More

    ಕಿರುಕುಳ ನಿಲ್ಲಿಸದಿದ್ದರೆ ಶಿಕ್ಷೆ : ವೈ.ಸಂಪಂಗಿ ವಿರೋಧಿಗಳಿಗೆ ಸಚಿವ ಮುನಿರತ್ನ ಎಚ್ಚರಿಕೆ, ಬಿಜೆಪಿ ಶಕ್ತಿ ಪ್ರದರ್ಶನ

    ಕೆಜಿಎಫ್: ಮಾಜಿ ಶಾಸಕ ವೈ.ಸಂಪಂಗಿಗೆ ನಮ್ಮದೇ ಪಕ್ಷದ ಕೆಲವರು ಕಿರುಕುಳ ನೀಡುತ್ತಾ ಬರುತ್ತಿದ್ದು, ಅಂಥವರು ವರ್ತನೆ ಬದಲಿಸಿಕೊಳ್ಳದಿದ್ದರೆ ಮುಂದೆ ತಕ್ಕ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಎಚ್ಚರಿಸಿದರು.
    ನಗರದ ನಾಗಶೆಟ್ಟಿಹಳ್ಳಿ ಬಳಿ ಸಂಪಂಗಿ ಹುಟ್ಟಹಬ್ಬ ಪ್ರಯುಕ್ತ ಆಯೋಜಿಸಿದ್ದ ಬೃಹತ್​ ಸಭೆ ಉದ್ದೇಶಿಸಿ ಮಾತನಾಡಿ, ಹಿಂದೆ ನಡೆದ ಕೆಲವು ಘಟನೆಗಳನ್ನು ಮುಂದಿಟ್ಟುಕೊಂಡು, ಕೆಲವರು ರಾಜಕೀಯವಾಗಿ ತೇಜೋವಧೆ ಮಾಡುತ್ತಿದ್ದಾರೆ. ಆದರೆ ನಾವಿರುವ ತನಕ ಅವರನ್ನು ಯಾರೂ ಏನೂ ಮಾಡಲು ಸಾಧ್ಯವಿಲ್ಲ. ಅವರು ಎಷ್ಟೇ ಬಲಿಷ್ಠ, ಪ್ರಭಾವಿಯಾಗಿರಲಿ ಕಿರುಕುಳ ಸಹಿಸಲು ಸಾಧ್ಯವಿಲ್ಲ ಎಂದರು.
    ಸಂಪಂಗಿ ಜತೆಗೆ ಬಿಜೆಪಿ, ನಾವೆಲ್ಲರೂ ಇದ್ದೇವೆ. ಮುಂದಿನ ದಿನಗಳಲ್ಲಿ ನೂರಾರು ಕೈಗಾರಿಕೆಗಳು ಬರಲಿದ್ದು, ನಗರದಿಂದ ಕಾರ್ಮಿಕರು ಬೆಂಗಳೂರು ಮತ್ತಿತರ ಕಡೆ ಉದ್ಯೋಗ ಅರಸಿ ಹೋಗುವ ಪರಿಸ್ಥಿತಿ ನಿಲ್ಲಲಿದೆ. ನಿರುದ್ಯೋಗ ಸಮಸ್ಯೆ ನಿವಾರಣೆಗೆ ಸಂಪಂಗಿ ಕೈಹಾಕಿದ್ದು, ಇದಕ್ಕಿಂತ ದೊಡ್ಡ ವಿಚಾರ ಮತ್ತೊಂದಿಲ್ಲ. ಅವರಿಗೆ ಮುಂದಿನ ದಿನಗಳಲ್ಲಿ ನಿಮ್ಮೆಲ್ಲರ ಆಶೀರ್ವಾದವಿರಲಿ ಎಂದು ಹೇಳಿದರು.
    ಸಂಪಂಗಿ ಮಾತನಾಡಿ, ರಾಜಕೀಯ ಹಿನ್ನೆಲೆ ಇಲ್ಲದಿದ್ದರೂ ಹೋರಾಟದಿಂದ ಮೇಲೆ ಬಂದಿರುವೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸಂಘಟನೆಯಿಂದ ಬಂದ ವ್ಯಕ್ತಿಯೆಂದು ಪರಿಗಣಿಸಿ ಸ್ಪರ್ಧಿಸಲು ಅವಕಾಶ ಕಲ್ಪಿಸಿದ್ದರಿಂದ ಶಾಸಕನಾಗಿದ್ದೆ. ಆದರೆ ಕೆಲವು ಅಹಿತಕರ ಘಟನೆಗಳಿಂದ ಮತ್ತೆ ಚುನಾವಣೆಗೆ ಸ್ಪರ್ಧಿಸಲಿಲ್ಲ. ನಮ್ಮ ತಾಯಿ ಸ್ಪರ್ಧಿಸಿ ಗೆದ್ದರು. ನಂತರದ ಚುನಾವಣೆಯಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಡಿಸಿಸಿ ಬ್ಯಾಂಕ್​ನಿಂದ ಶೂನ್ಯ ಬಡ್ಡಿ ಸಾಲ ನೀಡಿ, ಮನ್ನಾ ಮಾಡುವುದಾಗಿ ಭರವಸೆ ಕೊಟ್ಟು ಆಯ್ಕೆಯಾದರು. ಆದರೂ ನಾನು ಎದೆಗುಂದದೆ ಕ್ಷೇತ್ರದಲ್ಲಿ ಕಾರ್ಯಕರ್ತರ ನೋವಿಗೆ ಸ್ಪಂದಿಸುತ್ತಿದ್ದೇನೆ ಎಂದು ಹೇಳಿದರು.
    ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಮತ್ತು ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು. 10 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದು, ಈ ಕಾರ್ಯಕ್ರಮ ಶಕ್ತಿ ಪ್ರದರ್ಶನಕ್ಕೆ ನಾಂದಿಹಾಡಿತು.
    ಮಾಜಿ ಸಚಿವ ವರ್ತೂರು ಪ್ರಕಾಶ್​, ಮಾಜಿ ಶಾಸಕರಾದ ಮಂಜುನಾಥಗೌಡ, ನಂಜುಂಡಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ವೇಣುಗೋಪಾಲ್​, ತಾಪಂ ಮಾಜಿ ಸದಸ್ಯ ಕೃಷ್ಣಮೂರ್ತಿ, ಎನ್​.ಜಿ.ಹುಲ್ಕೂರು ಗ್ರಾಪಂ ಅಧ್ಯಕ್ಷ ಸುನೀಲ್​ಕುಮಾರ್​, ಕ್ಯಾಸಂಬಳ್ಳಿ ಗ್ರಾಪಂ ಅಧ್ಯಕ್ಷ ಜಗದಾಂಭಿ, ಮಾರಿಕುಪ್ಪ ಜಯರಾಮರೆಡ್ಡಿ ಕಣ್ಣೂರು ವಿಜಿಕುಮಾರ, ವೆಂಕಟರೆಡ್ಡಿ ಇದ್ದರು.

    ಮುನಿಸ್ವಾಮಿಗೆ ಎಚ್ಚರಿಕೆ: ಸಂಸದ ಮುನಿಸ್ವಾಮಿಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದರೂ ಬರಲಿಲ್ಲ. ಅವರು ಒಂದು ಮಾತು ನೆನಪಿನಲ್ಲಿಟ್ಟುಕೊಳ್ಳಬೇಕು. 2023ಕ್ಕೆ ವಿಧಾನಸಭೆ ಚುನಾವಣೆ ಬರಲಿದೆ, ಅದರ ಬೆನ್ನಲ್ಲೇ 2024ಕ್ಕೆ ಲೋಕಸಭೆ ಚುನಾವಣೆ ಬರಲಿದೆ. ಇದನ್ನು ಅರಿತು ನಡೆದರೆ ಒಳಿತು ಎಂದು ಸಂಪಂಗಿ ಮಾರ್ಮಿಕವಾಗಿ ಸಂಸದರಿಗೆ ಎಚ್ಚರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts