More

    ಸಾವಯವದೊಂದಿಗೆ ‘ಸಮಗ್ರ ಕೃಷಿ’

    ಹಿರೀಸಾವೆ: ಸಾವಯವ ಹಾಗೂ ಸಮಗ್ರ ಕೃಷಿಯಿಂದ ಆದಾಯವಷ್ಟೇ ಅಲ್ಲ ಆರೋಗ್ಯಕರ ಬದುಕೂ ಸಿಗಲಿದೆ ಎಂಬುದಕ್ಕೆ ಹೋಬಳಿಯ ಬಿದರಕೆರೆ ಗ್ರಾಮದ ಸಾವಯವ ಕೃಷಿಕ ಬಿ.ಎಂ.ನಟರಾಜ್ ಉತ್ತಮ ಉದಾಹರಣೆ.

    ಹಲವು ವರ್ಷಗಳಿಂದ ಜಿಲ್ಲಾ ವ್ಯಾಪ್ತಿ ಹಾಗೂ ಹೊರ ಪ್ರದೇಶಗಳಲ್ಲಿ ನಡೆಯುತ್ತಿದ್ದ ಕೃಷಿಮೇಳ ಹಾಗೂ ಇತರ ಕೃಷಿ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದ ಬಿ.ಎಂ.ನಟರಾಜ್, ಕೃಷಿ ಚಟುವಟಿಕೆ ಬಗ್ಗೆ ತಜ್ಞರು ಹಾಗೂ ಹಿರಿಕರು ನೀಡುತ್ತಿದ್ದ ಮಾಹಿತಿ ಆಧರಿಸಿ ಸಾವಯವ ಹಾಗೂ ಸಮಗ್ರ ಕೃಷಿಯಲ್ಲಿ ತೊಡಗಿಕೊಳ್ಳುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

    ತಮಗಿರುವ 8 ಎಕರೆ ಪೈಕಿ ಮೊದಲ ಹಂತವಾಗಿ 4 ಎಕರೆ ಕೃಷಿ ಜಮೀನಿನಲ್ಲಿ 5-6 ವರ್ಷಗಳಿಂದ ಯಾವುದೇ ರಾಸಾಯನಿಕ ಗೊಬ್ಬರ ಹಾಗೂ ಔಷಧ ಬಳಸದೆ ಸಾವಯವ ಕೃಷಿ ಪದ್ಧತಿ ಅಳಸಿಕೊಂಡು ಸಮಗ್ರ ಕೃಷಿಯತ್ತ ಹೆಜ್ಜೆ ಇರಿಸಿದ್ದಾರೆ. ಇದರಲ್ಲಿ ಯಶಸ್ಸು ಕಂಡ ಬಳಿಕ ಉಳಿದ 4 ಎಕರೆ ಕೃಷಿ ಜಮೀನಿನಲ್ಲಿಯೂ ಸಾವಯವ ಕೃಷಿ ಪ್ರಾರಂಭಿಸಲು ಈ ಬಾರಿ ಮತ್ತೊಂದು ಹೆಜ್ಜೆ ಮುಂದಿರಿಸಿದ್ದಾರೆ. ಆದರೆ ಮೊದಲ ಹಂತದ 4 ಎಕರೆ ಕೃಷಿ ಜಮೀನಿನಲ್ಲಿ ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿದ್ದಾರೆ.

    ನಾಲ್ಕು ಎಕರೆಯಲ್ಲಿ ಸಾವಯವ ಪದ್ಧತಿಯೊಂದಿಗೆ ತೆಂಗು, ಅಡಕೆ, ಬಾಳೆ, ಹಲಸು, ಮಾವು, ನಿಂಬೆ, ಯಳ್ಳಿ, ಸೀಬೆ, ಪಪ್ಪಾಯಿ, ನುಗ್ಗೆ, ನೇರಳೆ, ಸಪೋಟ, ಕಾಳು ಮೆಣಸು, ಮನೆ ಬಳಕೆಗೆ ಕಬ್ಬು ಹಾಗೂ ವಿವಿಧ ಬೆಳೆ ಬೆಳೆದಿದ್ದಾರೆ. ಜತೆಗೆ ತೇಗ ಮತ್ತು ಸಿಲ್ವರ್ ಗಿಡಗಳಿದ್ದು ಎಲ್ಲ ಬೆಳೆಗಳಿಗೂ ಹನಿ ಹಾಗೂ ತುಂತುರು ನೀರಾವರಿ ಪದ್ಧತಿಯಡಿ ನೀರುಣಿಸುತ್ತಿರುವುದು ವಿಶೇಷ.

    ಸುಮಾರು 1 ಎಕರೆಯಷ್ಟು ಪ್ರದೇಶದಲ್ಲಿ ವರ್ಷದಲ್ಲಿ ಎರಡು ಬಾರಿ ಬೆಳೆ ತೆಗೆಯುವ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಕಾಲಕ್ಕನುಗುಣವಾಗಿ ರಾಗಿ, ತೊಗರಿ, ಹಸಲಂದೆ, ಯಳ್ಳು, ಹೆಸರು, ಉದ್ದು ಸೇರಿದಂತೆ ಹಲವು ಕಿರು ಫಸಲುಗಳನ್ನು ಬೆಳೆಯುತ್ತಾರೆ. ಅದರ ಜತೆಗೆ ಆರಕ, ನವಣೆ, ಸಾಮೆ, ಸಜ್ಜೆ, ಊದಲು, ಕೆಂಪು ಅಕ್ಕಿ(ಹೊಲಭತ್ತ) ಸೇರಿದಂತೆ ವಿವಿಧ ಬಗೆಯ ಸಿರಿಧಾನ್ಯಗಳನ್ನೂ ಬೆಳೆದು ಮನೆಬಳಕೆಗೆ ಉಪಯೋಗಿಸಿ ಉಳಿದದ್ದನ್ನು ಮಾರಾಟ ಮಾಡುತ್ತಿದ್ದಾರೆ.

    5 ಗುಂಟೆಯಲ್ಲಿ ಕೈದೋಟ: ಮನೆ ಬಳಕೆಗೆಂದು 5 ಗುಂಟೆ ಜಾಗದಲ್ಲಿ ಕೈದೋಟ ಮಾಡಿಕೊಂಡಿದ್ದು ಸಾವಯವ ವ್ಯವಸ್ಥೆಯೊಂದಿಗೆ ಟೊಮ್ಯಾಟೊ, ಬದನೆ, ಮೆಣಸಿನಕಾಯಿ, ಈರುಳ್ಳಿ-ಬೆಳ್ಳುಳ್ಳಿ, ಹಿತ್ತಲ ಅವರೆ, ದಂಟು, ಕೊತ್ತಂಬರಿ, ಮೆಂತ್ಯ, ಕೀರೆ ಸೇರಿದಂತೆ ವಿವಿಧ ರೀತಿಯ ಸೊಪ್ಪು-ತರಕಾರಿಗಳನ್ನು ಬೆಳೆಯುತ್ತಿದ್ದಾರೆ.

    ಕೊಟ್ಟಿಗೆ ಗೊಬ್ಬರಕ್ಕೆ ಆದ್ಯತೆ: ಮನೆಯಲ್ಲಿಯೇ ಮಲ್ನಾಡು ಗಿಡ್ಡ ಹಸು, ಎಮ್ಮೆ, ಹಸು ಹಾಗೂ ಮೇಕೆಗಳನ್ನು ಸಾಕಿದ್ದು, ಸಾಕಾಗುವಷ್ಟು ಕೊಟ್ಟಿಗೆ ಕೊಬ್ಬರ ಸಂಗ್ರಹಿಸಿ ವರ್ಷದಲ್ಲಿ ಎರೆಡು ಬಾರಿ ತೆಂಗು, ಬಾಳೆ, ಅಡಕೆ ಹಾಗೂ ಇತರೆ ಬೆಳೆಗಳಿಗೆ ನೀಡುತ್ತಿದ್ದಾರೆ. ಅಲ್ಲದೆ ತೋಟದಲ್ಲಿಯೇ 15*4 ಅಡಿ ಅಳತೆಯ 2 ತೊಟ್ಟಿಗಳನ್ನು ನಿರ್ಮಿಸಿ ಯರೆಹುಳು ಗೊಬ್ಬರ ತಯಾರಿಸಿ ಬೆಳೆಗಳಿಗೆ ನೀಡುತ್ತಿದ್ದಾರೆ.

    ನಿಂಬೆಹುಲ್ಲು: ಜಮೀನಿನ ಅಲ್ಲಲ್ಲಿ ನಿಂಬೆಹುಲ್ಲು(ಲೆಮೆನ್ ಗ್ರಾಸ್) ಬೆಳೆಸಿದ್ದು ಒಣಗಿಸಿ ಹದ ನೀಡಿ ಅದರಿಂದ ನೈಸರ್ಗಿಕವಾದ ಟೀ ತಯಾರಿಸಿಕೊಂಡು ಸೇವಿಸುವ ರೂಢಿ ಬೆಳೆಸಿಕೊಂಡಿದ್ದಾರೆ. ವರ್ಷವಿಡೀ ಮನೆಗೆ ಸಾಕಾಗುವಷ್ಟು ಟೀ ಉತ್ಪನ್ನ ಇದರಿಂದ ಲಭ್ಯವಾಗಲಿದೆ. ನಿಂಬೆಹುಲ್ಲು ಟೀ ಸೇವನೆ ಹತ್ತಾರು ರೋಗಗಳಿಗೆ ಔಷಧವಾಗಲಿದೆ. ದನ್ನು 3-4 ವರ್ಷಗಳಿಂದ ಬಳಕೆ ಮಾಡುತ್ತಿದ್ದು ದೇಹಕ್ಕೆ ತಂಪು ಹಾಗೂ ಉತ್ಸಾಹದೊಂದಿಗೆ ಆರೋಗ್ಯದಲ್ಲಿ ಒಂದು ರೀತಿ ಚೇತರಿಕೆ ಕಂಡುಬಂದಿದೆ ಎನ್ನುತ್ತಾರೆ ಬಿ.ಎಂ.ನಟರಾಜ್.

    ಸದಾ ಜಮೀನಿನಲ್ಲಿ ಒದ್ದಾಡುವ ರೈತನಿಗೆ ಆದಾಯವಷ್ಟೇ ಅಲ್ಲ ಆರೋಗ್ಯವೂ ಮುಖ್ಯ. ಅದು ನೈಸರ್ಗಿಕವಾಗಿಯೇ ಸಿಗುವಂತಿರಬೇಕು. ರಾಸಾಯನಿಕ ಗೊಬ್ಬರ ಬಳಕೆಯಿಂದ ಕೃಷಿ ಜಮೀನಷ್ಟೆ ಅಲ್ಲದೆ ಮನಷ್ಯನ ಆರೋಗ್ಯವೂ ಹಾಳಾಗುತ್ತಿದೆ. ಅದರ ಬದಲು ಸಾವಯವ ಪದ್ಧತಿ ಅಳವಡಿಸಿಕೊಂಡರೆ ಮಣ್ಣಿನ ಫಲವತ್ತತೆ ಹೆಚ್ಚುವುದರ ಜತೆಗೆ ಸಾವಯವ ಪದ್ಧತಿಯಿಂದ ಬೆಳೆದ ಆಹಾರ ಪದಾರ್ಥಗಳ ಸೇವನೆ ಆರೋಗ್ಯವನ್ನು ವೃದ್ಧಿಸಲಿದೆ. ಸಾವಯವ ಪದ್ಧತಿ ಪ್ರಾರಂಭದಲ್ಲಿ ನಿರೀಕ್ಷೆಯಂತೆ ಇಳುವರಿ ಸಿಗುವುದಿಲ್ಲ. ಆದರೆ ನಂತರದ ದಿನಗಳಲ್ಲಿ ಸರಿಯಾಗಲಿದೆ.
    ಬಿ.ಎಂ.ನಟರಾಜ್ ಸಾವಕೃಷಿ ಕೃಷಿಕ, ಬಿದರಕೆರೆ

    ದಿನದಿಂದ ದಿನಕ್ಕೆ ಸಾವಯವ ಕೃಷಿಯತ್ತ ಮುಖ ಮಾಡುತ್ತಿರುವ ರೈತರ ಸಂಖ್ಯೆ ಹೆಚ್ಚುತ್ತಿದೆ. ಆದರೆ ಸಾವಯವ ಹಾಗೂ ಸಮಗ್ರ ಕೃಷಿ ಬಗ್ಗೆ ಮಾಹಿತಿ ಮತ್ತು ಆರ್ಥಿಕ ನೆರವಿನ ಅಗತ್ಯವಿದೆ. ಯೋಜನೆಗಳನ್ನು ಸರ್ಕಾರ ಘೋಷಿಸಿದರೂ ರೈತರಿಗೆ ತಲುಪುವ ವ್ಯವಸ್ಥೆ ಇಲ್ಲವಾಗಿದೆ. ಅಧಿಕಾರಿ ವರ್ಗ ರೈತರ ಬಳಿ ತೆರಳಿ ಮಾಹಿತಿ, ಸಹಕಾರ ನೀಡಿದರೆ ಸಾವಯವ ಕೃಷಿ ಯಶಸ್ವಿ ಕಾಣುವುದರಲ್ಲಿ ಸಂದೇಹವಿಲ್ಲ.
    ಎನ್.ಎಸ್.ಸುಬ್ರಹ್ಮಣ್ಯ ಸಾವಯವ ಕೃಷಿಕ, ನರಿಹಳ್ಳಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts