More

    ಕೃಷಿಗೆ ವೈಜ್ಞಾನಿಕ ನೀರಾವರಿ ಪದ್ಧತಿ ಅವಶ್ಯ

    ಬೆಳಗಾವಿ: ರೈತರು ವೈಜ್ಞಾನಿಕ ನೀರಾವರಿ ಪದ್ಧತಿ ಅಳವಡಿಸಿಕೊಂಡು ಮಿತ ನೀರು ಬಳಸಿ ಭೂ ಹಾನಿ ತಡೆಯಲು ಸಂಕಲ್ಪ ಮಾಡಬೇಕು ಎಂದು ಮಾಜಿ ಶಾಸಕ ಡಾ.ವಿ.ಐ. ಪಾಟೀಲ ಹೇಳಿದರು.

    ಬೈಲಹೊಂಗಲ ತಾಲೂಕಿನ ಮತ್ತಿಕೊಪ್ಪ ಐಸಿಎಆರ್, ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರ ಹಾಗೂ ಮಲಪ್ರಭಾ ಮತ್ತು ಘಟಪ್ರಭಾ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರೈತರಿಗೆ ಎರಡು ದಿನಗಳ ಕೃಷಿ ತಾಂತ್ರಿಕ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಮಲಪ್ರಭಾ ಹಾಗೂ ಘಟಪ್ರಭಾ ನೀರಾವರಿ ಯೋಜನೆಗಳ ಅಚ್ಚುಕಟ್ಟು ಪ್ರದೇಶದಲ್ಲಿ ಹೆಚ್ಚು ನೀರು ಬಳಕೆಯಿಂದ ಹಾಗೂ ಸಹಭಾಗಿತ್ವ ನೀರು ನಿರ್ವಹಣೆ ಕೊರತೆಯಿಂದ ತಗ್ಗು ಪ್ರದೇಶದಲ್ಲಿ ನೀರು ನಿಂತು ಭೂಮಿ ಜವಳು ಆಗುತ್ತಿರುವುದು ಕಂಡುಬರುತ್ತಿದೆ. ಅದೇ ರೀತಿ, ಬಸಿಗಾಲುವೆಗಳಲ್ಲಿ ಹರಿವು ಕಡಿಮೆ ಆಗಿ ಜಮೀನುಗಳಿಂದ ಬಸಿದು ಹೋಗಬೇಕಾದ ಲವಣಾಂಶಗಳು ಭೂಮಿಯಲ್ಲಿ ಉಳಿದು ಸವಳು ಹಾಗೂ ಕ್ಷಾರ ಭೂಮಿಗಳಾಗಿ ಮಾರ್ಪಾಡಾಗಿ ಕೃಷಿಗೆ ಯೋಗ್ಯವಾದ ಭೂಮಿಯ ಕ್ಷೇತ್ರ ಕಡಿಮೆಯಾಗುತ್ತಿದೆ ಎಂದರು. ಅಚ್ಚುಕಟ್ಟು ಪ್ರದೇಶದ ರೈತರಿಗೆ ಕೃಷಿ ತಾಂತ್ರಿಕ ತರಬೇತಿ ಮೂಲಕ ಭೂಮಿಗಳು ಸವಳು ಆಗುವುದನ್ನು ತಡೆಯುವ ತಂತ್ರಜ್ಞಾನವನ್ನು ರೈತರಿಗೆ ನೀಡಲಾಗುತ್ತಿದೆ. ಸುಸ್ಥಿರ ಕೃಷಿ ಉತ್ಪಾದನೆಗೆ ಮಣ್ಣು ಮತ್ತು ನೀರು ಮಹತ್ವವಾದ ನೈಸರ್ಗಿಕ ಸಂಪನ್ಮೂಲಗಳಾಗಿವೆ ಎಂದು ತಿಳಿಸಿದರು.

    ಕೃಷಿ ವಿಜ್ಞಾನ ಕೇಂದ್ರದ ಕಾರ್ಯಾಧ್ಯಕ್ಷ ಬಿ.ಆರ್. ಪಾಟೀಲ ಮಾತನಾಡಿ, ಕೃಷಿ ವಿಜ್ಞಾನ ಕೇಂದ್ರದಲ್ಲಿ ನುರಿತ ವಿಜ್ಞಾನಿಗಳಿದ್ದು ಅವರಿಂದ ಸಮರ್ಪಕ ನೀರಾವರಿ ಪದ್ಧತಿ ಹಾಗೂ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳ ಉತ್ಪಾದನಾ ತಾಂತ್ರಿಕತೆಗಳ ಕುರಿತು ಮಾರ್ಗದರ್ಶನ ಪಡೆದು ಅಧಿಕ ಇಳುವರಿ ಪಡೆಯಬೇಕು ಎಂದು ಸಲಹೆ ನೀಡಿದರು.

    ಕೇಂದ್ರದ ವಿಜ್ಞಾನಿ ಎಸ್.ಎಂ. ವಾರದ ಮಾತನಾಡಿ, ದೇಶದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಆಹಾರ ಧಾನ್ಯಗಳನ್ನು ಉತ್ಪಾದಿಸಲು ನೀರಾವರಿ ಸೌಲಭ್ಯ ಕಲ್ಪಿಸಲು ಬೃಹತ್ ನೀರಾವರಿ ಯೋಜನೆ ಅನುಷ್ಠಾನಕ್ಕೆ ತರಲಾಗಿದೆ. ಈ ಪ್ರದೇಶದಲ್ಲಿ ಅನೇಕ ಸಮಸ್ಯೆಗಳಿಂದ ಉತ್ಪಾದಕತೆ ಕಡಿಮೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ರೈತರಿಗೆ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ನೀರಿನ ನಿರ್ವಹಣೆ, ಸವಳು ಹಾಗೂ ಕ್ಷಾರ ಜಮೀನು ನಿರ್ವಹಣೆ, ಸಾವಯವ ಕೃಷಿ ಹಾಗೂ ಸಮಗ್ರ ಬೆಳೆ ಉತ್ಪಾದನಾ ತಾಂತ್ರಿಕತೆಗಳ ಕುರಿತು ಕಾಡಾ ಪ್ರಾಧಿಕಾರದ ಪ್ರಾಯೋಜಕತ್ವದಲ್ಲಿ ತರಬೇತಿ ನೀಡಲಾಗುವುದು ಎಂದರು. ಕೇಂದ್ರದ ಮುಖ್ಯಸ್ಥೆ, ವಿಜ್ಞಾನಿ ಶ್ರೀದೇವಿ ಬ. ಅಂಗಡಿ, ಡಾ. ಎಸ್.ಎಸ್. ಹಿರೇಮಠ, ಪ್ರವೀಣ ಯಡಹಳ್ಳಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts