More

    ಕಾಡಾನೆಗಳ ದಾಳಿಗೆ ಕಾಫಿ, ಹಲಸು, ಮಾವು, ಬಾಳೆ ಗಿಡ ನಾಶ

    ಕುಶಾಲನಗರ: ರಂಗಸಮುದ್ರ ಮತ್ತು ಸುತ್ತಮುತ್ತಲಿನ ಹಲವು ಗ್ರಾಮಗಳಲ್ಲಿನ ತೋಟಗಳಿಗೆ ನಿತ್ಯ ರಾತ್ರಿ ಕಾಡಾನೆಗಳು ಲಗ್ಗೆ ಇಡುತ್ತಿದ್ದು, ಕಾಫಿ, ಹಲಸು, ಮಾವು, ಬಾಳೆ ಗಿಡಗಳನ್ನು ಹಾನಿ ಮಾಡುತ್ತಿವೆ.

    ಇದರಿಂದಾಗಿ ಈ ಭಾಗದ ರೈತರು ದೊಡ್ಡ ಮಟ್ಟದಲ್ಲಿ ಆರ್ಥಿಕವಾಗಿ ತೊಂದರೆ ಅನುಭವಿಸುವಂತಾಗಿದೆ ಎಂದು ರಂಗಸಮುದ್ರ ನಿವಾಸಿ ಕೆ.ಟಿ ಹರೀಶ್ ಅಳಲು ತೋಡಿಕೊಂಡಿದ್ದಾರೆ.

    ರಾತ್ರಿ 12ರಿಂದ 3 ಗಂಟೆವರೆಗೆ ಮನೆಯಲ್ಲಿರುವವರು ಜೀವ ಕೈಯಲ್ಲಿ ಹಿಡಿದು ಇರಬೇಕಿದೆ. ಮೀನುಕೊಲ್ಲಿ ಮತ್ತು ಆನೆಕಾಡು ಮೀಸಲು ಅರಣ್ಯದಿಂದ ಕಾಡಾನೆಗಳು ನಿತ್ಯ ಆಹಾರಕ್ಕಾಗಿ ಅರಣ್ಯದಂಚಿನ ತೋಟಗಳಿಗೆ ಬಂದು ಹೋಗುವುದು ಸಾಮಾನ್ಯವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    ಅರಣ್ಯದಂಚಿನಲ್ಲಿ ಟ್ರೆಂಚ್ ನಿರ್ಮಾಣ ಮಾಡಲು ಸರ್ಕಾರಕ್ಕೆ ಈಗಾಗಲೇ ಸಾಕಷ್ಟು ಬಾರಿ ಮನವಿ ಮಾಡಲಾಗಿದೆ. ಚಿಕ್ಲಿಹೊಳೆ ಎಡದಂಡೆ ನಾಲೆ ಏರಿ ಮೇಲೆ ಆನೆಗಳ ಓಡಾಟವಿದ್ದು, ಅರಣ್ಯದಲ್ಲಿ ಹಣ್ಣು-ಹಂಪಲು, ಗಿಡ-ಮರಗಳನ್ನು ಬೆಳೆಸಿದರೆ ಇಂತಹ ತೊಂದರೆಯಿಂದ ಕಾಡಂಚಿನ ರೈತರು ಉಳಿಯಬಹುದು.

    ಇಲ್ಲದಿದ್ದರೆ ವಾರದಲ್ಲಿ 5 ದಿನ ಅರಣ್ಯ ಇಲಾಖೆ ಕಚೇರಿ ಮುಂದೆ ನಷ್ಟ ಪರಿಹಾರದ ಅರ್ಜಿ ಹಿಡಿದು ನಿಲ್ಲಬೇಕಾಗುತ್ತದೆ. ಅಲ್ಲದೆ ಅರಣ್ಯ ಇಲಾಖೆ ಸ್ಥಳೀಯವಾಗಿ ಯುವಕರ ತಂಡ ರಚಿಸಿ ರಾತ್ರಿ ಗಸ್ತು ತಿರುಗಲು ಬಿಟ್ಟಿದೆ. ಅದೇ ರೀತಿ ಕನಿಷ್ಠ 4 ರಿಂದ 5 ತಂಡ ರಚನೆ ಮಾಡಿದರೆ ಸ್ವಲ್ಪ ಮಟ್ಟಿಗೆ ರೈತರಿಗೆ ಧೈರ್ಯ ಬರಲಿದೆ ಎಂದು ಹರೀಶ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts