More

    ಕುಂದಾನಗರಿಯ ರಸ್ತೆಗಳಿಗೆ ಕೂಡಿಬಂತು ತೇಪೆ ಭಾಗ್ಯ

    ಬೆಳಗಾವಿ: ವರ್ಷಪೂರ್ತಿ ಧೂಳಿನಿಂದ, ತಗ್ಗು-ಗುಂಡಿಗಳಿಂದ ಜನರಿಗೆ ರೋದನೆ ತಂದಿಡುವ ರಸ್ತೆಗಳು ಈಗ ತೇಪೆ ಹಚ್ಚಿಕೊಂಡು ಕಂಗೊಳಿಸಲಿವೆ. ಮಹಾನಗರ ಪಾಲಿಕೆ, ದಂಡು ಮಂಡಳಿ ವ್ಯಾಪ್ತಿಯ ಪ್ರದೇಶಗಳಲ್ಲಿ ತಗ್ಗು-ಗುಂಡಿಗಳಿಂದ ತುಂಬಿದ ರಸ್ತೆಗಳಿಗೆ ವರ್ಷದ ಬಳಿಕ ದುರಸ್ತಿ ಭಾಗ್ಯ ದೊರಕಿದ್ದು, ತಾತ್ಕಾಲಿಕ ದುರಸ್ತಿಗಾಗಿ ಲಕ್ಷಾಂತರ ರೂ. ವ್ಯಯಿಸಲು ಸರ್ಕಾರ ಸಜ್ಜಾಗಿದೆ.
    ಸುವರ್ಣ ವಿಧಾನಸೌಧದಲ್ಲಿ ಡಿ.19ರಿಂದ ಚಳಿಗಾಲ ಅಧಿವೇಶನ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ವರ್ಷಗಳಿಂದ ತಗ್ಗು-ಗುಂಡಿಗಳು ಬಿದ್ದು ಹಾಳಾಗಿರುವ ಸುಮಾರು 25 ರಿಂದ 30 ಕಿ.ಮೀ. ರಸ್ತೆಗಳ ದುರಸ್ತಿ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ಕೈಗೆತ್ತಿಕೊಂಡಿದೆ. ಅಲ್ಲದೆ, ಮುಖ್ಯಮಂತ್ರಿ, ಸಚಿವರು, ಶಾಸಕರು ಹಾಗೂ ಅಧಿಕಾರಿಗಳು ಸಂಚರಿಸುವ ಮಾರ್ಗಗಳಲ್ಲಿ ಚರಂಡಿ, ರಸ್ತೆ ಕಾಮಗಾರಿ ಆರಂಭಿಸಲಾಗಿದೆ.

    ಎರಡು ವರ್ಷಗಳಿಂದ ಬೆಳಗಾವಿ ನಗರದ ಫೋರ್ಟ್ ರಸ್ತೆ, ಉದ್ಯಮಬಾಗ್, ಬಿ.ಎಸ್.ಯಡಿಯೂರಪ್ಪ ಮಾರ್ಗ, ಕೇಂದ್ರ ಅಂಚೆ ಕಚೇರಿ, ಕ್ಯಾಂಪ್ ಪ್ರದೇಶ, ಶಹಾಪುರ, ವಡಗಾವಿ, ಅನಗೋಳ, ಜ್ಯೋತಿ ನಗರ, ಎಪಿಎಂಸಿ ಮಾರುಕಟ್ಟೆ ಪ್ರದೇಶ, ರಾಣಿ ಚನ್ನಮ್ಮ ನಗರ, ಜಿಲ್ಲಾಧಿಕಾರಿ ಸುತ್ತಮುತ್ತಲಿನ ಪ್ರದೇಶ ಸೇರಿ ಬಹುತೇಕ ಕಡೆ ರಸ್ತೆಗಳು, ಚರಂಡಿಗಳು ಸಂಪೂರ್ಣ ಹಾಳಾಗಿ ವರ್ಷಗಳು ಕಳೆದಿವೆ. ಆದರೆ, ಈ ರಸ್ತೆಗಳಲ್ಲಿ ಬಿದ್ದಿರುವ ತಗ್ಗುಗಳಿಗೆ ತೇಪೆ ಹಾಕುವ ಕೆಲಸವನ್ನು ಪಾಲಿಕೆ, ದಂಡು ಮಂಡಳಿ ಮಾಡಿರಲಿಲ್ಲ. ಇದೀಗ ಚಳಿಗಾಲ ಅಧಿವೇಶನ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ರಸ್ತೆಗಳನ್ನು ಡಾಂಬರೀಕರಣ ಮಾಡುತ್ತಿದೆ.

    2019 ಮತ್ತು 2020ನೇ ಸಾಲಿನ ಸುರಿದ ಧಾರಾಕಾರ ಮಳೆ ಮತ್ತು ನಾಲಾ ಪ್ರವಾಹದಿಂದ ನಗರದಲ್ಲಿ 166 ಕಿಮೀ ರಸ್ತೆ, ನಾಲಾ 40.49 ಕಿಮೀ, ಚರಂಡಿ 122 ಕಿಮೀ, ಒಳಚರಂಡಿ 2.5 ಕಿಮೀ ಸೇರಿದಂತೆ ಮೂಲ ಸೌಕರ್ಯಗಳು ಸಂಪೂರ್ಣ ಹಾಳಾಗಿದ್ದವು. ಸರ್ಕಾರವು 2021-22ನೇ ಸಾಲಿನ ಅವಧಿಯಲ್ಲಿ ರಸ್ತೆ, ಚರಂಡಿ ದುರಸ್ತಿಗಾಗಿ 125 ಕೋಟಿ ರೂ. ಅನುದಾನ ಬಿಡುಗಡೆ ಮಾಡಿತ್ತು. ಆದರೆ, ಆ ಕಾಮಗಾರಿಗಳು ಪೂರ್ಣಗೊಂಡು ವರ್ಷ ಕಳೆದಿಲ್ಲ. ಆಗಲೇ ಎಲ್ಲ ರಸ್ತೆಗಳು ಹಾಳಾಗಿವೆ. ಈ ಕಳಪೆ ಕಾಮಗಾರಿಗಳನ್ನು ಮುಚ್ಚಿ ಹಾಕಲು ತೇಪೆ ಹಾಕುವ ಕೆಲಸವನ್ನು ದಂಡುಮಂಡಳಿ, ಲೋಕೋಪಯೋಗಿ ಮತ್ತು ಮಹಾನಗರ ಪಾಲಿಕೆ ಪ್ರಯತ್ನಿಸುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

    ಸ್ಮಾರ್ಟ್ ಬಿಟ್ಟು ಉಳಿದೆಲ್ಲವೂ ಡ್ಯಾಮೇಜ್!

    ಬೆಳಗಾವಿ ದಂಡು ಮಂಡಳಿಯು ತನ್ನ ವ್ಯಾಪ್ತಿಯಲ್ಲಿ ಹಾಳಾಗಿರುವ ರಸ್ತೆ, ಚರಂಡಿಗಳನ್ನು ವರ್ಷಗಳಿಂದ ದುರಸ್ತಿ ಮಾಡಿಲ್ಲ. ಕೆಲವೆಡೆ ರಸ್ತೆಗಳಿಗೆ ತೇಪೆ ಹಾಕಲಾಗಿತ್ತು. ಚರಂಡಿಗಳು ಹೂಳು ತುಂಬಿ ವರ್ಷಗಳು ಕಳೆದಿದ್ದು, ಇಲ್ಲಿಯವರೆಗೆ ಸ್ವಚ್ಛಗೊಳಿಸುವ ಕೆಲಸ ಮಾಡಿಲ್ಲ. ಪರಿಣಾಮ ಮಳೆಗಾಲದಲ್ಲಿ ಮಳೆ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಸ್ಮಾರ್ಟ್‌ಸಿಟಿ ರಸ್ತೆ ಹೊರತುಪಡಿಸಿ ಬಹುತೇಕ ರಸ್ತೆಗಳು ಹಾಳಾಗಿವೆ. ವರ್ಷದ ಬಳಿಕ ಫೋರ್ಟ್ ರಸ್ತೆಗೆ ಡಾಂಬರೀಕರಣ ಕಾಮಗಾರಿ ಆರಂಭಿಸಿದ್ದಾರೆ ಎಂದು ಸ್ಥಳೀಯ ನಿವಾಸಿಗಳಾದ ಎಂ.ಕೆ. ಮುಲ್ಲಾ, ಎಸ್.ಎಸ್. ಪಾಟೀಲ, ಅಭಿಷೇಕ ಅನಗೋಳಕರ ದೂರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts