More

    ಕಾರ್ಖಾನೆಗಳಿಂದ ಕಬ್ಬು ಬೆಳೆಗಾರರಿಗೆ ಮೋಸ

    ಕಲಬುರಗಿ: ಅಫಜಲಪುರ ತಾಲೂಕಿನ ರೇಣುಕಾ ಸಕ್ಕರೆ ಕಾರ್ಖಾನೆ ಮತ್ತು ಕೆಪಿಆರ್ ಸಕ್ಕರೆ ಕಾರ್ಖಾನೆಗಳು ಸ್ಥಳೀಯ ರೈತರಿಗೆ ಅನ್ಯಾಯ ಮಾಡಿ, ಪಕ್ಕದ ವಿಜಯಪುರ, ಮಹಾರಾಷ್ಟ್ರದ ಕಬ್ಬು ಕಟಾವು ಮಾಡಿ ತರುತ್ತಿರುವುದನ್ನು ತಡೆಯಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಗರದಲ್ಲಿ ಶುಕ್ರವಾರ ಪ್ರಾಂತ ರೈತ ಸಂಘದಿಂದ ಕಬ್ಬಿನೊಂದಿಗೆ ಪ್ರತಿಭಟನೆ ನಡೆಸಲಾಯಿತು.

    ಜಿಲ್ಲೆಯಲ್ಲಿನ ಸಕ್ಕರೆ ಕಾರ್ಖಾನೆಗಳು ರೈತರಿಗೆ ನಿರಂತರ ಅನ್ಯಾಯ ಮಾಡುತ್ತಿವೆ. ಸಮರ್ಪಕ ಬೆಲೆ ನೀಡುತ್ತಿಲ್ಲ, ಉಪ ಉತ್ಪನ್ನಗಳ ಲಾಭವನ್ನು ರೈತರಿಗೆ ಹಂಚಿಕೆ ಮಾಡುತ್ತಿಲ್ಲ, ಬಾಕಿ ಹಣ ಪಾವತಿಸುತ್ತಿಲ್ಲ. ಕಬ್ಬಿನ ಇಳುವರಿ ಸರಾಸರಿ ೧೧:೫೦ ಬರುತ್ತದೆ. ಆದರೆ ರೈತರ ಸಮ್ಮುಖದಲ್ಲಿ ಇಳುವರಿ ಚರ್ಚಿಸದೆ ಮೋಸ ಮಾಡಲಾಗುತ್ತಿದೆ. ಅಫಜಲಪುರ ತಾಲೂಕಿನಲ್ಲಿ ರೈತರ ಕಬ್ಬು ೧೪ ತಿಂಗಳಿAದ ೧೬ ತಿಂಗಳವರೆಗೆ ಕಟಾವು ಮಾಡದ್ದಕ್ಕೆ ಬೆಂಡು ಒಡೆದು, ಇಳುವರಿಯಲ್ಲಿ ಪ್ರತಿ ಟನ್ ಕಬ್ಬಿಗೆ ಶೇ.೩೦ ಹಾನಿ ಆಗುತ್ತಿದೆ. ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಹೊಣೆಗಾರಿಕೆ ಮಾಡಿ ಇಳುವರಿ ನಷ್ಟಕ್ಕೆ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು.

    ಕಾರ್ಖಾನೆ ಆರಂಭಿಸುವ ಮೊದಲು ಕಬ್ಬು ಬೆಳೆಗಾರರಿಗೆ ಜಾಗೃತಿ ಮೂಡಿಸಿ, ರೈತರ ಸಭೆ ನಡೆಸಿ ಅಭಿಪ್ರಾಯ ಆಲಿಸಬೇಕು. ಕಾರ್ಖಾನೆಗಳ ಮಾಲೀಕರು ಮತ್ತು ಬೆಳೆಗಾರರ ಜತೆ ಜಿಲ್ಲಾಧಿಕಾರಿ ಸಭೆ ನಡೆಸಬೇಕು. ಟನ್ ಕಬ್ಬಿಗೆ ೨೮೦೦ ರೂ. ನೀಡಬೇಕು, ಭೀಮಾ ನದಿಯಲ್ಲಿ ಮರಳು ಸಾಗಣೆ ತಡೆದು, ನೀರು ಸಂಗ್ರಹಿಸಲು ಅವಕಾಶ ಮಾಡಿಕೊಡಬೇಕು. ಬ್ರಿಜ್ ಕಂ ಬ್ಯಾರೇಜ್ ಒಡೆದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮುಖ್ಯಮಂತ್ರಿಗೆ ಬರೆದ ಮನವಿಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಲಾಯಿತು.

    ಪ್ರಮುಖರಾದ ಶರಣಬಸಪ್ಪ ಮಮಶೆಟ್ಟಿ, ಪಾಂಡುರಂಗ ಮಾವಿನಕರ, ಎಂ.ಬಿ.ಸಜ್ಜನ್, ಸಿದ್ದಾರಾಮ ಧನ್ನೂರ, ಸುಭಾಷ ಜೇವರ್ಗಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts