More

    ವೇಮಗಲ್ ಪ್ರತ್ಯೇಕ ತಾಲೂಕು ಕೇಂದ್ರವಾಗಲಿ

    ಕೋಲಾರ: ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೇರಿರುವ ವೇಮಗಲ್ ಅನ್ನು ಪ್ರತ್ಯೇಕ ತಾಲೂಕು ಕೇಂದ್ರ ಮತ್ತು ಕ್ಯಾಲನೂರನ್ನು ಪ್ರತ್ಯೇಕ ಕಂದಾಯ ಹೋಬಳಿಯನ್ನಾಗಿಸಲು ಸರ್ಕಾರಕ್ಕೆ ಶಿಫಾರಸು ಮಾಡಬೇಕೆಂದು ವಿಧಾನಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಜಿಲ್ಲಾಧಿಕಾರಿ ವಿ.ಸತ್ಯಭಾಮಗೆ ಮನವಿ ಸಲ್ಲಿಸಿದರು.

    ಜಿಲ್ಲಾಡಳಿತದಿಂದ ವೇಮಗಲ್‌ನ ರಾಮಶೆಟ್ಟಿ ಬಯಲು ರಂಗಮಂದಿರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಂದಾಯ ಅದಾಲತ್‌ನಲ್ಲಿ ಮಾತನಾಡಿ, ವೇಮಗಲ್ 65 ಗ್ರಾಮಗಳಿಂದ ಕೂಡಿದ ದೊಡ್ಡ ಕಂದಾಯ ಹೋಬಳಿ. ಹೀಗಾಗಿ ಕ್ಯಾಲನೂರನ್ನು ಪ್ರತ್ಯೇಕ ಕಂದಾಯ ಹೋಬಳಿಯಾಗಿ ರಚಿಸುವ ಜತೆಗೆ ಪಟ್ಟಣ ಪಂಚಾಯಿತಿಯಾಗಿ ಅಧಿಸೂಚನೆ ಹೊರಬಿದ್ದಿರುವ ವೇಮಗಲ್ ಅನ್ನು ಭವಿಷ್ಯದ ಆಡಳಿತ ಮತ್ತು ಅಭಿವೃದ್ಧಿ ದೃಷ್ಟಿಯಿಂದ ಕಂದಾಯ ತಾಲೂಕಾಗಿ ಘೋಷಿಸಲು ಶಿಫಾರಸು ಮಾಡಬೇಕು ಎಂದು ಕೋರಿದರು.

    ಕುರುಬರಹಳ್ಳಿ, ಸುಜ್ಜನಹಳ್ಳಿ, ವಿಶ್ವನಗರ, ಸುಲದೇನಹಳ್ಳಿ ಮತ್ತಿತರ ಜನವಸತಿ ಪ್ರದೇಶಗಳಿದ್ದು, ಇವುಗಳ ಕುರಿತು ಸಮಗ್ರ ವರದಿ ಪಡೆದು ಕಂದಾಯ ಗ್ರಾಮಗಳಾಗಿ ಪರಿವರ್ತಿಸಲು ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದರು. ಸರ್ವೇ ನಂಬರ್ ಗೊಂದಲ ನಿವಾರಿಸಬೇಕು, ಪಿಂಚಣಿಗಾಗಿ ವೃದ್ಧರು, ಮಹಿಳೆಯರು ಅಂಚೆ ಕಚೇರಿ ಬಳಿ ಕಾಯುವುದನ್ನು ತಪ್ಪಿಸಬೇಕು. ಖಾತೆ ವಿಳಂಬ ತಪ್ಪಿಸಬೇಕು, ಪಹಣಿಯಿಂದ ಪಿ ನಂಬರ್ ತೆಗೆಯಬೇಕು. ನಾಡ ಕಚೇರಿಗಳಿಗೆ ಸುಸಜ್ಜಿತ ಕಟ್ಟಡ ನಿರ್ಮಿಸಬೇಕು, ಮದ್ದೇರಿ ಗ್ರಾಪಂನಲ್ಲಿ ಮೂಲ ಸೌಲಭ್ಯದ ಕೊರತೆ ನೀಗಿಸಬೇಕು ಎಂದರು.

    ಸೀತಿ ಭೈರವೇಶ್ವರಸ್ವಾಮಿ ದೇವಾಲಯ ಅಭಿವೃದ್ಧಿ ಭಕ್ತರ ಒತ್ತಾಯದಂತೆ ಮುಜರಾಯಿ ವ್ಯಾಪ್ತಿಯಿಂದ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಸುಪರ್ದಿಗೆ ವಹಿಸುವುದು, ವೇಮಗಲ್‌ನ ಲಕ್ಷ್ಮೀನಾರಾಯಣಸ್ವಾಮಿ ದೇವಾಲಯ ನಿರ್ವಹಿಸಿಕೊಂಡು ಬರುತ್ತಿರುವ ಬ್ರಾಹ್ಮಣ ಸಮುದಾಯಕ್ಕೆ ದೇವಾಲಯವನ್ನು ಮುಜಾರಾಯಿ ಇಲಾಖೆಯಿಂದ ಹಸ್ತಾಂತರಿಸಲು ಶಿಫಾರಸು ಮಾಡಬೇಕು ಎಂದು ಮನವಿ ಮಾಡಿದರು.

    ಡಿಸಿ ಸಿ.ಸತ್ಯಭಾಮ ಮಾತನಾಡಿ, ಅದಾಲತ್‌ನಲ್ಲಿ ಸಲ್ಲಿಕೆಯಾದ ಅರ್ಜಿಗಳ ವಿಲೇವಾರಿಗೆ ಒಂದೂವರೆ ತಿಂಗಳ ಗಡುವು ನೀಡಲಾಗಿದೆ. ತಹಸೀಲ್ದಾರ್ ಜತೆಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಅರ್ಜಿ ಪರಿಶೀಲಿಸಲಾಗುವುದು. ಪ್ರಸ್ತುತ 35 ಪಿಂಚಣಿ ಆದೇಶ, 80 ಫವತಿವಾರಸು ದಾಖಲೆ ವಿತರಿಸಲಾಗುತ್ತಿದೆ ಎಂದರು.

    ಎಸಿ ಸೋಮಶೇಖರ್ ಮಾತನಾಡಿ, ಜನತೆ ಸಮಸ್ಯೆಗಳನ್ನು ಸ್ಥಳೀಯವಾಗಿ ಬಗೆಹರಿಸಲು ಹೋಬಳಿ ಮಟ್ಟದಲ್ಲಿ ಅದಾಲತ್ ನಡೆಸಲಾಗುತ್ತಿದೆ. ಇದರಿಂದ ತಾಲೂಕು ಕಚೇರಿಗೆ ಅಲೆದಾಟ ತಪ್ಪುತ್ತದೆ ಎಂದರು. ತಹಸೀಲ್ದಾರ್ ಶೋಭಿತಾ, ಉಪತಹಸೀಲ್ದಾರ್ ಹೇಮಾವತಿ, ರಾಜಸ್ವ ನಿರೀಕ್ಷಕ ರಮೇಶ್, ಪಿಡಿಒ ಬಿ.ಆರ್.ರಮೇಶ್ ಬಾಬು, ಗ್ರಾಪಂ ಮಾಜಿ ಅಧ್ಯಕ್ಷ ಬಿ.ನಾಗರಾಜ್, ವಕೀಲ ವಿ.ಎಂ.ನಾಗೇಶ್, ಡಾ.ರವಿಕಿರಣ್, ಗ್ರಾಮಲೆಕ್ಕಾಧಿಕಾರಿಗಳಾದ ಅರುಣ್ ಕುಮಾರ್, ಸಲ್ಮಾನ್, ಹರ್ಷವರ್ಧನ್, ವಿ.ಮಂಜುನಾಥ್, ಅಂಬ್ರನ್ ತಾಜ್, ಬಿಂದುರೆಡ್ಡಿ, ಮಂಜುನಾಥರೆಡ್ಡಿ, ರೇಖಾ, ಶಿಲ್ಪಾ, ನರ್ಮದಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts