More

    ಅಂತೂ ಶುರುವಾಯ್ತು ಅಡಕೆಗೆ ಬೆಳೆ ವಿಮೆ ದಾಖಲಾತಿ

    ಕಾರವಾರ: ಅಂತೂ ತೋಟಗಾರಿಕೆ ಬೆಳೆಗಳಿಗೆ ಹವಾಮಾನ ಆಧಾರಿತ ಬೆಳೆ ವಿಮೆ ಲಭ್ಯವಾಗುವುದು ಖಚಿತವಾಗಿದೆ. ಅಡಕೆ, ಕಾಳುಮೆಣಸು, ಮಾವು ಮತ್ತು ಶುಂಠಿ ಬೆಳೆಗಳಿಗೆ ಈ ಸೌಲಭ್ಯ ಲಭ್ಯವಾಗಲಿದ್ದು, ರೈತರು ವಿಮಾ ಕಂತು ಪಾವತಿಸಲು ಜು.31 ರವರೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಆ.1 ರಿಂದ ಮುಂದಿನ ಒಂದು ವರ್ಷಕ್ಕೆ ಬೆಳೆ ವಿಮೆ ಅವಧಿ ಊರ್ಜಿತವಾಗಿರಲಿದೆ.
    ವಿಮಾ ನಿಯಮದಂತೆ ಈ ವರ್ಷ ಟರ್ಮ್ ಶೀಟ್ (ಕಂಪನಿ-ಸರ್ಕಾರದ ನಡುವಿನ ಒಪ್ಪಂದ ನಿಯಮಾವಳಿಗಳು )ಬದಲಾಯಿಸಿ ಟೆಂಡರ್ ಕರೆಯಲಾಗಿತ್ತು. ಆದರೆ, ಸುಮಾರು 28 ಜಿಲ್ಲೆಗಳಿಗೆ ವಿಮೆ ಸೌಲಭ್ಯ ನೀಡಲು ಯಾವುದೇ ಕಂಪನಿಗಳು ಆಸಕ್ತಿ ತೋರದ ಕಾರಣ ಜೂನ್‌ನಿಂದಲೇ ಆರಂಭಬಾಗಬೇಕಿದ್ದ ವಿಮಾ ಮೊತ್ತ ಆಕರಣೆಗೆ ವಿಳಂಬವಾಗಿತ್ತು. ನಿಯಮಾವಳಿಗಳನ್ನು ಸಡಿಲಿಸಿ ಎರಡನೇ ಬಾರಿ ಟೆಂಡರ್ ಕರೆದು ಈಗ ವಿಮಾ ಕಂಪನಿಯನ್ನು ನಿಗದಿ ಮಾಡಲಾಗಿದೆ.
    ದಾಂಡೇಲಿ, ಹಳಿಯಾಳ, ಅಂಕೋಲಾ ಮತ್ತು ಮುಂಡಗೋಡ ತಾಲೂಕಿನ ವಿಮಾ ಘಟಕಗಳಿಗೆ ಮಾವು ಬೆಳೆಯನ್ನು ಹಾಗೂ ಮುಂಡಗೋಡ ತಾಲೂಕು ಮತ್ತು ಶಿರಸಿ ತಾಲೂಕಿನ ಬನವಾಸಿ ಹೋಬಳಿ ವ್ಯಾಪ್ತಿಗೆ ಶುಂಠಿ ಬೆಳೆಯನ್ನು ಹೊಸದಾಗಿ ವಿಮಾ ವ್ಯಾಪ್ತಿಗೆ ಒಳಪಡಿಸಲಾಗಿದೆ. ಉಳಿದಂತೆ ನಿಯಮಗಳು ಹಿಂದಿನಂತೆ ಇರಲಿವೆ.

    ಇದನ್ನೂ ಓದಿ: ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ

    ಸಾಲ ಪಡೆಯುವ ಮತ್ತು ಬೆಳೆ ಸಾಲ ಪಡೆಯದ ರೈತರು ನಿಗದಿತ ಅರ್ಜಿ ನಮೂನೆ, ಬ್ಯಾಂಕ್ ಪಾಸ್ ಪುಸ್ತಕದ ಯಥಾ ಪ್ರತಿ, ಬೆಳೆ ನಮೂದಿರುವ ಪಹಣಿ ಪತ್ರಿಕೆ, ಸ್ವಯಂ ದೃಢೀಕರಣ, ನಾಮಿನಿ ವಿವರ ಮತ್ತು ಆಧಾರ ಕಾರ್ಡ್ನ ಪ್ರತಿಯೊಂದಿಗೆ ಸಂಬಂಧಿತ ಬ್ಯಾಂಕ್ ಅಥವಾ ಸಹಕಾರಿ ಸಂಘಗಳ ಶಾಖೆಗಳಲ್ಲಿ ವಿಮಾ ಕಂತು ಪಾವತಿಸಬಹುದು.
    ಅಡಕೆಗೆ ಪ್ರತಿ ಎಕರೆಗೆ 51,200 ರೂ. ವಿಮಾ ಮೊತ್ತವಿದ್ದು, ಶೇ.5 ರಷ್ಟು ಎಂದರೆ 2560 ರೂ. ವಿಮಾ ಕಂತು ಕಟ್ಟಬೇಕು. ಕಾಳು ಮೆಣಸಿಗೆ 18,800 ರೂ. ವಿಮಾ ಮೊತ್ತವಿದ್ದು, 940 ರೂ. ಕಂತನ್ನು ರೈತರು ತುಂಬಬೇಕು. ಶುಂಠಿಗೆ 52 ಸಾವಿರ ರೂ. ವಿಮಾ ಮೊತ್ತವಿದ್ದು, 2,600 ರೂ. ಕಂತು ಪಾವತಿಸಬೇಕು. ಮಾವಿಗೆ 32 ಸಾವಿರ ರೂ. ವಿಮಾ ಮೊತ್ತವಿದ್ದು, 1,600 ರೂ. ವಿಮಾ ಮೊತ್ತ ಪಾವತಿಸಬೇಕಿದೆ. ಮಳೆಯ ಪ್ರಮಾಣ, ಉಷ್ಣಾಂಶ ಆಧರಿಸಿ ಅತಿವೃಷ್ಟಿ, ಅನಾವೃಷ್ಟಿ, ಈ ವಿಮೆ ಪರಿಹಾರ ಲಭ್ಯವಾಗಲಿದೆ ಎಂದು ತೋಟಗಾರಿಕೆ ಇಲಾಖೆ ಮಾಹಿತಿ ನೀಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts