More

    ತುರ್ತು ದುರಸ್ತಿಗೆ ಕಾಯುತ್ತಿವೆ ವಸತಿಗೃಹ ಸರ್ಜಾಪುರ ಆರೋಗ್ಯ ಕೆಂದ್ರದಲ್ಲಿ ಅವ್ಯವಸ್ಥೆ

    ವಿ.ಚಕ್ರವರ್ತಿ ಸರ್ಜಾಪುರ
    ಆನೇಕಲ್ ತಾಲೂಕಿನ ದೊಡ್ಡ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಒಂದಾದ ಸರ್ಜಾಪುರದ ಆರೋಗ್ಯಾಧಿಕಾರಿ ಹಾಗೂ ಶುಶ್ರೂಷಕಿಯರ ವಸತಿ ಗೃಹಗಳು ತುರ್ತು ದುರಸ್ತಿಗೆ ಕಾಯುತ್ತಿವೆ.


    ಆರೋಗ್ಯ ಕೇಂದ್ರದಲ್ಲಿ ಆರೋಗ್ಯಾಧಿಕಾರಿಗಳು, ಆಂಬುಲೆನ್ಸ್ ಚಾಲಕ ಮತ್ತು ಸಹಾಯಕ ಸಿಬ್ಬಂದಿ ವಾಸಕ್ಕಾಗಿ 5 ವಸತಿಗೃಹಗಳಿದ್ದು, ವಾಸಯೋಗ್ಯವಲ್ಲದ ಸ್ಥಿಯಲ್ಲಿವೆ. ಛಾವಣಿ ಉದುರುತ್ತಿದೆ, ವಿದ್ಯುತ್ ತಂತಿಗಳು ಜೋತು ಬಿದ್ದಿವೆ, ಸಿಮೆಂಟ್ ಪದರ ಉದುರಿ ಕಬ್ಬಿಣ ಕಾಣುತ್ತಿವೆ, ಮಳೆ ಬಂದರೆ ನಿವಾಸಿಗಳು ರಾತ್ರಿಪೂರ್ತಿ ಜಾಗರಣೆ ಮಾಡಬೇಕಾದ ಪರಿಸ್ಥಿತಿಯಿದೆ. ಆಸ್ಪತ್ರೆ ಹಿಂಭಾಗ ಹಾಗೂ ಎಡಭಾಗದಲ್ಲಿ ಆಳೆತ್ತರಕ್ಕೆ ಗಿಡ-ಗಂಟಿ ಬೆಳೆದಿದ್ದು, ವಿಷಜಂತುಗಳ ಆಶ್ರಯ ತಾಣವಾಗಿದೆ. ಸಮುಚ್ಛಯದ ಆವರಣದಲ್ಲಿ ಕೆಲವು ಕಡೆ ಆಸ್ಪತ್ರೆ ತ್ಯಾಜ್ಯ ಸುಟ್ಟಿದ್ದು, ಚಿಕಿತ್ಸೆಗಾಗಿ ಬರುವ ರೋಗಿಗಳು ದುರ್ವಾಸನೆಗೆ ಮೂಗು ಮುಚ್ಚಿಕೊಂಡು ಓಡಾಡಬೇಕಾಗಿದೆ.

    ಕೊಂಪೆಯಾದ ವೈದ್ಯಾಧಿಕಾರಿ ವಸತಿಗೃಹ: ಆರೋಗ್ಯ ಕೇಂದ್ರದ ಆವರಣದಲ್ಲಿ ವೈದ್ಯಾಧಿಕಾರಿಗಳಿಗೆ ವಸತಿಗೃಹ ಮೀಸಲಿರಿಸಿದ್ದು, ವೈದ್ಯಾಧಿಕಾರಿಗಳು ಅಲ್ಲಿ ವಾಸ ಮಾಡದ ಪರಿಣಾಮ ಪಾಳುಬಿದ್ದ ಕೊಂಪೆಯಾಗಿದೆ.
    ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಅಂದಾಜು 40*100 ಅಡಿ ಜಾಗದಲ್ಲಿ ಪೆನ್ಸಿಂಗ್ ಮಾದರಿಯಲ್ಲಿ ಜಾಲರಿ ಬಟ್ಟೆಯನ್ನು ಕಾಂಪೌಂಡ್ ಸುತ್ತ ಹಾಕಿ, ಸಾಮಾನ್ಯ ಜನರಿಗೆ ತಿಳಿಯದಂತೆ ಇಲ್ಲಿನ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿ ನಾಟಿ ಕೋಳಿ ಸಾಕಣೆ ಮಾಡುತ್ತಿದ್ದಾರೆ.

    ನರ್ಸ್ ಮತ್ತು ಸಹಾಯಕಿಯರಿಂದ ಹೆರಿಗೆ: ರಾತ್ರಿ ವೇಳೆ ಪ್ರಸವ ವೇದನೆಯಿಂದ ಆಸ್ಪತ್ರೆಗೆ ಗರ್ಭಿಣಿಯರು ಬಂದರೆ ವೈದ್ಯಾಧಿಕಾರಿಗಳ ಬದಲು ಇಲ್ಲಿನ ನರ್ಸ್ ಮತ್ತು ಸಹಾಯಕಿಯರು ಹೆರಿಗೆ ಮಾಡಿಸುವುದು ಸಾಮಾನ್ಯವಾಗಿದೆ. ಕೆಲವು ಪ್ರಕರಣದಲ್ಲಿ ನವಜಾತ ಶಿಶುಗಳು ಮೃತಪಟ್ಟಿರುವ ಸಾಕಷ್ಟು ನಿದರ್ಶನಗಳಿವೆ ಎನ್ನುತ್ತಾರೆ ಸ್ಥಳೀಯರು.

    ಶೌಚಗೃಹ ಮರೀಚಿಕೆ: ಆರೋಗ್ಯ ಕೇಂದ್ರಕ್ಕೆ ಬರುವ ರೋಗಿಗಳಿಗಾಗಿ ಇತ್ತೀಚೆಗೆ ಶೌಚಗೃಹ ನಿರ್ಮಿಸಲಾಗಿದೆ. ಆದರೆ ನಿತ್ಯ ಬೀಗ ಹಾಕಿದ ಸ್ಥಿತಿಯಲ್ಲಿರುವುದರಿಂದ ರೋಗಿಗಳ ಬಳಕೆಗೆ ಮರೀಚಿಕೆಯಾಗಿದೆ. ಪರಿಣಾಮ ಬಯಲಿನಲ್ಲೇ ಮೂತ್ರ ವಿಸರ್ಜನೆ ಮಾಡುವಂತಾಗಿದೆ.


    ಪ್ರತಿ ತಿಂಗಳು ಗರ್ಭಿಣಿಯರು ತಪಾಸಣೆಗೆ ಬೆಳಗ್ಗೆ ಒಂಬತ್ತು ಗಂಟೆಗೆ ಆರೋಗ್ಯ ಕೇಂದ್ರಕ್ಕೆ ಆಗಮಿಸುತ್ತಾರೆ. ಆದರೆ ವೈದ್ಯಾಧಿಕಾರಿ 12 ಗಂಟೆಯಾದರೂ ಪತ್ತೆ ಇರುವುದಿಲ್ಲ. ಕೆಲವೊಮ್ಮೆ ವೈದ್ಯರಿಗಾಗಿ ಕಾದು ಮನೆಗೆ ಹಿಂದಿರುಗಿದ್ದೇವೆ. ಇಲ್ಲಿನ ವೈದ್ಯಾಧಿಕಾರಿಗಳು ಇಂಗ್ಲಿಷ್‌ನಲ್ಲಿ ಮಾತನಾಡುವುದರಿಂದ ನಮಗೆ ಅರ್ಥವಾಗುವುದಿಲ್ಲ. ಏನಾದರೂ ಕೇಳಿದರೆ ಗದರಿಸಿ ಕಳುಹಿಸುತ್ತಾರೆ.

    | ಪ್ರಶಾಂತ್ ಗರ್ಭಿಣಿಯೊಬ್ಬರ ಪತಿ


    ಸಾರ್ವಜನಿಕರು ಬರವಣಿಗೆಯಲ್ಲಿ ದೂರು ನೀಡಿದರೆ ಅಗತ್ಯ ಕ್ರಮ ಜರುಗಿಸಲಾಗುವುದು. ವೈದ್ಯಾಧಿಕಾರಿ ವಾರದವರೆಗೂ ತರಬೇತಿಯಲ್ಲಿರುವುದರಿಂದ ಸೇವೆಯಲ್ಲಿ ವ್ಯತ್ಯವಾಗಿದೆ.
    | ಡಾ.ರವಿ ತಾಲೂಕು ವೈದ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts