More

    ಕುಸ್ತಿಗೆ ಪ್ರೋತ್ಸಾಹ, ಪೈಲ್ವಾನರ ಪೋಷಣೆ

    ಹಳಿಯಾಳ: ಇಪ್ಪತ್ತು ವರ್ಷಗಳಿಂದ ಹಳಿಯಾಳ ವಿಧಾನಸಭೆ ಕ್ಷೇತ್ರ ಹಾಗೂ ಅಕ್ಕಪಕ್ಕದ ಜಿಲ್ಲೆಯ ಕುಸ್ತಿ ಪಟುಗಳಿಗೆ ನೆರವು ನೀಡುತ್ತ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕುಸ್ತಿಪಟುಗಳನ್ನು ರಾಜ್ಯಕ್ಕೆ ಕಾಣಿಕೆ ನೀಡಿದ ಪಟ್ಟಣದ ವಿಆರ್​ಡಿ ಟ್ರಸ್ಟ್ ಈಗ ರಾಜ್ಯ ಪ್ರಶಸ್ತಿಗೆ ಭಾಜನವಾಗಿದೆ.

    ಶಾಸಕ ಆರ್.ವಿ. ದೇಶಪಾಂಡೆ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ವಿಆರ್​ಡಿ ಟ್ರಸ್ಟ್ , ಕ್ರೀಡಾ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಕ್ರೀಡೆಯ ಅಭಿವೃದ್ಧಿಗೆ ಕೈಗೊಂಡ ಕಾರ್ಯಗಳನ್ನು ಪರಿಗಣಿಸಿ ರಾಜ್ಯ ಸರ್ಕಾರವು 2018-19ನೇ ಸಾಲಿನ ಕ್ರೀಡಾ ಪೋಷಕ ಪ್ರಶಸ್ತಿಯನ್ನು ಘೊಷಿಸಿದೆ.

    ನವೆಂಬರ್ 2ರಂದು ಸೋಮವಾರ ವಿಧಾನ ಸೌಧದ ಬಾಂಕ್ವೆಟ್ ಹಾಲ್​ನಲ್ಲಿ ಬೆಳಗ್ಗೆ 11 ಗಂಟೆಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ವಿಆರ್​ಡಿ ಟ್ರಸ್ಟ್ ಧರ್ಮದರ್ಶಿ ಪ್ರಸಾದ ದೇಶಪಾಂಡೆ ಈ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

    ದಂಗಲ್ ಕ್ರೇಜ್: ಸರಿ ಸುಮಾರು ಎಪ್ಪತ್ತು ಎಂಬತ್ತರ ದಶಕದಲ್ಲಿ ಥೇಟರ್ (ಜಂಗೀ) ಕುಸ್ತಿಯಲ್ಲಿ ಪ್ರಾಬಲ್ಯ ಮೆರೆದ ಹಳಿಯಾಳ ತಾಲೂಕಿನ ಕುಸ್ತಿ ಪಟುಗಳು, ಈಗ ಅಂತಾರಾಷ್ಟ್ರೀಯ ಹಾಗೂ ಒಲಿಂಪಿಕ್ ನಿಯಮಾವಳಿಯಂತೆ ಆಡುವ ಪಾಯಿಂಟ್(ಮ್ಯಾಟ್) ಕುಸ್ತಿಯಲ್ಲೂ ಪ್ರಭುತ್ವ ಗೈಯ್ದು ಹಳಿಯಾಳದ ಕುಸ್ತಿಯ ಗತ ವೈಭವನ್ನು ಮರಳಿ ತಂದಿದ್ದಾರೆ. ಮಹಿಳೆಯರು ಕುಸ್ತಿಯಲ್ಲಿ ಪದಾರ್ಪಣೆ ಮಾಡಲು ಪ್ರೇರೇಪಿಸಿ ಸಾಧನೆಗೈಯುವಂತೆ ಮಾಡಲಾಗಿದೆ. ಈ ಎರಡು ಪ್ರಯತ್ನಗಳ ಹಿಂದಿನ ಬಹುತೇಕ ಶ್ರೇಯಸ್ಸು ವಿಆರ್​ಡಿ ಟ್ರಸ್ಟ್ ಗೆ ಸಲ್ಲುತ್ತದೆ.

    ಶಾಸಕ ದೇಶಪಾಂಡೆ ಅವರು 1999ರಲ್ಲಿ ಜಿಲ್ಲಾ ಕುಸ್ತಿ ಕ್ರೀಡಾಂಗಣವನ್ನು ಮಂಜೂರು ಮಾಡಿದ್ದರು. ಅದರ ಜೊತೆಯಲ್ಲಿ ಕ್ರೀಡಾ ವಸತಿ ಶಾಲೆಯನ್ನು ನಿರ್ವಿುಸಿ ಉದಯೋನ್ಮುಖ ಕುಸ್ತಿ ಪಟುಗಳಿಗೆ ಅನುಕೂಲ ಕಲ್ಪಿಸಿದರು. ಕುಸ್ತಿ ಕ್ರೀಡೆ ಬೆಳೆಸಲು ಸರ್ಕಾರದಿಂದ ದೊರೆಯುವ ಅನುದಾನ ಅತ್ಯಲ್ಪವಾಗಲಾರಂಭಿಸಿದ್ದರಿಂದ ತಮ್ಮ ವಿಆರ್​ಡಿ ಟ್ರಸ್ಟ್ ನಿಂದ ಆರ್ಥಿಕ ನೆರವನ್ನು ನೀಡತೊಡಗಿದರು. ಹಲವಾರು ಕುಸ್ತಿ ಪಟುಗಳನ್ನು ಟ್ರಸ್ಟ್ ದತ್ತು ಪಡೆಯಿತು. ಮಾಜಿ ಪೈಲ್ವಾನರಿಗೆ ಟ್ರಸ್ಟ್ ಆರ್ಥಿಕ ನೆರವು ಕೂಡ ನೀಡಿತು. ಪ್ರತಿ ವರ್ಷದ ಆರಂಭದಲ್ಲಿ ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಮೂರು ದಿನಗಳ ಹೊನಲು ಬೆಳಕಿನ ಕುಸ್ತಿ ಹಬ್ಬವನ್ನು ಟ್ರಸ್ಟ್ ಆಯೋಜಿಸುತ್ತ ಬಂದಿದ್ದು, ದೇಶದ್ಯಾಂತ ಇರುವ ಖ್ಯಾತ ನಾಮಾಂಕಿತ ಕುಸ್ತಿಪಟುಗಳು ಇದರಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದಾರೆ.

    ಗರಡಿ ಮನೆ: ವಿಆರ್​ಡಿ ಟ್ರಸ್ಟ್ ಗರಡಿಯಲ್ಲಿ ಬೆಳೆದ ಕುಸ್ತಿ ಪಟುಗಳಿಗೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ, ಫೈಕಾ, ದಸರಾ ಕುಸ್ತಿಯಲ್ಲಿ ಹಲವಾರು ಪದಕಗಳು, ಟೈಟಲ್​ಗಳು ಬಂದಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಮತಾ ಮಾರುತಿ ಕೇಳೋಜಿ, ಲೀನಾ ಸಿದ್ದಿ, ರಾಷ್ಟ್ರೀಯ ಮಟ್ಟದಲ್ಲಿ ತುಕಾರಾಮ ಗೌಡಾ, ಶರೀಫ ಜಮಾದಾರ್, ಮಂಜುನಾಥ ಕದಂ, ದಾವಲಸಾಬ ಹುಲಕೊಪ್ಪ, ರಾಮಾ ಬುರಬುಸಿ, ವೆಂಕಟೇಶ ಪಾಟೀಲ, ಮನೋಹರ ತಾಂಬೀಟ್ಕರ, ಮಂಜುನಾಥ ಬೆಳವಟಗಿ, ಮಂಜುನಾಥ ಅಂತ್ರೋಳ್ಕರ, ಮಾರುತಿ ಕೆಸರೇಕರ, ಮಂಜುನಾಥ ಬಾಮಣಕರ, ಸಂದೀಪ ಹಳದುಕರ, ನಾಮದೇವ ನಂದಿಗದ್ದ ಮೊದಲಾದ ಖ್ಯಾತ ಪೈಲ್ವಾನರು, ಕಿರಿಯರ ವಿಭಾಗದಲ್ಲಿ ರೋಹನ್ ಮೋತೆಸ್ ದೊಡ್ಮಣಿ, ಕುಶರಥ ಲಕ್ಮಣ ಮಿರಾಶಿ, ಕೃಷ್ಣ ಯಮನಪ್ಪನವರ, ರಾಮಣ್ಣ ಕಲ್ಗುಟಕರ ಹಾಗೂ ಮಹಿಳಾ ಕುಸ್ತಿ ಪಟುಗಳಲ್ಲಿ ಮಮತಾ ಮಾರುತಿ ಕೇಳೋಜಿ, ಲೀನಾ ಸಿದ್ದಿ, ರಾಧಾ ಜಾಂಜಿ, ಅರ್ಚನಾ ಅಂತೋನ ಸಿದ್ದಿ, ಮಹಾಲಕ್ಷ್ಮಿ ಸಿದ್ದಿ, ಜ್ಯೋತಿ ಘಾಡಿ, ಸುವರ್ಣಾ ಪಾಟೀಲ, ಅನುರಾಧಾ ಕುಂಡೇಕರ, ಗೀತಾ ಮಿಶಾಳೆ ಮೊದಲಾದವರ ಸಾಧನೆಯ ಹಿಂದೆ ವಿಆರ್​ಡಿ ಟ್ರಸ್ಟ್ ಇದೆ.

    ನಮ್ಮ ಸಂಸ್ಥೆಗೆ ಕ್ರೀಡಾಪೋಷಕ ಪ್ರಶಸ್ತಿ ಲಭಿಸಿದ್ದು, ಹಳಿಯಾಳದ ಕುಸ್ತಿ ಪಟುಗಳಿಗೆ, ಕುಸ್ತಿ ಅಭಿಮಾನಿಗಳಿಗೆ ಹಾಗೂ ಕುಸ್ತಿಗೆ ಸಂದ ಗೌರವ ಎಂದು ಭಾವಿಸುತ್ತೇನೆ. ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ವಿಆರ್​ಡಿ ಟ್ರಸ್ಟ್ ನಮ್ಮ ದೇಶಿಯ ಕ್ರೀಡೆ ಕುಸ್ತಿಯನ್ನು ಬೆಳೆಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಈ ಕಾರ್ಯ ನಿರಂತರವಾಗಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನಡೆಯಲಿದೆ.

    | ಆರ್.ವಿ. ದೇಶಪಾಂಡೆ, ವಿ.ಆರ್.ಡಿ ಟ್ರಸ್ಟ್ ಅಧ್ಯಕ್ಷರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts