More

    ಕಾಳಗಿ ತಹಸಿಲ್​ನಲ್ಲಿ ದಲ್ಲಾಳಿಗಳದ್ದೇ ಕಾರುಬಾರು

    ಸೂರ್ಯಕಾಂತ ಕಟ್ಟಿಮನಿ ಕಾಳಗಿ
    ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದಕ್ಕಾಗಿಯೇ ಸರ್ಕಾರಿ ಕಚೇರಿಗಳನ್ನು ಆರಂಭಿಸಲಾಗಿದೆ. ಆದರೆ ಇಂತಹ ಕಚೇರಿಗಳಲ್ಲಿ ಜನರ ಕೆಲಸಗಳಿಗಾಗಿ ಸತಾಯಿಸಲಾಗುತ್ತಿದೆ. ಇದರಿಂದ ಜನತೆಗೆ ಸರ್ಕಾರಿ ಕಚೇರಿಗಳ ಮೇಲೆ ನಂಬಿಕೆಯೇ ಇಲ್ಲದಂತಾಗಿದೆ.
    ಹೌದು. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಕಾಳಗಿಯ ತಹಸಿಲ್ ಕಚೇರಿಯಾಗಿದೆ. ಚಿಂಚೋಳಿ ಹಾಗೂ ಚಿತ್ತಾಪುರ ತಾಲೂಕವನ್ನು ವಿಭಜನೆ ಮಾಡಿ ಕಾಳಗಿ ತಾಲೂಕು ಘೋಷಣೆ ಮಾಡಲಾಗಿದೆ. ತಹಸಿಲ್ ಸೇರಿ ಒಂದಿಷ್ಟು ಕಚೇರಿಗಳು ಆರಂಭವಾಗಿವೆ. ಆದರೆ ಜನರ ಕೆಲಸಗಳಿಗೆ ಮಾತ್ರ ಸ್ಪಂದಿಸುವವರು ಇಲ್ಲದಂತಾಗಿದೆ.
    ನಿತ್ಯ ದೂರದ ಹಳ್ಳಿಗಳಿಂದ ರೈತರು, ಮಹಿಳೆಯರು ಹಾಗೂ ವೃದ್ಧರು ವಿವಿಧ ಕೆಲಸಗಳಿಗಾಗಿ ತಹಸಿಲ್ ಕಚೇರಿಗೆ ಬರುತ್ತಾರೆ. ಆದರೆ ಸಮರ್ಪಕ ಮಾಹಿತಿ ನೀಡಬೇಕಾದ ಕಚೇರಿ ಸಿಬ್ಬಂದಿ ಕೆಲಸ ಮಾಡದೆ ನಿತ್ಯ ಕಚೇರಿಗೆ ಅಲೆದಾಡಿಸುತ್ತಿದ್ದಾರೆ. 1-2 ದಿನ ಅಥವಾ 1-2 ವಾರಗಳಲ್ಲಿ ಆಗಬೇಕಾದ ಕೆಲಸಗಳನ್ನು ತಿಂಗಳುಗಟ್ಟಲೇ ಎಳೆದೊಯ್ಯಲಾಗುತ್ತಿದೆ. ತಿಂಗಳಲ್ಲಿ ಮುಗಿಯಬೇಕಾದ ಕೆಲಸಗಳು ವರ್ಷವಾದರೂ ಆಗುತ್ತಿಲ್ಲ ಎಂದು ಜನತೆ ಕಿಡಿಕಾರುತ್ತಿದ್ದಾರೆ. ಜನರಿಗಾಗಿ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳ ಬಗ್ಗೆ ಮಾಹಿತಿ ಕೊಡುವವರು ಇಲ್ಲದಂತಾಗಿದೆ. ಇದನ್ನೆ ಬಂಡವಾಳ ಮಾಡಿಕೊಂಡಿರುವ ದಲ್ಲಾಳಿಗಳು ವಸೂಲಿಗೆ ಇಳಿದಿದ್ದಾರೆ. ಸಂಬಂಧಿತ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗಮನಹರಿಸಿ ಸಾರ್ವಜನಿಕರ ಕೆಲಸ ಮಾಡಿಕೊಡಲು ಅಧಿಕಾರಿಗಳಿಗೆ ಸೂಚನೆ ನೀಡಬೇಕಿದೆ. ದಲ್ಲಾಳಿಗಳ ಹಾವಳಿಗೆ ಬ್ರೇಕ್ ಹಾಕಬೇಕಿದೆ ಎಂಬುದು ಜನರ ಒಕ್ಕೊರಲ ಒತ್ತಾಯ.

    ನನ್ನ ಹೆಸರಿನಲ್ಲಿ 6.10 ಎಕರೆ ಜಮೀನಿದೆ. ಇದರಲ್ಲಿ 4.10 ಎಕರೆ ಹೊಲವನ್ನು ಪತ್ನಿ ಹೆಸರಿಗೆ ಮಾಡಿಕೊಡುವಂತೆ ಜ.1ರಿಂದ ತಹಸಿಲ್ ಕಚೇರಿಗೆ ಅಲೆದಾಡುತ್ತಿದ್ದೇನೆ. 6 ತಿಂಗಳು ಕಳೆದರೂ ನನ್ನ ಕೆಲಸವಾಗಿಲ್ಲ. ಮನೆ ಹಾಗೂ ಜಮೀನು ಬಿಟ್ಟು ಕಚೇರಿಗೆ ಅಲೆದಾಡುವುದೆ ಕೆಲಸವಾಗಿದೆ.
    | ಮಚೇಂದ್ರ ಹರಿಬಾ ಸೆಳಕೆ, ರೈತ, ನಿಪ್ಪಾಣಿ


    ತಹಸಿಲ್ ಕಚೇರಿಯಲ್ಲಿ ಸಿಬ್ಬಂದಿ ಅವ್ಯವಹಾರ ನಡೆಯುತ್ತಿರುವ ಬಗ್ಗೆ ಇಲ್ಲಿವರೆಗೆ ಯಾವುದೇ ದೂರುಗಳು ಬಂದಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಕಚೇರಿಯಲ್ಲಿ ಯಾರಾದರೂ ನಿಮ್ಮ ಕೆಲಸ ಮಾಡಿಕೊಡದಿದ್ದಲ್ಲಿ ನನಗೆ ತಿಳಿಸಿ. ಜನರಿಗಾಗಿ ನಾವು ಕೆಲಸ ಮಾಡುತ್ತಿದ್ದೇವೆ.
    | ನೀಲಪ್ರಭ ಬಬಲಾದ, ತಹಸೀಲ್ದಾರ್

    ಶಾಸಕರ ಮಾತಿಗೂ ಕ್ಯಾರೆ ಎನ್ನದ ಸಿಬ್ಬಂದಿ
    ಶಾಸಕ ಡಾ. ಅವಿನಾಶ ಜಾಧವ್ ಹಲವು ಬಾರಿ ತಹಸಿಲ್ ಕಚೇರಿಗೆ ಭೇಟಿ ನೀಡಿ, ಜನರೊಂದಿಗೆ ಉತ್ತಮ ರೀತಿಯಲ್ಲಿ ವ್ಯವಹರಿಸಿ, ಸರ್ಕಾರಿ ಯೋಜನೆಗಳ ಬಗ್ಗೆ ಸಮರ್ಪಕ ಮಾಹಿತಿ ನೀಡಿ. ಸರ್ಕಾರಿ ಕೆಲಸಗಳಿಗಾಗಿ ಜನರನ್ನು ಸತಾಯಿಸಬೇಡಿ ಎಂದು ಸೂಚನೆ ನೀಡಿದ್ದರು. ಆದರೆ ಇಲ್ಲಿನ ಸಿಬ್ಬಂದಿ ಮಾತ್ರ ಶಾಸಕರ ಮಾತಿಕೆ ಎಳ್ಳಷ್ಟು ಬೆಲೆ ಕೊಡದೆ ಜನರನ್ನು ಕಚೇರಿಗೆ ಅಲೆದಾಡುವಂತೆ ಮಾಡುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts