More

    ಕಾಂಗ್ರೆಸ್ ಸೇರಲು ಮುಂದಾಗಿದ್ದ ಬೊಮ್ಮಾಯಿ

    ಹುಬ್ಬಳ್ಳಿ : ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಜನತಾ ಪರಿವಾರದಿಂದ ಕರೆತಂದ ಬಿಜೆಪಿ, ಅವರಿಗೆ ಸಚಿವ ಸ್ಥಾನಮಾನ ಕೊಟ್ಟಿತು. ಆದರೂ, ಅವರು ಬಿಜೆಪಿ ಇಬ್ಭಾಗಗೊಳಿಸಿ, 2012ರಲ್ಲಿ ಕಾಂಗ್ರೆಸ್ ಸೇರಲು ಮುಂದಾಗಿದ್ದರು. ಅಂತವರು ನನ್ನ ತತ್ವ, ಸಿದ್ಧಾಂತ ಹಾಗೂ ಕಾಂಗ್ರೆಸ್ ಸೇರಿರುವುದನ್ನು ಪ್ರಶ್ನಿಸುತ್ತಿದ್ದಾರೆ ಎಂದು ಮಾಜಿ ಸಿಎಂ, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಗದೀಶ ಶೆಟ್ಟರ್ ವ್ಯಂಗ್ಯವಾಡಿದರು.

    ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಗದೀಶ ಶೆಟ್ಟರ್, ಯಾವುದೇ ಕಾರಣಕ್ಕೂ ಬಿಜೆಪಿಗೆ ಮರಳುವುದಿಲ್ಲ. ಇದೇ ನನ್ನ ಕೊನೆಯ ಚುನಾವಣೆ. ಮೊದಲ ಬಾರಿಗೆ ಶಾಸಕನಾಗಿದ್ದ ಸಂದರ್ಭದಲ್ಲಿಯೇ 70 ವಯಸ್ಸಿನ ನಂತರ ಚುನಾವಣೆ ರಾಜಕೀಯ ಮಾಡಬಾರದೆಂದು ನಿರ್ಧರಿಸಿದ್ದೆ ಎಂದರು.

    ರಾಜ್ಯದಲ್ಲಿ 28 ಜನ ಸಂಸದರು ಇದ್ದಾರೆ. ಆದರೂ, ಪ್ರಲ್ಹಾದ ಜೋಶಿ ಅವರಿಗೆ ಮಾತ್ರ ಕೇಂದ್ರ ಸರ್ಕಾರ ಕ್ಯಾಬಿನೇಟ್ ದರ್ಜೆ ಸಚಿವ ಸ್ಥಾನ ನೀಡಿದೆ. ಚಿತ್ರದುರ್ಗದ ನಾರಾಯಣಸ್ವಾಮಿ, ಶೋಭಾ ಕರಂದ್ಲಾಜೆ, ಭಗವಂತ ಖೂಬಾ ಅವರಿಗೆ ರಾಜ್ಯ ಸಚಿವ ಸ್ಥಾನ ನೀಡಿದೆ. ಬೆಳಗಾವಿಯ ದಿ. ಸುರೇಶ ಅಂಗಡಿ ಅವರಿಗೂ ರಾಜ್ಯ ಸಚಿವ ಸ್ಥಾನ ನೀಡಿತ್ತು. ಜೋಶಿ ಅವರಿಗೆ ಮಾತ್ರ ಕ್ಯಾಬಿನೇಟ್ ದರ್ಜೆ ನೀಡಿದ್ದು ಏಕೆಂಬುದನ್ನು ಮತದಾರರು ಯೋಚಿಸಬೇಕು. ಇದರ ಹಿಂದೆಯೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ ಅವರ ಷಡ್ಯಂತ್ರ ಅಡಗಿದೆ ಎಂದು ದೂರಿದರು.

    ಕಾಂಗ್ರೆಸ್​ನಲ್ಲಿ ಹಿರಿಯರಿಗೆ ಈಗಲೂ ಗೌರವ ನೀಡಲಾಗುತ್ತದೆ. ಆದರೆ, ಬಿಜೆಪಿಯಲ್ಲಿ ಹಿರಿಯ ರಾಜಕಾರಣಿಗಳನ್ನು ಹಿಂದೆ ಸರಿಸಲು ಬಿ.ಎಲ್. ಸಂತೋಷ ಕುತಂತ್ರ ನಡೆಸುತ್ತಿದ್ದಾರೆ. ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಲೂ ಬಿ.ಎಲ್. ಸಂತೋಷ ಕಾರಣ. ಯಡಿಯೂರಪ್ಪ ಅವರಿಗೆ ವಯಸ್ಸಾಗಿದ್ದರೆ ಅವರನ್ನು ಚುನಾವಣೆ ಪ್ರಚಾರಕ್ಕೆ ಏಕೆ ಬಳಸಿಕೊಳ್ಳಬೇಕಾಗಿತ್ತು ? ಅವರನ್ನೇ ಮುಖ್ಯಮಂತ್ರಿಯನ್ನಾಗಿ ಮುಂದುವರೆಸಿದ್ದರೆ ಐದು ವರ್ಷದ ಅವಧಿ ಪೂರ್ಣಗೊಳಿಸುತ್ತಿದ್ದರು ಎಂದರು.

    ಲಿಂಗಾಯತರ ವಿರುದ್ಧ ಮಾತನಾಡಿದ ಬಿ.ಎಲ್. ಸಂತೋಷ ಹಾಗೂ ಈಶ್ವರಪ್ಪ, ಜಗದೀಶ ಶೆಟ್ಟರ್ ಅವರನ್ನು ಚುನಾವಣೆ ರಾಜಕೀಯದಿಂದಾಗಿ ದೂರ ಮಾಡುವ ಬಗ್ಗೆ ಮಾತನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷರ ಪ್ರಕರಣಗಳನ್ನು ಪ್ರಾಮಾಣಿಕವಾಗಿ ತನಿಖೆ ಮಾಡಿಸಬೇಕು ಎಂದು ಒತ್ತಾಯಿಸಿದರು.

    ನಾನು ಕಾಂಗ್ರೆಸ್ ಸೇರಿದ ನಂತರ ಬಿಜೆಪಿಯವರಿಗೆ ನನ್ನ ಮಹತ್ವ ಅರಿವಾಗಿದೆ. ನನ್ನನ್ನು ಸೋಲಿಸಲು ಅಭಿಯಾನ ನಡೆಸುತ್ತಿದ್ದಾರೆ. ಬಿಜೆಪಿ ರಾಷ್ಟ್ರ ಮತ್ತು ರಾಜ್ಯದ ಮುಖಂಡರು ಹುಬ್ಬಳ್ಳಿಯಲ್ಲಿ ಠಿಕಾಣಿ ಹೂಡಿದ್ದಾರೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಸಹ ದೆಹಲಿ ಬಿಟ್ಟು ಹುಬ್ಬಳ್ಳಿಯಲ್ಲಿಯೇ ಕುಳಿತಿದ್ದಾರೆ. ಇತ್ತೀಚೆಗೆ ಕಾಂಗ್ರೆಸ್ ಸೇರಿದ ಶಾಂತಣ್ಣ ಕಡಿವಾಳ ಅವರಿಗೆ ನಮ್ಮ ಪಕ್ಷ ಸೇರದಂತೆ ಅನೇಕರು ಒತ್ತಡ ಹೇರಿದ್ದಾರೆ. ಕೈಗಾರಿಕೋದ್ಯಮಿಗಳು ಹಾಗೂ ಇನ್ನಿತರರ ಮೇಲೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಒತ್ತಡ ಹೇರುತ್ತಿದ್ದಾರೆ. ಇಡಿ, ಐಟಿ ದಾಳಿ ಮಾಡಿಸುವ ಬಗ್ಗೆ ನಮ್ಮ ಬೆಂಬಲಿಗರಿಗೆ ಅನೇಕರು ಹೆದರಿಸುತ್ತಿದ್ದಾರೆ. ಆದರೆ, ನನ್ನ ಪರವಾಗಿ ಇರುವ ಅನೇಕರು ಈ ಬಾರಿ ‘ಒಳ ಹೊಡೆತ’ ನೀಡಲಿದ್ದಾರೆ. ನನ್ನನ್ನು ದಾಖಲೆ ಮತಗಳ ಅಂತರದಿಂದ ಗೆಲ್ಲಿಸುವ ಮೂಲಕ ಬಿಜೆಪಿಗೆ ಶಾಕ್ ನೀಡಲಿದ್ದಾರೆ ಎಂದು ಹೇಳಿದರು.

    ಕ್ರಿಮಿನಲ್​ಗಳಿಗೆ, ಸಿಡಿ ಹಗರಣ ಇರುವವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಆಪರೇಷನ್ ಕಮಲ ಮಾಡಿರುವವರಿಗೆ ತತ್ವ, ಸಿದ್ಧಾಂತಗಳ ಬಗ್ಗೆ ಮಾತನಾಡುವ ನೈತಿಕ ಹಕ್ಕು ಇಲ್ಲ ಎಂದರು.

    ಬೆಂಗಳೂರು ರೋಡ ಶೋನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಬ್ಬರೇ ವಾಹನದಲ್ಲಿ ಇದ್ದರು. ಬೇರೆ ಮುಖಂಡರಿಗೆ ವಾಹನದಲ್ಲಿ ಪ್ರವೇಶ ಇರಲಿಲ್ಲ. ಬಿಜೆಪಿಯವರ ಮನಸ್ಥಿತಿ ಹೇಗಿದೆ ಎಂಬುದನ್ನು ಜನರು ಇದರಿಂದ ಅರಿತುಕೊಳ್ಳಬೇಕು ಎಂದು ತಿಳಿಸಿದರು.

    ಮಾಜಿ ಸಂಸದ ಮಂಜುನಾಥ ಕುನ್ನೂರು, ಮಾಜಿ ಮೇಯರ್ ಅನಿಲಕುಮಾರ ಪಾಟೀಲ, ಅಲ್ತಾಫ ಹಳ್ಳೂರ, ಸತೀಶ ಮೆಹರವಾಡೆ ಹಾಗೂ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts