More

    ಕವಿವಿ ಘಟಿಕೋತ್ಸವಕ್ಕೆ ಕರೊನಾ ಕರಿಛಾಯೆ

    ಮಂಜುನಾಥ ಅಂಗಡಿ ಧಾರವಾಡ

    ಪ್ರತಿಷ್ಠಿತ ಕರ್ನಾಟಕ ವಿಶ್ವವಿದ್ಯಾಲಯದ ಘಟಿಕೋತ್ಸವದ ಮೇಲೂ ಕರೊನಾ ಕರಿಛಾಯೆ ಆವರಿಸಿದೆ. 2020ನೇ ಸಾಲಿನ ಘಟಿಕೋತ್ಸವ ಕೋವಿಡ್ ಹಿನ್ನೆಲೆಯಲ್ಲಿ ಜರುಗಿಲ್ಲ. ಇದೀಗ ಫೆಬ್ರವರಿ ಅಥವಾ ಮಾರ್ಚ್​ನಲ್ಲಿ 71ನೇ ವಾರ್ಷಿಕ ಘಟಿಕೋತ್ಸವ ಆಯೋಜನೆಗೆ ಸಿದ್ಧತೆ ನಡೆದಿದೆಯಾದರೂ ಅದು ವರ್ಚುವಲ್ ಅಥವಾ ಆಫ್​ಲೈನ್ ಎಂಬ ಗೊಂದಲ ಪರಿಹಾರವಾಗಿಲ್ಲ.

    ಸ್ನಾತಕ, ಸ್ನಾತಕೋತ್ತರ ಪದವಿ, ಡಿಪ್ಲೋಮಾ, ಎಂ.ಫಿಲ್, ಪಿಎಚ್​ಡಿ, ರ್ಯಾಂಕ್ ವಿಜೇತರು, ಅವರ ಸಂಬಂಧಿಕರು, ಅಕ್ಯಾಡೆಮಿಕ್ ಸದಸ್ಯರು, ಸಿಂಡಿಕೇಟ್ ಸದಸ್ಯರು, ಅತಿಥಿಗಳು, ವಿವಿಧ ನಿಕಾಯಗಳ ಡೀನ್​ಗಳು, ಸಿಬ್ಬಂದಿ ಸೇರಿ ಅಂದಾಜು ಸಾವಿರ ಜನ ಘಟಿಕೋತ್ಸವದಲ್ಲಿ ಸೇರುತ್ತಾರೆ. ಗಾಂಧಿ ಭವನದಲ್ಲಿ ಜರುಗುವ ಕಾರ್ಯಕ್ರಮದಲ್ಲಿ ಕೋವಿಡ್ ಸುರಕ್ಷತಾ ಕ್ರಮ ಕಾಪಾಡುವುದು ಕಷ್ಟಸಾಧ್ಯ.

    ಪ್ರತಿಷ್ಠಿತ ವಿಶ್ವವಿದ್ಯಾಲಯದ ವಾರ್ಷಿಕ ಘಟಿಕೋತ್ಸವದಲ್ಲಿ ಖುದ್ದು ಹಾಜರಾಗಿ ಪ್ರಮಾಣಪತ್ರ ಪಡೆಯುವುದು ವಿದ್ಯಾರ್ಥಿಗಳಿಗೆ ಹೆಮ್ಮೆಯ ಸಂಗತಿ. ಹಾಗಾಗಿ ವಿವಿಧ ಪದವಿಗಳಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳು ವಿದೇಶಗಳಲ್ಲಿ ನೆಲೆಸಿದ್ದರೂ ಘಟಿಕೋತ್ಸವಕ್ಕೆ ಬಂದೇ ಪ್ರಮಾಣಪತ್ರ ಸ್ವೀಕರಿಸುತ್ತಾರೆ. ರಾಜ್ಯಪಾಲರ ಸಮ್ಮುಖದಲ್ಲಿ ಪದವಿ, ರ್ಯಾಂಕ್ ಪ್ರಮಾಣಪತ್ರ ಪಡೆಯಲು ವಿದ್ಯಾರ್ಥಿಗಳು ಹಾತೊರೆಯುತ್ತಾರೆ. ಆದರೆ, ಈ ಬಾರಿ ಆ ನಿರೀಕ್ಷೆ ಹುಸಿಯಾಗುವ ಲಕ್ಷಣಗಳಿವೆ.

    *ವಿವಿ ಮುಂದೆ 2 ಆಯ್ಕೆ: ಘಟಿಕೋತ್ಸವ ಆಯೋಜನೆ ಕುರಿತು ವಿಶ್ವವಿದ್ಯಾಲಯದ ಮುಂದೆ ವರ್ಚುವಲ್ ಹಾಗೂ ಆಫ್​ಲೈನ್ ಆಯ್ಕೆಗಳಿವೆ. ಈ ಬಗ್ಗೆ ಈಗಾಗಲೇ ಅಧಿಸೂಚನೆ ಹೊರಡಿಸಿರುವ ವಿಶ್ವವಿದ್ಯಾಲಯ, 2019ರ ಡಿ. 1ರಿಂದ 2020ರ ಡಿ. 31ರವರೆಗೆ ಎಲ್ಲ ವಿಷಯಗಳ ಪದವಿ- ಡಿಪ್ಲೋಮಾಗಳಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಪದವಿಗಳನ್ನು ಪ್ರದಾನ ಮಾಡಲಿದೆ. ಘಟಿಕೋತ್ಸವದಲ್ಲಿ ಪದವಿ ಪ್ರಮಾಣಪತ್ರ ಪಡೆಯಲು ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನೂ ಆರಂಭಿಸಲಾಗಿದೆ. ದಂಡ ರಹಿತ ಮತ್ತು ಸಹಿತ ಅರ್ಜಿಗಳನ್ನು ಜ. 27ರೊಳಗೆ ಕುಲಸಚಿವರಿಗೆ ಕಳುಹಿಸುವಂತೆ ಸೂಚಿಸಲಾಗಿದೆ.

    ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯಪಾಲರು ಘಟಿಕೋತ್ಸವದಲ್ಲಿ ಭಾಗಿಯಾಗುವುದಿಲ್ಲ ಎನ್ನಲಾಗಿದೆ. ರಾಜ್ಯಪಾಲರು ಹಾಗೂ ಅತಿಥಿಗಳು ವರ್ಚುವಲ್ ವೇದಿಕೆಯಲ್ಲಿ ಘಟಿಕೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಸೀಮಿತ ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಪ್ರಮಾಣಪತ್ರ ನೀಡಲಾಗುತ್ತದೆ. ಉಳಿದ ವಿದ್ಯಾರ್ಥಿಗಳನ್ನು ಸಮಾರಂಭಕ್ಕೆ ಆಹ್ವಾನಿಸದೆ, ಅಂಚೆ ಮೂಲಕ ಪದವಿ ಪ್ರಮಾಣಪತ್ರ ಕಳುಹಿಸಲಾಗುತ್ತದೆ ಎಂಬ ಸುಳಿವು ನೀಡಲಾಗಿದೆ.

    ಪರಿಣತರಿಂದ ಸಲಹೆ: ವರ್ಚುವಲ್ ಅಥವಾ ಆಫ್​ಲೈನ್ ಘಟಿಕೋತ್ಸವ ಆಯೋಜನೆ ಸಂಬಂಧ ಈಗಾಗಲೇ ಕುಲಪತಿ, ಕುಲಸಚಿವರು, ಡೀನ್​ಗಳನ್ನೊಳಗೊಂಡ 2-3 ಸಭೆಗಳು ಜರುಗಿವೆ. ಘಟಿಕೋತ್ಸವಕ್ಕೆ ಯಾವ ಆಯ್ಕೆ ಸೂಕ್ತ ಎಂಬುದರ ಬಗ್ಗೆ ಪರಿಣತರಿಂದ ಸಲಹೆ ಕೇಳಲಿದ್ದಾರೆ ಎಂದೂ ಗೊತ್ತಾಗಿದೆ. ವರ್ಚುವಲ್ ಅಥವಾ ಆಫ್​ಲೈನ್ ವೇದಿಕೆಯಲ್ಲಿ ಜರುಗಿಸಬೇಕಾದರೆ ತಗಲುವ ಖರ್ಚು- ವೆಚ್ಚದ ಬಗ್ಗೆಯೂ ಪರಿಣತರಿಂದ ಮಾರ್ಗದರ್ಶನ ಪಡೆದುಕೊಳ್ಳಲು ಆಡಳಿತ ಮಂಡಳಿ ನಿರ್ಧರಿಸಿದೆ.

    ಗೌರವ ಡಾಕ್ಟರೇಟ್ ಇಲ್ಲ?: ಕರ್ನಾಟಕ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಕೊಡಲಾಗುವ ಗೌರವ ಡಾಕ್ಟರೇಟ್​ಗಾಗಿ ಲಾಬಿ ಸಹ ನಡೆಯುತ್ತದೆ. ಕೆಲವರಿಗೆ ಅರ್ಜಿ ಸಲ್ಲಿಸದೆಯೇ ‘ಗೌಡಾ’ ನೀಡಿದ ನಿದರ್ಶನಗಳಿವೆ. ಆದರೆ, ಈ ಬಾರಿ ‘ಗೌಡಾ’ ಪ್ರದಾನ ಮಾಡುವ ಪ್ರಕ್ರಿಯೆ ನಡೆದಿಲ್ಲ ಎಂದು ತಿಳಿದುಬಂದಿದೆ.

    ಘಟಿಕೋತ್ಸವ ಆಯೋಜನೆಗೆ ವರ್ಚುವಲ್ ಅಥವಾ ಆಫ್​ಲೈನ್ (ಯಥಾಸ್ಥಿತಿ) ಆಯ್ಕೆಗಳಿವೆ. ಆಫ್​ಲೈನ್ ಮಾಡಬೇಕಾದರೆ ವಿದ್ಯಾರ್ಥಿಗಳ ಸಂಖ್ಯೆಯನ್ನು ಸೀಮಿತಗೊಳಿಸಬೇಕಾದ ಅನಿವಾರ್ಯತೆ ಇದೆ. ಎರಡೂ ಆಯ್ಕೆಗಳನ್ನು ಮುಂದಿಟ್ಟುಕೊಂಡು ಸಿದ್ಧತೆ ಪ್ರಕ್ರಿಯೆ ನಡೆದಿವೆ. ಈ ಕುರಿತು ಅನುಮತಿಗಾಗಿ ಸರ್ಕಾರವನ್ನು ಕೋರಲಾಗಿದ್ದು, ಯಾವುದಕ್ಕೆ ಅನುಮತಿ ಸಿಗುತ್ತದೆ ಎಂಬುದನ್ನು ಕಾಯುತ್ತಿದ್ದೇವೆ. – ಪ್ರೊ. ಕೆ.ಬಿ. ಗುಡಸಿ, ಕವಿವಿ ಕುಲಪತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts