More

    ಕಾಂಗ್ರೆಸ್ ಸೇರ್ಪಡೆ ನಿರ್ಧಾರ ಶೀಘ್ರ ಅಂತಿಮ

    ಕೋಲಾರ: ಕಾಂಗ್ರೆಸ್ ಸೇರುವ ವಿಚಾರದಲ್ಲಿ ವರಿಷ್ಠರೊಂದಿಗೆ ಮಾತುಕತೆ ನಡೆಯುತ್ತಿದ್ದು, ಸಿದ್ದರಾಮಯ್ಯ ಅವರ ಹಾದಿಯಲ್ಲೇ ಮುನ್ನಡೆಯುತ್ತೇನೆ ಎಂದು ಮಾಜಿ ಶಾಸಕ ವರ್ತೂರು ಆರ್.ಪ್ರಕಾಶ್ ಹೇಳಿದರು.

    ರಾಷ್ಟ್ರೀಯ ಪಕ್ಷದಲ್ಲಿ ಗುರುತಿಸಿಕೊಳ್ಳಬೇಕೆಂಬುದು ನನ್ನ ಆಸೆ. ಕಾಂಗ್ರೆಸ್ ಸೇರ್ಪಡೆ ಶೀಘ್ರ ಅಂತಿಮಗೊಳ್ಳಲಿದೆ. ಸೇರಿಸಿಕೊಳ್ಳದಿದ್ದರೆ ಹೊಲಿಗೆ ಯಂತ್ರ ರೆಡಿ ಇದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

    ನಾನು ಮೂಲತಃ ಕಾಂಗ್ರೆಸ್ಸಿಗ. ಸಿದ್ದರಾಮಯ್ಯ ಜತೆ ಕೆಲಸ ಮಾಡಿದ್ದೇನೆ. ಕುರುಬರ ಎಸ್‌ಟಿ ಮೀಸಲಾತಿ ಹೋರಾಟದಲ್ಲಿ ಸಿದ್ದರಾಮಯ್ಯ ಭಾಗವಹಿಸಿಲ್ಲವಾದ್ದರಿಂದ ನಾನೂ ಭಾಗಿಯಾಗಿಲ್ಲ. ಹಿಂದ ಸಮಾವೇಶ ಮಾಡುವುದಾದರೆ ಕೋಲಾರದಲ್ಲೇ ಎರಡ್ಮೂರು ಲಕ್ಷ ಜನರನ್ನು ಸೇರಿಸಿ ಮೊದಲ ಸಮಾವೇಶ ಮಾಡಿಸುತ್ತೇನೆ ಎಂದರು.

    ಕೆಎಚ್ ಭೇಟಿ: ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ನನ್ನ ಬೆಂಬಲಕ್ಕಿದ್ದಾರೆ. ಅವರ ಜತೆಗಿರುವ ಎರಡ್ಮೂರು ಮಂದಿ ವಿರೋಧಿಸುತ್ತಿದ್ದಾರೆ. ಗ್ರಾಪಂ ಚುನಾವಣೆಯಲ್ಲಿ ಸಾಧನೆ ಬಗ್ಗೆ ಎರಡ್ಮೂರು ದಿನಗಳಲ್ಲಿ ಮುನಿಯಪ್ಪ ಅವರನ್ನು ಭೇಟಿಯಾಗಿ ಮಾಹಿತಿ ನೀಡುತ್ತೇನೆ. ಯಾವ ಹಳ್ಳಿಯಲ್ಲೂ ಕಾಂಗ್ರೆಸ್‌ಗೆ ಅಸ್ತಿತ್ವ ಇಲ್ಲ. ನಾನು ಕಾಂಗ್ರೆಸ್ ಸೇರಿದರೆ ಬೆಂಬಲಿಗರೆಲ್ಲರೂ ಬರುತ್ತಾರೆ. ಪಕ್ಷ ಬಲಿಷ್ಠವಾಗುತ್ತದೆ ಎಂದರು.
    ಕಳೆದ 30 ವರ್ಷಗಳಿಂದ ಜೆಡಿಎಸ್‌ಗೆ ನಿಷ್ಠರಾಗಿದ್ದವರು, ಶ್ರೀನಿವಾಸಗೌಡರ ಸಹವಾಸ ಸಾಕೆಂದು ನಮ್ಮ ಮನೆ ಬಾಗಿಲು ತಟ್ಟುತ್ತಿದ್ದಾರೆ. ಯಾರನ್ನು ಸೇರಿಸಿಕೊಳ್ಳಬೇಕು, ಬಿಡಬೇಕೆಂಬುದನ್ನು ತಾವು ರಚಿಸಿರುವ ಸಮಿತಿ ತೀರ್ಮಾನಿಸಲಿದೆ ಎಂದರು.

    21ರಂದು ಅಭಿನಂದನೆ: ಕ್ಷೇತ್ರದ 18 ಗ್ರಾಪಂ ಪೈಕಿ 12 ಕ್ಷೇತ್ರ ತಮ್ಮ ಬಣದ ಪಾಲಾಗಿದ್ದು, ಅಧ್ಯಕ್ಷ, ಉಪಾಧ್ಯಕ್ಷರಿಗೆ ಫೆ.21ರಂದು ಬೀರಪ್ಪ ಲೆಔಟ್‌ನಲ್ಲಿನ ನಿವಾಸದ ಮುಂಭಾಗ ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ. 10,000ಕ್ಕೂ ಅಧಿಕ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದರು.

    ಶಾಸಕರಿಗೆ ಸವಾಲ್: ನನ್ನ ಅವಧಿಯಲ್ಲಿ ಮಂಜೂರಾದ ಅನುದಾನದಡಿ ನಗರದ ರಸ್ತೆ ವಿಸ್ತರಣೆ, ಯುಜಿಡಿ ಕಾಮಗಾರಿ ನಡೆಯುತ್ತಿದೆ. ಶ್ರೀನಿವಾಸಗೌಡ ಶಾಸಕರಾದ ನಂತರ ಸರ್ಕಾರದಿಂದ 10 ಲಕ್ಷ ರೂ. ಅನುದಾನ ತಂದಿದ್ದಾರಾ ಎಂದು ಪ್ರಶ್ನಿಸಿದ ಅವರು, ಎಸ್ಸಿ, ಎಸ್ಟಿ ಸಮುದಾಯಕ್ಕೆ ಗಂಗಾ ಕಲ್ಯಾಣ ಯೋಜನೆಯಡಿ ಮಂಜೂರಾಗಿದ್ದ ಫಲಾನುಭವಿಗಳಿಗೆ ಇನ್ನೂ ಪಂಪು ಮೋಟಾರ್ ನೀಡಿಲ್ಲ. ಈ ಸಮುದಾಯ ಅಭಿವೃದ್ಧಿಗೊಳ್ಳುವುದು ಶಾಸಕರಿಗೆ ಇಷ್ಟವಿಲ್ಲ, ಅಂಬೇಡ್ಕರ್ ಭವನ ನಿರ್ಮಾಣಕ್ಕೂ ಆಸಕ್ತಿ ವಹಿಸಲಿಲ್ಲ ಎಂದು ಟೀಕಿಸಿದರು.

    ಮುಖಂಡ ಬೆಗ್ಲಿ ಸೂರ್ಯಪ್ರಕಾಶ್ ಮಾತನಾಡಿ, ಬೆಂಬಲಿಗರ ಒತ್ತಾಯದ ಮೇರೆಗೆ ವರ್ತೂರು ಪ್ರಕಾಶ್ ಕಾಂಗ್ರೆಸ್‌ಗೆ ಸೇರ್ಪಡೆಯಾಗಲು ಮುಂದಾಗಿದ್ದಾರೆ. ಕಾಂಗ್ರೆಸ್ ಮನೆಯೊಂದು ಮೂರು ಬಾಗಿಲು ಎಂಬಂತಾಗಿದೆ ಎಂದು ಕಾಂಗ್ರೆಸ್ ಸೇರ್ಪಡೆ ವಿರೋಧಿಸುತ್ತಿರುವವರ ಬಗ್ಗೆ ವ್ಯಂಗ್ಯವಾಡಿದರು. ಜಿಪಂ ಸದಸ್ಯ ಅರುಣ್ ಪ್ರಸಾದ್, ತಾಪಂ ಅಧ್ಯಕ್ಷ ಸೂಲೂರು ಅಂಜಿನಪ್ಪ, ಮುಖಂಡರಾದ ಬಂಕ್ ಮಂಜುನಾಥ್, ಮುನಿರಾಜು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts