More

    ಪರಂಪರೆ ಉಳಿಸಲು ಯುವಶಕ್ತಿಗಿರಲಿ ಕಾಳಜಿ : ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅಭಿಮತ

    ವೇಮಗಲ್ : ಯುವಶಕ್ತಿ ವಾಟ್ಸ್‌ಆ್ಯಪ್, ಫೇಸ್‌ಬುಕ್‌ಗೆ ಮಾರುಹೋಗದೆ ಹಿಂದಿನ ಕಾಲದ ಪರಂಪರೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

    ಕೋಲಾರ ತಾಲೂಕಿನ ವೇಮಗಲ್ ಸಿ ಬ್ಲಾಕ್‌ನಲ್ಲಿ ರೇಣುಕಾ ಯಲ್ಲಮ್ಮದೇವಿ ದೇವಾಲಯ ಜೀರ್ಣೋದ್ಧಾರ ನೂತನ ಶಿಲಾಬಿಂಬ, ವಿಮಾನ ಗೋಪುರ ಪ್ರತಿಷ್ಠಾನ ಮಹೋತ್ಸವದ ಅಂಗವಾಗಿ ಶುಕ್ರವಾರ ನಡೆದ ಸಾಮೂಹಿಕ ವಿವಾಹ ಹಾಗೂ ಸಭಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

    ಪುರಾತನ ಕಾಲದ, ಜೀರ್ಣಾವಸ್ಥೆಗೆ ತಲುಪಿರುವ ದೇವಾಲಯಗಳನ್ನು ಮರು ನಿರ್ಮಿಸುವ ಪರಂಪರೆ ಮುಂದುವರಿಸಿಕೊಂಡು ಹೋಗುತ್ತಿರುವುದು ಹೆಮ್ಮೆಯ ಸಂಗತಿ. ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಜನರಲ್ಲಿ ಭಕ್ತಿ ಭಾವ ಇನ್ನೂ ಉಳಿದಿದೆ ಎಂಬುದಕ್ಕೆ ಇದೇ ಸಾಕ್ಷಿ ಎಂದರು. ಅದ್ದೂರಿ ವಿವಾಹದ ಮೂಲಕ ಅಂತಸ್ತು ಪ್ರದರ್ಶಿಸುವ ಕಾಲಘಟ್ಟದಲ್ಲೂ ಸಾಮೂಹಿಕ ವಿವಾಹದ ವೇದಿಕೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ಹಣ ಉಳಿಸಿದ್ದೀರಿ, ಇದನ್ನು ಮುಂದಿನ ಜೀವನೋಪಾಯಕ್ಕಾಗಿ ಮುಡುಪಾಗಿಡಿ ಎಂದು ನವಜೋಡಿಗಳಿಗೆ ಕಿವಿಮಾತು ಹೇಳಿದರು.

    ಆಶೀರ್ವಚನ ನೀಡಿದ ವಿಜಯಪುರದ ಬಸವ ಕಲ್ಯಾಣ ಮಠದ ಡಾ. ಶ್ರೀ ಮಹದೇವ ಸ್ವಾಮೀಜಿ, ಹಿಂದು ಧರ್ಮ ಪಾಲಿಸುವವರ ಸಂಖ್ಯೆ ಹೆಚ್ಚಬೇಕು. ಕಡಿಮೆಯಾದಲ್ಲಿ ಧರ್ಮಗಳು ಅಸ್ತಿತ್ವ ಕಳೆದುಕೊಳ್ಳುವ ಅಪಾಯವಿದೆ ಎಂದು ಕಳವಳ ವ್ಯಕ್ತಪಡಿಸಿದರು. ಬೆಳ್ಳಾವಿ ಬೆಳ್ಳನಪುರಿ ವೀರಸಿಂಹಾಸನ ಸಂಸ್ಥಾನ ಮಠದ ಶ್ರೀ ಮಹಾಂತ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ನೆಮ್ಮದಿ ಜೀವನ ಸಾಗಿಸಲು ಅಧ್ಯಾತ್ಮ ಅವಶ್ಯಕ, ದೇವಾಲಯದ ಮಹತ್ವವನ್ನು ಪ್ರತಿಯೊಬ್ಬರೂ ಅರಿಯಬೇಕು ಎಂದರು. ಶಾಸಕ ಕೆ.ಶ್ರೀನಿವಾಸಗೌಡ ಮಾತನಾಡಿ, ಎಲ್ಲರೂ ಸೇರಿ ಆಸಕ್ತಿಯಿಂದ ದೇವಸ್ಥಾನ ನಿರ್ಮಿಸಿ ನಂತರದ ದಿನಗಳಲ್ಲಿ ದೇವಸ್ಥಾನದ ಬಳಿ ಸುಳಿಯದಿರುವ ಪರಿಸ್ಥಿತಿ ತಂದುಕೊಳ್ಳಬೇಡಿ ಎಂದು ಕಿವಿಮಾತು ಹೇಳಿದರು.

    ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ ಶ್ರೀ ಮಂಗಳಾನಂದನಾಥ ಸ್ವಾಮೀಜಿ, ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಮಾಜಿ ಶಾಸಕರಾದ ವರ್ತೂರು ಆರ್.ಪ್ರಕಾಶ್, ವೈ.ಸಂಪಂಗಿ, ಜಿಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ನಿವೃತ್ತ ಜಂಟಿ ಕೃಷಿ ನಿರ್ದೇಶಕ ಎಂ.ಬೈರಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕ ಎನ್. ಸೋಮಣ್ಣ, ಮುಖಂಡ ಸಿಎಂಆರ್ ಶ್ರೀನಾಥ್, ದೇವಾಲಯ ಧರ್ಮದರ್ಶಿ ಪಿ.ವೆಂಕಟೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಬಿ.ಉದಯಶಂಕರ್, ಗ್ರಾಪಂ ಮಾಜಿ ಅಧ್ಯಕ್ಷರಾದ ಬಿ.ನಾಗರಾಜ್, ಶಶಿಕಲಾ ನಾಗೇಶ್, ಮಾಜಿ ಸಚಿವ ಕೃಷ್ಣಬೈರೇಗೌಡ ಹಾಗೂ ಊರಿನ ಮುಖಂಡರು ಉಪಸ್ಥಿತರಿದ್ದರು. 6ಕ್ಕೂ ಹೆಚ್ಚು ನವಜೋಡಿಗಳು ಈ ಸಂದರ್ಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts