More

    ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಅಭಾದಿತ; ರೈತರಿಗೆ ಮತ್ತಷ್ಟು ಯೋಜನೆ ನೀಡಲು ಸರ್ಕಾರ ಬದ್ಧ: ಇಂಧನ ಸಚಿವ ಸುನೀಲ್ ಕುಮಾರ್ ಘೋಷಣೆ

    ಸೊರಬ: ಎಸ್.ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜಾರಿಗೆ ತಂದ ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡುವ ಯೋಜನೆಯನ್ನು ಹಿಂತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ. ಬಿಜೆಪಿ ಸರ್ಕಾರ ರೈತರಿಗೆ ಮತ್ತಷ್ಟು ಯೋಜನೆಗಳನ್ನು ನೀಡಲು ಬದ್ಧವಾಗಿದೆಯೇ ಹೊರತು ಈಗ ಕೊಟ್ಟಿರುವ ಯೋಜನೆಗಳನ್ನು ಹಿಂತೆಗೆದುಕೊಳ್ಳುವುದಿಲ್ಲ ಎಂದು ಇಂಧನ ಸಚಿವ ವಿ.ಸುನೀಲ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
    ಪಟ್ಟಣದ ಶ್ರೀ ವರದಹಸ್ತ ಆಂಜನೇಯ ದೇವಸ್ಥಾನದ ಬಳಿ ಯುಜಿ ಕೇಬಲ್ ಅಳವಡಿಕೆಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಅರ್ಜಿ ಸಲ್ಲಿಸಿದ 5 ಲಕ್ಷ ಅಕ್ರಮ ಕೃಷಿ ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸಲಾಗುವುದು. ರೈತರಿಗೆ ಸಮರ್ಪಕ ವಿದ್ಯುತ್ ಪೂರೈಸಲು ಕ್ಷೇತ್ರದಲ್ಲಿ ಆರಂಭವಾಗುತ್ತಿರುವ ಎರಡು ವಿದ್ಯುತ್ ಗ್ರಿಡ್‌ಗಳು ಸೇರಿದಂತೆ ಒಟ್ಟು 250 ನೂತನ ವಿದ್ಯುತ್ ಗ್ರಿಡ್‌ಗಳನ್ನು ನಿರ್ಮಿಸಲಾಗುವುದು ಎಂದು ಹೇಳಿದರು.
    ಇಂಧನ ಇಲಾಖೆ ಜವಾಬ್ದಾರಿ ವಹಿಸಿಕೊಂಡ ನಂತರ ಮಹತ್ವದ ಬದಲಾವಣೆ ತರಲಾಗಿದೆ. ಸುಟ್ಟು ಹೋದ ಟಿಸಿಗಳ ಬದಲಾವಣೆಗೆ ಟಿಸಿ ಬ್ಯಾಂಕ್ ಸ್ಥಾಪಿಸಿ 24 ಗಂಟೆಗಳಲ್ಲಿ ಹೊಸ ಟಿಸಿ ನೀಡುವ ಯೋಜನೆ ಜಾರಿಗೆ ತಂದಿದ್ದು ಈ ಯೋಜನೆಯಡಿ ಶೇ.80 ಸಾಧನೆ ಮಾಡಲಾಗಿದೆ. ವಿದ್ಯುತ್‌ರಹಿತ ಮನೆಗಳನ್ನು ಗುರುತಿಸಿ ಬೆಳಕು ಯೋಜನೆಯಡಿ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾರ್ಯಕ್ರಮ ವೇಗವಾಗಿ ನಡೆಯುತ್ತಿದೆ ಎಂದರು.
    ಹೆಚ್ಚುತ್ತಿರುವ ಜನಸಂಖ್ಯೆ ಗಮನದಲ್ಲಿಟ್ಟುಕೊಂಡು ಉಪವಿದ್ಯುತ್ ವಿತರಣಾ ಕೇಂದ್ರಗಳನ್ನು ಉನ್ನತೀಕರಿಸುವುದರೊಂದಿಗೆ ಹೊಸ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಈ ಮೂಲಕ ಗುಣಮಟ್ಟದ ನಿರಂತರ ವಿದ್ಯುತ್ ನೀಡಲು ಸಾಧ್ಯವಾಗಿದೆ. ಇಂಡುವಳ್ಳಿ, ಕುದುರೆಗಣಿ, ತತ್ತೂರು, ನಿಸರಾಣಿ ಗ್ರಾಮಗಳಲ್ಲಿ ಗ್ರಿಡ್‌ಗಳ ಬೇಡಿಕೆ ಇದ್ದು ಶೀಘ್ರದಲ್ಲಿಯೇ ಪರಿಶೀಲನೆ ನಡೆಸಿ ಗ್ರಿಡ್ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
    ಸೊರಬ ಕ್ಷೇತ್ರದಲ್ಲಿ ವೇಗದ ಅಭಿವೃದ್ಧಿ: ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿಯ ವೇಗ ಹೆಚ್ಚಾಗಿದೆ. ಶಾಸಕ ಕುಮಾರ್ ಬಂಗಾರಪ್ಪ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಮುಖ್ಯರಸ್ತೆ ಅಗಲೀಕರಣಗೊಳಿಸುವ ಜತೆಗೆ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಎರಡು ಕಿಮೀ ಯುಜಿ ವಿದ್ಯುತ್ ಕೇಬಲ್ ಅಳವಡಿಕೆಗೆ ಚಾಲನೆ ನೀಡುತ್ತಿರುವುದು ಸಂತಸ ತಂದಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅನುದಾನದಲ್ಲಿ ಶ್ರೀ ರಂಗನಾಥ ದೇವಸ್ಥಾನ ಸಮೀಪ ಮತ್ತು ಚಂದ್ರಗುತ್ತಿಯ ಶ್ರೀ ರೇಣುಕಾಂಬಾ ದೇವಸ್ಥಾನದ ಬಳಿ ಸಮುದಾಯ ಭವನ ನಿರ್ಮಿಸಲಾಗುವುದು ಎಂದು ಸುನೀಲ್‌ಕುಮಾರ್ ಹೇಳಿದರು.
    ಭವಿಷ್ಯದ 25 ವರ್ಷಗಳ ಯೋಜನೆ: ತಾಲೂಕಿನಲ್ಲಿ ಈ ಹಿಂದೆ ಕೇವಲ ಎರಡು ವಿದ್ಯುತ್ ಗ್ರಿಡ್‌ಗಳು ಕಾರ್ಯನಿರ್ವಹಿಸುತ್ತಿದ್ದವು. ಈಗ 12 ಗ್ರಿಡ್‌ಗಳ ಮೂಲಕ ಸಮರ್ಪಕವಾಗಿ ವಿದ್ಯುತ್ ಪೂರೈಸಲು ಕ್ರಮ ಕೈಗೊಳ್ಳಲಾಗಿದೆ. ಭವಿಷ್ಯದ 25 ವರ್ಷಗಳನ್ನು ಗಮನದಲ್ಲಿಟ್ಟುಕೊಂಡು ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದು ಶಾಸಕ ಕುಮಾರ್ ಬಂಗಾರಪ್ಪ ಹೇಳಿದರು. ರೈತರು ಅಕ್ರಮವಾಗಿ ಹೊಂದಿರುವ ಕೃಷಿ ಪಂಪ್‌ಸೆಟ್‌ಗಳಿಗೆ ಆರ್‌ಆರ್ ನಂಬರ್ ಪಡೆದಾಗ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಪಡೆಯಲು ಸಾಧ್ಯವಾಗುತ್ತದೆ ಎಂದು ಅವರು, ಮೆಸ್ಕಾಂ ಸಿಬ್ಬಂದಿಗೆ ವಸತಿ ಗೃಹ ನಿರ್ಮಾಣದ ಅಗತ್ಯತೆಯನ್ನು ಸಚಿವರ ಗಮನಕ್ಕೆ ತಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts