More

    ಕುಮಟಾದಲ್ಲಿ ಅಸಮರ್ಪಕ ಕಸ ವಿಲೇವಾರಿ

    ವಿಜಯವಾಣಿ ಸುದ್ದಿಜಾಲ ಕುಮಟಾ: ಪಟ್ಟಣದ ಹಳಕಾರ ಕ್ರಾಸ್ ಬಳಿ ಕುಮಟಾ- ಅಘನಾಶಿನಿ ರಸ್ತೆಯಲ್ಲಿ ಟನ್​ಗಟ್ಟಲೆ ಅನುಪ ಯುಕ್ತ ಸಾಮಗ್ರಿಗಳು ಹಾಗೂ ಕಸದ ರಾಶಿ ಬಹಳ ಕಾಲದಿಂದ ಬಿದ್ದಿದ್ದರೂ ಸ್ಥಳೀಯ ಆಡಳಿತ ವ್ಯವಸ್ಥೆ ಏನೂ ಮಾಡದೇ ಕಣ್ಮುಚ್ಚಿಕೊಂಡಿದೆ.

    ಕಳೆದ ಮಳೆಗಾಲದ ಸಂದರ್ಭ ದಲ್ಲಿಯೇ ಇಲ್ಲಿ ಡಾಂಬರು ರಸ್ತೆಯಂಚಿಗೆ ಕಸದ ರಾಶಿ ಸ್ಥಾಪನೆಯಾಗಿದ್ದು ಕೆಲವೇ ಕ್ವಿಂಟಾಲ್​ಗಳಷ್ಟಿದ್ದ ಕಸದ ರಾಶಿ ಈಗೀಗ ಬೆಟ್ಟದಂತಾಗಿದೆ. ಇಲ್ಲಿ ಜನ ಬೇಕಾಬಿಟ್ಟಿ ಕಸ ತಂದು ಎಸೆಯುವ ತಾಣವಾಗಿದ್ದು ರಸ್ತೆಯನ್ನೂ ಆವರಿಸಿಕೊಳ್ಳುತ್ತಿದೆ.

    ಕಸದ ರಾಶಿಯ ಮೂಲದಲ್ಲಿ ಅಡಗೂ ಲಜ್ಜಿ ಸವಾರಿ ಎಂಬ ದೈವದ ಬೊಂಬೆಗಳು, ಚಾಪೆ, ತೊಟ್ಟಿಲು ಮುಂತಾದ ಅನುಪ ಯುಕ್ತ ಸಾಮಗ್ರಿಗಳ ಸಂಗ್ರಹವನ್ನು ಊರಿಂದ ಊರಿಗೆ ಸಾಗಿಸುವ ಪದ್ಧತಿಯ ಕಥೆ ಇದೆ ಎನ್ನಲಾಗಿದೆ. ಆ ಪ್ರಕಾರ ಕಳೆದ ಮಳೆಗಾಲಕ್ಕೆ ಮೊದಲು ಮೂರ್ನಾಲ್ಕು ತಿಂಗಳ ಕಾಲ ಮೂರೂರು ಕ್ರಾಸ್ ಬಳಿ ಜಮಾವಣೆಯಾಗಿದ್ದ ಅಡಗೂಲಜ್ಜಿ ಕಸದ ರಾಶಿಯನ್ನು ಹಳಕಾರ್​ಕ್ರಾಸ್​ಬಳಿ ಜನರೇ ಸಾಗಿಸಿದ್ದರು. ಹಾಗೆಯೇ ಅಲ್ಲಿನ ಜನರೇ ಮುಂದಕ್ಕೆ ಸಾಗಿಸಿ ತೆಪ್ಪ, ಹೊಲನಗದ್ದೆ, ಬಾಡ, ಕಾಗಾಲ ಮೂಲಕ ಸಮುದ್ರಕ್ಕೆ ಬಿಡುವ ವಾಡಿಕೆ ಇದೆ ಎಂದು ಸ್ಥಳೀಯರು ಹೇಳುತ್ತಾರೆ.

    ಕೆಲವರು ದೈವ ನಂಬಿಕೆಯಿಂದ ಕಸದ ರಾಶಿಗೆ ಕಾಸನ್ನೂ ಹಾಕುತ್ತಾರೆ. ಕೆಲವರು ತಮ್ಮ ಮನೆಯ ಕಸತ್ಯಾಜ್ಯವನ್ನೆಲ್ಲ ತಂದು ಸುರಿದು ಹೋಗುತ್ತಾರೆ. ವಾತಾವರಣ ಅಸಹ್ಯಕರವಾಗಿದೆ. ಕಸದ ರಾಶಿ ಯಿರುವ ಜಾಗ ಪುರಸಭೆಯವರು ತಮ್ಮದಲ್ಲ ಎನ್ನುತ್ತಾರೆ. ಆದರೆ ಕಸದ ರಾಶಿಯ ಎದುರಿಗೇ ಪುರಸಭೆಯ ಜಾಗವಿದ್ದು ಪೌರಕಾರ್ವಿುಕರ ವಸತಿ ಗೃಹಗಳನ್ನು ಕಟ್ಟುತ್ತಿದ್ದಾರೆ. ಹೊಲನಗದ್ದೆ ಪಂಚಾಯಿತಿ ಯವರು ಇದು ನಮ್ಮ ಪಂಚಾಯಿತಿ ವ್ಯಾಪ್ತಿಗೊಳಪಟ್ಟಿಲ್ಲ ಎನ್ನುತ್ತಾರೆ. ಹಾಗಿದ್ದರೆ ಸಾರ್ವಜನಿಕ ರಸ್ತೆಯಲ್ಲಿ ಚೆಲ್ಲಾಡುತ್ತಿರುವ ಅನುಪಯುಕ್ತ ಕಸವನ್ನು ತೆರವುಗೊಳಿಸಿ ಪರಿಸರ ಸ್ವಚ್ಛತೆ ಕಾಪಾಡುವವರಾರು?

    ಹಳಕಾರ್ ಕ್ರಾಸ್ ಬಳಿಯ ಕಸದ ರಾಶಿಯನ್ನು ಕಂಡೂ ಕಾಣದಂತೆ ಅಧಿಕಾರಿಗಳು, ಜನಪ್ರತಿನಿಧಿಗಳು ಈ ರಸ್ತೆಯಲ್ಲಿ ಓಡಾಡುತ್ತಿದ್ದಾರೆ. ಕೂಡಲೇ ಇಲ್ಲಿನ ವ್ಯರ್ಥಸಾಮಗ್ರಿಗಳನ್ನು ಕಸವನ್ನು ತೆರವುಗೊಳಿಸಬೇಕು. | ಸುಬ್ರಹ್ಮಣ್ಯ ಮದ್ಗುಣಿ ಸ್ಥಳೀಯ

    ಹಳಕಾರಕ್ರಾಸ್ ಬಳಿ ಬಿದ್ದಿರುವ ಕಸದ ರಾಶಿ ಸಾರ್ವಜನಿಕ ರಸ್ತೆಗೂ ಬಂದಿದೆ. ಆದರೆ ಆ ಪ್ರದೇಶವು ಪಟ್ಟಣ ವ್ಯಾಪ್ತಿಗೆ ಅಥವಾ ಪುರಸಭೆಯ ಕಸವಿಲೇವಾರಿ ವ್ಯವಸ್ಥೆಯ ವ್ಯಾಪ್ತಿಗೆ ಒಳಪಡುವುದಿಲ್ಲ. ಆದರೂ ಸ್ವಚ್ಛತೆಯ ಸಾಧ್ಯತೆಗಳ ಬಗ್ಗೆ ಪರಿಶೀಲಿಸಲಾಗುವುದು. | ಮಹೇಂದ್ರ ಎಂ.ವಿ. ಪರಿಸರ ಇಂಜಿನಿಯರ್ ಪುರಸಭೆ ಕುಮಟಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts