More

    ಕಾಮಗಾರಿ ಅನುಷ್ಠಾನ ಶೀಘ್ರ

    ಸವದತ್ತಿ: ಪಟ್ಟಣದ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು 92 ಕೋಟಿ ರೂ. ಕಾಮಗಾರಿಗೆ ಅನುಮೋದನೆ ದೊರೆತಿದ್ದು, ಶೀಘ್ರ ಅನುಷ್ಠಾನಗೊಳಿಸಲಾಗುವುದು ಎಂದು ವಿಧಾನಸಭಾ ಉಪಸಭಾಧ್ಯಕ್ಷ ಆನಂದ ಮಾಮನಿ ತಿಳಿಸಿದ್ದಾರೆ.

    ಇಲ್ಲಿನ ಮಾಮನಿ ಕಲ್ಯಾಣ ಮಂಟಪದಲ್ಲಿ ತಾಲೂಕು ಪಂಚಾಯಿತಿ, ಸಿಡಿಪಿಒ, ಆರ್‌ಡಿಪಿಆರ್ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡ ಗ್ರಾಮ ಪಂಚಾಯಿತಿಗಳ ತ್ಯಾಜ್ಯ ಸಂಗ್ರಹಣಾ ವಾಹನ ಲೋಕಾರ್ಪಣೆ ಹಾಗೂ ಮಹಿಳಾ ಸ್ವ ಸಹಾಯ ಸಂಘಗಳಿಗೆ ಬೀಜಧನ ಚೆಕ್ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ಸವದತ್ತಿ, ಮುನವಳ್ಳಿ ಪುರಸಭೆಗಳಲ್ಲಿ ತಲಾ 4 ಕೋಟಿ, ಯರಗಟ್ಟಿ ಪಟ್ಟಣ ಪಂಚಾಯಿತಿಗೆ 2 ಕೋಟಿ ರೂ. ನಗರೋತ್ಥಾನ ಯೋಜನೆಯಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. 22 ಕೋಟಿ ರೂ.ನಲ್ಲಿ ಯರಗಟ್ಟಿ-ಮುನವಳ್ಳಿ ಹೆದ್ದಾರಿ ನಿರ್ಮಾಣ, ಪಟ್ಟಣ ಸೇರಿ 14 ಕಟ್ಟಡ ಜಾಗ ನಿಗದಿಪಡಿಸಿದರೆ 340 ಅಂಗನವಾಡಿ ಕೇಂದ್ರಗಳು ಸ್ವಂತದ್ದಾಗುತ್ತವೆ. ಗ್ರಾಮೀಣ ಭಾಗದಲ್ಲಿ ಅನೇಕ ಸಮಸ್ಯೆಗಳಿವೆ. ಸಮಸ್ಯೆ ಪರಿಹರಿಸಲು ಶ್ರಮಿಸಲಾಗುವುದು ಎಂದರು.

    14 ಕೋಟಿ ಮಾನವ ದಿನ ಸೃಜಿಸಿದ್ದು, ಹೆಚ್ಚುವರಿಯಾಗಿ 1.5 ಕೋಟಿ ದಿನ ನೀಡಲಾಗಿದೆ. ಕೆ.ಶಿವಾಪುರದಲ್ಲಿನ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಮಾದರಿಯಲ್ಲಿ ಕಿಟದಾಳದಲ್ಲಿಯೂ ಆರಂಭಿಸಲಾಗುವುದು. ಮುಗಳಿಹಾಳ, ಇಟ್ನಾಳ, ಕಿಟದಾಳ ಗಳಲ್ಲಿ ವಿದ್ಯುತ್ ಉಪಕೇಂದ್ರ ಆರಂಭಿಸಲಾಗಿದೆ. ಪ್ರೀತಿ ಪಾತ್ರರಿಗಾಗಿ ನೀಡಲಾರದ ಸಮಯ ದ್ವೇಷಿಸುವವರಿಗೆಲ್ಲಿಂದ ತೆಗೆದಿರಿಸಲಿ. ಟೀಕೆಗಳಿಗೆ ಪ್ರತಿಕ್ರಿಯಿಸಲು ಸಮಯವಿಲ್ಲ. ಪತ್ರಿಕೆಗಳಲ್ಲಿ ಪ್ರಕಟಗೊಂಡ ಸುದ್ದಿಗಳಿಗೆ ನವೆಂಬರ್-ಡಿಸೆಂಬರ್‌ನಲ್ಲಿ ಉತ್ತರಿಸಲಾಗುವುದು. ಜಾಲತಾಣಗಳಲ್ಲಿನ ರಾಜಕೀಯ ಬೆಳವಣಿಗೆಯ ಸುದ್ದಿಗಳನ್ನು ಗಮನಿಸಲಾಗುತ್ತಿದೆ. ಬದಲಾವಣೆಗಳಿಗೆ ಕಿವಿಗೊಡುವುದು ಅವಶ್ಯವಿಲ್ಲ. ಕ್ಷೇತ್ರದ ಅಭಿವೃದ್ಧಿ ಮೇಲೆ ನಂಬಿಕೆಯಿದೆ ಎಂದರು. ತಾಪಂ ಇಒ ಯಶವಂತಕುಮಾರ ಮಾತನಾಡಿ, ಶೇ.90ರಷ್ಟು ಶಾಲೆಗಳು ನರೇಗಾದಲ್ಲಿ ಅಭಿವೃದ್ಧಿಯಾಗಿವೆ. ಕೇವಲ ಅನುದಾನದಿಂದ ಅಭಿವೃದ್ಧಿಯಾಗದು ಬದಲಾಗಿ ಸದ್ಬಳಕೆಯಿಂದ ಸಾಧ್ಯವಿದೆ. ನಗರ ಭಾಗದಲ್ಲಿರುವ ತ್ಯಾಜ್ಯವಿಂಗಡಣೆ ಇದೀಗ ಗ್ರಾಮಕ್ಕೆ ವಿಸ್ತರಿಸಲಾಗಿದೆ. 30 ಗ್ರಾಪಂಗಳಿಗೆ ತ್ಯಾಜ್ಯ ವಿಲೇವಾರಿಗೆ ತಲಾ 5 ಎಕರೆ ಜಾಗ ಮೀಸಲಿರಿಸಲಾಗಿದೆ. ವರಮಾನದ ಶೇ.6ರಷ್ಟನ್ನು ಆರೋಗ್ಯಕ್ಕಾಗಿ ವ್ಯಯಿಸುವ ಸ್ಥಿತಿ ಜನತೆಗಿದೆ. ಕಾರಣ ಸುತ್ತಲಿನ ವಾತಾವರಣವನ್ನು ಆರೋಗ್ಯದಿಂದಿರಿಸಿ. ಶಾಲೆ, ಆರೋಗ್ಯ ಕೇಂದ್ರ, ಅಂಗನವಾಡಿ ಸೇರಿ ಗ್ರಾಮಾಭಿವೃದ್ಧಿಗೆ 6 ಕೋಟಿ ರೂ. ಮೀಸಲಿರಿಸಿದ್ದಕ್ಕಾಗಿ ಶಾಸಕರಿಗೆ ಧನ್ಯವಾದ ತಿಳಿಸಿದರು.

    ಕಾಂಚನಾ ಅಮಠೆ, ಎಚ್.ಸಿ. ತಳವಾರ, ಮಹೇಶ ಚಿತ್ತರಗಿ, ಎಸ್.ಸಿ. ಕರೀಕಟ್ಟಿ, ಆರ್.ಆರ್. ಕುಲಕರ್ಣಿ, ಜಗದೀಶ ಶಿಂತ್ರಿ, ಚಂದ್ರಶೇಖರ ಬಾರ್ಕಿ, ಮಹೇಶ ತೆಲಗಾರ, ಹನುಮಂತ ಪೆಟ್ಲೂರ ಹಾಗೂ ಅಕ್ಕಿಸಾಗರ, ಗೊರವನಕೊಳ್ಳ, ತೆಗ್ಗಿಹಾಳ, ಶಿರಸಂಗಿ, ಹಿರೇಕುಂಬಿ ಸೇರಿ ಹಲವು ಪಂಚಾಯಿತಿಗಳ ಅಧ್ಯಕ್ಷರು, ಸದಸ್ಯರು, ಪಿಡಿಒ ಹಾಗೂ ಪುರಸಭೆ ಸದಸ್ಯರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts