More

    ಕಾರ್ಮಿಕರ ಕಲ್ಯಾಣ ನಿಧಿ ಅನ್ಯ ಉದ್ದೇಶಕ್ಕೆ ಬಳಕೆ ; ಮಾಜಿ ಸಭಾಪತಿ ಸುದರ್ಶನ್ ಆರೋಪ

    ವೇಮಗಲ್ : ಕಾರ್ಮಿಕ ವಿರೋಧಿ ಧೋರಣೆ ಅನುಸರಿಸುತ್ತಿರುವ ಸರ್ಕಾರ ಕಾರ್ಮಿಕರ ಕಲ್ಯಾಣಕ್ಕೆ ಬಳಸಬೇಕಿದ್ದ ನಿಧಿಯನ್ನು ಬೇರೆ ಉದ್ದೇಶಕ್ಕೆ ಬಳಸಿಕೊಳ್ಳುತ್ತಿದೆ ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಆರೋಪಿಸಿದರು.

    ವೇಮಗಲ್‌ನಲ್ಲಿ ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್ ಮತ್ತು ಕೆಪಿಸಿಸಿ ಕಾರ್ಮಿಕರ ವಿಭಾಗದಿಂದ ಭಾನುವಾರ ಹಮ್ಮಿಕೊಂಡಿದ್ದ ಕಟ್ಟಡ ಕಾರ್ಮಿಕರ ಹೋಬಳಿ ಸಮಾವೇಶ ಉದ್ಘಾಟಿಸಿ ಮಾತನಾಡಿ, ಪ್ರತಿ ವರ್ಷ ಕಾರ್ಮಿಕರ ಕಲ್ಯಾಣ ಮಂಡಳಿಗೆ ಕೋಟ್ಯಂತರ ಹಣ ಜಮೆ ಆಗುತ್ತದೆ. ಇದನ್ನು ಕಾರ್ಮಿಕರ ಏಳಿಗೆಗೆ ಬಳಸುವ ಬದಲು ಸರ್ಕಾರದ ಅನ್ಯ ಕಾರ್ಯಕ್ಕೆ ಬಳಸಿ ಕಾರ್ಮಿಕರ ಹಿತವನ್ನು ಕಡೆಗಣಿಸಿದೆ ಎಂದು ಆಪಾದಿಸಿದರು.

    ರಾಜ್ಯದ ಕಾರ್ಮಿಕರು, ರೈತರು, ಬಡವರ ವಿರೋಧಿಯಾಗಿ ನಡೆದುಕೊಳ್ಳುತ್ತಿರುವ ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರದ ಬದಲಾವಣೆಗೆ ಜನತೆ ಬಯಸಿದ್ದಾರೆ. ಬಹುಸಂಖ್ಯೆಯಲ್ಲಿರುವ ಕಾರ್ಮಿಕ ವರ್ಗ ಮುಂಬರುವ ದಿನಗಳಲ್ಲಿ ರಾಜಕೀಯವಾಗಿ ತೀರ್ಮಾನ ತೆಗೆದುಕೊಂಡು ಕಾರ್ಮಿಕ ವಿರೋಧಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕು ಎಂದರು.

    ಕೆಪಿಸಿಸಿ ಕಾರ್ಮಿಕರ ವಿಭಾಗದ ಅಧ್ಯಕ್ಷ ಪುಟ್ಟಸ್ವಾಮಿಗೌಡ ಮಾತನಾಡಿ, ಕೇಂದ್ರ ಸರ್ಕಾರ ಜನರಿಗೆ ನೀಡಿದ ಭರವಸೆ ಈಡೇರಿಲ್ಲ. ರಾಮಮಂದಿರ ಕಟ್ಟಲು ಇಟ್ಟಿಗೆ-ಹಣ ಸಂಗ್ರಹ ಮಾಡಿದ್ದ ಬಿಜೆಪಿ ಇದೀಗ ಮತ್ತೆ ಮಂದಿರದ ನೆಪದಲ್ಲಿ ಹಣ ಸಂಗ್ರಹಕ್ಕೆ ಮುಂದಾಗಿದೆ ಎಂದು ಟೀಕಿಸಿದರು. ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ 8200 ಕೋಟಿ ರೂ. ನಿಧಿ ಇರುವುದರಿಂದ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಆಗುವ ಮೂಲಕ ಮತ್ತಷ್ಟು ಸವಲತ್ತು ಪಡೆಯಲು ಮುಂದಾಗಬೇಕು ಎಂದರು.

    ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಚಂದ್ರಾರೆಡ್ಡಿ ಮಾತನಾಡಿ, ಬಿಜೆಪಿ ಸರ್ಕಾರದಿಂದ ಏನೂ ಅಭಿವೃದ್ಧಿ ಸಾಧ್ಯವಾಗದಿದ್ದರೂ ಮೋದಿ, ಅಮಿತ್ ಷಾ, ಅಂಬಾನಿ, ಆದಾನಿ ಅವರ ಉನ್ನತಿಯಾಗುತ್ತಿದೆ. ಬೆಮೆಲ್ ಮತ್ತು ಎಚ್‌ಎಎಲ್ ಖಾಸಗೀಕರಣಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ 10,000 ಕಾರ್ಮಿಕರ ಭವಿಷ್ಯಕ್ಕೆ ಕುತ್ತು ತರಲು ಹೊರಟಿದೆ. ಇದಕ್ಕೆ ಕಾಂಗ್ರೆಸ್ ಅವಕಾಶ ನೀಡುವುದಿಲ್ಲ ಎಂದರು.

    ಕೆಪಿಸಿಸಿ ಕಾರ್ಮಿಕರ ವಿಭಾಗದ ಜಿಲ್ಲಾಧ್ಯಕ್ಷ ಹೊನ್ನೇನಹಳ್ಳಿ ಯಲ್ಲಪ್ಪ ಮಾತನಾಡಿ, ಕಾಂಗ್ರೆಸ್ ಜಿಲ್ಲಾ ಕಚೇರಿ ಮತ್ತು ವೇಮಗಲ್‌ನಲ್ಲಿ ಶೀಘ್ರ ಕಾರ್ಮಿಕರ ಘಟಕದ ಕಚೇರಿ ತೆರೆಯಲಾಗುವುದು ಎಂದು ಪ್ರಕಟಿಸಿದರು. ಕೋಚಿಮುಲ್ ನಿರ್ದೇಶಕ ಡಿ.ವಿ. ಹರೀಶ್ ಮಾತನಾಡಿ, ಕಾರ್ಮಿಕರ ಸಮಸ್ಯೆಗಳಿಗೆ ಕಾಂಗ್ರೆಸ್ ಸ್ಪಂದಿಸುತ್ತಿದೆ. ಹೋರಾಟಗಳಿಗೆ ಅಗತ್ಯ ನೆರವು ನೀಡಲಿದೆ. ಸಂಘಟಿತ ಹೋರಾಟದ ಮೂಲಕ ಸೌಲಭ್ಯ ಪಡೆದುಕೊಳ್ಳಲು ಮುಂದಾಗಬೇಕು ಎಂದರು.

    ಕೆಪಿಸಿಸಿ ಕಾರ್ಮಿಕರ ವಿಭಾಗದ ಕಾರ್ಯದರ್ಶಿ ದಿನೇಶ್, ಜಿಲ್ಲಾ ಖಜಾಂಚಿ ಮಾಲೂರು ರವಿಕುಮಾರ್, ಕೋಲಾರ ತಾಲೂಕು ಅಧ್ಯಕ್ಷ ಕೊಡಿಯಪ್ಪ, ಖಜಾಂಚಿ ಲಕ್ಷ್ಮೀಕಾಂತಮ್ಮ, ಮುಖಂಡ ಸುರೇಶ್, ಜಗನ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ನವೀನ್ ಹಾಜರಿದ್ದರು.

    ಅವಿರೋಧ ಆಯ್ಕೆ: ಕೆಪಿಸಿಸಿ ಕಾರ್ಮಿಕರ ವಿಭಾಗದ ಹೋಬಳಿ ಜಿಲ್ಲಾಧ್ಯಕ್ಷರಾಗಿ ನಾಗರಾಜು, ಪದಾಧಿಕಾರಿಗಳಾಗಿ ಟಿ.ಮಂಜುನಾಥ್, ಬಿ.ಕೆ.ಶ್ರೀನಿವಾಸ್, ಕೆ.ಎಸ್.ಮಾಲಾ, ಸವಿತಾ, ಲಕ್ಷ್ಮೀಕಾಂತಮ್ಮ ಆಯ್ಕೆಯಾದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts