈತ ಮುಖಂಡ ಚಂದ್ರಾರೆಡ್ಡಿ ಎಚ್ಚರಿಕೆ, ಆನೇಕಲ್ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರೆ

    ಸರ್ಜಾಪುರ: ಯುವ ಸಮುದಾಯ ಎಲ್ಲ ರೀತಿಯ ವಿದ್ಯೆ ಕಲಿಯಲು ಮುಂದಾಗುತ್ತಿದೆ. ಆದರೆ ಕೃಷಿ ವಿದ್ಯೆ ಕಲಿಯಲು ನಿರಾಸಕ್ತಿ ತೋರುತ್ತಿದೆ. ಹಸಿವು ನೀಗಿಸುವ ವಿದ್ಯೆ ಕಲಿಯುವ ನಿರಾಸಕ್ತಿ ಹೀಗೆಯೇ ಮುಂದುವರಿದರೆ ಮುಂದೆ ಅಪಾಯ ಕಾದಿದೆ ಎಂದು ರೈತ ಮುಖಂಡ ಚಂದ್ರಾರೆಡ್ಡಿ ಎಚ್ಚರಿಕೆ ನೀಡಿದರು.

    ಬೆಂಗಳೂರು ಹೊರವಲಯದ ದೊಮ್ಮಸಂದ್ರದಲ್ಲಿ ಆಯೋಜಿಸಿದ್ದ ಆನೇಕಲ್ ತಾಲೂಕು 3ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾನುವಾರ ಏರ್ಪಡಿಸಿದ್ದ ಸಮಾರೋಪದ ರೈತ ಗೋಷ್ಠಿಯಲ್ಲಿ ಮಾತನಾಡಿದರು.

    ಕೃಷಿಯಲ್ಲಿ ಸಾಕಷ್ಟು ಲಾಭವಿದೆ. ಆದರೂ ಪ್ರತಿಭಾವಂತ ಯುವಕರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಬಹುರಾಷ್ಟ್ರೀಯ ಕಂಪನಿಗಳ ಜೀತದಾಳುಗಳಾಗುತ್ತಿದ್ದಾರೆ. ಇದರಿಂದ ನಮ್ಮಲ್ಲಿರುವ ಉತ್ತಮ ಜ್ಞಾನ ಕೃಷಿಗೆ ಸಿಗುತ್ತಿಲ್ಲ. ನಮ್ಮ ಶ್ರಮ ದೇಶದ ಬದಲಿಗೆ ವಿದೇಶದ ಯಾವುದೋ ಕಂಪನಿಯನ್ನು ಉದ್ಧರಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

    ಕೃಷಿ ಕಾಯ್ದೆಗೆ ವಿರೋಧ: ದೇಶದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರಗಳು ಅನುಷ್ಠಾನಗೊಳಿಸುತ್ತಿರುವ ಕಾಯ್ದೆಗಳಿಂದ ಕಾರ್ಪೋರೇಟ್ ವಲಯಗಳ ಬೆಳವಣಿಗೆಗೆ ಸಹಕಾರಿಯಾಗಿವೆ. ರೈತಾಪಿ ಕುಟುಂಬಗಳು ಸಾಲದ ಶೂಲಕ್ಕೆ ಸಿಲುಕಿವೆ ಎಂದು ಚಂದ್ರಾರೆಡ್ಡಿ ಹೇಳಿದರು.
    ರೈತಾಪಿ ವರ್ಗದ ಮೇಲೆ ಅನುಕಂಪವಿರುವ ಚುನಾಯಿತ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ರೈತರು ಮುಂದಾಗಬೇಕು. ದೇಶದಲ್ಲಿ ಕೃಷಿ ಹಾಗೂ ಕೃಷಿಕನನ್ನು ಉಳಿಸಿಕೊಂಡಲ್ಲಿ ಭಾರತವಷ್ಟೇ ಅಲ್ಲ, ವಿಶ್ವದ ಅರ್ಧದಷ್ಟು ರಾಷ್ಟ್ರಗಳಿಗೆ ಆಹಾರ ದೊರೆಯುತ್ತದೆ. ನಮ್ಮ ಶಕ್ತಿ ಬಳಸಿಕೊಳ್ಳಲಾಗದ ಸರ್ಕಾರಗಳು ನಮ್ಮನ್ನು ಹೇಡಿಗಳನ್ನಾಗಿ ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಸಮ್ಮೇಳನಧ್ಯಕ್ಷ ತಾ.ನಂ.ಕುಮಾರಸ್ವಾಮಿ, ಆನೇಕಲ್ ತಾಲೂಕು ಕಸಾಪ ಅಧ್ಯಕ್ಷ ನವೀನ್ ಬಾಬು, ಸಾಹಿತಿ ಜಗನ್ನಾಥರಾವ್ ಬಹುಳೆ, ಯುವ ಬರಹಗಾರ ಮಹೇಶ್ ಊಗಿನಹಳ್ಳಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಆನೇಕಲ್ ತಾಲೂಕು ಅಧ್ಯಕ್ಷ ಗೋಪಾಲ್ ರೆಡ್ಡಿ, ಬಿಜೆಪಿ ಮುಖಂಡ ವಿರೂಪಾಕ್ಷ ಆರಾಧ್ಯ, ಗ್ರಾಪಂ ಸದಸ್ಯೆ ಆರತಿ ಜವರೇ ಗೌಡ, ರಾಜ್ಯ ಕೃಷಿ ಪ್ರಶಸ್ತಿ ವಿಜೇತ ಎ. ಮಹೇಶ್, ರೈತ ಮುಖಂಡ ಎಲ್.ಎನ್. ಮಂಜುನಾಥ್ ರೆಡ್ಡಿ, ವಕೀಲ ಪುರುಷೋತ್ತಮ, ಗಾಯಕ ರಾಜೇಶ್, ಪ್ರೇಮ ಕುಮಾರಿ ಮತ್ತಿತರರಿದ್ದರು.

    ಆನೇಕಲ್ ಇತಿಹಾಸವನ್ನು ಸಂರಕ್ಷಿಸಿ: ಕಾಲ ಬದಲಾದಂತೆ ಆನೇಕಲ್ ತಾಲೂಕು ಕೇಂದ್ರವಾಗಿ ಪರಿವರ್ತನೆಗೊಂಡಿದೆ. 1870ರವರೆಗೂ ಸರ್ಜಾಪುರ ತಾಲೂಕು ಕೇಂದ್ರವಾಗಿತ್ತು ಎಂದು ಇತಿಹಾಸ ಸಂಶೋಧಕ ಡಾ. ಪಿ.ವಿ. ಕೃಷ್ಣಮೂರ್ತಿ ತಿಳಿಸಿದರು.

    ಇತಿಹಾಸ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಜಾಪುರ ಮತ್ತು ಯಮರೆ ಗ್ರಾಮಗ ಪ್ರಾಚೀನ ಹಿನ್ನೆಲೆ ಉಳ್ಳ ಗ್ರಾಮಗಳಾಗಿವೆ. ಈ ಭಾಗಗಳಲ್ಲಿ ಐತಿಹಾಸಿಕ ಅವಶೇಷಗಳು ಲಭಿಸಿವೆ. ಆದ್ದರಿಂದ, ಈ ಪ್ರದೇಶದ ಇತಿಹಾಸವನ್ನು ಸಂರಕ್ಷಿಸುವ ಕೆಲಸ ಆಗಬೇಕಿದೆ ಎಂದರು.
    ಸರ್ಜಾಪುರ, ಯಮರೆ ಹಾಗೂ ಹೊಸೂರು ಪ್ರದೇಶಗಳಲ್ಲಿ ಮುಮ್ಮಡಿ ತಮ್ಮೇಗೌಡ ಎಂಬಾತ ಆಡಳಿತ ನಡೆಸಿದ್ದ. ಯಮರೆಗೆ ಯಮರೆ ನಾಡು ಎಂಬ ಹೆಸರೂ ಇತ್ತು. ಈ ಭಾಗದಲ್ಲಿ ಪ್ರಮುಖ ಅರಸನಾದ ಬಿಲ್ಗಾಹ್‌ಗೊಂಡ ಎಂಬ ಅರಸು ಇದ್ದ. ಆದ್ದರಿಂದ ಇದನ್ನು ಬಿಲ್ವಾಗೊಂಡನಹಳ್ಳಿ ಎಂದೂ ಕರೆಯಲಾಗುತ್ತಿತ್ತು ಎಂದು ವಿವರಿಸಿದರು.

    ಆನೇಕಲ್ ಪ್ರದೇಶ ಹೊಯ್ಸಳರು, ಗಂಗರ ಆಳ್ವಿಕೆಗೆ ಒಳಪಟ್ಟಿತ್ತು. ಸುಗಟೂರು ಅರಸರು 1638ರಲ್ಲಿ ಅನೇಕಲ್ ಪಟ್ಟಣದ ಚನ್ನಕೇಶವ ದೇವಾಲಯ, ಮಲ್ಲಿಕಾರ್ಜುನ ದೇವಾಲಯ ಸೇರಿ, ಚಿಕ್ಕಕೆರೆ, ಹೊಸಕೆರೆ, ನಿರ್ಮಿಸಿದ್ದರು. ಬನ್ನೇರುಘಟ್ಟ ಚಂಪಕಧಾಮ ದೇವಸ್ಥಾನದ ಕೂಡ ಐತಿಹಾಸಿ ಹಿನ್ನೆಲೆಯುಳ್ಳದ್ದಾಗಿದೆ ಎಂದರು.

    ಗಡಿ ಭಾಗದಲ್ಲಿ ಹಲವು ಶಾಸನಗಳು: ತಮಿಳುನಾಡಿನ ಗಡಿ ಪ್ರದೇಶದಲ್ಲಿ ಹಲವು ಶಾಸನಗಳು ಪತ್ತೆಯಾಗಿವೆ. ಬೊಮ್ಮಸಂದ್ರದಲ್ಲಿ 1200ಕ್ಕೂ ಹೆಚ್ಚು ವರ್ಷಗಳ ಹಿನ್ನೆಲೆಯುಳ್ಳ ಶಿವಲಿಂಗವು ಇದೆ. ಗಂಗರ ಕಾಲದ ದೇವಾಲಯ ಶಾಸನ ಹಾಗೂ ಬೇಗೂರು ನಾಗೇಶ್ವರ ದೇವಸ್ಥಾನ ಶಾನಗಳು ಸಿಕ್ಕಿದ್ದು, ಆನೇಕಲ್ ಇತಿಹಾಸಕ್ಕೆ ಹೆಚ್ಚಿನ ಮಹತ್ವ ಇದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಹಿರಿಯ ಶಾಸನ ತಜ್ಞ ಡಾ.ದೇವರಕೊಂಡಾರೆಡ್ಡಿ ಹೇಳಿದರು.

    ಕವನ ವಾಚನ: ಕವಿಗೋಷ್ಠಿಯಲ್ಲಿ ವಿದ್ಯಾರ್ಥಿ ಕವಿ ಕೆ.ವಿ. ಹರೀಶ್, ಭಾವನಾ, ಮುನಿರಾಜ್, ಶ್ರವಂತಿ ಸಿರಿ, ಮಮತಾ, ಮೋಹನ್, ದಿವ್ಯಾ, ಕೃಷ್ಣ, ಮದನ್ ರಾಜ್ ಸೇರಿ ಹತ್ತುಕ್ಕೂ ಹೆಚ್ಚು ಜನರು ಕವಿತೆಗಳನ್ನು ವಾಚಿಸಿದರು.

    ಆದರ್ಶ ದಂಪತಿ ಪ್ರಶಸ್ತಿ ಪ್ರದಾನ: 15ಕ್ಕೂ ಹೆಚ್ಚು ಜೋಡಿಗೆ ಕನ್ನಡ ಆದರ್ಶ ದಂಪತಿ ಪ್ರಶಸ್ತಿ ಹಾಗೂ 100ಕ್ಕೂ ಹೆಚ್ಚು ಜನರಿಗೆ ಕನ್ನಡ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

    ಆನೇಕಲ್ ಗಡಿಭಾಗವಾಗಿದೆ. ಪ್ರತಿವರ್ಷವೂ ತಾಲೂಕು ಕೇಂದ್ರ ಹಾಗೂ ಗಡಿ ಪ್ರದೇಶದಲ್ಲಿ ನಾಡು-ನುಡಿ, ಸಾಹಿತ್ಯ, ಸಂಸ್ಕೃತಿ, ಪರಂಪರೆ, ಆಚಾರ-ವಿಚಾರ ಹಾಗೂ ಕನ್ನಡವನ್ನು ಕಟ್ಟುವಂತಹ ಕಾಯಕವನ್ನು ಕನ್ನಡ ಸಾಹಿತ್ಯ ಪರಿಷತ್ ಮಾಡುತ್ತಾ ಬಂರುತ್ತಿದೆ. ಇದು ಶ್ಲಾಘನೀಯ.
    ಬಿ. ಶಿವಣ್ಣ, ಶಾಸಕ

    ಸಮ್ಮೇಳನ ನಿರ್ಣಯ: ವಲಸೆ ಬಂದು ವಾಸಿಸುತ್ತಿರುವ ಅನ್ಯ ಭಾಷಿಕರಿಗೆ ಕನ್ನಡ ಕಲಿಸಲು ಕಲಿಕಾ ಕೇಂದ್ರ ಸ್ಥಾಪನೆ ಮಾಡುವುದು, ತಮಿಳುನಾಡಿನಲ್ಲಿರುವ ತಳಿ, ಗುಮ್ಮಳಾಪುರ, ಹೊಸೂರು, ಡೆಂಕಣಿಕೋಟೆ ಹಾಗೂ ಕೃಷ್ಣಗಿರಿ ಜಿಲ್ಲೆಗಳಲ್ಲಿ ಇರುವ ಕನ್ನಡ ಶಾಲೆಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಕನ್ನಡ ಶಿಕ್ಷಕರಿಗೆ ಪ್ರೋತ್ಸಾಹ ನೀಡುವುದು, ತಾಲೂಕಿನಲ್ಲಿ ನೆಲೆಸಿರುವ ಅಂತಾರಾಷ್ಟ್ರೀಯ ಶಾಲೆಗಳಲ್ಲಿ ನವಂಬರ್ 1ರಂದು ಕನ್ನಡ ರಾಜ್ಯೋತ್ಸವವನ್ನು ಕಡ್ಡಾಯವಾಗಿ ಆಚರಿಸುವ ಜತೆಗೆ ಕನ್ನಡ ಧ್ವಜ ಹಾರಿಸಲು ನಿರ್ಣಯ ಕೈಗೊಳ್ಳಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts