More

    ಇ-ಕೆವೈಸಿ ಬಿಸಿ, ಸಿಬ್ಬಂದಿಗೆ ಕಸಿವಿಸಿ!  -ವಾಟ್ಸ್ಯಾಪ್ ವದಂತಿ ತಂದ ತಲೆಬೇನೆ -ಗ್ಯಾಸ್ ಏಜೆನ್ಸಿ ಕಚೇರಿಗಳಲ್ಲಿ ಜನಸಂದಣಿ 

    ದಾವಣಗೆರೆ: ಡಿ.31ರೊಳಗಾಗಿ ಇ-ಕೆವೈಸಿ ಮಾಡಿಸದಿದ್ದರೆ ನಿಮ್ಮ ಮನೆಯ ಅಡುಗೆ ಅನಿಲ ಸಂಪರ್ಕ ಕಡಿತಗೊಳ್ಳಲಿದೆ, ಇಲ್ಲವೇ ಹೆಚ್ಚಿನ ದರ ನೀಡಿ ಕೊಳ್ಳಬೇಕು ಎಂಬುದಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವದಂತಿ ನಗರದ ವಿವಿಧ ಗ್ಯಾಸ್ ಏಜೆನ್ಸಿಗಳ ಹೊಸ ತಲೆನೋವು ತಂದಿಟ್ಟಿದೆ.
    ಇ-ಕೈವಿಸಿ ಮಾಡಿಸಿದರೆ ಜನವರಿ ಒಂದರಿಂದ ಸಬ್ಸಿಡಿ ಬರಲಿದೆ, 903 ರೂ.ಗೆ ಈಗ ಸಿಗುವ ಈಗಿರುವ ಗೃಹಬಳಕೆ ಸಿಲಿಂಡರ್ 500 ರೂ.ಗೆ ಸಿಗುತ್ತದೆ. ಇಲ್ಲವಾದಲ್ಲಿ ಸಬ್ಸಿಡಿರಹಿತವಾಗಿ 1400 ರೂ. ತೆತ್ತು ಪಡೆಯಬೇಕಾಗುತ್ತದೆ ಎಂಬ ವದಂತಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ ಅದರ ಬಗ್ಗೆ ಯಾರಲ್ಲೂ ಖಚಿತತೆ ಇಲ್ಲ.
    ಆದರೂ, ಕಳೆದ ನಾಲ್ಕೈದು ದಿನಗಳಿಂದ ಗ್ಯಾಸ್ ಏಜೆನ್ಸಿ ಕೇಂದ್ರಗಳ ಎದುರು ಜನಸಂದಣಿ ಮಾತ್ರ ಹೆಚ್ಚುತ್ತಲೇ ಇದೆ. ಆಧಾರ್‌ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ, ಗ್ಯಾಸ್ ಏಜೆನ್ಸಿ ಪುಸ್ತಕ ಕೈಲಿಡಿದು ಬೆಳಗ್ಗೆ ಆರರಿಂದಲೇ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಅವರನ್ನು ನಿಯಂತ್ರಿಸುವುದು, ಸ್ಪಂದಿಸುವುದು ಗ್ಯಾಸ್ ಏಜೆನ್ಸಿ ಸಿಬ್ಬಂದಿಗೆ ಸವಾಲಾಗಿದೆ.
    ಪ್ರಧಾನಮಂತ್ರಿ ಉಜ್ವಲ ಯೋಜನೆ ಫಲಾನುಭವಿಗಳಿಂದ ಬೆರಳಚ್ಚು ಪಡೆದು ಆಧಾರ್ ದೃಢೀಕರಣ ಮಾಡಿಕೊಳ್ಳುವಂತೆ ಕೇಂದ್ರ ಸರ್ಕಾರದ ಇಂಧನ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಎಲ್ಲ ಅನಿಲ ನಿಗಮಗಳ ಮುಖ್ಯ ವ್ಯವಸ್ಥಾಪಕ ನಿರ್ದೇಶಕರಿಗೆ ಆದೇಶ ಹೊರಡಿಸಿತ್ತು.
    ಅಡುಗೆ ಅನಿಲ ದುರ್ಬಳಕೆ ತಡೆಯುವ ಉದ್ದೇಶದಡಿ ನೈಜ ಬಳಕೆದಾರರ ರುಜುವಾತಿಗಾಗಿ ಈ ಬೆರಳಚ್ಚು ಪಡೆಯಲು ಸೂಚನೆ ಇದೆ. ಇದಕ್ಕೆ ಕಡೆಯ ದಿನಾಂಕವಿಲ್ಲ. ಅಥವಾ ಅಡುಗೆ ಅನಿಲದ ದರ ಇಳಿಕೆ ಮಾಡುವ ಪ್ರಸ್ತಾಪವಿಲ್ಲ ಎನ್ನಲಾಗಿದೆ. ಆದಾಗ್ಯೂ ಜನಮರುಳೋ ಜಾತ್ರೆ ಮರುಳೋ ಎಂಬಂತೆ ಗ್ಯಾಸ್ ಏಜೆನ್ಸಿ ಕಚೇರಿಗಳ ಬಳಿ ನಿತ್ಯ ತಿಂಡಿ-ಊಟ ಬಿಟ್ಟು ಜನರು ನಿಲ್ಲುವುದು ಸಹಜವಾಗಿದೆ.
    ತ್ರಿಶೂಲ್ ಚಿತ್ರಮಂದಿರ ಸಮೀಪದ ಗ್ಯಾಸ್ ಏಜೆನ್ಸಿ ಕಚೇರಿಯೊಂದರ ಬಳಿ ಶುಕ್ರವಾರ ಕೂಡ ಬೆಳಗ್ಗಿನಿಂದಲೇ ಸರತಿ ಸಾಲು ನಿಂತಿತ್ತು. ಅಲ್ಲಿದ್ದವರನ್ನು ಕೇಳಿದರೆ ‘ಥಂಬ್ ಕೊಡಲು ನಿಂತಿದ್ದೇವೆ, ಮೋದಿ ಎಷ್ಟು ಹಣ ಹಾಕುತ್ತಾರೆ ಗೊತ್ತಿಲ್ಲ’ ಎನ್ನುತ್ತಾರೆ. ದೂರದ ಹರಪನಹಳ್ಳಿ, ಜಗಳೂರು, ಹರಿಹರ ತಾಲೂಕಿನಿಂದಲೂ ಗ್ರಾಹಕರು ನಿಂತಿದ್ದರು. ವಯೋವೃದ್ಧರು ಕಟ್ಟೆಗಳಿಗೆ ಒರಗಿ ಕೂರುತ್ತ ಮುಂದೆೆ ಸಾಗುತ್ತಿದ್ದರು.
    ‘ಫೇಸ್‌ಬುಕ್, ವಾಟ್ಸಾೃಪ್‌ನಲ್ಲಿ ಬಂದಿದ್ದನ್ನೇ ಜನರು ನಿಜ ಎಂದುಕೊಂಡು ಬರುತ್ತಿದ್ದಾರೆ. ಕೆಲವರು ಜಗಳ ಮಾಡುತ್ತಲೇ ಬರುತ್ತಾರೆ. ಅವರಿಗೆ ಹೇಳಿಹೇಳಿ ಸಾಕಾಗಿದೆ. ಒಂದು ದಿನಕ್ಕೆ ಐದುನೂರು- ಆರುನೂರು ಜನರು ಬಂದರೆ ಹೇಗೆ? ನಾಲ್ಕು ದಿನದಿಂದ ನಮಗೆ ಪುರುಸೊತ್ತು ಸಿಗುತ್ತಿಲ್ಲ’ ಎಂದು ಅಲ್ಲಿನ ಸಿಬ್ಬಂದಿ ಪ್ರತಿಕ್ರಿಯಿಸಿದರು.
    ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್‌ನ 24, ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್‌ನ 10, ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್‌ನ 11 ಸೇರಿ ಜಿಲ್ಲೆಯಲ್ಲಿ ಒಟ್ಟು 45 ಗ್ಯಾಸ್ ಏಜೆನ್ಸಿಗಳಿವೆ. ಸುಮಾರು 50ಸಾವಿರ ಉಜ್ವಲ ಫಲಾನುಭವಿಗಳಿದ್ದಾರೆ. ಒಟ್ಟು 4 ಲಕ್ಷ ಗ್ಯಾಸ್ ಸಿಲಿಂಡರ್ ಗ್ರಾಹಕರಿರುವ ಅಂದಾಜಿದೆ.
    ಬಹು ವರ್ಷದ ನಂತರ ಇದೇ ಪ್ರಥಮ ಬಾರಿಗೆ ಈ ಪ್ರಕ್ರಿಯೆ ಮಾಡಲಾಗುತ್ತಿದೆ. ಇದರ ಹಿಂದೆ ಯಾವ ಯೋಜನೆ ಉದ್ದೇಶವಿದೆ ಎಂದು ಸ್ಪಷ್ಟವಾಗಿಲ್ಲ. ಆದರೆ ಎಲ್ಲ ಗ್ರಾಹಕರೂ ಕೂಡ ಇ-ಕೈವಿಸಿ ಮಾಡಬೇಕು. ಇದಕ್ಕೆ ಯಾವುದೇ ಕಾಲ ಅಂತಿಮಗೊಳಿಸಿಲ್ಲ ಎನ್ನುತ್ತಾರೆ ಗ್ಯಾಸ್ ಏಜೆನ್ಸಿ ಮಾಲೀಕರು. ಡಿ.31ರ ನಂತರವೂ ಗ್ರಾಹಕರು ಇ-ಕೆವೈಸಿ ಮುಂದುವರಿಸಬಹುದು ಎಂದು ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್ ಕೂಡ ತನ್ನೆಲ್ಲ ಸಿಲಿಂಡರ್ ಸರಬರಾಜುದಾರರಿಗೆ ಶುಕ್ರವಾರ ಸಂದೇಶ ನೀಡಿದೆ.

    ಇ-ಕೆವೈಸಿ ಪ್ರಕ್ರಿಯೆಯನ್ನು ಬೇಗನೇ ಪೂರ್ಣಗೊಳಿಸಲು ಕೇಂದ್ರ ಸರ್ಕಾರ ತಿಳಿಸಿದೆ. ಆದರೆ, ಡಿಸೆಂಬರ್ 31 ಅಂತಿಮ ದಿನ ಎಂದು ಹೇಳಿಲ್ಲ. ಹೀಗಾಗಿ ಜನರು ಗಾಬರಿ ಪಡಬೇಕಿಲ್ಲ. ತರಾತುರಿಯಲ್ಲಿ ಗ್ಯಾಸ್ ಏಜೆನ್ಸಿ ಕಚೇರಿಗಳಿಗೆ ಹೋಗಬೇಕಿಲ್ಲ.
    ಶಿದ್ರಾಮ ಮಾರಿಹಾಳ
    ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಡಿಡಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts