More

    ಕಿಮ್ಸ್ ಸಿಬ್ಬಂದಿಗೆ ಕರೊನಾತಂಕ

    ಹುಬ್ಬಳ್ಳಿ: ಇಲ್ಲಿನ ಕಿಮ್ಸ್​ನ ಕೆಲ ವಿಭಾಗಕ್ಕೆ ಚಿಕಿತ್ಸೆಗೆಂದು ಬಂದವರಲ್ಲಿ ಕರೊನಾ ಸೋಂಕು ಪತ್ತೆಯಾಗುತ್ತಿದ್ದು, ವೈದ್ಯಕೀಯ ಸಿಬ್ಬಂದಿಯಲ್ಲಿ ಆತಂಕ ಶುರುವಾಗಿದೆ.

    ಹೊರ ರೋಗಿಗಳ ವಿಭಾಗ, ದಂತ ವೈದ್ಯಕೀಯ, ಶಸ್ತ್ರ ಚಿಕಿತ್ಸೆ, ಎಲುವು ಮತ್ತು ಕೀಲು ಸೇರಿದಂತೆ ಕೆಲ ವಿಭಾಗಕ್ಕೆ ಚಿಕಿತ್ಸೆಗೆಂದು ಇತ್ತೀಚೆಗೆ ಬಂದ ಕೆಲವರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದರಿಂದ, ಸೋಂಕು ತಮಗೆ ತಾಗಿಬಿಟ್ಟರೆ….ಎಂಬ ಭಯ ಸಿಬ್ಬಂದಿಯನ್ನು ಕಾಡುತ್ತಿದೆ.

    ಕಿಮ್ಸ್​ನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಕರೊನಾ ಸೋಂಕಿತರಿಗಾಗಿ ಮೀಸಲಿಡಲಾಗಿದೆ. ಮುಖ್ಯ ಕಟ್ಟಡದ ಎಲ್ಲ ವಿಭಾಗಗಳಲ್ಲಿ ವೈದ್ಯಕೀಯ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸೋಂಕು ಗುಪ್ತಗಾಮಿನಿಯಾಗಿ ಪಸರಿಸತೊಡಗಿದೆ. ಕಿಮ್ಸ್​ನ ಕೆಲ ವಿಭಾಗದಲ್ಲೂ ಒಂದೆರಡು ಪ್ರಕರಣ ಕಂಡುಬಂದಿದೆ. ಇಲ್ಲಿ ಕರ್ತವ್ಯ ನಿರ್ವಹಿಸಿ ಮನೆಗೆ ಹೋಗುತ್ತೇವೆ. ತಮ್ಮಿಂದ ತಮ್ಮ ಕುಟುಂಬಕ್ಕೂ ಎಲ್ಲಿ ಸಮಸ್ಯೆಯಾಗುವುದೋ ಎಂಬ ಭೀತಿ ಕಾಡುತ್ತದೆ ಎಂದು ವೈದ್ಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿ ಆತಂಕ ವ್ಯಕ್ತಪಡಿಸುತ್ತಿದ್ದಾರೆ.

    ಕರೊನಾ ಭೀತಿ ಹೋಗಲಾಡಿಸಿದ ಶಿಕ್ಷಕರು

    ಅಳ್ನಾವರ: ಕರೊನಾ ಭೀತಿಯಿಂದ ಪರೀಕ್ಷೆಗೆ ತೆರಳದೆ ಮನೆಯಲ್ಲಿ ಕುಳಿತಿದ್ದ ವಿದ್ಯಾರ್ಥಿನಿಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಶಿಕ್ಷಕರು ಮನವೊಲಿಸಿ ಪರೀಕ್ಷೆ ಬರೆಸಿದ್ದಾರೆ.

    ತಾಲೂಕಿನ ಕಾಶೆನಟ್ಟಿ ಗ್ರಾಮದ ಲಕ್ಷ್ಮೀ ಶನಿವಾರ ನಡೆದ ಗಣಿತ ಪರೀಕ್ಷೆ ಬರೆದ ವಿದ್ಯಾರ್ಥಿನಿ. ಗುರುವಾರ ನಡೆದ ಕನ್ನಡ ಭಾಷಾ ಪರೀಕ್ಷೆಗೆ ಈಕೆಯನ್ನು ಮನೆಯವರು ಕಳುಹಿಸಿರಲಿಲ್ಲ. ಈ ಬಗ್ಗೆ ಶಿಕ್ಷಕರು ವಿಚಾರಿಸಿದಾಗ ಕರೊನಾದಿಂದ ಆತಂಕಗೊಂಡು ಆಕೆಯನ್ನು ಪಾಲಕರು ಪರೀಕ್ಷೆಗೆ ಕಳುಹಿಸಿಲ್ಲ ಎಂಬ ಮಾಹಿತಿ ಸಿಕ್ಕಿತ್ತು. ಬಾಲಕಿಯ ಮನೆಗೆ ತೆರಳಿದ್ದ ಇಲಾಖೆಯ ಅಧಿಕಾರಿಗಳು ಹಾಗೂ ಶಿಕ್ಷಕರು, ಪಾಲಕರ ಮನವೊಲಿಸಿದ್ದರು. ಶನಿವಾರ ಬೆಳಗ್ಗೆ ಅಳ್ನಾವರದ ಕಸ್ತೂರಬಾ ಪ್ರೌಢಶಾಲಾ ಪರೀಕ್ಷಾ ಕೇಂದ್ರಕ್ಕೆ ತೆರಳಿದ ವಿದ್ಯಾರ್ಥಿನಿ, ನಿರಾತಂಕದಿಂದ ಪರೀಕ್ಷೆ ಬರೆದು ಮರಳಿದ್ದಾಳೆ. ಇಲಾಖೆಯ ಅಧಿಕಾರಿಗಳು ಹಾಗೂ ಶಿಕ್ಷಕರ ಕಾರ್ಯಕ್ಕೆ ಶಿಕ್ಷಣ ಸಚಿವ ಸುರೇಶಕುಮಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ನಾವು ಬಡವರು, ದುಡಿದು ತಿನ್ನುವವರು. ಪರೀಕ್ಷೆಗೆ ಹೋಗಿ ಕರೊನಾ ಅಂಟಿದರೆ ಮನೆಮಂದಿಯೆಲ್ಲ ಆಸ್ಪತ್ರೆಗೆ ಹೋಗಬೇಕಾಗುತ್ತದೆ, ಕುಟುಂಬದ ಪರಿಸ್ಥಿತಿ ಕೆಡುತ್ತದೆ ಎಂದು ಹೆದರಿ ತಂದೆ- ತಾಯಿ ಮೊದಲ ದಿನ ಕಳುಹಿಸಿರಲಿಲ್ಲ. ಆದರೆ, ಶಿಕ್ಷಕರು ಮನೆಗೆ ಬಂದು ಕರೊನಾ ಹರಡದಂತೆ ಕ್ರಮ ಕೈಗೊಂಡಿದ್ದೇವೆ ಎಂದು ತಿಳಿವಳಿಕೆ ಹೇಳಿದ ಮೇಲೆ ಧೈರ್ಯ ಬಂತು. ಮನೆಯಲ್ಲಿ ಎಲ್ಲರೂ ಒಪ್ಪಿದರು. ಇವತ್ತು ಪರೀಕ್ಷೆ ಬರೆದು ಬಂದೆ. ಮುಂದಿನ ಎಲ್ಲ ಪರೀಕ್ಷೆಗಳಿಗೂ ಅಗತ್ಯವಾಗಿ ಹಾಜರಾಗುತ್ತೇನೆ.

    – ಲಕ್ಷ್ಮೀ, ವಿದ್ಯಾರ್ಥಿನಿ

    ವೃದ್ಧ ನಿಧನ, ಅಂತ್ಯಕ್ರಿಯೆಗೆ ತೊಡಕು

    ಧಾರವಾಡ: ನಗರದ ಮಿಚಿಗನ್ ಕಾಂಪೌಂಡ್ ನಿವಾಸಿ ಚಂದ್ರಶೇಖರ ಮಲ್ಲೇಶಪ್ಪ ಕಾಮೋಜಿ (83) ಶುಕ್ರವಾರ ರಾತ್ರಿ ಅನಾರೋಗ್ಯದಿಂದ ನಿಧನ ಹೊಂದಿದರು. ಅವರಿಗೆ ಪತ್ನಿ, ಪುತ್ರ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಗಳಿದ್ದಾರೆ.

    ಅವರ ಪತ್ನಿ ಹಾಗೂ ಮೂವರು ಮಕ್ಕಳು ಸಹ ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ. ಹೀಗಾಗಿ, ಪಾರ್ಥಿವ ಶರೀರವನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಇರಿಸಲಾಗಿದೆ.

    ಕರೊನಾ ಕಾಟ:

    ಚಂದ್ರಶೇಖರ ಅವರ ಪುತ್ರ ಬೆಂಗಳೂರಿನಿಂದ ಮನೆಗೆ ವಾಪಸಾದಾಗ ನೆಗಡಿ, ಜ್ವರ ಶುರುವಾಗಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪತ್ನಿ ಹಾಗೂ ಇಬ್ಬರು ಪುತ್ರಿಯರು ಸಹ ಅನಾರೋಗ್ಯ ಕಾಣಿಸಿಕೊಂಡು ಆಸ್ಪತ್ರೆಗೆ ತೆರಳಿದ್ದರಿಂದ ವೃದ್ಧ ಚಂದ್ರಶೇಖರ ಒಬ್ಬರೇ ಮನೆಯಲ್ಲಿದ್ದರು. ಏಕಾಂಗಿಯಾಗಿ ಇದ್ದುದರಿಂದ ತೀವ್ರ ಮಾನಸಿಕವಾಗಿ ಕುಗ್ಗಿದ್ದ ಅವರ ಆರೋಗ್ಯದಲ್ಲಿಯೂ ಏರುಪೇರಾಗಿದ್ದರಿಂದ ಶುಕ್ರವಾರ ರಾತ್ರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

    ಕರೊನಾ ವೈರಸ್ ವ್ಯಾಪಿಸುತ್ತಿರುವುದರಿಂದ ಆಸ್ಪತ್ರೆಯಲ್ಲಿ ಯಾರೇ ಮೃತಪಟ್ಟರೂ ಗಂಟಲು ದ್ರವ ಪರೀಕ್ಷೆ ಮಾಡಲಾಗುತ್ತಿದೆ. ಚಂದ್ರಶೇಖರ ಅವರ ಮಾದರಿ ಸಂಗ್ರಹಿಸಿದ್ದು, ವರದಿಗಾಗಿ ಕಾಯಲಾಗುತ್ತಿದೆ. ಅವರ ಮಕ್ಕಳ ಆರೋಗ್ಯದಲ್ಲಿ ಚೇತರಿಕೆಯಾಗುತ್ತಿದ್ದರೂ, ಪೂರ್ತಿ ಗುಣವಾಗಲು ಇನ್ನೂ ಸಮಯ ಬೇಕು. ಚಂದ್ರಶೇಖರ ಅವರ ಪತ್ನಿ ಜಿಲ್ಲಾ ಆಸ್ಪತ್ರೆಯಲ್ಲಿ ಉಪಚಾರದಲ್ಲಿದ್ದು, ಕುಟುಂಬದ ವತಿಯಿಂದ ಅವರನ್ನು ನೋಡಿಕೊಳ್ಳುವವರು ಯಾರು ಎಂಬ ಪ್ರಶ್ನೆ ಉದ್ಭವಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts