More

    ಕುಮಟಾ ಪುರಸಭೆಗೆ ಮೋಹಿನಿ ಗೌಡ ಅಧ್ಯಕ್ಷೆ

    ಕುಮಟಾ: ಇಲ್ಲಿನ ಪುರಸಭೆ ಅಧ್ಯಕ್ಷೆಯಾಗಿ ಮೋಹಿನಿ ಗೌಡ ಹಾಗೂ ಉಪಾಧ್ಯಕ್ಷರಾಗಿ ರಾಜೇಶ ಪೈ ಅವರು ಬುಧವಾರ ಅವಿರೋಧ ಆಯ್ಕೆಯಾಗಿದ್ದಾರೆ. ಕುಮಟಾ ಪುರಸಭೆ ಆಡಳಿತ ಚುಕ್ಕಾಣಿಯನ್ನು ಪ್ರಥಮ ಬಾರಿಗೆ ಪೂರ್ಣ ಬಹುಮತದೊಂದಿಗೆ ಬಿಜೆಪಿ ಹಿಡಿದಿದೆ.

    ಮೀಸಲು ನಿಯಮ ಪ್ರಕಾರ ಅಧ್ಯಕ್ಷ ಸ್ಥಾನಕ್ಕೆ ಉಪ್ಪಿನಗಣಪತಿ ವಾರ್ಡ್​ನಿಂದ ಆಯ್ಕೆಯಾಗಿದ್ದ ಹಿಂದುಳಿದ ವರ್ಗದ ಮಹಿಳೆ ಮೋಹಿನಿ ಗೌಡ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚಿತ್ರಿಗಿ ವಾರ್ಡ್​ನಿಂದ ಆಯ್ಕೆಯಾಗಿದ್ದ ಸಾಮಾನ್ಯ ವರ್ಗದ ರಾಜೇಶ ಪೈ ಉಮೇದುವಾರರಾಗಿದ್ದು ಬಿಜೆಪಿ ವರಿಷ್ಠರ ತೀರ್ವನದಂತೆ ಅವಿರೋಧವಾಗಿ ಆಯ್ಕೆಯಾದರು. ಚುನಾವಣಾ ಅಧಿಕಾರಿಯಾಗಿ ತಹಸೀಲ್ದಾರ್ ಮೇಘರಾಜ ನಾಯ್ಕ ಕಾರ್ಯನಿರ್ವಹಿಸಿದರು.

    ಪುರಸಭೆಯಲ್ಲಿ ಪ್ರಪ್ರಥಮ ಬಾರಿಗೆ ಕಮಲ ಅರಳಿದೆ. ಒಟ್ಟು 23 ಸದಸ್ಯರಲ್ಲಿ ಬಿಜೆಪಿಯ 16 ಸದಸ್ಯರು ಗೆದ್ದಿದ್ದರು. ಇದಲ್ಲದೇ ಜೆಡಿಎಸ್ ಬೆಂಬಲದಿಂದ ಆಯ್ಕೆಯಾಗಿ ಬಳಿಕ ಬಿಜೆಪಿಗೆ ಸೇರ್ಪಡೆಗೊಂಡ ಒಬ್ಬ ಸದಸ್ಯನನ್ನೂ ಸೇರಿಸಿ ಒಟ್ಟು 17 ಸ್ಥಾನ ಬಿಜೆಪಿ ತೆಕ್ಕೆಯಲ್ಲಿದೆ.

    ಈ ವೇಳೆ ಶಾಸಕ ದಿನಕರ ಶೆಟ್ಟಿ, ಪುರಸಭಾ ಸದಸ್ಯರಾದ ತುಳುಸು ಗೌಡ, ಪಲ್ಲವಿ ಮಡಿವಾಳ, ಟೋನಿ ರೊಡ್ರಗಿಸ್, ಸಂತೋಷ ನಾಯ್ಕ, ಮಹೇಶ ನಾಯ್ಕ, ಅನುರಾಧಾ ಬಾಳೇರಿ, ಶೈಲಾ ಗೌಡ, ಸುಮತಿ ಭಟ್ಟ, ಸೂರ್ಯಕಾಂತ ಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಮಂಡಲಾಧ್ಯಕ್ಷ ಹೇಮಂತಕುಮಾರ ಗಾಂವಕರ, ತಾಲೂಕಾ ಪ್ರಧಾನ ಕಾರ್ಯದರ್ಶಿ ಜಿ.ಐ.ಹೆಗಡೆ, ವಿನಾಯಕ ನಾಯ್ಕ, ಡಾ.ಜಿ.ಜಿ.ಹೆಗಡೆ, ವಿಶ್ವನಾಥ ನಾಯ್ಕ, ಸುಶೀಲಾ ನಾಯ್ಕ, ಕಿರಣ ಅಂಬಿಗ, ಅಭಿ ನಾಯ್ಕ, ಮುಖ್ಯಾಧಿಕಾರಿ ಸುರೇಶ ಎಂ.ಕೆ, ಸಿಬ್ಬಂದಿ ಇದ್ದರು.

    ತೆರೆಮರೆಯಲ್ಲಿ ನಡೆದಿತ್ತು ಕಸರತ್ತು: ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಸಾಕಷ್ಟು ತೆರೆಮರೆಯ ಕಸರತ್ತು ನಡೆದಿತ್ತು. ಅಧ್ಯಕ್ಷ ಸ್ಥಾನಕ್ಕೆ ಮೋಹಿನಿ ಗೌಡರೆದುರು ಅನುರಾಧಾ ಬಾಳೇರಿ ಪ್ರಬಲ ಪೈಪೋಟಿ ನೀಡಿದ್ದರೆ, ಉಪಾಧ್ಯಕ್ಷ ಸ್ಥಾನಕ್ಕಾಗಿ ರಾಜೇಶ ಪೈ ಎದುರು ಸುಮತಿ ಭಟ್ ಕಣದಲ್ಲಿದ್ದರು. ಈ ಬಗ್ಗೆ ಬಿಜೆಪಿ ಕೋರ್ ಕಮಿಟಿ ಸಭೆ ನಡೆಸಿದ್ದು ಪುರಸಭೆಯ ಮೊದಲಾರ್ಧ ಅವಧಿಗೆ ಮೋಹಿನಿ ಗೌಡ ಅಧ್ಯಕ್ಷೆಯಾಗಿ ಹಾಗು ರಾಜೇಶ ಪೈ ಉಪಾಧ್ಯಕ್ಷರಾದರೆ ನಂತರದ ಅವಧಿಗೆ ಅಧ್ಯಕ್ಷೆಯಾಗಿ ಅನುರಾಧಾ ಬಾಳೇರಿ, ಉಪಾಧ್ಯಕ್ಷೆಯಾಗಿ ಸುಮತಿ ಭಟ್ ಅಧಿಕಾರ ಹಂಚಿಕೊಳ್ಳಬೇಕು ಎಂದು ಪಕ್ಷ ತೀರ್ವನಿಸಿದೆ.

    ಕುಮಟಾ ಪುರಸಭೆಯಲ್ಲಿ ಪ್ರಥಮ ಬಾರಿಗೆ ಪೂರ್ಣ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಪುರಸಭೆಯ ಒಟ್ಟು 17 ಸ್ಥಾನ ನಮ್ಮ ಕೈಯಲ್ಲಿದೆ. ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ನಿರ್ವಹಿಸಬೇಕು.
    | ದಿನಕರ ಶೆಟ್ಟಿ, ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts